ಬೈಟುಕಾಫಿ

ಚಾಣಕ್ಯನಿಗೂ ಹೊಳೆಯದ ಚತುರೋಪಾಯ!

ಈ ಮಧ್ಯೆ ನನ್ನ ಸ್ನೇಹಿತರೊಬ್ಬರು ಹುಬ್ಬಳ್ಳಿ ಮುನ್ಸಿಫ್ ಕೋರ್ಟಿನಲ್ಲಿ ಒಂದು ಅರ್ಜಿ ಸಲ್ಲಿಸಿ, ಲೋಕ ಶಿಕ್ಷಣ ಟ್ರಸ್ಟಿನ ಆಸ್ತಿಗಳು ಪರಭಾರೆ...

ಚಾಣಕ್ಯನಿಗೂ ಹೊಳೆಯದ ಚತುರೋಪಾಯ!
Published On :

ಈ ಮಧ್ಯೆ ನನ್ನ ಸ್ನೇಹಿತರೊಬ್ಬರು ಹುಬ್ಬಳ್ಳಿ ಮುನ್ಸಿಫ್ ಕೋರ್ಟಿನಲ್ಲಿ ಒಂದು ಅರ್ಜಿ ಸಲ್ಲಿಸಿ, ಲೋಕ ಶಿಕ್ಷಣ ಟ್ರಸ್ಟಿನ ಆಸ್ತಿಗಳು ಪರಭಾರೆಯಾಗುವುದನ್ನು ತಡೆಯಬೇಕೆಂದು ಕೇಳಿದ್ದರು. ಅಷ್ಟರೊಳಗೆ ಖರೀದಿ ಪತ್ರವನ್ನು ಹಾಗೂ ಗುತ್ತಿಗೆ ಪತ್ರವನ್ನು ರಿಜಿಸ್ಟರ್ ಮಾಡಿಸಿಕೊಳ್ಳಬೇಕೆಂದು ಘೋರ್ಪಡೆಯವರ ಪರವಾಗಿ ವಿಶ್ವ ಪ್ರಯತ್ನ ನಡೆದಿತ್ತು. ಎಲ್ಲಾ ಟ್ರಸ್ಟಿಗಳನ್ನು ಹಾಗೂ ಸಂಯುಕ್ತ ಕರ್ನಾಟಕದ ಅಧಿಕಾರಿ ವರ್ಗದವರನ್ನು ಬೆಂಗಳೂರಿನ ವೆಸ್ಟ್ ಎಂಡ್ ಹೋಟಲಿನ ಒಂದು ರೂಮಿನಲ್ಲಿ ಸೇರಿಸಲಾಗಿತ್ತು. ಮೇಯೋಹಾಲ್‌ನಲ್ಲಿರುವ ಸಬ್ ರಿಜಿಸ್ಟ್ರಾರ್ ಕಚೇರಿಗೆ ನೇರವಾಗಿ ಹೋಗುವ ವ್ಯವಸ್ಥೆಯನ್ನು ಮಾಡಲಾಗಿತ್ತು. ಘೋರ್ಪಡೆಯವರು ಸರ್ಕಾರದಲ್ಲಿ ಮಂತ್ರಿಯಾಗಿದ್ದುದರಿಂದ ಅವರ ಪ್ರಭಾವ ಹೆಚ್ಚಾಗಿತ್ತು. ಆದರೆ ಹುಬ್ಬಳ್ಳಿ ಮುನ್ಸಿಫ್ ಕೋರ್ಟು ಅಂದು ತೀರ್ಪು ಕೊಡಲಿಲ್ಲ. ತಡೆಯಾಜ್ಞೆ ತೆರವು ಮಾಡಲಿಲ್ಲ. ಆದ್ದರಿಂದ ಅಂದು ಮಾರಾಟದ ವ್ಯವಹಾರ ನಡೆಯಲಿಲ್ಲ. ಆದರೆ ಮುಂದೆ ಕೆಲವೇ ದಿನಗಳಲ್ಲಿ ಹುಬ್ಬಳ್ಳಿ ಮುನ್ಸಿಫ್ ಕೋರ್ಟು ತೀರ್ಪು ಕೊಟ್ಟು ಟ್ರಸ್ಟಿಗಳು ಟ್ರಸ್ಟಿನ ಆಸ್ತಿಯನ್ನು ಪರಭಾರೆ ಮಾಡಬಾರದೆಂದು ನಿರ್ಬಂಧಿಸಿತು. ಇದರ ವಿರುದ್ಧ ದಿವಾಕರರ ಪರವಾಗಿ ಕೆ.