ಮ್ಯಾನೇಜ್ಮೆಂಟ್ ಯಶಸ್ಸಿನಲ್ಲಿ ಅಡಗಿದೆ ಆಹಾರದ ಗುಟ್ಟು

ಆರೋಗ್ಯವಂತ ವ್ಯಕ್ತಿಯ ಮೆದುಳು ಸಮರ್ಥವಾಗಿ ಕಾರ್ಯನಿರ್ವಹಿಸಲು ಎಷ್ಟು ಶಕ್ತಿ ಬೇಕು? ಅಂದಾಜಿಸಬಲ್ಲಿರಾ? 20 ವೋಲ್ಟ್! ಹೌದು, ನಮ್ಮ ಮೆದುಳು ಸರಿಯಾಗಿ ಕೆಲಸ ಮಾಡಲು ಪ್ರತಿದಿನ ಇಷ್ಟು ಪ್ರಮಾಣದ ಶಕ್ತಿ ಬೇಕು. ಆಹಾರದ ಮೂಲಕ ದೊರೆಯುವ ಗ್ಲೂಕೋಸ್ ಮತ್ತು ಆಮ್ಲಜನಕಗಳಿಂದ ಮೆದುಳು ತನಗೆ ಅಗತ್ಯವಿರುವ ಶಕ್ತಿಯನ್ನು ಪಡೆದುಕೊಳ್ಳುತ್ತದೆ. ಇನ್ನೊಂದು ಗುಟ್ಟು ತಿಳಿದುಕೊಂಡಿರಿ. ನೀವು ಜಾಸ್ತಿ ಆಹಾರ ಸೇವಿಸಿದಷ್ಟು ಮೆದುಳಿಗೆ ಬೇಕಾದ ಶಕ್ತಿಯಲ್ಲಿ ಕೊರತೆ ಉಂಟಾಗುತ್ತದೆ. ಅದರ ಅರ್ಥ ಕಡಿಮೆ ಆಹಾರ ಸೇವನೆ ಅಥವಾ ಉಪವಾಸದಿಂದ ಮೆದುಳು ವಿಪರೀತ ಚುರುಕಾಗುತ್ತದೆ ಎಂದಲ್ಲ. ಶರೀರಕ್ಕೆ ಅಗತ್ಯ ಇರುವುದಕ್ಕಿಂತ ಹೆಚ್ಚಿನ ಪ್ರಮಾಣದ ಆಹಾರ ಸೇವನೆ ಸಲ್ಲದು ಅಂತ. ಹೊಟ್ಟೆ ತುಂಬಿರುತ್ತದೆ ಅಥವಾ ಹಸಿವು ಆಗಿರುವುದಿಲ್ಲ. ಅಂತಹ ಸಂದರ್ಭಗಳಲ್ಲಿ ನಿಮಗೆ ಇಷ್ಟ ಅನ್ನಿಸುವ, ರುಚಿಕರವಾಗಿದೆ ಅಂತಲೋ ಇನ್ನಷ್ಟು ತಿಂದುಬಿಟ್ಟರೆ ಜೀರ್ಣಾಂಗಗಳಿಗೆ ಹೆಚ್ಚುವರಿ ಶಕ್ತಿಯನ್ನು ಪಡೆದುಕೊಳ್ಳುವ ಅನಿವಾರ್ಯತೆ ಉಂಟಾಗುತ್ತದೆ. ಜೀರ್ಣಾಂಗಗಳು ಅಧಿಕ ಶಕ್ತಿ ಬೆಳೆಸಿಕೊಂಡಾಗ ಮೆದುಳಿಗೆ ಶಕ್ತಿಯ ಅಭಾವ ಎದುರಾಗುತ್ತದೆ. ಆಗ ಸಹಜವಾಗಿಯೇ ಅದರ ಕಾರ್ಯಚಟುವಟಿಕೆ ಕಡಿಮೆ ಆಗುತ್ತದೆ. ಗಡದ್ದಾಗಿ ಊಟ ತಿಂಡಿ ಮಾಡಿದ ಮೂಲಕ ಮನಸ್ಸು ಜಡವಾಗಲು ಅಥವಾ ನಿದ್ರೆಗೆ ಜಾರಲು ಕಾರಣ ಏನು ಎನ್ನುವುದು ಈಗ ತಿಳಿಯಿತಲ್ಲ. ಆಹಾರದ ವಿಚಾರದಲ್ಲಿ ನಿಯಂತ್ರಣ ಸಾಧಿಸಿದಷ್ಟು ಬೌದ್ಧಿಕವಾಗಿಯೂ ಚುರುಕಾಗಿರುತ್ತೀರಿ. ಸಿಟ್ಟು, ಸಂತೋಷ, ಹತಾಶೆ, ಮುಂಗೋಪ, ಮೂಡ್ ಇವೆಲ್ಲಕ್ಕೆ ನಮ್ಮ ಆಹಾರ ಪದ್ಧತಿಯೊಂದಿಗೆ ನಿಕಟ ಸಂಬಂಧವಿದೆ. 'ಹಿತ, ಮಿತ ಸಾತ್ವಿಕ ಆಹಾರ ಸೇವಿಸಬೇಕು' ಎಂದು ಯೋಗ ಶಾಸ್ತ್ರದಲ್ಲಿ ಹೇಳಿರುವುದು ಈ ಹಿನ್ನೆಲೆಯಲ್ಲಿಯೇ.
