ನಿಮ್ಮಲ್ಲಿದೆ ಭಿನ್ನತೆ
ಈ ಜಗತ್ತಿನಲ್ಲಿ ಒಬ್ಬರಂತೆ ಇನ್ನೊಬ್ಬರಿಲ್ಲ. ಯೋಚನೆಗಳೂ ವಿಭಿನ್ನವಾದುದು. ನಮಗೆ ಸರಿಯೆಂದು ಕಾಣಿಸುವುದು ...

ಈ ಜಗತ್ತಿನಲ್ಲಿ ಒಬ್ಬರಂತೆ ಇನ್ನೊಬ್ಬರಿಲ್ಲ. ಯೋಚನೆಗಳೂ ವಿಭಿನ್ನವಾದುದು. ನಮಗೆ ಸರಿಯೆಂದು ಕಾಣಿಸುವುದು ಬೇರೆಯವರಿಗೆ ಹಾಗೆ ಕಾಣಿಸದೆ ಇರಬಹುದು. ಅಥವಾ ಅನ್ಯರು ಸರಿಯೆಂದುಕೊಂಡದ್ದು ನಮಗೆ ಒಪ್ಪಿತವಾಗಲಾರದು. ನಮ್ಮ ಯೋಚನೆಗಳನ್ನು ನಾವು ಬೇರೆಯವರಿಗೆ ಹೇಳಬಹುದು, ಮನದಟ್ಟು ಮಾಡಿಸಬಹುದು. ಆದರೆ ಅವರು ನಿಜಕ್ಕೂ ಅದನ್ನು ಒಪ್ಪಿದರೇ ಇಲ್ಲವೇ ಎಂಬುದನ್ನು ಅವರೇ ಹೇಳಬೇಕು. ನಮಗಿಷ್ಟವಾಗುವಂತೆ ಅವರನ್ನು ತಿದ್ದುವುದಕ್ಕೆ ಸಾಧ್ಯವಿದೆಯೆ? ಅದೇನು ಜೇಡಿಮಣ್ಣಿನ ಮುದ್ದೆಯೇ? ಭಾವನೆಗಳನ್ನು ಹೊಂದಿರುವ ಮನುಷ್ಯ ಜೀವಿ, ಇನ್ನೊಬ್ಬರು ಹೇಳಿದಂತೆ ಕೇಳಬಹುದು- ತನಗೆ ಸ್ವಾತಂತ್ರ್ಯ ಇಲ್ಲದಿದ್ದಾಗ. ಆದರೆ ನಿಜಕ್ಕೂ ಸ್ವತಂತ್ರನಾಗಿರುವ ಒಬ್ಬ ವ್ಯಕ್ತಿಯನ್ನು ನಮ್ಮ ಇಚ್ಛೆಗೆ ತಕ್ಕಂತೆ ತಿದ್ದುವುದು ಸಾಧ್ಯವಿಲ್ಲ. ಅದು ಸರಿಯಲ್ಲ ಕೂಡಾ.
ನಾವು ಇನ್ನೊಬ್ಬರನ್ನು ನಮ್ಮಿಷ್ಟಕ್ಕೆ ತಕ್ಕಂತೆ ತಿದ್ದಲು ಹೊರಟಾಗ ಸಂಬಂಧಗಳು ಹಳಸುತ್ತವೆ. ಪ್ರತಿಯೊಬ್ಬನಲ್ಲೂ ಇರುವ ಅನನ್ಯತೆ, ವಿಶಿಷ್ಟತೆಯನ್ನು ನಾವು ಗುರುತಿಸಬೇಕು. ಪ್ರತಿಯೊಬ್ಬರೂ ಈ ನಿಸರ್ಗದಲ್ಲಿ ಭಿನ್ನವೇ. ಪ್ರಕೃತಿ ಅವರನ್ನು ಹಾಗೆಯೇ ತಯಾರಿಸಿದೆ, ಹಾಗಿರಲಿಕ್ಕಾಗಿಯೇ ತಯಾರಿಸಿದೆ. ಎಲ್ಲರೂ ಏಕರೂಪಿಗಳಾದರೆ ಏನಿದೆ ಸ್ವಾರಸ್ಯ? ಜೀವಕುಲ ಮುಂದುವರಿಯುವುದಾದರೂ ಹೇಗೆ? ಶಿಸ್ತು ಎಂಬುದು ಬೇಕಾಗುವುದು ವರ್ತನೆಗಳಿಗಾಗಿಯೇ ಹೊರತು ಸಾರೂಪ್ಯ ಸಾದೃಶ್ಯಗಳಿಗಲ್ಲ. ವಂಶವಾಹಿಗಳು, ಪರಿಸರ ಮತ್ತು ಶಿಕ್ಷಣಗಳು ನಮ್ಮ ಯೋಚನೆಯನ್ನು ಭಿನ್ನ ಭಿನ್ನವಾಗಿ ರೂಪಿಸುತ್ತವೆ. ಇದನ್ನು ಅರಿತು ನಾವು ಇತರರ ಬಗ್ಗೆ ಗೌರವ, ತಾಳ್ಮೆ ಬೆಳೆಸಿಕೊಳ್ಳಬೇಕು. ಹಾಗೇ ನೀವೂ ಇತರರಿಗಿಂತ ಭಿನ್ನರೆಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಇನ್ನೊಬ್ಬರ ಹಾಗೆನಾವು ಇರಬೇಕಾಗಿಲ್ಲ. ಬೇರೊಬ್ಬರ ಹಾಗೆ ನಮ್ಮನ್ನು ರೂಪಿಸಿಕೊಳ್ಳುವುದಕ್ಕಾಗಿ ಒದ್ದಾಡುವುದರಲ್ಲೂ ಅರ್ಥವಿಲ್ಲ. ನಮ್ಮಲ್ಲಿರುವ ಭಿನ್ನತೆ, ವಿಶಿಷ್ಟತೆ, ಸಾಧ್ಯತೆ, ಸಾಮರ್ಥ್ಯಗಳನ್ನು ಅರ್ಥ ಮಾಡಿಕೊಂಡು ಅದಕ್ಕನುಗುಣವಾಗಿ ನಮ್ಮನ್ನು ತಿದ್ದಿ ತೀಡಿಕೊಂಡರೆ ಸಾಕು. ಇನ್ನೊಬ್ಬರನ್ನು ತಿದ್ದುವ ಉಪದ್ವ್ಯಾಪಕ್ಕೆ ಹೊಗದಿರುವುದೇ ಒಳಿತು.
-ಸಹನೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