ಪಿ.ಪಿ. ಕಂಪೆನಿಯ ವಕೀಲರು ಹೈಕೋರ್ಟಿನಲ್ಲಿ ತಾ. 21.11.1974ರಂದು ಅರ್ಜಿ ಸಲ್ಲಿಸಿ, ಮುನ್ಸಿಫ್ ಕೋರ್ಟ್‌ನ ತಡೆಯಾಜ್ಞೆಯನ್ನು ತೆರವು ಮಾಡುವಂತೆ ಕೇಳಿಕೊಂಡರು. ಅವರ ಕೋರಿಕೆಯಂತೆ ತಡೆಯಾಜ್ಞೆ ರದ್ದಾಯಿತು. ಆಗ ಮಧ್ಯಾಹ್ನ 12 ಗಂಟೆಯಾಗಿತ್ತು. ತಡೆಯಾಜ್ಞೆ ತೆರವಾದ ಕೂಡಲೇ ದಿವಾಕರರು ಮತ್ತು ಅವರ ಮಗ ಅನಂತ ದಿವಾಕರರು ನೇರವಾಗಿ ಸಬ್ ರಿಜಿಸ್ಟ್ರಾರ್ ಕಚೇರಿಗೆ ಹೋಗಿ, ಕೆ.ಪಿ.ಸಿ. ಕಂಪೆನಿಯೊಡನೆ ತಾವು ಮಾಡಿಕೊಂಡಿದ್ದ ಎರಡೂ ಒಪ್ಪಂದಗಳನ್ನು ರಿಜಿಸ್ಟರ್ ಮಾಡಿಕೊಟ್ಟರು ಮತ್ತು ಮರುದಿನ ಬೆಳಿಗ್ಗೆ ಅದರ ಪ್ರತಿಯೊಂದನ್ನು ಹುಬ್ಬಳ್ಳಿಗೂ ಕಳಿಸಿ ಅಲ್ಲಿಯೂ ರಿಜಿಸ್ಟರ್ ಮಾಡಿಸಲಾಯಿತು. ಈ ವ್ಯವಹಾರವನ್ನು ತಡೆಯಲು ಟ್ರಸ್ಟಿನ ಹಿತೈಷಿಗಳು ಮಾಡಿದ ಎಲ್ಲ ಪ್ರಯತ್ನಗಳು ವಿಫಲವಾದವು. ಸಂಯುಕ್ತ ಕರ್ನಾಟಕ, ಕರ್ಮವೀರ ಮತ್ತು ಕಸ್ತೂರಿ ಪತ್ರಿಕೆಗಳು, ಬೆಂಗಳೂರು ಹಾಗೂ ಹುಬ್ಬಳ್ಳಿಯಲ್ಲಿರುವ ಟ್ರಸ್ಟಿನ ಎಲ್ಲ ಸ್ಥಿರಾಸ್ತಿಗಳು ತಾ. 21.11.74 ರಿಂದ ಕೆ.ಪಿ.ಪಿ. ಕಂಪನಿಯ ವಶವಾದವು. ಈ ಕಂಪನಿ ರಾಜ್ಯ ಸರ್ಕಾರದಲ್ಲಿ ಹಣಕಾಸಿನ ಮಂತ್ರಿಯಾಗಿದ್ದ ಎಂ. ಘೋರ್ಪಡೆಯವರ ಒಡೆತನದ್ದು ಎಂಬುದು ಎಲ್ಲರಿಗೂ ಗೊತ್ತಿದ್ದ ಸಂಗತಿ.
ಆಡಿಟರುಗಳ ಪ್ರಕಾರ ಟ್ರಸ್ಟಿನ ಚಿರಾಸ್ತಿಗಳ ಬೆಲೆ ಕೇವಲ 67 ಲಕ್ಷ ರುಪಾಯಿ ಮತ್ತು ಅದರ ಮೇಲಿದ್ದ ಸಾಲ 55 ಲಕ್ಷ ರುಪಾಯಿ ಎಂದು ಲೆಕ್ಕ ಹಾಕಲಾಗಿತ್ತು. ಈ ಸಾಲವನ್ನೆಲ್ಲ ತಾವು ತೀರಿಸುವುದಾಗಿ ಕೆ.ಪಿ.ಪಿ. ಕಂಪೆನಿ ಒಪ್ಪಿಕೊಂಡು, ಬಾಕಿ 12 ಲಕ್ಷ ರುಪಾಯಿಗಳನ್ನು ತಿಂಗಳಿಗೆ 30,000 ರುಪಾಯಿಯಂತೆ ಕಂತುಗಳಲ್ಲಿ ಕೊಡುವುದಾಗಿ ಹೇಳಿತ್ತು. ಆದರೆ ಆಶ್ಚರ್ಯದ ಸಂಗತಿ ಎಂದರೆ ಆ ಕಂಪನಿ ಟ್ರಸ್ಟಿನ ಸಾಲದಲ್ಲಿ ಒಂದು ಪೈಸೆಯನ್ನೂ ತೀರಿಸಲಿಲ್ಲ. ಬ್ಯಾಂಕುಗಳಲ್ಲಿದ್ದ ಟ್ರಸ್ಟಿನ ಸಾಲಗಳ ಮೇಲೆ ಬಡ್ಡಿ ಬೆಳೆಯುತ್ತಿತ್ತು. ಇದರ ಜೊತೆಗೆ ಕೆ.ಪಿ.ಪಿ. ಕಂಪೆನಿಯವರೂ ಸುಮಾರು 50-60 ಲಕ್ಷ ರುಪಾಯಿಗಳಷ್ಟು ಸಾಲ ಮಾಡಿ, ಅದನ್ನೂ ಸಹ ಟ್ರಸ್ಟಿನ ಸಾಲಕ್ಕೆ ಸೇರಿಸಿಬಿಟ್ಟಿದ್ದರು. ಈ ಸಾಲಕ್ಕಾಗಿ ಟ್ರಸ್ಟಿನ ಸ್ಥಿರಾಸ್ತಿಗಳ ಭದ್ರತೆಯನ್ನೂ ಕೊಡಲಾಗಿತ್ತು. ಕಾರ್ಮಿಕರಿಗೆ ಕೊಡಬೇಕಾಗಿದ್ದ ಪಿ.ಎಫ್., ಗ್ರಾಚ್ಯುಯಿಟಿ, ಇಎಸ್‌ಐ, ವಾಣಿಜ್ಯ ತೆರಿಗೆ ಇತ್ಯಾದಿಗಳು ಬಾಕಿಯಾಗಿಯೇ ಇದ್ದವು. ಅವುಗಳಲ್ಲಿ ಒಂದು ಪೈಸೆಯನ್ನೂ ಕೊಟ್ಟಿರಲಿಲ್ಲ. ಮತ್ತೊಂದು ವಿಚಿತ್ರ ಸಂಗತಿ ಎಂದರೆ ಕೆ.ಪಿ.ಪಿ.ಯು ಟ್ರಸ್ಟಿನಿಂದ ತೆಗೆದುಕೊಂಡಿದ್ದ ಯಂತ್ರೋಪಕರಣ ಮುಂತಾದವುಗಳನ್ನೇ ಕೆನರಾ ಬ್ಯಾಂಕಿಗೆ ಒತ್ತೆಯಿಟ್ಟು ಅದರ ಮೇಲೆ ಸುಮಾರು 29 ಲಕ್ಷ ರುಪಾಯಿಯಷ್ಟು ಸಾಲ ತೆಗೆದಿದ್ದರು. ಈ ಸಾಲವನ್ನು ಸಹ ಕಂಪನಿ ತೀರಿಸಲಿಲ್ಲ. ದಿವಾಕರರು ತಮ್ಮ ಸ್ವಾರ್ಥದ ಸಲುವಾಗಿ ಮಾಡಿಕೊಂಡ ರಹಸ್ಯ ಒಪ್ಪಂದಗಳ ಪರಿಣಾಮ ಇದು. ಅದೇನೇ ಇರಲಿ, ಮಾರಾಟದ ದಾಖಲೆ- ಪತ್ರಗಳು ರಿಜಿಸ್ಟರ್ ಆಗುವ ಸಮಯದಲ್ಲಿ ಟ್ರಸ್ಟಿಗೆ ಒಂದು ನಯಾ ಪೈಸೆ ಬರಲಿಲ್ಲ. ಹಾಗಾದರೆ ದಿವಾಕರರು ಇಂತಹ ಒಪ್ಪಂದವನ್ನು ಏಕೆ ಮಾಡಿಕೊಂಡರು ಎಂಬ ಪ್ರಶ್ನೆಗೆ ಉತ್ತರ ಕೊಡುವುದು ಕಷ್ಟ. ಈ ವ್ಯವಹಾರದ ರಹಸ್ಯ ಅವರಿಗೇ ಗೊತ್ತಿತ್ತು.
