ಬೈಟುಕಾಫಿ

ಮಕ್ಕಳ ಬಗ್ಗೆ ಇರಲಿ ತುಸು ಸೂಕ್ಷ್ಮ ನಿಗಾ

ಮಕ್ಕಳ ಬಗ್ಗೆ ಇರಲಿ ತುಸು ಸೂಕ್ಷ್ಮ ನಿಗಾ
Published On :

ಆತನ ವಯಸ್ಸು 40ರ ಆಸುಪಾಸು ಅಷ್ಟೆ. ದಿಢೀರ್ ಅನಾರೋಗ್ಯ ಕಾಣಿಸಿಕೊಂಡಿತು. ಎಲ್ಲ ತಪಾಸಣೆಗಳು ಮುಗಿದು ಆತನಿಗೆ ಶ್ವಾಸಕೋಶ ಕ್ಯಾನ್ಸರ್ ಆಗಿದೆ ಎನ್ನುವುದು ಖಚಿತವಾಗುವ ಹೊತ್ತಿಗೆ ಪರಿಸ್ಥಿತಿ ಕೈ ಮೀರಿತ್ತು. ಕೆಲವೇ ದಿನಗಳಲ್ಲಿ ಇಹಲೋಕ ತ್ಯಜಿಸಿದ. ಮಡದಿ, ಮುದ್ದಾದ ