ಬೈಟುಕಾಫಿ

ಹಾಲು ಕುಡಿಯುವ ಅಭ್ಯಾಸ ಬೆಳೆಸಿಕೊಳ್ಳಿ

ನಿಮಗೆ ಹಾಲು ಕುಡಿಯುವ ಅಭ್ಯಾಸ ಇಲ್ಲವಾ? ಹಾಗಿದ್ದರೆ ನಿತ್ಯವೂ ಹಾಲು ಕುಡಿಯುವ ಅಭ್ಯಾಸವನ್ನು ರೂಢಿ ಮಾಡಿಕೊಳ್ಳಿ...

ಹಾಲು ಕುಡಿಯುವ ಅಭ್ಯಾಸ ಬೆಳೆಸಿಕೊಳ್ಳಿ
Published On :

ನಿಮಗೆ ಹಾಲು ಕುಡಿಯುವ ಅಭ್ಯಾಸ ಇಲ್ಲವಾ? ಹಾಗಿದ್ದರೆ ನಿತ್ಯವೂ ಹಾಲು ಕುಡಿಯುವ ಅಭ್ಯಾಸವನ್ನು ರೂಢಿ ಮಾಡಿಕೊಳ್ಳಿ. ಒಂದೆರಡಲ್ಲ, ಪ್ರತಿದಿನವೂ ಬರೋಬ್ಬರಿ ನಾಲ್ಕು ಗ್ಲಾಸ್ ಕೆನೆತೆಗೆದ ಹಾಲು ಕುಡಿಯಿರಿ!
ಈ ಮಾತನ್ನು ನಾನು ಹೇಳುತ್ತಿಲ್ಲ. ಜಗತ್ತಿನ ವಿವಿಧ ಭಾಗಗಳಲ್ಲಿ ಕರುಳು ಕ್ಯಾನ್ಸರ್ ಕುರಿತು ಅಧ್ಯಯನ ನಡೆಸಿದ ತಜ್ಞರು ಮಾಡಿರುವ ಶಿಫಾರಸ್ಸು ಇದು. ಕರುಳು ಕ್ಯಾನ್ಸರ್ ಮತ್ತು ಹಾಲಿನ ವಿಚಾರದಲ್ಲಿ ಎಂತೆಂಥ ಸಂಶೋಧನೆಗಳಾಗಿವೆ ಗೊತ್ತಾ? 20 ವರ್ಷಗಳಿಂದ ನಿತ್ಯವೂ ಹಾಲು ಕುಡಿಯುವ ಅಭ್ಯಾಸ ಉಳ್ಳವರನ್ನು ಪತ್ತೆ ಮಾಡಿ ಅವರ ಆರೋಗ್ಯದ ಬಗ್ಗೆ ಸಮಗ್ರ ವರದಿ ತಯಾರಿಸಿದವರಿದ್ದಾರೆ. ಎಷ್ಟು ಹಾಲು ಕುಡಿದರೆ ಎಂಥ ಪರಿಣಾಮ ಉಂಟಾಗುತ್ತದೆ ಎನ್ನುವ ಬಗ್ಗೆ ಅಧ್ಯಯನ ನಡೆಸಿದವರಿದ್ದಾರೆ.
ಕೆಲವು ಶಿಫಾರಸ್ಸುಗಳ ಪ್ರಕಾರ, 1200ರಿಂದ 1400 ಮಿಲಿಗ್ರಾಂ ಹಾಲನ್ನು ನಿತ್ಯ ಸೇವಿಸಬೇಕು. ಅಂದರೆ ಸುಮಾರು ನಾಲ್ಕು ಗ್ಲಾಸ್. ಕರುಳು ಕ್ಯಾನ್ಸರಿಗೆ ತುತ್ತಾಗಿದ್ದ ಕೆಲವರಿಗೆ ಇಷ್ಟು ಪ್ರಮಾಣದ ಹಾಲನ್ನು ಕುಡಿಸಿಯೇ  ಅದರ ಪರಿಣಾಮವನ್ನು ಕಂಡುಕೊಳ್ಳಲಾಗಿದೆ. ಮನೆಯಲ್ಲಿ ನಿತ್ಯವೂ ನಾಲ್ಕು ಗ್ಲಾಸ್ ಹಾಲು ಕುಡಿಯುವವರೂ ಇದ್ದಾರಾ ಎಂದು ಮಂಡೆಬಿಸಿ ಮಾಡಿಕೊಳ್ಳಬೇಡಿ. ಜಾಗತಿಕವಾಗಿ ತೆಗೆದುಕೊಂಡರೆ ಪುರುಷರು ಸರಾಸರಿ 700 ಮಿಲಿಗ್ರಾಂ ಹಾಗೂ ಮಹಿಳೆಯರು ಸರಾಸರಿ 