ಮುಂದೆ ದಿವಾಕರರು ನಿವೃತ್ತರಾದ ಮೇಲೆ ಬಂದ ನೂತನ ಧರ್ಮದರ್ಶಿಗಳಲ್ಲಿ ಜಗಳ ಪ್ರಾರಂಭವಾಗಿ ಒಬ್ಬರ ವಿರುದ್ಧ ಇನ್ನೊಬ್ಬರು ಕೋರ್ಟಿಗೆ ಹೋದಾಗಲೇ ಈ ಒಪ್ಪಂದದ ವಿವರಗಳು ಬಹಿರಂಗವಾದವು. ಆದರೆ ಅಷ್ಟು ಹೊತ್ತಿಗೆ ಕೈ ಮೀರಿತ್ತು.
ಕರಾಳ ಅಧ್ಯಯ
ಲೋಕ ಶಿಕ್ಷಣ ಟ್ರಸ್ಟ್ ಒಂದು ಸಾರ್ವಜನಿಕ ದತ್ತಿ ಸಂಸ್ಥೆ. ಇದನ್ನು ಉತ್ತರ ಕರ್ನಾಟಕದ ಜನ ಅತ್ಯಂತ ಅಭಿಮಾನದಿಂದ ಕಟ್ಟಿ ಬೆಳೆಸಿದ್ದರು ಮತ್ತು ಇದರ ಆಡಳಿತಕ್ಕಾಗಿ ತಾವೇ ಮೂರು ಜನ ಧರ್ಮದರ್ಶಿಗಳನ್ನು ನೇಮಕ ಮಾಡಿರುವುದನ್ನು ಸಹ ದಿವಾಕರರು ಮರೆತು, ಕೋಟ್ಯಂತರ ರುಪಾಯಿ ಬೆಲೆ ಬಾಳುವ ಆಸ್ತಿಗಳನ್ನು ಮತ್ತು ಜನಪ್ರಿಯ ಪತ್ರಿಕೆಗಳ ಪ್ರಕಟಣೆ ಹಕ್ಕನ್ನು ಒಂದು ಪೈಸೆ ಪಡೆಯದೆ, ಬಂಡವಾಳವಿಲ್ಲದ ಒಂದು ಕಂಪನಿಗೆ ಪರಭಾರೆ ಮಾಡಿದ್ದು, ಈ ಸಂಸ್ಥೆಯ ಇತಿಹಾಸದಲ್ಲಿ ಒಂದು ಕರಾಳ ಅಧ್ಯಾಯ. ಆದರೆ ದಿವಾಕರರ ಅಭಿಪ್ರಾಯ ಬೇರೆಯಾಗಿತ್ತು. ಈ ಸಂಸ್ಥೆಯ ಆಸ್ತಿಯನ್ನು ಅವರು ತಮ್ಮ ಸ್ವಂತ ಆಸ್ತಿಯೆಂದು ಭಾವಿಸಿದ್ದರು. ಇದರ ಆಡಳಿತದಲ್ಲಿ ಸಾರ್ವಜನಿಕರಿಗೆ ಅವಕಾಶವಿಲ್ಲವೆಂದೂ ಹೇಳುತ್ತಿದ್ದರು. ತಮ್ಮ ಸ್ವಂತ ಆಸ್ತಿಯಂತೆ ಈ ಸಂಸ್ಥೆಯನ್ನು ನಡೆಸುತ್ತಿದ್ದರು. ತಮ್ಮ ತರುವಾಯ ತಮ್ಮ ಮಗ ಇದರ ಉತ್ತರಾಧಿಕಾರಿಯಾಗಬೇಕೆಂದೂ ಬಯಸಿದ್ದರು. ಅವರು ಈ ಮಾತನ್ನು ಧಾರವಾಡ ಜಿಲ್ಲಾ ನ್ಯಾಯಾಲಯದಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ. ಹೈಕೋರ್ಟ್‌ನಲ್ಲಿ ಕೊಟ್ಟ ಒಂದು ಕೈಫಿಯತ್‌ನಲ್ಲಿಯೂ ಇದನ್ನು ಸ್ಪಷ್ಟಪಡಿಸಿದ್ದಾರೆ. 