ಕಾಮ ಕೆರಳಿಸುವ ಈರುಳ್ಳಿ ಮೂಡ್ ತರಿಸಬಲ್ಲದು

'ಜಾಸ್ತಿ ಈರುಳ್ಳಿ ತಿನ್ನಬೇಡಿ'ಎಂದು ಬ್ರಹ್ಮಚಾರಿಗಳಿಗೆ ಗೆಳೆಯರು ಕಿಚಾಯಿಸುವುದನ್ನು ನೀವು ಕೇಳಿಯೇ ಇರುತ್ತೀರಿ. ಹಾಗೆಯೇ ಹೊಸದಾಗಿ ಮದುವೆಯಾದವರಿಗೆ, 'ಈರುಳ್ಳಿ ತಿನ್ನಿ' ಎಂದು ಅನುಭವಿಗಳು ಸಲಹೆ ನೀಡುವುದನ್ನೂ ಕೇಳಿರುತ್ತೀರಿ. ಕಾರಣವನ್ನು ಬಿಡಿಸಿಹೇಳಬೇಕಿಲ್ಲ. ಈರುಳ್ಳಿ ಕಾಮೋತ್ತೇಜಕ ಎನ್ನುವುದು ಎಲ್ಲರಿಗೂ ಗೊತ್ತಿರುವಂಥದ್ದೇ. ಈರುಳ್ಳಿ ಬಗ್ಗೆ ಹಲವರಿಗೆ ಬಹಳಷ್ಟು ಮಂದಿಗೆ ಗೊತ್ತಿರುವ ಏಕೈಕ ಸಂಗತಿ ಎಂದರೆ ಅದು ಕಾಮವನ್ನು ಪ್ರಚೋದಿಸುತ್ತದೆ ಎನ್ನುವುದು ಮಾತ್ರ. ಈರುಳ್ಳಿ ಆರೋಗ್ಯದ ಗಣಿ. ಅದು ಅತ್ಯುತ್ತಮ ಜೀರ್ಣಕಾರಿ. ರಕ್ತಶುದ್ಧಕ ಸಹ. ರಕ್ತ ಪರಿಚಲನೆಯೂ ಚೆನ್ನಾಗಿರುವಂತೆ ಮಾಡಬಲ್ಲದು. ಹೀಗಾಗಿ ಆರೋಗ್ಯದ ದೃಷ್ಟಿಯಿಂದ ಈರುಳ್ಳಿ ಸೇವನೆ ಅತ್ಯುತ್ತಮ. ತನ್ನ ರುಚಿಗಿಂತಲೂ ಹೆಚ್ಚಾಗಿ ತಾನು ಹೊಂದಿರುವ ಆರೋಗ್ಯದ ಗುಣದಿಂದಾಗಿಯೇ ಈರುಳ್ಳಿ ನಮ್ಮ ಆಹಾರ ಪದ್ಧತಿಯಲ್ಲಿ ಮಹತ್ವದ ಸ್ಥಾನ ಗಳಿಸಿಕೊಂಡಿರುವುದು. ಇನ್ನೊಂದು ವಿಶೇಷ ನೋಡಿ. ಹಸಿ ಈರುಳ್ಳಿ ತಿಂದಾಕ್ಷಣ ಬಾಯಲ್ಲಿ ವಾಸನೆ ಬರುತ್ತದೆ, ಹಾಗಂತ ಈರುಳ್ಳಿ ತಿನ್ನುವುದನ್ನು ಯಾರೂ ನಿಲ್ಲಿಸುವುದಿಲ್ಲ ಅಲ್ಲವೆ? ಕಾಮ ಪ್ರಚೋದಿಸುವ ಈರುಳ್ಳಿ ನಿಮ್ಮ ಮೂಡ್ ಅನ್ನೂ ಚೆನ್ನಾಗಿ ಇಡಬಲ್ಲದು.
