ಬೈಟುಕಾಫಿ

ಯುದ್ಧಟತನ

ಉತ್ತರ ಇರಾಕ್‌ನಲ್ಲಿ ಎಲ್ಲೆಲ್ಲೂ ಗುಂಡಿನ ಮೊರೆತ. ಕೂತು ಮಾತಾಡಿ ಪರಿಹರಿಸಿಕೊಳ್ಳಬೇಕಾದ ವಿಚಾರವನ್ನು ಬಂದೂಕು ಹಿಡಿದು ಪರಿಹರಿಸಿಕೊಳ್ಳಲು ಹೊರಟದ್ದೇ ಅಲ್ಲಿನ ಪ್ರಕ್ಷುಬ್ಧತೆಗೆ ಕಾರಣ.

ಯುದ್ಧಟತನ
Published On :

ಉತ್ತರ ಇರಾಕ್‌ನಲ್ಲಿ ಎಲ್ಲೆಲ್ಲೂ ಗುಂಡಿನ ಮೊರೆತ. ಕೂತು ಮಾತಾಡಿ ಪರಿಹರಿಸಿಕೊಳ್ಳಬೇಕಾದ ವಿಚಾರವನ್ನು ಬಂದೂಕು ಹಿಡಿದು ಪರಿಹರಿಸಿಕೊಳ್ಳಲು ಹೊರಟದ್ದೇ ಅಲ್ಲಿನ ಪ್ರಕ್ಷುಬ್ಧತೆಗೆ ಕಾರಣ. ಇದೊಂದೇ ಅಲ್ಲ, ಜಗತ್ತು ಇಂಥ ಹಲವು 'ವಿವೇಕರಹಿತ' ಯುದ್ಧಗಳಿಗೆ ಸಾಕ್ಷಿಯಾಗಿದೆ. ಅವುಗಳ ಸಂಕ್ಷಿಪ್ತ ಪರಿಚಯ ಇಲ್ಲಿದೆ...

ಯುದ್ಧ! ಮತ್ತೆ ಮತ್ತೆ ನಮ್ಮನ್ನು ಬೆಚ್ಚಿಬೀಳಿಸುವ, ಆ ಅಗ್ನಿಯೊಳಗೆ ದೂರವಿದ್ದರೂ ಮಾನಸಿಕವಾಗಿ ಆಹುತಿಯಾಗುವಂತೆ ಮಾಡುವ ಪ್ರಹಾರ. ಅದು ಕಾಶ್ಮೀರಲ್ಲೇ ನಡೆಯಲಿ, ಇರಾಕಿನಲ್ಲೇ ನಡೆಯಲಿ... ಚೆಲ್ಲಿದ ರಕ್ತ ಕಂಡು ಕಣ್ಣೀರು ಉದುರುತ್ತದೆ. ಈಗ ಮತ್ತೆ ಅದೇ ದುಃಖ ನಮ್ಮನ್ನು ಅಪ್ಪಳಿಸುತ್ತಿದೆ.
ಉತ್ತರ ಇರಾಕ್‌ನಲ್ಲಿ ಎಲ್ಲೆಲ್ಲೂ ಗುಂಡಿನ ಮೊರೆತ. ಕೂತು ಮಾತಾಡಿ ಪರಿಹರಿಸಿಕೊಳ್ಳಬೇಕಾದ ವಿಚಾರವನ್ನು ಬಂದೂಕು ಹಿಡಿದು ಪರಿಹರಿಸಿಕೊಳ್ಳಲು ಹೊರಟದ್ದೇ ಅಲ್ಲಿನ ಪ್ರಕ್ಷುಬ್ಧತೆಗೆ ಕಾರಣ. ಇದೊಂದೇ ಅಲ್ಲ, ಜಗತ್ತು ಇಂಥ ಹಲವು 'ವಿವೇಕರಹಿತ' ಯುದ್ಧಗಳಿಗೆ ಸಾಕ್ಷಿಯಾಗಿದೆ. ಅವುಗಳ ಸಂಕ್ಷಿಪ್ತ ಪರಿಚಯ ಇಲ್ಲಿದೆ...

ಅದು 40 ನಿಮಿಷದ ಯುದ್ಧ!

ಆಂಗ್ಲರು- ಜಾಂಜಿಬಾರ್ ನಡುವಿನ ಕಾಳಗ. ಇತಿಹಾಸದಲ್ಲಿ ಅತ್ಯಂತ ಕಡಿಮೆ ಅವಧಿಯ ಯುದ್ಧವಿದು. ಕೇವಲ 40 ನಿಮಿಷ ನಡೆದಿತ್ತು. 1896ರ ಆಗಸ್ಟ್ 27ರಂದು ಬ್ರಿಟನ್ ಮತ್ತು ಜಾಂಜಿಬಾರ್ ನಡುವೆ ನಡೆದಿತ್ತು. ಬ್ರಿಟಿಷರನ್ನು ಬೆಂಬಲಿಸುತ್ತಿದ್ದ ರಾಜಮನೆತನದ ಸುಲ್ತಾನ್ ಹಮುದ್ ಬಿನ್ ತುವೈನಿ ಮೃತನಾದಾಗ, ಬ್ರಿಟಿಷರ ಅನುಮತಿ ಪಡೆಯದೇ ಸುಲ್ತಾನ್ ಖಾಲಿದ್ ಬಿನ್ ಬರ್ಗಶ್‌ನನ್ನು ಉತ್ತರಾಧಿಕಾರಿಯಾಗಿ ನೇಮಿಸಿದ್ದು ಯುದ್ಧಕ್ಕೆ ಕಾರಣ. 1886ರ ಆಗಸ್ಟ್  27ರ ಬೆಳಗ್ಗೆ 9 ಗಂಟೆ 2 ನಿಮಿಷಕ್ಕೆ ದಾಳಿ ಆರಂಭವಾಗಿ, 9.40ಕ್ಕೆ ಯುದ್ಧ ಸಮಾಪ್ತಿಯಾಯಿತು. ಬ್ರಿಟಿಷರು ಗೆಲುವು ಸಾಧಿಸಿದ್ದರು.

ಹಂದಿ ಕೊಂದಿದ್ದಕ್ಕೆ ಯುದ್ಧ!
1859ರಲ್ಲಿ ಉತ್ತರ ಅಮೆರಿಕದಲ್ಲಿದ್ದ ಬ್ರಿಟಿಷರ ವಸಾಹತು ಹಾಗೂ ಅಮೆರಿಕ ಸಂಸ್ಥಾನದ ಯೋಧರ ನಡುವಿನ ಹೋರಾಟವಿದು. ಉತ್ತರ ಅಮೆರಿಕದ ಮುಖ್ಯ ನೆಲ ಹಾಗೂ ಅಲ್ಲಿಂದ ಸ್ವಲ್ಪ ದೂರದಲ್ಲಿ ಬ್ರಿಟಿಷರ ವಸಾಹತು ಇದ್ದ ವ್ಯಾಂಕೋವರ್ ದ್ವೀಪದ ನಡುವೆ ಸ್ಯಾನ್ ಜುವಾನ್ ಎಂಬ ಮತ್ತೊಂದು ದ್ವೀಪವಿತ್ತು. ಈ ದ್ವೀಪದ ಮೇಲಿನ ಅಧಿಪತ್ಯದ ವಿಚಾರಕ್ಕೆ ಇಬ್ಬರ ನಡುವೆ ಜಗಳವಾಗುತ್ತಿತ್ತು. ಅದೊಂದು ದಿನ ಸ್ಯಾನ್ ಜುವಾನ್ ದ್ವೀಪದಲ್ಲಿ ಓಡಾಡುತ್ತಿದ್ದ ಹಂದಿಯನ್ನು ಯಾರೋ ಬೇಟೆಯಾಡಿ ಕೊಂದರು. ವಿವಾದದ ಸ್ಥಳದಲ್ಲಿ ಹಂದಿ ಸತ್ತಿದ್ದರಿಂದ ಅದು ಯಾರಿಗೆ ಸೇರಬೇಕೆನ್ನುವ ವಿಚಾರದಲ್ಲಿ ಗಲಾಟೆಯಾಗಿ, ಯುದ್ಧವೇ ಆಯಿತು! ಯಾರೂ ಸಾಯಲಿಲ್ಲ! ಸತ್ತಿದ್ದು ಕೇವಲ ಹಂದಿ ಮಾತ್ರ!

