ಮೇಲ್ನೋಟಕ್ಕೆ ಎಲ್ಲವೂ ಒಂದೇ ಅನ್ನಿಸಬಹುದು!

ಹೌದು. ಉದರ ಕ್ಯಾನ್ಸರ್ನ ಲಕ್ಷಣಗಳು ಮೇಲ್ನೋಟಕ್ಕೆ ಅಷ್ಟು ಗಂಭೀರ ಅಂತ ಅನ್ನಿಸುವುದೇ ಇಲ್ಲ. ಜೀರ್ಣಾಂಗಗಳ ಅಲ್ಸರ್ನ ರೋಗಲಕ್ಷಣಗಳೂ ಇದೇ ರೀತಿ ಇರುವುದರಿಂದ ಆರಂಭದಲ್ಲಿ ವೈದ್ಯರು ಸಹ ಮೋಸಹೋಗಬಹುದು. ಆದರೆ ಒಂದು ಹಂತದ ಚಿಕಿತ್ಸೆ ಪರಿಣಾಮ ಬೀರದೇ ಇದ್ದಾಗ 'ಇದು ಬೇರೇನೋ ತೊಂದರೆ' ಎನ್ನುವ ನಿರ್ಧಾರಕ್ಕೆ ಅವರು ಬರಬಲ್ಲರು. ವಿವರವಾದ ಪ್ರಯೋಗಾಲಯ ತಪಾಸಣೆಗೆ ಶಿಫಾರಸ್ಸು ಮಾಡಿ, ಅದರಿಂದ ಕಾಯಿಲೆ ಏನು ಎನ್ನುವುದನ್ನು ತಿಳಿದುಕೊಳ್ಳಬಲ್ಲರು.
ಉದರ ಕ್ಯಾನ್ಸರ್ ಅನ್ನು ಗ್ಯಾಸ್ಟ್ರಿಕ್ ಕ್ಯಾನ್ಸರ್ ಎಂದೂ ಹೇಳಲಾಗುತ್ತದೆ. ಉದರದ ಯಾವುದೇ ಭಾಗದಲ್ಲಿ ಕ್ಯಾನ್ಸರ್ ಗಡ್ಡೆಗಳು ಕಾಣಿಸಿಕೊಳ್ಳಬಹುದು. ಕಳೆದ 60 ವರ್ಷಗಳಿಗೆ ಹೋಲಿಸಿದರೆ ಜಾಗತಿಕವಾಗಿ ಉದರ ಕ್ಯಾನ್ಸರ್ಗೆ ತುತ್ತಾಗುವವರ ಸಂಖ್ಯೆಯಲ್ಲಿ ಗಣನೀಯ ಇಳಿಮುಖ ಕಂಡುಬಂದಿದೆ. ಆರಂಭಿಕ ಹಂತದಲ್ಲಿಯೇ ಪತ್ತೆಯಾದರೆ ಈ ಕ್ಯಾನ್ಸರ್ ಅನ್ನು ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಿದೆ. ಯಾವುದೇ ಬಗೆಯ ಕ್ಯಾನ್ಸರ್ನ ಬಹುದೊಡ್ಡ ಸಮಸ್ಯೆ ಎಂದರೆ ಪ್ರಾರಂಭಿಕ ಹಂತಗಳಲ್ಲಿ ಪತ್ತೆಯಾಗದೇ ಇರುವುದು. ಅದರಲ್ಲಿ ರೋಗಿಗಳ ಪಾಲೂ ದೊಡ್ಡದಿದೆ ಎನ್ನುವುದು ಬೇರೆ ಪ್ರಶ್ನೆ. ಕ್ಯಾನ್ಸರ್ಕಾರಕ ಕೋಶಗಳು ಎಲ್ಲಿ ಗಡ್ಡೆಕಟ್ಟಿವೆ ಎಂಬುದನ್ನು ಆಧರಿಸಿ ಉದರ ಕ್ಯಾನ್ಸರ್ ಅನ್ನು ಅಡಿನೊಕಾರ್ಸಿನೊಮಾ ಮತ್ತು ಲಿಂಫೋಮಾ ಎಂದು ಎರಡು ಬಗೆಗಳಲ್ಲಿ ಗುರುತಿಸಲಾಗುತ್ತದೆ. ಶೇ. 90-95ರಷ್ಟು ಉದರ ಕ್ಯಾನ್ಸರ್ ಪ್ರಕರಣಗಳು ಆಡಿನೋಕಾರ್ಸಿನೋಮಾ ಅಂದರೆ ರಸಗ್ರಂಥಿಗಳೆಲ್ಲ ಕ್ಯಾನ್ಸರ್ ಗಡ್ಡೆಯಾಗುವುದು ಆಗಿರುತ್ತದೆ. ಲಿಂಫೋಮಾ ಅತ್ಯಂತ ಅಪಾಯಕಾರಿ ಕ್ಯಾನ್ಸರ್. ಇದು ಮಾಂಸಖಂಡ, ರಕ್ತನಾಳ ಇತ್ಯಾದಿಗಳಲ್ಲಿ ಉದರಕ್ಕೆ ತಾಗಿಕೊಂಡು ಕಾಣಿಸಿಕೊಳ್ಳಬಹುದು. ಇದರ ಚಿಕಿತ್ಸೆಯೂ ತುಸು ಕಷ್ಟ.
ಉದರ ಕ್ಯಾನ್ಸರ್ಗೆ ಕಾರಣ ಏನು ಎನ್ನುವುದು ಈವರೆಗೂ ತಿಳಿದುಬಂದಿಲ್ಲ. ಧೂಮಪಾನ, ಮದ್ಯಪಾನ, ಪೌಷ್ಟಿಕ ಆಹಾರಗಳಿಲ್ಲದ ಡಯಟ್, ಹಣ್ಣು-ತರಕಾರಿಗಳನ್ನು ಕಡಿಮೆ ಸೇವಿಸುವುದು, ತೀರಾ ಅಪರೂಪದ ಪ್ರಕರಣಗಳಲ್ಲಿ ಹೊಟ್ಟೆಗೆ ಸಂಬಂಧಿಸಿದ ಶಸ್ತ್ರಚಿಕಿತ್ಸೆಗಳು, ಹೊಟ್ಟೆಯಲ್ಲಿ ಸೋಂಕು ಉಂಟುಮಾಡುವ ಹೆಲಿಕೊಬ್ಯಾಕ್ಟರ್ ಪೈಲೊರಿ (ಎಚ್. ಪೈಲೋರಿ) ಎಂಬ ಬ್ಯಾಕ್ಟೀರಿಯಾ ಇವೆಲ್ಲವೂ ಉದರ ಕ್ಯಾನ್ಸರ್ಗೆ ಕಾರಣ ಆಗಬಲ್ಲವು ಎಂದು ಪತ್ತೆ ಮಾಡಲಾಗಿದೆ. ಕುಟುಂಬದಲ್ಲಿ ಯಾರಿಗಾದರೂ ಗ್ಯಾಸ್ಟ್ರಿಕ್ ತೊಂದರೆ ಇದ್ದರು ಸಹ ಅನುವಂಶೀಯತೆಯೂ ಉದರ ಕ್ಯಾನ್ಸರ್ಗೆ ಕಾರಣ ಆಗಬಲ್ಲದು.
-ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


