ನಿಮ್ಮ ದೇಹದ ಫಿಲ್ಟರ್ ಎಲ್ಲಿದೆ?

ಹುಡುಗರ ಗುಂಪಿನ ಸಂಭಾಷಣೆಯನ್ನು ಸುಮ್ಮನೆ ಕೇಳುತ್ತಿರಿ. ಯಾರಾದರೂ ಒಬ್ಬ ಹೊಸ ರೀತಿಯ ಐಡಿಯಾ ಕೊಟ್ಟರೆ ಅಥವಾ ಇದ್ದವರಲ್ಲಿ ತಾನೇ ಬುದ್ಧಿವಂತ ಎಂದು ತೋರಿಸಿಕೊಳ್ಳಲು ಮುಂದಾದರೆ ಉಳಿದವರು ರೇಗಿಸುತ್ತಾರೆ, 'ಎಂಥಾ ಟ್ಯಾಲೆಂಟು ಮಗಾ. ನಿನ್ನ ಕಿಡ್ನಿ ಏನು ತಲೆಯಲ್ಲಿ ಇದೆಯೇನೊ' ಎಂದು! ತಮಾಷೆಗೆ ಹೇಳಿದರೂ ಕಿಡ್ನಿ ವಿಚಾರದಲ್ಲಿ ಅವರು ಹೇಳುವುದರಲ್ಲಿ ಉತ್ಪ್ರೇಕ್ಷೆ ಎಳ್ಳಷ್ಟೂ ಇಲ್ಲ. ನಮ್ಮ ದೇಹದ ಮಲ್ಟಿಟ್ಯಾಲೆಂಟೆಡ್ ಅಂಗ ಎಂದರೆ ಅದು ಮೂತ್ರಪಿಂಡ. ಅದು ನಿರ್ವಹಿಸುವ ಕಾರ್ಯ ಅಷ್ಟು ವೈವಿಧ್ಯಮಯವಾದದ್ದು, ಅಷ್ಟೇ ಮಹತ್ವದ್ದು ಕೂಡ.
ಇನ್ನೊಂದು ತಮಾಷೆ ನೋಡಿ. ಯಾರನ್ನಾದರೂ 'ನಿನ್ನ ಕಿಡ್ನಿಗಳು ಎಲ್ಲಿವೆ' ಎಂದು ಕೇಳಿನೋಡಿ. ಕಕ್ಕಾಬಿಕ್ಕಿಯಾಗುತ್ತಾರೆ. 'ನಿಜವಾಗಲೂ ಹೇಳಿ' ಎಂದು ಗಂಭೀರವಾಗಿ ನುಡಿಯಿರಿ. ಅರೆಗಳಿಗೆ ಯೋಚಿಸಿ ಹೊಟ್ಟೆ ಆಸುಪಾಸು ಕೈ ಇಟ್ಟುಕೊಳ್ಳುತ್ತಾರೆ. ಕೆಲವರು ಕಿಬ್ಬೊಟ್ಟೆ ತೋರಿಸುತ್ತಾರೆ. ನಾವೂ ಮೊದಲು ಮಾಡುತ್ತಿದ್ದುದು ಹಾಗೆಯೇ ಆಗಿತ್ತು. ಎಲ್ಲರ ಕಲ್ಪನೆ ಎಂದರೆ ಮೂತ್ರಪಿಂಡಗಳು ಇರುವುದು ಹೊಟ್ಟೆಯ ಕೆಳಭಾಗದಲ್ಲಿ. ವಾಸ್ತವಿಕವಾಗಿ ಎರಡೂ ಕಿಡ್ನಿಗಳು ಸ್ಥಾಪಿತವಾಗಿರುವುದು ಬೆನ್ನೆಲುಬಿನ ಅಕ್ಕಪಕ್ಕ. ಬೀನ್ ಶೇಪ್ನ ಅವು ಪರಸ್ಪರ ಮುಖಾಮುಖಿಯಾಗುವ ರೀತಿಯಲ್ಲಿ ಇರುತ್ತವೆ. ಬಲಭಾಗದ ಮೂತ್ರಪಿಂಡವು ಯಕೃತ್ತಿಗೆ ಜಾಗ ಮಾಡಿಕೊಡುವ ಸಲುವಾಗಿ ಎಡ ಮೂತ್ರಪಿಂಡಕ್ಕಿಂತ ಸ್ವಲ್ಪ ಕೆಳಗಡೆ ಇರುತ್ತದೆ.
