ದುರ್ಭರವಾದ ಸಂಧ್ಯಾಕಾಲ
ಇಂದಿನ ಯುವ ಪೀಳಿಗೆಗೆ ಹಣದ ದಾಹ ಹೆಚ್ಚಾಗಿದೆ. ಬದುಕಿನ ಮೌಲ್ಯವೇ ತಿಳಿದಿಲ್ಲ. ಇದಕ್ಕೆ ಪೋಷಕರ ಬೆಂಬಲವೂ ಸಾಕಷ್ಟಿದೆ. ಹಳ್ಳಿಯ ಜನರು ಸಾಕಷ್ಟು ಪ್ರಜ್ಞಾವಂತರಾಗಿದ್ದಾರೆ. ತಮ್ಮ ಕಷ್ಟಗಳು ಮಕ್ಕಳಿಗೆ ಬೇಡವೆಂದು ಉತ್ತಮ ವಿದ್ಯಾಭ್ಯಾಸ ಕೊಡಿಸುತ್ತಿದ್ದಾರೆ. ಇತ್ತೀಚೆಗೆ ಉನ್ನತ ಶಿಕ್ಷಣ ಪಡೆದವರು ನಗರಗಳಿಗೆ ವಲಸೆ ಹೋಗುತ್ತಿದ್ದಾರೆ. ಇದಕ್ಕೂ ಮಿಗಿಲಾಗಿ ಪಾಶ್ಚಾತ್ಯ ದೇಶಗಳಲ್ಲೂ ನೆಲೆಗೊಂಡಿದ್ದಾರೆ. ನಗರದ ಜೀವನ ತುಂಬಾ ಕಷ್ಟವೆಂದು ಗಂಡ-ಹೆಂಡತಿ ಇಬ್ಬರೂ ಕೆಲಸಕ್ಕೆ ಹೋಗುವುದರಿಂದ ಪೋಷಕರ ಕಷ್ಟ ಹೇಳತೀರದಾಗಿದೆ. ಹಾಗಾಗಿ ಅವರು ತಮ್ಮ ಜೀವನದ ಸಂಧ್ಯಾಕಾಲವನ್ನು ಹಳ್ಳಿಯಲ್ಲೇ ಕಳೆಯಬೇಕಾದ ಅನಿವಾರ್ಯತೆ ಉಂಟಾಗುತ್ತಿದೆ. ಇದರ ಪರಿಣಾಮವೇ ವೃದ್ಧಾಶ್ರಮಗಳು. ಇದು ಶೈಕ್ಷಣಿಕ ಕ್ರಾಂತಿಯ ಪರಿಣಾಮವೆನ್ನಬಹುದೇ?
-ಎ. ಎಸ್. ಶಾಂತಾಬಾಯಿ, ಶಿವಮೊಗ್ಗ
ನೊಂದು ನಂದಿ ಹೋಗುತ್ತಿರುವ ಪೋಷಕರು
ವೃದ್ಧಾಶ್ರಮಗಳಾಗುತ್ತಿರುವುದಕ್ಕೆ ಕಾರಣ ಹಣ ಗಳಿಕೆ, ಆಡಂಬರ ಜೀವನದ ಬಯಕೆಯ ಫಲವೇ ಇದಾಗಿದೆ. ತಮ್ಮಂತೆ ವ್ಯವಸಾಯವನ್ನು ಮಾಡುವುದು ಬಿಟ್ಟು ಉತ್ತಮ ಜೀವನ ನಡೆಸಲೆಂದು ಆಶಿಸುವ ರೈತರು ಕೂಡ ಇದಕ್ಕೆ ಕಾರಣ. ತಮ್ಮಂತೆ ಊಟ-ಬಟ್ಟೆಗೆ ಒದ್ದಾಡದೇ ಒಳ್ಳೆಯ ಕೆಲಸ ಹಿಡಿದು ಉತ್ತಮ ಜೀವನ ನಡೆಸಲಿ ಎಂಬ ಆಶಯವಾಗಿರುತ್ತದೆ. ಆದರೆ, ಮುಂದೆ ಇದೇ ಮಕ್ಕಳು ತಮ್ಮನ್ನು ನೋಡಿಕೊಳ್ಳದೇ ಹೋಗುತ್ತಾರೆ ಎಂಬ ಕಲ್ಪನೆ ಕೂಡ ಇವರಲ್ಲಿ ಇರುವುದಿಲ್ಲ, ನೋಡಿಕೊಳ್ಳದಿದ್ದರೂ ಕೂಡ ಅವರು ಏನೂ ಬೇಜಾರು ಮಾಡಿಕೊಳ್ಳದೇ ತಮ್ಮ ಮಕ್ಕಳು ಚೆನ್ನಾಗಿರುವುದನ್ನು ತಿಳಿದು ಆನಂದಿಸುತ್ತಾ ನಂದಿ ಹೋಗುತ್ತಿದ್ದಾರೆ. ಮಕ್ಕಳು ನಗರದಲ್ಲಿ, ಪೋಷಕರು ಹಳ್ಳಿಯಲ್ಲಿ ಎಂಬಂತೆ ಆಗಿಹೋಗಿದೆ. ಹಳ್ಳಿಗಳನ್ನು ಅಭಿವೃದ್ಧಿಪಡಿಸಿ ಅಲ್ಲಿ ಕೂಡ ಉದ್ಯೋಗ ಸೃಷ್ಟಿಸಿದರೆ ಪೋಷಕರು ಮತ್ತು ಓದಿದ ಮಕ್ಕಳು ಜೊತೆಯಲ್ಲಿಯೇ ಇದ್ದು ಮಾನವೀಯತೆಯನ್ನು ಮೆರೆಯಲು ಅವಕಾಶವಿದೆ.