335 ವರ್ಷ ನಡೆದ ಸಮರ
ಇದು ವಿಶ್ವದ ಅತಿ ದೀರ್ಘಕಾಲ ನಡೆದ ಯುದ್ಧ. ಹಾಲೆಂಡ್- ಸಿಸಿಲಿ ದ್ವೀಪಗಳ ನಡುವೆ ನಡೆದಿದ್ದು. 1651ರಲ್ಲಿ ಆರಂಭವಾಗಿ 1986ರವರೆಗೂ ನಡೆದ ಯುದ್ಧದಲ್ಲಿ ಯಾರೂ ಸೋಲಲಿಲ್ಲ. ಹಾಗಂತ ಯಾರೂ ಗೆಲ್ಲಲಿಲ್ಲ. ಎರಡೂ ದೇಶಗಳು ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದವು. ಅಚ್ಚರಿ ಅಂದ್ರೆ, ಈ ಯುದ್ಧದಲ್ಲಿ ಬಂದೂಕಿನಿಂದ ಒಂದೇ ಒಂದು ಗುಂಡು ಹೊರಬಂದಿಲ್ಲ!

ರಾತ್ರಿ ಕುಡೀತಿದ್ರು, ಹಗಲಲ್ಲಿ ಯುದ್ಧ ಮಾಡ್ತಿದ್ರು...
ಇದಾಗಿದ್ದು ಮಾಲ್ಡೋವಾದ ಪಶ್ಚಿಮ ಹಾಗೂ ಪೂರ್ವ ಪ್ರಾಂತ್ಯಗಳ ನಡುವೆ. ಸೋವಿಯತ್ ರಷ್ಯಾ ಪತನಗೊಂಡ ನಂತರ ಸ್ವತಂತ್ರವಾದ ಮಾಲ್ಡೋವಾದ ಪಶ್ಚಿಮ ಭಾಗದ ಜನ ತಮಗೆ ಹೊಂದಿಕೊಂಡಿದ್ದ ರೊಮೇನಿಯಾ ಜೊತೆ ಮೈತ್ರಿ ಬೆಳೆಸಲು ಯತ್ನಿಸುತ್ತಿದ್ದರು. ಪೂರ್ವ ಭಾಗದ ಮಾಲ್ಡೋವಿಯನ್ನರು ಉಕ್ರೇನ್, ರಷ್ಯಾಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ಇಂಗಿತದಲ್ಲಿದ್ದರು. ಈ ಅಭಿಪ್ರಾಯ ಭೇದದಿಂದಾಗಿ ದೇಶ ಪೂರ್ವ, ಪಶ್ಚಿಮ ಮಾಲ್ಡೋವಾಗಳಾಗಿ ಒಡೆದು ಎರಡೂ ಪಕ್ಷಗಳ ನಡುವೆ ಯುದ್ಧವಾಯ್ತು. ಇಲ್ಲಿ ಮಜಾ ಅಂದ್ರೆ, ಎರಡೂ ಪಕ್ಷಗಳ ಮಿಲಿಟರಿ ಅಧಿಕಾರಿಗಳೂ ಯುದ್ಧಕ್ಕೂ ಮೊದಲು ಮಿತ್ರರಾಗಿದ್ದರಿಂದ ರಾತ್ರಿ ಹೊತ್ತು ಒಟ್ಟಿಗೇ ಸೇರಿ ಕುಡಿಯುತ್ತಿದ್ದರು. ಆದರೆ, ಮರುದಿನ ಬೆಳಗ್ಗೆ ಪರಸ್ಪರ ಬಂದೂಕು ಹಿಡಿದು ಯುದ್ಧ ಮಾಡುತ್ತಿದ್ದರು.