'ಈ ಸಂಸ್ಥೆಯ ಆಸ್ತಿಗಳನ್ನು ಅನುಭವಿಸುವ ಹಕ್ಕು ನನಗೆ, ನನ್ನ ಮಗನಿಗೆ ಮತ್ತು ನಮ್ಮ ಪರಿವಾರದವರಿಗೆ ಮಾತ್ರ ಇದೆ. ಇದರಲ್ಲಿ ಸಾರ್ವಜನಿಕರಿಗೆ ಏನೂ ಸಂಬಂಧವಿಲ್ಲ' ಎಂದು ಅದರಲ್ಲಿ ಹೇಳಿದ್ದಾರೆ.
ದಿವಾಕರರ ಈ ಧೋರಣೆಯನ್ನು ಗಮನಿಸಿದರೆ ಅವರ ಮುಂದಿನ ಹೆಜ್ಜೆಗಳು, ನಡೆನುಡಿಗಳು ಮತ್ತು ನಿರ್ಧಾರಗಳು ಅರ್ಥವಾಗುತ್ತವೆ. ನಿಜ, ಟ್ರಸ್ಟಿನ ಆಡಳಿತಕ್ಕಾಗಿ ಅವರು ಎರಡು ಬಾರಿ ಸಲಹಾ ಸಮಿತಿಗಳನ್ನು ರಚಿಸಿದರು. ಸಹ ಧರ್ಮದರ್ಶಿಗಳನ್ನು ನೇಮಿಸಿದರು. ಅನಂತರ ತಮ್ಮ ವಾರಸುದಾರ ಧರ್ಮದರ್ಶಿಗಳನ್ನು ನೇಮಿಸಿದರು. ಆದರೆ ಅವರನ್ನೆಲ್ಲ ಮಗನ ಒತ್ತಾಯದ ಮೇರೆಗೆ ಕೆಲವೇ ವಾರಗಳಲ್ಲಿ ವಜಾ ಮಾಡಿದ ಕೀರ್ತಿ ಅವರದು. ಅವರು ಮಾಡಿದ ಮತ್ತೊಂದು ಘೋರ ತಪ್ಪೆಂದರೆ, ತಾವೇ ನೇಮಕ ಮಾಡಿದ್ದ ಧರ್ಮದರ್ಶಿಗಳನ್ನು ಅತ್ಯಂತ ಹೀನಾಯ ಸ್ಥಿತಿಯಲ್ಲಿ ವಜಾ ಮಾಡಿದ್ದು ಮತ್ತು ಇದರ ಪರಿಣಾಮವಾಗಿ ಅವರುಗಳು ಕೋರ್ಟಿನ ಕಟ್ಟೆ ಹತ್ತುವಂತೆ ಆಗಿದ್ದು. ಇದರ ಹಿನ್ನೆಲೆ ಹೀಗಿದೆ: 1973ನೇ ಡಿಸೆಂಬರ್ ತಿಂಗಳಲ್ಲಿ ದಿವಾಕರರು ಪಾಂಡಿಚೇರಿಗೆ ಹೋಗಿ, ಅಲ್ಲಿ ಅರವಿಂದಾಶ್ರಮದ ಅಧ್ಯಕ್ಷರಾಗಿದ್ದ ಹಾಗೂ ಅಂತಾರಾಷ್ಟ್ರೀಯ ಖ್ಯಾತಿಯ ಕೆ.