ಅರ್ಬುದ ಅರಿವು
ಇಂದು(ಫೆ.4) ವಿಶ್ವ ಕ್ಯಾನ್ಸರ್ ದಿನ. ಕ್ಯಾನ್ಸರ್ ಮತ್ತು ಅದರ ಚಿಕಿತ್ಸೆ ಕುರಿತು ಹಲವಾರು ತಪ್ಪು ಕಲ್ಪನೆಗಳು ನಮ್ಮ ಜನಮನದಲ್ಲಿ ಬೇರೂರಿವೆ. ಅವುಗಳನ್ನು ಹೋಗಲಾಡಿಸುವ ಪ್ರಯತ್ನ ಇಲ್ಲಿದೆ.

ಇಂದು(ಫೆ.4) ವಿಶ್ವ ಕ್ಯಾನ್ಸರ್ ದಿನ. ಕ್ಯಾನ್ಸರ್ ಮತ್ತು ಅದರ ಚಿಕಿತ್ಸೆ ಕುರಿತು ಹಲವಾರು ತಪ್ಪು ಕಲ್ಪನೆಗಳು ನಮ್ಮ ಜನಮನದಲ್ಲಿ ಬೇರೂರಿವೆ. ಅವುಗಳನ್ನು ಹೋಗಲಾಡಿಸುವ ಪ್ರಯತ್ನ ಇಲ್ಲಿದೆ.
ಮಿಥ್ಯ: ಕ್ಯಾನ್ಸರ್ ಮಾರಣಾಂತಿಕ ರೋಗ. ಅದಕ್ಕೆ ಯಾವುದೇ ಚಿಕಿತ್ಸೆಯ ಅವಕಾಶವಿಲ್ಲ.
ಸತ್ಯ: ಕ್ಯಾನ್ಸರ್ ಚಿಕಿತ್ಸೆ ನೀಡಬಹುದಾದಂತಹ ರೋಗ. ಶೀಘ್ರ ಪತ್ತೆ ಮಾಡಿದಲ್ಲಿ ಬಹುತೇಕ ಕ್ಯಾನ್ಸರ್ಗಳನ್ನು ಸಂಪೂರ್ಣವಾಗಿ ಗುಣಪಡಿಸಬಹುದು. ಉನ್ನತ ಹಂತದ ಕ್ಯಾನ್ಸರ್ಗಳಲ್ಲೂ ಕೂಡ ಲಕ್ಷಣಗಳನ್ನು ಕಡಿಮೆ ಮಾಡಿ ರೋಗಿ ಹೆಚ್ಚಿನ ಅವಧಿಯವರೆಗೆ ಉಳಿದುಕೊಳ್ಳುವಂತೆ ಮಾಡಬಹುದು. ಇದು ಅಸ್ತಮಾ ಅಥವ ಮಧುಮೇಹದಂತೆ ದೀರ್ಘಕಾಲಿಕ ರೋಗ.
ಮಿಥ್ಯ: ಬಹುತೇಕ ಕ್ಯಾನ್ಸರ್ಗಳು ಅನುವಂಶೀಯವಾಗಿ ಬರುತ್ತವೆ.
ಸತ್ಯ: ಕ್ಯಾನ್ಸರ್ಗಳ ಪೈಕಿ ಶೇ.5ರಿಂದ 10ರಷ್ಟು ಮಾತ್ರ ನಿಜಕ್ಕೂ ಅನುವಂಶೀಯ ಎಂದು ಅಂದಾಜು. ಸ್ತನ ಅಥವ ಕರುಳಿನ ಕ್ಯಾನ್ಸರ್ನ ಕುಟುಂಬ ಇತಿಹಾಸ ಹೊಂದಿರುವ ವ್ಯಕ್ತಿಯಲ್ಲಿ ಅವರನ್ನು ಈ ರೋಗಗಳಿಗೆ ಗುರಿಯಾಗಿಸಬಲ್ಲ ವಂಶವಾಹಿಗಳು ಇವೆಯೇ ಎಂದು ಈಗ ಪರೀಕ್ಷೆಗಳ ಮೂಲಕ ನಿರೂಪಿಸಬಹುದು.
ಮಿಥ್ಯ: ಕ್ಯಾನ್ಸರ್ ಒಂದು ಸೋಂಕು ರೋಗ.
ಸತ್ಯ: ಕ್ಯಾನ್ಸರ್ ಸೋಂಕು ರೋಗವಲ್ಲ. ಕ್ಯಾನ್ಸರ್ ಹೊಂದಿರುವ ವ್ಯಕ್ತಿಗೆ ಆ ರೋಗದ ವಿರುದ್ಧ ಹೋರಾಡುವುದಕ್ಕಾಗಿ ನಿಮ್ಮ ಪ್ರೀತಿ ಮತ್ತು ನೈತಿಕ ಬೆಂಬಲದ ಅಗತ್ಯವಿದೆ. ಕ್ಯಾನ್ಸರ್ ಸೋಂಕು ರೋಗವಲ್ಲದಿದ್ದರೂ ಪಿತ್ತಜನಕಾಂಗದ ಕ್ಯಾನ್ಸರ್ ಉಂಟು ಮಾಡುವ ಹೆಪಟೈಟಿಸ್ ಸಿಯಂತಹ ಕೆಲವು ವೈರಸ್ಗಳು ಮತ್ತು ಗರ್ಭಕೋಶದ ಕರುಳಿನ ಕ್ಯಾನ್ಸರ್ ಉಂಟು ಮಾಡುವ ಹ್ಯುಮನ್ ಪ್ಯಾಪಿಲೊಮಾ ವೈರಸ್ಗಳು ಲೈಂಗಿಕ ಸಂಪರ್ಕದಿಂದ ಹಾಗೂ ಸೋಂಕಿರುವ ಸೂಜಿಯಿಂದ ಹರಡುತ್ತವೆ.
ಮಿಥ್ಯ: ಉನ್ನತ ಮಟ್ಟದ ಕ್ಯಾನ್ಸರ್ನ ಅಪಾಯವಿರುವ ವ್ಯಕ್ತಿಗಳು ಮಾತ್ರ ಕ್ಯಾನ್ಸರ್ ತಪಾಸಣೆಗೆ ಒಳಗಾಗಬೇಕು.
ಸತ್ಯ: ಇಲ್ಲ, ಎಲ್ಲಾ ವಯಸ್ಕರು ನಿಗದಿತ ಅವಧಿಯಲ್ಲಿ ಕ್ಯಾನ್ಸರ್ ತಪಾಸಣೆಗೆ ಒಳಗಾಗಬೇಕು.
ಮಿಥ್ಯ: ಸಿಗರೇಟ್ಗಳ ಬದಲಿಗೆ ತಂಬಾಕು ಜಗಿಯುವುದು ಅಥವ ನಶ್ಯ ಸೇವಿಸುವುದು ಸುರಕ್ಷಿತ.
ಸತ್ಯ: ನಶ್ಯ ಅಥವ ತಂಬಾಕು ಸಿಗರೇಟಿನಷ್ಟೇ ದುರಭ್ಯಾಸ. ಅವು ಗಂಟಲು ಮತ್ತು ಕುತ್ತಿಗೆಯ ಕ್ಯಾನ್ಸರ್ಗೆ ಕಾರಣವಾಗಬಲ್ಲವು.
ಮಿಥ್ಯ: ಕೆಲವು ವರ್ಷ ಧೂಮಪಾನ ಮಾಡಿದರೇ ಸಾಕು, ಸಾಕಷ್ಟು ಹಾನಿಯಾಗಿರುತ್ತದೆ. ಆದ್ದರಿಂದ ಅದನ್ನು ಬಿಡುವುದರಿಂದ ಯಾವುದೇ ಲಾಭ ಇಲ್ಲ.