- ದೀಪಿಕಾ.ಕೆ, ಮಂಡ್ಯ
ಸಂಸ್ಕೃತಿಗಳ ನಾಶ
ಇದು ಸತ್ಯ. ಹಳ್ಳಿಗಳಷ್ಟೆ ಅಲ್ಲ ಚಿಕ್ಕ ಪುಟ್ಟ ಪಟ್ಟಣಗಳು ಸಹ ಇದಕ್ಕೆ ಹೊರತಲ್ಲ. ಹಿಂದೆಲ್ಲ ನಾಲ್ಕಾರು ಮಕ್ಕಳು ಇದ್ದು ಒಟ್ಟು ಕುಟುಂಬ, ಪರಸ್ಪರ ಸಹಾಯ, ಸಹಕಾರವಿರುತ್ತಿತ್ತು. ಈಗ ಇರುವರೇ ಒಬ್ಬಿಬ್ಬರು ಅವರು ಕೂಡ ಕಲಿಯಲು ನಗರಕ್ಕೆ ಹೋಗಿ ಅಲ್ಲೇ ಬೀಡುಬಿಟ್ಟು ನಗರದ ಆಕರ್ಷಣೆಗೆ ಒಳಗಾಗಿ ಕೃಷಿಯ ಕಡೆ ಒಲವು ತೋರದೆ ನಗರ ಜೀವನದ ಬಂಧದಲ್ಲಿ ವಿಲೀನರಾಗುತ್ತಾರೆ. ಅಪ್ಪ-ಅಮ್ಮಂದಿರು ಹಳ್ಳಿಯನ್ನು ಬಿಡಲಾಗದೆ, ನಗರಕ್ಕೆ ಹೊಂದಿಕೊಳ್ಳಲಾಗದೆ ವೃದ್ಧಾಪ್ಯದಲ್ಲಿ ಅಭದ್ರತೆಯಿಂದ ಕಾಲ ಕಳೆಯುವಂತಾಗಿದೆ. ಕೆಲವೆಡೆ ಅತ್ತೆ-ಸೊಸೆಯರ ಬಾಂಧವ್ಯ ಸರಿಯಿಲ್ಲದೆಯೂ ಉತ್ತರ-ದಕ್ಷಿಣವಾಗುತ್ತಿದ್ದಾರೆ. ಇದರಿಂದ ಹಳ್ಳಿ, ಹಳ್ಳಿಯಲ್ಲಿನ ನಮ್ಮ ಪುರಾತನ ಸಂಸ್ಕೃತಿಗಳು ಇಂದಿನ ಮಕ್ಕಳಿಗೆ ಸಿಗದಾಗಿದೆ. ಇದೆಲ್ಲವನ್ನು ಗಮನಿಸಿ ನಗರವಾಸಿಗಳು ತಮ್ಮ ಪೋಷಕರಿಗಾಗಿ ಹಾಗೂ ತಮ್ಮ ಮುಂದಿನ ಪೀಳಿಗೆಗಾಗಿ ತಮ್ಮನ್ನು ತಾವು ವಿಶ್ಲೇಷಿಸಿಕೊಳ್ಳಬೇಕು.
- ಪ್ರಫುಲ್ಲಾ ಜಗನ್ನಾಥ್, ಮೈಸೂರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

