ಬೈಟುಕಾಫಿ

ವಿವೇಕ ಸಾಗರ ಆನಂದ ಆಗರ

Published On :

ಸ್ವಾಮಿ ವಿವೇಕಾನಂದರು ಸರ್ವಧರ್ಮಗಳ ಸಾಗರದಲ್ಲಿ ಮಿಂದೆದ್ದು ಬಂದ ಮಾನವತೆಯ ಸಾಕಾರಮೂರ್ತಿ. ಸ್ವಾಮೀಜಿ ನೈನಿತಾಲ್‌ನಲ್ಲಿದ್ದಾಗ ಮೊಹಮ್ಮದ್ ಸರ್ಫ್‌ರಾಜ್ ಹುಸೇನ್ ಭೇಟಿಗಾಗಿ ಬಂದಿದ್ದ. ಆತನಿಗೆ ಅದ್ವೈತ ವೇದಾಂತದಲ್ಲಿ ವಿಶೇಷ ಒಲವು. ಆತ ಸ್ವಾಮೀಜಿ ವ್ಯಕ್ತಿತ್ವದಿಂದ, ಅಧ್ಯಾತ್ಮ ಶಕ್ತಿಯ ತೇಜಸ್ಸಿನಿಂದ ಪ್ರಭಾವಿತನಾಗಿದ್ದ. ಸ್ವಾಮೀಜಿಯನ್ನು ತನ್ನ ಗುರು ಎಂದು ಭಾವಿಸಿದ್ದ. ತನ್ನ ಹೆಸರನ್ನು 'ಮೊಹಮ್ಮದಾನಂದ' ಎಂದು ಬದಲಾಯಿಸಿಕೊಂಡಿದ್ದ.
ಸ್ವಾಮೀಜಿ ಮೊಹಮ್ಮದಾನಂದರಿಂದ ಬಂದ ಪತ್ರಕ್ಕೆ ಉತ್ತರಿಸುತ್ತಾ, 'ಸತ್ಯಸಂಗತಿಯೆಂದರೆ ಅದ್ವೈತದ ದೃಷ್ಟಿಕೋನದಿಂದ ಮಾತ್ರವೇ ನಾವು ಜಗತ್ತಿನ ಸಮಸ್ತ ಮತಧರ್ಮಗಳನ್ನೂ ಪ್ರೀತಿ ವಿಶ್ವಾಸಗಳಿಂದ ಕಾಣಲು ಸಾಧ್ಯ. ಮಾತೃಭೂಮಿಯ ಶ್ರೇಯಸ್ಸಿಗೆ ಈ ಎರಡು ಮಹಾತತ್ತ್ವಗಳಾದ ಹಿಂದೂ ಧರ್ಮ ಮತ್ತು ಇಸ್ಲಾಂ ಧರ್ಮ ಅಂದರೆ ವೇದಾಂತದ ಬುದ್ಧಿಮತ್ತೆ ಮತ್ತು ಇಸ್ಲಾಂ ಸಹೋದರತೆ ಇವೆರಡೂ ಕೂಡಿಕೊಳ್ಳಬೇಕು' ಎಂದು ಬರೆದರು.
ಹಿಂದೂ, ಮುಸ್ಲಿಂ, ಕ್ರೈಸ್ತ, ಫಾರ್ಸಿ, ಬೌದ್ಧ ಹೀಗೆ ಎಲ್ಲ ಧರ್ಮಗಳಲ್ಲಿನ ಒಳಿತನ್ನು ಸ್ವೀಕರಿಸಿ, ವಿಶ್ವಧರ್ಮಗಳ ಬೇರುಗಳನ್ನು ವೇದಾಂತದಲ್ಲಿ ಎತ್ತಿ ತೋರಿಸಿ, ಎಲ್ಲರನ್ನೂ ಮಾನವರೆಂದು ಕಾಣುವ, ಎಲ್ಲರೂ ಒಂದಾಗಿ ಬಾಳುವ ಮಾರ್ಗವನ್ನು ಸ್ವಾಮೀಜಿ ಎತ್ತಿ ಹಿಡಿದಿದ್ದಾರೆ. ಅಖಂಡ ಭಾರತದಲ್ಲಿ ಕೋಮುದ್ವೇಷ ಬೆರೆತದ್ದು ರಾಜಕೀಯದಿಂದಲೇ ಹೊರತು ಧರ್ಮ ಮಾರ್ಗದಿಂದಲ್ಲ ಎಂದು ಶತಮಾನಗಳ ಹಿಂದೆಯೇ ಸ್ವಾಮೀಜಿ ಸಾರಿದ್ದರು.
ಸಾಗರದಂತಹ ವ್ಯಕ್ತಿತ್ವವುಳ್ಳವರು ವಿವೇಕಾನಂದರು. ಸಾಗರವು ಒಂದೊಂದು ದಂಡೆಯಲ್ಲಿ ನಿಂತು ನೋಡುವವರಿಗೆ ಒಂದೊಂದು ರೀತಿ ಕಾಣುತ್ತದೆ. ಹಾಗೆ ಕಂಡ ಸಾಗರವೇ ಪರಿಪೂರ್ಣ ಎಂದು ಭಾವಿಸುವುದು ತಪ್ಪಾದೀತು!

-ಆನಂದ ಎಸ್.ಎನ್.
anandsn193@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.