ಆಟ ನಂಬರ್ 2

ಕ್ರಿಕೆಟ್ ಎಂದರೆ ಸಚಿನ್ ತೆಂಡೂಲ್ಕರ್, ತೆಂಡೂಲ್ಕರ್ ಎಂದರೆ ಕ್ರಿಕೆಟ್ ಎಂಬ ಮಾತಿದೆ. ಅಂತೆಯೇ ಕಪಿಲ್ ದೇವ್, ಮಹೇಂದ್ರ ಸಿಂಗ್ ಧೋನಿ ನಮಗೆ ಕ್ರಿಕೆಟಿಗರಾಗಿ ಗೊತ್ತು. ಆದರೆ ಸಚಿನ್ ಟೆನ್ನಿಸ್ ಆಡುವುದು, ಧೋನಿ ಫುಟ್ಬಾಲ್ ಆಡುವುದು, ಯುವರಾಜ್ ಸಿಂಗ್ ಟೆನಿಸ್ ಆಡುವುದು ನೋಡಿದ್ದೀರಾ?
ಅಲ್ಲಲ್ಲಿ ಇವರ 'ಎರಡನೇ ಆಟ'ದ ಚಿತ್ರಗಳನ್ನು ನೀವು ನೋಡಿರಬಹುದು. ಪ್ರತಿ ಆಟಗಾರನಿಗೂ ಇನ್ನೊಂದು ಹವ್ಯಾಸ ಇರುತ್ತದೆ. ಆ ಹವ್ಯಾಸದ ಸ್ಥಾನದಲ್ಲೂ ಇನ್ನೊಂದು ಆಟವೇ ಇರುವುದು ವಿಶೇಷ. ತನ್ನ ಆಟದಲ್ಲಿ ಪಡೆಯಲಾಗದ ಖುಷಿಯ ಪರಿಪೂರ್ಣತೆಯನ್ನು ಇನ್ನೊಂದು ಆಟದ ಮೂಲಕ ಪಡೆಯುವ ಹಂಬಲವೇ?
ಸಚಿನ್ ತೆಂಡೂಲ್ಕರ್ ಟೇಬಲ್ ಟೆನಿಸ್ನಲ್ಲಿ ಪ್ರವೀಣ. ಇದು ಬಹಳ ಮಂದಿಗೆ ಗೊತ್ತಿಲ್ಲ. ಸ್ವಲ್ಪ ಬಿಡುವು ಸಿಕ್ಕರೂ ಸಚಿನ್ ಟಿಟಿ ಆಡಲು ಶುರುವಿಡುತ್ತಿದ್ದರು. ಅವರ ಜತೆ ಕ್ರಿಕೆಟ್ ಸಲಕರಣೆ ಜತೆ ಸದಾ ಟಿಟಿ ಕಿಟ್ ಇರಬೇಕಾದ್ದೆ!
ಭಾರತ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿಗೆ ಫುಟ್ಬಾಲ್ ಎಂದರೆ ಪಂಚಪ್ರಾಣ. ಕ್ರಿಕೆಟ್ ಅಭ್ಯಾಸದ ವೇಳೆ ಅವರು ಫುಟ್ಬಾಲ್ ಆಡುತ್ತಾರೆ. ಇದರ ಜತೆ ವಿಡಿಯೋ ಗೇಮ್ ಎಂದರೆ ಧೋನಿಗೆ ಅಚ್ಚುಮೆಚ್ಚು. ಸಿಕ್ಸರ್ ವೀರ, ಕ್ಯಾನ್ಸರ್ ಗೆದ್ದ ಶೂರ ಯುವರಾಜ್ ಸಿಂಗ್ಗೆ ಕ್ರಿಕೆಟ್ ಹೊರತಾಗಿ ಟೆನಿಸ್ ಎಂದರೆ ಇಷ್ಟ. ತಾವು ಉಳಿದುಕೊಳ್ಳುವಲ್ಲೆಲ್ಲ ಸಮಯ ಸಿಕ್ಕಾಗಲೆಲ್ಲ ಟೆನಿಸ್ ಬ್ಯಾಟ್ ಹಿಡಿದುಕೊಂಡು ಹೊರಬೀಳುತ್ತಾರೆ.