ಒತ್ತಡದ ಸಂದರ್ಭಗಳಲ್ಲಿಯೂ ಮೂಡ್ ಕೆಡದಂತೆ ನೋಡಿಕೊಳ್ಳಬಲ್ಲದು ಎಂದರೆ ನಿಮಗೆ ಆಶ್ಚರ್ಯ ಆಗಬಹುದು. ಅದಕ್ಕಿಂತ ಮುಖ್ಯವಾಗಿ ಇದೇ ಈರುಳ್ಳಿ ಬಹುಬೇಗ ನಿದ್ರೆ ಬರುವಂತೆಯೂ ಮಾಡಬಲ್ಲದು. ಅಚ್ಚರಿ ಅನ್ನಿಸುತ್ತಿದೆ ಅಲ್ಲವೇ? ಹಾಗಂತ ಇದು ಆಧುನಿಕ ಸಂಶೋಧನೆ ಏನೂ ಅಲ್ಲ. ನೂರಾರು ವರ್ಷ ಹಿಂದೆಯೇ ಈಜಿಪ್ಟಿನ ಮಂದಿ ಈ ಗುಟ್ಟು ಕಂಡುಕೊಂಡಿದ್ದರು. ಅದರಲ್ಲೂ ಕೆಂಪು ಮತ್ತು ಹಳದಿ ಈರುಳ್ಳಿ ಅತ್ಯಂತ ಪ್ರಭಾವಶಾಲಿ ಎನ್ನುವುದನ್ನೂ ಅರಿತಿದ್ದರು. ಇವುಗಳಲ್ಲಿನ ಕ್ವೆಸರ್ಟಿನ್ ಅಂಶ ಅತ್ತುತ್ತಮ ಆ್ಯಂಟಿಆಕ್ಸಿಡೆಂಡ್ ಮಾತ್ರವೇ ಅಲ್ಲ, ನೋವು ಶಮನಕಾರಿ ಸಹ. ಇದು ನೇರವಾಗಿ ಕೇಂದ್ರ ನರವ್ಯೂಹದ ಮೇಲೆಯೇ ಪ್ರಭಾವ ಬೀರುತ್ತದೆ. ಹೀಗಾಗಿಯೇ ಈರುಳ್ಳಿ ತಿಂದಾಗ ನಮ್ಮಲ್ಲಿ ಆರಾಮದಾಯಕ ಭಾವನೆ ಮೂಡಿಸುವುದರ ಜತೆಗೆ ತುಸು ನಿದ್ರೆಯ ಜೋಮನ್ನೂ ಉಂಟುಮಾಡುತ್ತದೆ. ಎಷ್ಟೇ ಒತ್ತಡ ಇದ್ದರೂ ಅದನ್ನು ಕೊಂಚ ನಿರಾಳಗೊಳಿಸಿ ತುಸುವಾದರೂ ನೆಮ್ಮದಿಯ ಭಾವ ಮೂಡಿಸುತ್ತದೆ.
ಈಜಿಪ್ಟಿಯನ್ನರು ಕಂಡುಕೊಂಡಿದ್ದ ಈ ಸತ್ಯವನ್ನು ಫ್ರಾನ್ಸ್ನ ಆಧುನಿಕ ಸಂಶೋಧನೆಗಳು ದೃಢಪಡಿಸಿವೆ. ಹೀಗಾಗಿ ಇನ್ನುಮುಂದೆ ಟೆನ್ಶನ್ನಲ್ಲಿದ್ದಾಗ 'ಈರುಳ್ಳಿ ತಿಂದುನೋಡಿ' ಎಂದು ಹೊಸಗಾದೆಯನ್ನೇ ಹುಟ್ಟುಹಾಕಲು ಅಡ್ಡಿಯಿಲ್ಲ.
-ಡಾ. ಪಿ. ಸದಾನಂದ ಮೈಯ್ಯ
ಮೊ.9900113699 (ಎಸ್ಎಂಎಸ್ಗೆ ಮಾತ್ರ)
(ಮುಂದುವರಿಯುವುದು)
sadananda.maiya@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


