ಬೈಟುಕಾಫಿ

ತಲೆ ಚಚ್ಕೋಳೋ ಹಬ್ಬ!

ತಲೆ ಚಚ್ಕೋಳೋ ಹಬ್ಬ!
Published On :

ಅತ್ತೆ-ಸೊಸೆ, ತಾಯಿ-ಮಗಳು, ಅತ್ತಿಗೆ-ನಾದಿನಿ ಹೀಗೆ ಪರಸ್ಪರ ತಲೆ ಹಿಡಿದುಕೊಂಡು ಡಿಕ್ಕಿ ಹೊಡೆದುಕೊಳ್ಳುತ್ತಾರೆ. ಜಗಳವಲ್ಲ! ಇದೊಂದು ರೀತಿಯ ವಿಶಿಷ್ಟ ಹಬ್ಬದ ಆಚರಣೆ. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲುಕಿನ ಸಿ.ಎನ್.ಮಾಳಿಗೆ (ಚಿಕ್ಕೀರಣ್ಣ ನಾಯಕನ ಮಾಳಿಗೆ) ಗ್ರಾಮದ ಅಹೋಬಲ ನರಸಿಂಹಸ್ವಾಮಿ ದೇವಾಲಯದಲ್ಲಿ 'ಡಿ' ಹಬ್ಬ ಅಥವಾ ಡಿಕ್ಕಿ ಹಬ್ಬ ಎಂಬ ಹೆಸರಲ್ಲಿ ಆಚರಣೆಯಲ್ಲಿದೆ.
ಚಳ್ಳಕೆರೆ ತಾಲುಕು ನನ್ನಿವಾಳ ಗ್ರಾಮ ಹೊರತುಪಡಿಸಿದರೆ ಡಿಕ್ಕಿ ಹಬ್ಬ ರಾಜ್ಯದ ಮತ್ತೆಲ್ಲೂ ನಡೆಯುವುದಿಲ್ಲ.
ವಿಶೇಷವೆಂದರೆ ಮ್ಯಾಸ ನಾಯಕರು ಆಚರಿಸುವಂತಹ ಹಬ್ಬವನ್ನು ಊರ ನಾಯಕರೂ ಆಚರಿಸುತ್ತಾರೆ. ಮ್ಯಾಸ ನಾಯಕರ ಗ್ರಾಮ ಹಾಗೂ ಮಾಳಿಗೆ ಗ್ರಾಮಗಳೆಡರಲ್ಲೂ ಕೋಳಿ, ಹಂದಿಗಳಿಗೆ ಪ್ರವೇಶ ನಿಶೇಷ! ಸೊಸೆಯಾಗಿ ಗ್ರಾಮಕ್ಕೆ ಬಂದವರು ಮತ್ತು ಬೇರೆ ಊರಿಗೆ ಸೊಸೆಯಾಗಿ ಹೋದವರು ಒಂದೆಡೆ ಸೇರುವ ವೇದಿಕೆ. ಕಾರ್ತಿಕ ಮಾಸದ ಕಡೆಯ ದಿನ ಅಹೋಬಲ ನರಸಿಂಹಸ್ವಾಮಿ ದೇವಾಲಯಕ್ಕೆ ಎಲ್ಲರು ಆಗಮಿಸುತ್ತಾರೆ. ಸಂಭ್ರಮದಿಂದ ಡಿಕ್ಕಿ ಹಬ್ಬಾಚರಣೆಯಲ್ಲಿ ಪಾಲ್ಗೊಳ್ಳುತ್ತಾರೆ. ಪರಸ್ಪರ ಪ್ರೀತಿ, ವಿಶ್ವಾಸ, ಬಾಂಧವ್ಯದಿಂದ ಬದುಕು ಸಾಗಿಸಬೇಕು ಪ್ರಾಚೀನ ದಿನಗಳಿಂದ ನಡೆದುಕೊಂಡು ಬರುತ್ತಿರುವ ಡಿಕ್ಕಿ ಹಬ್ಬದ ಸಾರ. ಸಿ.ಎನ್.ಮಾಳಿಗೆ ಗ್ರಾಮದಲ್ಲಿನ ಈ ಹಬ್ಬ ವರ್ಷಂ ಪ್ರತಿ ನಡೆಯುತ್ತದೆ. ಸುಮಾರು 200-250 ವರ್ಷಗಳ ಇತಿಹಾಸವಿದೆ.