ಕರ್ನಾಟಕದ ರಾಬಿನ್ ಉತ್ತಪ್ಪ ಅವರಿಗೆ ವಿಡಿಯೊ ಗೇಮ್ ಪ್ರೀತಿ. ಭಾರತದ ಅನೇಕ ಕ್ರಿಕೆಟಿಗರಿಗೆ ಪಿಎಸ್ಪಿ (ಪ್ಲೇ ಸ್ಟೇಷನ್ ಪೋರ್ಟೆಬಲ್ ಗೇಮ್ಸ್) ಎಂದರೆ ಪಂಚಪ್ರಾಣ. ಧೋನಿ, ರೋಹಿತ್ ಶರ್ಮಾ, ಗೌತಮ್ ಗಂಭೀರ್, ಆರ್.ಪಿ. ಸಿಂಗ್, ಇರ್ಫಾನ್ ಪಠಾಣ್ ಮುಂತಾದವರೆಲ್ಲ ಪಿಎಸ್ಪಿ ಗೇಮ್ಸ್ ಆಡುತ್ತಾರೆ.
ಇನ್ನು ವೀರೇಂದ್ರ ಸೆಹ್ವಾಗ್ಗೆ ಸಂಗೀತ ಕೇಳುವುದು ಮತ್ತು ವಿಡಿಯೋ ಗೇಮ್ಸ್ ಇಷ್ಟ. ಎರಡು ಮೊಬೈಲ್ ಇಟ್ಟುಕೊಳ್ಳುವ ಪೀಯೂಷ್ ಚಾವ್ಲಾ ಸದಾ ಮಾತಿನಲ್ಲಿ ಮುಳುಗಿರುತ್ತಾರೆ. ವೇಗದ ಬೌಲರ್ ಇಶಾಂತ್ ಶರ್ಮಾಗೆ ಇಂಟರ್ನೆಟ್ ಸರ್ಫಿಂಗ್, ವಿಶೇಷವಾಗಿ ಆರ್ಕುಟ್ನಲ್ಲಿ ಬಹಳ ಆಸಕ್ತಿ. ವಿವಾದಾಸ್ಪದ ಕ್ರಿಕೆಟಿಗ ಎಸ್. ಶ್ರೀಶಾಂತ್ ಉತ್ತಮ ನೃತ್ಯಪಟುವೂ ಹೌದು. ಇದೀಗ ಅವರು ಹಿಂದಿಯ ರಿಯಾಲಿಟಿ ಶೋ ಒಂದರಲ್ಲಿ ಸ್ಪರ್ಧಿಸಿ ತಮ್ಮ ಮತ್ತೊಂದು ಪ್ರತಿಭೆಯ ಅನಾವರಣ ಮಾಡಿದ್ದಾರೆ. ಜಂಬೋ ಖ್ಯಾತಿಯ ಅನಿಲ್ ಕುಂಬ್ಳೆ ಫೋಟೊಗ್ರಫಿ ಹವ್ಯಾಸ ಗೊತ್ತಿರುವ ವಿಷಯವೇ. ರಾಹುಲ್ ದ್ರಾವಿಡ್ ಮತ್ತು ವಿವಿಎಸ್ ಲಕ್ಷ್ಮಣ್ಗೆ ಪುಸ್ತಕ ಓದುವ ಆಸಕ್ತಿ. ಮಾಜಿ ನಾಯಕ ಸುನಿಲ್ ಗಾವಸ್ಕರ್ಗೆ ಬರವಣಿಗೆ ಪ್ರೇಮ. ಅನೇಕ ಪತ್ರಿಕೆಗಳಲ್ಲಿ ಇವರ ಅಂಕಣಗಳು ಇಂದಿಗೂ ಪ್ರಕಟವಾಗುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಷಯ. ಜತೆಗೆ ಗಾವಸ್ಕರ್ ಟಿವಿ ವೀಕ್ಷಕ ವಿವರಣೆಗಾರರಾಗಿಯೂ ಪ್ರಸಿದ್ಧ.