450 ಮಿಲಿಗ್ರಾಂ ಕ್ಯಾಲ್ಶಿಯಂ ಅನ್ನು ಹಾಲಿನ ಮೂಲಕ ಸೇವಿಸುತ್ತಿದ್ದಾರೆ. ಅಂದರೆ ಎಷ್ಟು ಅಗತ್ಯವೊ ಅದಕ್ಕಿಂತ ಅರ್ಧದಷ್ಟು ಕಡಿಮೆ! ಅಗತ್ಯ ಪ್ರಮಾಣದ ಕ್ಯಾಲ್ಶಿಯಂ ಪಡೆಯಲು ಇನ್ನೂ 2-3 ಗ್ಲಾಸ್ ಹಾಲನ್ನು ಹೆಚ್ಚುವರಿಯಾಗಿ ಸೇವಿಸಬೇಕು. ಕೆನೆತೆಗೆದ ಒಂದು ಗ್ಲಾಸ್ ಹಾಲಿನಲ್ಲಿ ಸುಮಾರು 315 ಮಿಲಿಗ್ರಾಂ ಕ್ಯಾಲ್ಶಿಯಂ ಇರುತ್ತದೆ.
ಕರುಳು ಕ್ಯಾನ್ಸರ್‌ಗೆ ಕ್ಯಾಲ್ಶಿಯಂ ಪ್ರಬಲ ಎದುರಾಳಿ. ನಿತ್ಯ ಅದು ನಮ್ಮ ಶರೀರ ಸೇರುತ್ತಿದ್ದರೆ ಆಗುವ ದೊಡ್ಡ ಲಾಭ ಎಂದರೆ ಕೋಶಗಳಲ್ಲಿ ಸಣ್ಣ ಬದಲಾವಣೆ ಕಾಣಿಸಿಕೊಂಡರೂ ತಕ್ಷಣವೇ ಅದಕ್ಕೆ ಪ್ರಬಲವಾದ ಪ್ರತಿವ್ಯವಸ್ಥೆ ರೂಪುಗೊಳ್ಳುತ್ತದೆ. ಹೀಗಾಗಿ ಕೋಶಗಳು ಪಾಲಿಪ್‌ಗಳಾಗುವ, ಪಾಲಿಪ್‌ಗಳು ಅಪಾಯಕಾರಿ ಗಡ್ಡೆಗಳಾಗಿ ಬೆಳೆಯುವ ಸಾಧ್ಯತೆ ಆರಂಭದ ಹಂತದಲ್ಲಿಯೇ ಕಮರಿ ಹೋಗುತ್ತದೆ. ಮಧ್ಯವಯಸ್ಸು ದಾಟಿದ ನಂತರ ಹಾಲಿನ ಸೇವನೆ ಜಾಸ್ತಿ ಮಾಡಬೇಕು. ಅದು ಮೂಳೆಗಳ ಆರೋಗ್ಯದ ದೃಷ್ಟಿಯಿಂದಲೂ ಒಳ್ಳೆಯದು. ಪಾಲಿಪ್‌ಗಳು ಪತ್ತೆಯಾದರಂತೂ ಸರಾಸರಿ ನಾಲ್ಕು ಕಪ್ ಹಾಲು ಕುಡಿಯಲೇಬೇಕು ಎನ್ನುತ್ತಾರೆ ತಜ್ಞರು.
ಕ್ಯಾಲ್ಶಿಯಂ ಮಾಡುವ ಇನ್ನೊಂದು ಮಹತ್ವದ ಕಾರ್ಯ ಎಂದರೆ ಕ್ಯಾನ್ಸರ್ ಕೋಶಗಳ ಹರಡುವಿಕೆಯನ್ನು ಹತ್ತಿಕ್ಕುತ್ತದೆ. ಕರುಳಿನ ಒಳಭಾಗದಲ್ಲಿ ಕ್ಯಾನ್ಸರ್ ಕೋಶಗಳ ಪ್ರವೇಶ ಆಗದಂತೆ ನೋಡಿಕೊಳ್ಳುತ್ತದೆ. ಗೋಧಿ ಬ್ರಾನ್ ಜತೆಗೆ ಹಾಲನ್ನು ಸೇರಿಸಿಕೊಂಡು ಸೇವಿಸುವುದು ಕರುಳು ಕ್ಯಾನ್ಸರ್ ವಿರುದ್ಧ ಇನ್ನಷ್ಟು ಪರಿಣಾಮಕಾರಿ.


(ಮುಂದುವರಿಯುವುದು)
ಮೊ.9900113699 (ಎಸ್‌ಎಂಎಸ್‌ಗೆ ಮಾತ್ರ)

-ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.