ಆರ್. ಪೋತದಾರ್ (ಇವರನ್ನು ನವಜಾತ ಎಂದು ಕರೆಯುತ್ತಿದ್ದರು) ಅವರನ್ನು ಕಂಡು, ಸಂಯುಕ್ತ ಕರ್ನಾಟಕ ಸಂಸ್ಥೆಯ ಪರಿಚಯ ಮಾಡಿಕೊಟ್ಟು, ತಾವು ಸಂಸ್ಥೆಯಿಂದ ನಿವೃತ್ತರಾಗಿರುವುದಾಗಿಯೂ, ಅವರು ಅದಕ್ಕೆ ಅಧ್ಯಕ್ಷರಾಗಬೇಕೆಂದು ಕೇಳಿಕೊಂಡರು. ದಿವಾಕರರಲ್ಲಿ ತುಂಬಾ ನಂಬಿಕೆಯನ್ನಿಟ್ಟಿದ್ದ ಪೋತದಾರರು ಇದಕ್ಕೆ ಒಪ್ಪಿದರು. ಅದೇ ರೀತಿ ಕೆನರಾ ಬ್ಯಾಂಕಿನ ನಿವೃತ್ತ ಡೆಪ್ಯೂಟಿ ಜನರಲ್ ಮ್ಯಾನೇಜರ್ ಬಿ.ವಿ. ಭಂಡಾರಿಯವರನ್ನು ಒಪ್ಪಿಸಿದರು. ಅನಂತರ ಅವರ ಜೊತೆಗೆ ತಮ್ಮ ಮಗನನ್ನು ಸೇರಿಸಿ 1973ನೇ ಡಿಸೆಂಬರ್ 23ನೇ ತಾರಿಕಿನ ದಿನ ಒಂದು ಹೊಸ ಧರ್ಮದರ್ಶಿ ಮಂಡಲಿಯನ್ನು ರಚಿಸಿದರು ಮತ್ತು ಈ ಮಂಡಲಿಗೆ ಎಲ್ಲ ಅಧಿಕಾರಿಗಳನ್ನು ಕೊಟ್ಟು ಅಂದಿನಿಂದ ತಾವು ನಿವೃತ್ತರಾಗಿರುವುದಾಗಿ ಬೆಳಗಾವಿಯ ಚಾರಿಟಿ ಕಮೀಷನರ್ ಸಹ ಬರೆದು ತಿಳಿಸಿದರು. ದಿವಾಕರರು ಈ ರೀತಿ ಮಾಡಿದ್ದುದರಲ್ಲಿ ಆಶ್ಚರ್ಯವೇನೂ ಇಲ್ಲ. ಏಕೆಂದರೆ ನವಜಾತರವರು ಯಾವಾಗಲೂ ಪಾಂಡಿಚೆರಿಯಲ್ಲಿ ಇರುತ್ತಿದ್ದರು. ಭಂಡಾರಿಯವರಿಗೆ ಆರೋಗ್ಯ ಸರಿಯಾಗಿರಲಿಲ್ಲ. ಅವರು ಮಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇದೇ ಕಾರಣ ಮುಂದೆ ಮಾಡಿ ಮಗನಿಗೆ ಅವರಿಂದ ಅಧಿಕಾರ ಪತ್ರ ಕೊಡಿಸಿ, ಟ್ರಸ್ಟಿನ ಎಲ್ಲ ವ್ಯವಹಾರಗಳು ತಮ್ಮ ಮಗನ ಕೈಯಲ್ಲೇ ಉಳಿಯುವಂತೆ ನೋಡಿಕೊಂಡರು. ದಿವಾಕರರ ಈ ತಂತ್ರ ಚತುರ ಚಾಣಕ್ಯನಿಗೂ ಹೊಳೆಯಲಿಕ್ಕಿಲ್ಲ.
(ಮುಂದುವರಿಯುವುದು)


-ಕೆ.ಶಾಮರಾವ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.