ಪಕ್ಷಿಗಳ ವಿರುದ್ಧ ಸೋತ ಸೈನಿಕರು!

ಮಾನವನ ಯುದ್ಧದಾಹದ ಪರಿಹಾಸ್ಯವಿದು. 1932ರಲ್ಲಿ ಆಸ್ಟ್ರೇಲಿಯಾದ ಬಿರು ಬೇಸಿಗೆಯಲ್ಲಿ ಎಮು ಹಕ್ಕಿಗಳಿಗೆ ಆಹಾರ ನೀರು ದೊರಕದಿದ್ದಾಗ, ಅವು ಮಾನವರ ವಸಾಹತು ಇರುವ ಪ್ರದೇಶಗಳಿಗೆ ದಾಳಿ ಇಡಲಾರಂಭಿಸಿದವು. ಸರ್ಕಾರ ಮಿಲಿಟರಿ ಕಳುಹಿಸಿ, ಎಮು ಪಕ್ಷಿಗಳನ್ನು ಬೇಟೆಯಾಡಲು ಆಜ್ಞಾಪಿಸಿತು. ಆದರೆ, ಗಂಟೆಗೆ 50 ಕಿ.ಮೀ. ಓಡುವ ಎಮು ಹಕ್ಕಿಗಳನ್ನು ಸಾಯಿಸಲು ಸಾಧ್ಯವಾಗಲಿಲ್ಲ. 20 ಸಾವಿರ ಹಕ್ಕಿಗಳ ಪೈಕಿ ಸತ್ತಿದ್ದು ಬೆರಳೆಣಿಕೆಯಷ್ಟು. ಹಾಗಾಗಿ, ಕೆಲ ದಿನಗಳ ನಂತರ ಸರ್ಕಾರ ಯುದ್ಧ ಕೊನೆಗಾಣಿಸಿತು. ಇದು ಮೂಕ ಜೀವಿಗಳ ಜಯವೇ ಸರಿ!

ಫುಟ್ಬಾಲ್ ಯುದ್ಧ
ಈ ಯುದ್ಧ ಆರಂಭವಾಗಿದ್ದು ಫುಟ್ಬಾಲ್ ಮೈದಾನದಲ್ಲಿ! ಹೌದು. ಕಡುವೈರಿ ದೇಶಗಳಾಗಿದ್ದ ಸಾಲ್ವಡಾರ್ ಹಾಗೂ ಹೊಂಡುರಾಸ್ ರಾಷ್ಟ್ರಗಳ ತಂಡಗಳು 1970ರ ಫಿಫಾ ವಿಶ್ವಕಪ್‌ಗಾಗಿ 1969ರಲ್ಲಿ ನಡೆದ ಅರ್ಹತಾ ಸುತ್ತಿನ ಸರಣಿಯ ಪಂದ್ಯವೊಂದರಲ್ಲಿ ಪರಸ್ಪರ ಮುಖಾಮುಖಿಯಾಗಿದ್ದವು. ಪಂದ್ಯ ನಡೆಯುತ್ತಿದ್ದಾಗ ಒಂದು ದೇಶದ ಅಭಿಮಾನಿಗಳು ಮತ್ತೊಂದು ದೇಶದ ಅಭಿಮಾನಿಗಳು ಕೆಣಕಿದರು ಎಂಬ ಕಾರಣಕ್ಕೆ ಗಲಾಟೆಯಾಯಿತು. ಪರಿಣಾಮ, ಯುದ್ಧ ಘೋಷಣೆಯಾಗಿ, 1969ರ ಜುಲೈ 14ರಂದು ಸಾಲ್ವಡಾರ್ ಸೇನೆ ಹೊಂಡುರಾಸ್ ವಿರುದ್ಧ ದಾಳಿ ನಡೆಸಿತು. ಅಮೆರಿಕ ಪ್ರಯತ್ನದ ಕಾರಣ ಜು. 20ರಂದು ಕದನವಿರಾಮ ಘೋಷಣೆಯಾಯಿತು.

-ಪ್ರೇಮರಾಜು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.