ಬೈಟುಕಾಫಿ

ಮೇಘಾಲಯ ಮಂತ್ರಾಲಯ

ಮೇಘಾಲಯ ಮಂತ್ರಾಲಯ
Published On :

ಕರ್ನಾಟಕದ ಆಕರ್ಷಣೆ ಕೇವಲ ಐಟಿಬಿಟಿಗಷ್ಟೇ ಅಲ್ಲ. ಸಂಸ್ಕೃತ ಕಲಿಕೆಗೂ! ಈ ನೆಲದಲ್ಲಿ ಓಂಕಾರಾದಿ ಮಂತ್ರ ಜಪಿಸಲು ಈಶಾನ್ಯ ರಾಜ್ಯಗಳ ಮಕ್ಕಳು ಕ್ಯೂ ನಿಲ್ತಾರೆ. ಇದೇ ಉತ್ಸಾಹದಲ್ಲಿ ಮಂಡ್ಯದಲ್ಲಿ ಕಂಡವರು ಮೇಘಾಲಯ ಮಕ್ಕಳು!
ಇಲ್ಲಿನ ಆದಿಚುಂಚನಗಿರಿಯಲ್ಲಿ 'ಮೇಘಾ'ದೂತರದ್ದೇ ಮಂತ್ರಘೋಷ. 'ಕಾಲಭೈರವೇಶ್ವರ ಸಂಸ್ಕೃತ, ವೇದ, ಆಗಮ ಮಹಾವಿದ್ಯಾಲಯ'ದಲ್ಲಿರುವ ಈ 25 ಮಕ್ಕಳಿಗೆ ಸಂಸ್ಕೃತವೆಂದರೆ ಮಾತೃಭಾಷೆಗಿಂತ ಹೆಚ್ಚು ಪ್ರೀತಿ. ಇವರಿಗಿಲ್ಲಿ ಉಚಿತ ಶಿಕ್ಷಣ, ಆಶ್ರಯ. ಬೆಂಗಳೂರಿನ ಕೋರಮಂಗಲದಲ್ಲಿ ತುಂಡರಿಸಿದ ಚಡ್ಡಿ ಹಾಕ್ಕೊಂಡು ಓಡಾಡುವ ಈ ಮೇಘಾಲಯದ ಮಂದಿ, ಅದೇ ಮಂಡ್ಯದಲ್ಲಿ ನಮ್ಮ ಸಂಸ್ಕೃತಿಯ ರಾಯಭಾರಿಯಾಗಿ ಕಾಣಿಸುತ್ತಾರೆ. ಹಣೆಗೆ ವಿಭೂತಿ. ಪುರೋಹಿತರಿಗಿಂತ ಚೆನ್ನಾಗಿ ಪಂಚೆ ಕಟ್ಟಿಕೊಂಡು, ಪೂಜೆ ಮಾಡ್ತಾರೆ.
ಇವರದ್ದೇ ಪೂಜೆ
ಈ ವಿದ್ಯಾಲಯದಲ್ಲಿ ವಯಸ್ಸಿಗನುಗುಣವಾಗಿ 1-3ನೇ ತರಗತಿಗೆ ದಾಖಲಾತಿ. ಮೃತ್ಯುಂಜಯ ಹೋಮ, ಆಯುಷ್ಯ ಹೋಮಗಳಲ್ಲದೆ ನಾನಾ ಹೋಮ ಹವನಗಳ ಪ್ರಾತ್ಯಕ್ಷಿಕೆ ನೀಡುವಷ್ಟು ಪೂಜಾಪಾಂಡಿತ್ಯ ಇವರದು. ಗಣಪತಿ ಹೋಮ ಸೇರಿದಂತೆ 9 ಬಗೆಯ ಹೋಮ ಕುಂಡಗಳು ಇಲ್ಲಿದ್ದು, ಹೋಮಕ್ಕೆ ಬಳಸುವ ದ್ರವ್ಯ, ಹೂ ಹಣ್ಣು, ದವಸ ಧಾನ್ಯಗಳ ಬಗ್ಗೆ ಸಂಪೂರ್ಣ ಮಾಹಿತಿ ಇವರ ಮೆದುಳಲ್ಲಿದೆ. ಕಾಲಭೈರವೇಶ್ವರ ದೇಗುಲದಲ್ಲಿ ಇವರಿಗೆ ಪೂಜೆ, ಮಂತ್ರ ಪಠಣ ರೀತಿ ನೀತಿ ಎಲ್ಲವನ್ನೂ ಹೇಳಿಕೊಡಲಾಗುತ್ತದೆ.
ಕನ್ನಡಬಲ್ಲರು
ಇಲ್ಲಿವರು ಅದ್ವೈತ ವೇದಾಂತ ಅಲಂಕಾರ, ಜ್ಯೋತಿಷ್ಯ, ಧರ್ಮಶಾಸ್ತ್ರ, ವ್ಯಾಕರಣ ವಿಷಯಗಳಲ್ಲಿ ಪದವಿ ಹಾಗೂ ಸ್ನಾತಕೋತ್ತರ ಪದವಿ ಪಡೆಯಬಹುದು. ಈ ಮಕ್ಕಳಿಗೆ ಇಷ್ಟೆಲ್ಲ ವಿಶಿಷ್ಟ ಜ್ಞಾನ ದಯಪಾಲಿಸುತ್ತಿರುವವರು ಮಠಾಧೀಶ ಶ್ರೀ ನಿರ್ಮಲಾನಂದ ಸ್ವಾಮೀಜಿ. ಅಷ್ಟಕ್ಕೂ, ಈ ಮಕ್ಕಳು ಕೇವಲ ಸಂಸ್ಕೃತವನ್ನಷ್ಟೇ ಕಲಿಯುತ್ತಿಲ್ಲ. ಕನ್ನಡವನ್ನೂ ಕಲಿಯುತ್ತಿದ್ದಾರೆ. ಇಲ್ಲಿಗೆ ಬಂದು ನಾಲ್ಕೈದು ವರ್ಷಗಳು ಸಂದಿವೆ. ಸಹಪಾಠಿಗಳೊಂದಿಗೆ ಕನ್ನಡದಲ್ಲೇ ಮಾತನಾಡುವಷ್ಟು ಜಾಣರಿವರು. ಇನ್ನಿವರ ಇಂಗ್ಲಿಷು, ಕಂಪ್ಯೂಟರ್ ಜ್ಞಾನ ಎಂಥವರಿಗೂ ಬೆರಗು ಹುಟ್ಟಿಸುವಂಥದ್ದು.


-ಎಂ. ಅಫ್ರೋಜ್‌ಖಾನ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.