ಇನ್ನು ವಿದೇಶಿ ಆಟಗಾರರ ಪೈಕಿ ಆಸ್ಟ್ರೇಲಿಯಾದ ಮಾಜಿ ನಾಯಕ ಸ್ಟೀವ್ ವಾ ಅವರಿಗೆ ಫೋಟೊಗ್ರಫಿ ಮತ್ತು ಬರವಣಿಗೆ ನೆಚ್ಚಿನ ಹವ್ಯಾಸಗಳು. ಮತ್ತೊಬ್ಬ ಮಾಜಿ ನಾಯಕ ರಿಕಿ ಪಾಂಟಿಂಗ್ಗೆ ಗಾಲ್ಫ್ ಎಂದರೆ ಬಹಳ ಇಷ್ಟ. ನೀನು ಚೆಂಡು(ಗಾಲ್ಫ್) ಬಾರಿಸುವುದನ್ನು ನೋಡಿದರೆ, ಸುಮ್ಮನೆ ಕ್ರಿಕೆಟ್ನಲ್ಲಿ ಪ್ರತಿಭೆ ವ್ಯರ್ಥ ಮಾಡುತ್ತಿರುವಂತಿದೆ ಎಂದು ದಕ್ಷಿಣ ಆಫ್ರಿಕಾದ ಪ್ರಮುಖ ಗಾಲ್ಫ್ ಆಟಗಾರ ಗ್ಯಾರಿ ಪ್ಲೇಯರ್ ಒಮ್ಮೆ ಬಣ್ಣಿಸಿದ್ದರಂತೆ. ಆಸ್ಟ್ರೇಲಿಯಾದ ಮಾಜಿ ಆರಂಭಿಕ ಆಟಗಾರ, ದೈತ್ಯ ದೇಹಿ ಮ್ಯಾಥ್ಯೂ ಹೇಡನ್ಗೆ ಅಡುಗೆ ಎಂದರೆ ಪ್ರಾಣವಂತೆ. ಅಡುಗೆ ಬಗ್ಗೆ ಅವರು ಪುಸ್ತಕಗಳನ್ನೂ ಬರೆದಿದ್ದಾರೆ. 'ಮ್ಯಾಥ್ಯೂ ಹೇಡನ್ ಕುಕ್ಬುಕ್ಸ್' ಸರಣಿ, ಆರಂಭಿಕ ಬಾಣಸಿಗರು ಮತ್ತು ಆಹಾರ ಪ್ರಿಯರಿಗೆ ಆಗ ತಾನೇ ಸಮುದ್ರದಿಂದ ಹಿಡಿದು ತಂದ ತಾಜಾ ಮೀನಿನ ಗ್ರಿಲ್ ಅಥವಾ ಸುಟ್ಟು ತಿನ್ನುವುದರ ಬಗ್ಗೆ ಸೊಗಸಾದ ವಿವರಣೆಯನ್ನು ನೀಡುತ್ತದೆಯಂತೆ. ತನ್ನ ನೆಚ್ಚಿನ ಹವ್ಯಾಸಕ್ಕಾಗಿ ಕ್ರಿಕೆಟ್ಗೆ ಗುಡ್ಬೈ ಹೇಳಿದ ಆಟಗಾರನ ಬಗ್ಗೆ ಗೊತ್ತಿದೆಯೇ? ಆಸ್ಟ್ರೇಲಿಯಾದ ವಿಲಕ್ಷಣ ಆಟಗಾರ, ಆಲ್ರೌಂಡರ್ ಆ್ಯಂಡ್ರ್ಯೂ ಸೈಮಂಡ್ಸ್ ಯಾರಿಗೆ ತಾನೆ ಗೊತ್ತಿಲ್ಲ? ಈತ ತನ್ನ ನೆಚ್ಚಿನ ಹವ್ಯಾಸ ಮೀನು ಹಿಡಿಯುವಿಕೆಗಾಗಿ ಕ್ರಿಕೆಟ್ ಅನ್ನೇ ತ್ಯಜಿಸಿದ ಭೂಪ.