ಡಿಕ್ಕಿ ಹಬ್ಬಕ್ಕೆ ಬರದಿದ್ದರೆ ತಲೆನೋವು ಸಂಭವಿಸುತ್ತದೆ ಎಂಬ ನಂಬಿಕೆ ಇದೆ. ಅಹೋಬಲ ದೇವರ ಮೆರವಣಿಗೆ ಊರಿನ ಪ್ರಮುಖ ಬೀದಿಯಲ್ಲಿ ಸಾಗಿ ಊರ ಬಾಗಿಲವರೆಗೆ ಹೋಗಿ ಬರುತ್ತದೆ. ನಂತರ ದೊಡ್ಡ ಮಣೇವು. ದೇವರ ಸಮ್ಮುಖದಲ್ಲಿ ಬಟ್ಟೆ ಹಾಸಿ ಅದರಲ್ಲಿ ಬಾಳೆಹಣ್ಣು, ಸಕ್ಕರೆ, ತುಪ್ಪ ಹಾಕಲಾಗುತ್ತದೆ. ಗ್ರಾಮದ ಸುಮಾರು 25 ಯುವಕರು ಸ್ನಾನ ಮಾಡಿ ಒದ್ದೆ ಮೈಯಲ್ಲಿ ಬಂದು ಮಣೇವು ಹಾಕಿದ ಬಟ್ಟೆಯ ಸುತ್ತ ಕುಣಿಯುತ್ತ ಸುತ್ತುತ್ತಾರೆ. ನಂತರ ದೇವರ ಮುಂದೆ ಮಲಗಿಕೊಂಡು ಹಾಕಿರುವ ಹಣ್ಣು ತಿನ್ನುತ್ತಾರೆ. ದೇವರನ್ನು ಹೊತ್ತ ಪೂಜಾರಿ ಬೆತ್ತ ಹಿಡಿದುಕೊಂಡು ಯುವಕರ ಬೆನ್ನತ್ತಿ ಹೊಡೆಯಲು ಪ್ರಯತ್ನಿಸುತ್ತಾರೆ. ಯುವಕರು ತಪ್ಪಿಸಿಕೊಂಡು ಕುಣಿಯುತ್ತಲೇ ಓಡುವುದು ನಡೆಯುತ್ತದೆ. ಭಕ್ತರ ಹರ್ಷೋದ್ಗಾರ ಜೊತೆಯಾಗುತ್ತದೆ.
ಮೊದಲಿಗೆ ಟಗರುಗಳ ಡಿಕ್ಕಿ ಹೊಡೆಸುವ ಕಾರ್ಯ ಸಾಗುತ್ತದೆ. ನಂತರ ಮಹಿಳೆಯರ ಸರದಿ. ಸೊಸೆಯಾಗ ಬಂದವರು, ಹೋದವರು ಗುಂಪುಗಳಾಗಿ ಸಿದ್ಧರಾಗುತ್ತಾರೆ. 3 ಬಾರಿ ಒಬ್ಬರಿಗೊಬ್ಬರು ತಲೆ ಹಿಡಿದುಕೊಂಡು ಡಿಕ್ಕಿ ಹೊಡೆದ ಮೇಲೆ ಹಬ್ಬಕ್ಕೆ ತೆರೆ. ನನ್ನಿವಾಳ ಗ್ರಾಮದಲ್ಲಿದ್ದ ಅಹೋಬಲ ನರಸಿಂಹಸ್ವಾಮಿ ಉತ್ಸವ ಮೂರ್ತಿ ಮಾಳಿಗೆ ಗ್ರಾಮದಲ್ಲಿ ಪ್ರತಿಷ್ಠಾಪಿಸಲಾಗಿದೆ.

ಗ್ರಾಮೀಣ ಪ್ರದೇಶದ ಜನರ ಮೇಲೆ ನಗರ ಸಂಸ್ಕೃತಿ ಪ್ರಭಾವ ಬೀರುತ್ತಿರುವ ಸಂದರ್ಭದಲ್ಲಿ ಬುಡಕಟ್ಟು ಹಿನ್ನೆಲೆಯ ಜನ ತಮ್ಮ ಆಚರಣೆಗಳನ್ನು ಇನ್ನೂ ಜೀವಂತ ಇಟ್ಟುಕೊಂಡಿರುವುದು ಮೆಚ್ಚುಗೆಯಾಗುತ್ತದೆ. ಈ ಬಗ್ಗೆ ಹೆಚ್ಚಿನ ಅಧ್ಯಯನ ಅಗತ್ಯ.
- ಡಾ. ಜೆ.ಕರಿಯಪ್ಪ ಮಾಳಿಗೆ,  ಕನ್ನಡ ಪ್ರಾಧ್ಯಾಪಕ.

- ಕ.ಮ. ರವಿಶಂಕರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.