ಸತ್ಯ: ಧೂಮಪಾನ ಬಿಡಲು ಯಾವ ಕಾಲವೂ ವಿಳಂಬವಲ್ಲ. ಧೂಮಪಾನ ವರ್ಜಿಸಿದ ನಂತರ ಶ್ವಾಸಕೋಶದ ಕಾರ್ಯ ಮತ್ತು ರಕ್ತ ಪರಿಚಲನೆಯಲ್ಲಿ ಸುಧಾರಣೆ ಇರುತ್ತದೆ. ಶ್ವಾಸಕೋಶದ ಕ್ಯಾನ್ಸರ್ನ ಅಪಾಯ ಕಡಿಮೆಯಾಗುತ್ತಾ ಸಾಗುತ್ತದೆ. 10 ವರ್ಷಗಳಲ್ಲಿ ಅದು ಶೇ.50ರಷ್ಟು ಕಡಿಮೆಯಾಗುತ್ತದೆ.
ಮಿಥ್ಯ: ನಮ್ಮ ಕುಟುಂಬದಲ್ಲಿ ಸ್ತನ ಕ್ಯಾನ್ಸರ್ನ ಪ್ರಕರಣ ಇಲ್ಲದಿದ್ದರೆ ನನಗೆ ಅದು ಕಾಡುವುದರ ಬಗ್ಗೆ ಚಿಂತೆಯ ಅಗತ್ಯ ಇಲ್ಲ.
ಸತ್ಯ: ಸ್ತನ ಕ್ಯಾನ್ಸರ್ ಗುರುತಿಸಲಾದ ಬಹುತೇಕ ಮಹಿಳೆಯರಲ್ಲಿ ಈ ರೋಗದ ಕುಟುಂಬ ಇತಿಹಾಸ ಇಲ್ಲ. ಆದರೆ, ತಾಯಿಯ ಕಡೆಯ ಸಂಬಂಧಿಗಳಲ್ಲಿ ಈ ರೋಗ ಇದ್ದರೆ ಅದು ಬರುವ ಅಪಾಯ ಹೆಚ್ಚಿರುತ್ತದೆ. ಆದ್ದರಿಂದ ಶೀಘ್ರ ತಪಾಸಣೆಯ ಸಲಹೆ ನೀಡಲಾಗುತ್ತದೆ.
ಮಿಥ್ಯ: ಕೇವಲ ಮಹಿಳೆಯರಿಗೆ ಸ್ತನ ಕ್ಯಾನ್ಸರ್ ಬರುತ್ತದೆ.
ಸತ್ಯ: ಇದು ಅತ್ಯಂತ ದೊಡ್ಡ ತಪ್ಪು ಕಲ್ಪನೆ. ಅಷ್ಟು ಸಾಮಾನ್ಯವಲ್ಲದಿದ್ದರೂ ಪುರುಷರಿಗೂ ಕೂಡ ಸ್ತನ ಕ್ಯಾನ್ಸರ್ ಬರುತ್ತದೆ.
ಮಿಥ್ಯ: ಕಿಮೋಥೆರಪಿಯ ಔಷಧಿಗಳು ಸಾಮಾನ್ಯವಾಗಿ ಸಾವನ್ನುಂಟು ಮಾಡುತ್ತದೆ. ಇವುಗಳನ್ನು ತಪ್ಪಿಸುವುದು ಹೆಚ್ಚು ಉತ್ತಮವಾದ ಆಯ್ಕೆ.
ಸತ್ಯ: ಕಿಮೋಥರಪಿಯ ಔಷಧಗಳ ಆಯ್ಕೆ ಮತ್ತು ಪ್ರಮಾಣವನ್ನು ಪರಿಣಿತರು ರೋಗನಿದಾನದ ವಿವರ ಮತ್ತು ರೋಗಿಯ ಸಾಮಾನ್ಯ ಸ್ಥಿತಿಯನ್ನು ಗಮನಿಸಿ ನಿರ್ಧರಿಸುತ್ತಾರೆ. ಅಪರೂಪದ ಪ್ರಕರಣಗಳಲ್ಲಿ ಸಂಕೀರ್ಣ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಆದರೆ, ಅಪಾಯಗಳೊಂದಿಗೆ ಲಾಭಗಳನ್ನು ಅಳೆದು ಸುರಿದು ನಿರ್ಧರಿಸಬೇಕು. ಗುಣಪಡಿಸುವ ಅವಕಾಶವನ್ನು ತಿರಸ್ಕರಿಸುವ ಮುನ್ನ ನಿಮ್ಮ ವೈದ್ಯರೊಂದಿಗೆ ಸಮಾಲೋಚಿಸುವುದು ಉತ್ತಮ.
ಮಿಥ್ಯ: ವಿಕಿರಣ ಚಿಕಿತ್ಸೆ ಎಂದರೆ ವಿದ್ಯುತ್ ಆಘಾತ ನೀಡುವಂತಹದು. ಅದು ತ್ವಚೆ ಮತ್ತು ಒಳಗಿನ ಅಂಗಗಳನ್ನು ಸುಡುತ್ತದೆ.
ಸತ್ಯ: ವಿಕಿರಣ ಚಿಕಿತ್ಸೆ ಎಂದರೆ ಉನ್ನತ ಶಕ್ತಿಯ ಎಕ್ಸ್ರೇಗಳನ್ನು ಬಳಸುವುದು. ಅತ್ಯಾಧುನಿಕ ತಂತ್ರಜ್ಞಾನದ ಉಪಯೋಗದ ಕಾರಣ ಅಂಥ ಯಾವುದೇ ಹಾನಿ ಆಗುವುದಿಲ್ಲ.
ಮಿಥ್ಯ: ವಿಕಿರಣ ಚಿಕಿತ್ಸೆ ಪಡೆಯುತ್ತಿರುವ ರೋಗಿ ತನ್ನ ಕುಟುಂಬದ ಸದಸ್ಯರು ಮತ್ತು ಮಕ್ಕಳಿಗೆ ಹಾನಿಕಾರಕರಾಗಿರುತ್ತಾರೆ.
ಸತ್ಯ: ವಿಕಿರಣ ಚಿಕಿತ್ಸೆ ಕೊಠಡಿಯಿಂದ ಹೊರಬಂದ ನಂತರ ವ್ಯಕ್ತಿ ಸಂಪೂರ್ಣವಾಗಿ ಸುರಕ್ಷಿತವಾಗಿರುತ್ತಾರೆ, ಯಾವುದೇ ವಿಕಿರಣವನ್ನು ಹೊಂದಿರುವುದಿಲ್ಲ.
ಮಿಥ್ಯ: ವಿಕಿರಣ ಚಿಕಿತ್ಸೆಯಿಂದ ಕೂದಲು ಉದುರುತ್ತದೆ.
ಸತ್ಯ: ವಿಕಿರಣ ಚಿಕಿತ್ಸೆ ನೀಡುವ ಪ್ರದೇಶದಲ್ಲಿ ಮಾತ್ರ ಕೂದಲು ಉದುರುತ್ತದೆ. ಕಿಮೋಥರಪಿಯಂತೆ ಎಲ್ಲಾ ಕಡೆ ಕೂದಲು ಉದುರುವುದಿಲ್ಲ.
-ಡಾ. ಎಸ್. ನಿರ್ಮಲ
ವಿಕಿರಣ ಕ್ಯಾನ್ಸರ್ ರೋಗ ತಜ್ಞೆ, ಬಿಜಿಎಸ್ ಗ್ಲೋಬಲ್ ಹಾಸ್ಪಿಟಲ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