ಮೂತ್ರಪಿಂಡಗಳನ್ನು ನಮ್ಮ ದೇಹದ ನಿಜವಾದ 'ಪವರ್ಹೌಸ್'ಗಳು ಎನ್ನಲು ಅಡ್ಡಿಯಿಲ್ಲ. ಅವು 'ಫಿಲ್ಟರ್' ಗಳೂ ಹೌದು. ರಕ್ತದಲ್ಲಿನ ತ್ಯಾಜ್ಯಗಳನ್ನು ಶರೀರದಿಂದ ಹೊರಕ್ಕೆ ಕಳುಹಿಸುವುದು, ದೇಹದಲ್ಲಿ ದ್ರವಾಂಶದ ಸಮತೋಲನ ಕಾಪಾಡಿಕೊಳ್ಳುವುದು, ರಕ್ತದೊತ್ತಡ ನಿಯಂತ್ರಿಸುವುದು, ರಕ್ತದಲ್ಲಿನ ಕೆಂಪುರಕ್ತಕಣಗಳ ಪ್ರಮಾಣ ಕಡಿಮೆ ಆಗದಂತೆ ನೋಡಿಕೊಳ್ಳುವುದು ಮೊದಲಾದ ಪ್ರಮುಖ ಕಾರ್ಯಗಳನ್ನು ಮೂತ್ರಪಿಂಡಗಳು ನಿರ್ವಹಿಸುತ್ತವೆ. ಆಹಾರದ ಮೂಲಕ ಶರೀರ ದೊಳಕ್ಕೆ ಪ್ರವೇಶಿಸುವ ವಿಷಕಾರಿ ಪದಾರ್ಥಗಳು, ಅಧಿಕ ಉಪ್ಪು ಹಾಗೂ ಯೂರಿಯಾ, ಸಾರಜನಕಜನ್ಯ ತ್ಯಾಜ್ಯಗಳನ್ನು ಮೂತ್ರದ ಮೂಲಕ ಹೊರದಬ್ಬುವ ಕಾರ್ಯವನ್ನು ನಿರ್ವಹಿಸುವುದು ಈ ಮೂತ್ರಪಿಂಡಗಳೇ. ದೇಹಕ್ಕೆ ಹೆಚ್ಚು ನೀರು ಸೇರಿದಾಗ ಅದನ್ನು ಹೊರಹಾಕುವ ಕಿಡ್ನಿಗಳು, ನೀರಿನ ಪ್ರಮಾಣ ಕಡಿಮೆಯಾದಾಗ ಮೂತ್ರದ ಪ್ರಮಾಣವನ್ನೂ ಕಡಿಮೆ ಮಾಡುತ್ತವೆ. ಬೇಕಿದ್ದರೆ ಇದನ್ನು ನೀವೂ ಪರೀಕ್ಷಿಸಿ ನೋಡಿ. ಹೆಚ್ಚು ನೀರು ಕುಡಿದಾಗ ಅಂದು ಎಂದಿಗಿಂತ ಹೆಚ್ಚು ಸಲ ಮೂತ್ರವಿಸರ್ಜನೆ ಮಾಡುತ್ತೀರಿ, ನಿತ್ಯಕ್ಕಿಂತ ಕಡಿಮೆ ನೀರು ಕುಡಿದ ದಿನ ಕಡಿಮೆ ಸಲ ಮೂತ್ರಕ್ಕೆ ಹೋಗುತ್ತೀರಿ.
ಈಗ ಹೇಳಿ. ಇಷ್ಟೆಲ್ಲ ಕೆಲಸ ಮಾಡುವ ಮೂತ್ರಪಿಂಡಗಳ ಬಗ್ಗೆ ನೀವು ತಮಾಷೆಯಾಗಿ ಮಾತನಾಡುತ್ತೀರಾ?
-ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com
ಮೊ.9900113699 (ಎಸ್ಎಂಎಸ್ಗೆ ಮಾತ್ರ)
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