ತಂಡದ ಮುಖ್ಯವಾದ ಸಭೆಯಲ್ಲಿ ಭಾಗವಹಿಸುವ ಬದಲು ಮೀನು ಹಿಡಿಯುವುದರಲ್ಲಿ ತೊಡಗಿದ್ದ ಈತನನ್ನು 2008ರಲ್ಲಿ ತಂಡದಿಂದ ಅಮಾನತು ಮಾಡಲಾಯಿತು. ಮುಂದಿನ ಬೆಳವಣಿಗೆಯಲ್ಲಿ ಆತ ಕ್ರಿಕೆಟ್ನ್ನೇ ತ್ಯಜಿಸಿದ. ಆದರೇನು? ಮೀನು ಹಿಡಿಯುವ ತನ್ನ ಹವ್ಯಾಸದ ಕಾರಣ 'ಫಿಶಿಂಗ್ ವರ್ಲ್ಡ್' ಸೇರಿದಂತೆ ಅನೇಕ ನಿಯತಕಾಲಿಕೆಗಳ ಮುಖಪುಟದಲ್ಲೂ ರಾರಾಜಿಸಿದ!
ವಿಶ್ವವಿಖ್ಯಾತ ನಿಧಾನಗತಿಯ ಬೌಲರ್ ಶೇನ್ ವಾರ್ನ್ ಇದೀಗ ಪೋಕರ್ ಗೇಮ್ಸ್ನಲ್ಲಿ ತೀವ್ರ ಆಸಕ್ತಿ ಹೊಂದಿದ್ದಾರೆ. 888 ಪೋಕರ್ನ ಪ್ರಚಾರ ರಾಯಭಾರಿ ಆಗಿರುವ ವಾರ್ನ್, ವಿಶ್ವದೆಲ್ಲೆಡೆ ಆಸ್ಟ್ರೇಲಿಯಾದ ಪೋಕರ್ ತಂಡವನ್ನು ಹುರಿದುಂಬಿಸುತ್ತಾ ಮುನ್ನಡೆದಿದ್ದಾರೆ. 2010ರಲ್ಲಿ ನಡೆದ ವಿಕ್ಟೋರಿಯನ್ ಪೋಕರ್ ಚಾಂಪಿಯನ್ಶಿಪ್ನಲ್ಲಿ 42,065 ಡಾಲರ್ ಗೆದ್ದಿರುವುದು ಅವರ ಈವರೆಗಿನ ಉತ್ತಮ ಸಾಧನೆ!
ಆಸ್ಟ್ರೇಲಿಯಾದ ಬೆಂಕಿಯುಂಡೆ ಉಗುಳುವ ಚೆಂಡುಗಳ ಖ್ಯಾತಿಯ ಬ್ರೆಟ್ ಲೀ ಹವ್ಯಾಸ ಸಂಗೀತ. 'ಸಿಕ್ಸ್ ಆ್ಯಂಡ್ ಔಟ್' ಎಂಬ ಸ್ವಂತ ಬ್ಯಾಂಡ್ ಹೊಂದಿರುವ ಲೀ, ಬಾಲಿವುಡ್ನಲ್ಲೊಂದು ಮ್ಯೂಸಿಕ್ ವಿಡಿಯೊ ಆಲ್ಬಂ ಮಾಡಿದ್ದಾರೆ. ತಂಡದ ಜತೆ ಪ್ರವಾಸ ಹೋದಾಗಲೆಲ್ಲ ಗಿಟಾರ್ ಅನ್ನೂ ಹೊತ್ತೊಯ್ಯುತ್ತಿದ್ದ ಲೀ 2011ರಲ್ಲಿ ಸಂಗೀತದ ಧಮಾರ್ಥ ಪ್ರದರ್ಶನಗಳನ್ನು ಏರ್ಪಡಿಸುವ ಮೂಲಕ ಭಾರತದ ಮಕ್ಕಳಿಗೆ ನೆರವಾಗುವ ಕಾಯಕದಲ್ಲೂ ತೊಡಗಿದ್ದಾರೆ.
= ಪ್ರೇಮರಾಜು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