ಮ್ಯಾನೆಜ್ಮೆಂಟ್ ಕೌಶಲ್ಯಕ್ಕೂ, ಆಹಾರಕ್ಕೂ ಸಂಬಂಧವಿದೆ ಎಂದರೆ ಕೆಲವರು ನಗಬಹುದು. ಆಹಾರ, ಮೆದುಳಿನ ಸಂಬಂಧ ಅರಿತುಕೊಂಡವರು ಇದನ್ನು ತಮಾಷೆಯ ವಿಷಯ ಎಂದು ಭಾವಿಸಲಾರರು. ದಿನವಿಡೀ ಮಹತ್ತರ ಸಭೆಗಳಲ್ಲಿ ಭಾಗವಹಿಸಬೇಕೆಂದೆ, ಪ್ರತಿ ನಿಮಿಷವೂ ಮಾನಸಿಕವಾಗಿ ಜಾಗೃತಿಯಿಂದ ಇರಬೇಕಾಗಿದೆ ಎಂದುಕೊಳ್ಳಿ. ಅಂದು ಇಡೀ ದಿನ ಆಹಾರ ಪದ್ಧತಿಯಲ್ಲಿ ತುಸು ಬದಲಾವಣೆ ಮಾಡಿಕೊಂಡರೆ ಸಾಕು. ಉದಾಹರಣೆಗೆ - ಬೆಳಗ್ಗೆ ಉಪಹಾರದಲ್ಲಿ ಹಣ್ಣು, ಹಣ್ಣಿನ ರಸ, ಬೇಯಿಸಿದ ಮೊಟ್ಟೆ, ಕೊಬ್ಬು ರಹಿತ ಯೋಗರ್ಟ್ ಇರಲಿ. ಕೆನೆ ತೆಗೆದ ಹಾಲು, ಕಾಫಿ, ಚಹಾ ಕುಡಿಯಬಹುದು. ಮಧ್ಯಾಹ್ನ ಊಟಕ್ಕೆ ತುಸು ಅನ್ನ, ರೊಟ್ಟಿ ಇರಲಿ; ಗ್ರೀನ್ ಸಲಾಡ್, ಫ್ರೂಟ್ ಸಲಾಡ್ ಜಾಸ್ತಿ ಸೇವಿಸಿ. ರಾತ್ರಿಯೂ ಸಬೆ ಮುಂದುವದಿದ್ದ ಪಕ್ಷದಲ್ಲಿ ಬೆರ್ರಿ ಹಣ್ಣುಗಳು, ಟೊಮೆಟೋ, ತರಕಾರಿ ಸಲಾಡ್ಗೆ ಒತ್ತುಕೊಡಿ. ಈ ಆಹಾರ ಕ್ರಮ ದೈಹಿಕವಾಗಿಯೂ ಸುಸ್ತು ಉಂಟುಮಾಡುವುದಿಲ್ಲ. ಮಾನಸಿಕವಾಗಿಯೂ ಚುರುಕಾಗಿಡುತ್ತದೆ.
ಕಾರ್ಬೋಹೈಡ್ರೇಟ್ಸ್ ಜಾಸ್ತಿ ಇರುವ ಆಹಾರ, ತಂಪು ಪಾನೀಯಗಳ ಸೇವನೆ ಕಡಿಮೆ ಮಾಡಿದಷ್ಟು ಒಳ್ಳೆಯದು. ಬದಲಿಗೆ ಪ್ರೊಟೀನ್ಯುಕ್ತ ಆಹಾರಗಳಿಗೆ ಆದ್ಯತೆ ಕೊಡಿ. ಎರಡೂ ಅನೇಕವಾಗಿರುವ ತಿನಿಸುಗಳನ್ನು ಸೇವಿಸಬೇಕಾದಾಗ ಪ್ರೊಟೀನ್ ಆಹಾರ ಮೊದಲು ಸೇವಿಸಿ. ನಂತರ ಕಾರ್ಬೋಹೈಡ್ರೇಟ್ಸ್ಯುಕ್ತ ತಿನಿಸು ಬಾಯಿಗೆ ಹಾಕಿಕೊಳ್ಳಿ. ಹೀಗೆ ಮಾಡುವುದರಿಂದ ಪ್ರೊಟೀನ್ಯುಕ್ತ ಆಹಾರ ಮೆದುಳಿಗೆ ಮೊದಲು ತಲುಪಿ, ಅದಕ್ಕೆ ಅಗತ್ಯವಿರುವ ಶಕ್ತಿ ಒದಗಿಸುತ್ತದೆ.
-ಡಾ. ಪಿ. ಸದಾನಂದ ಮೈಯ್ಯ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


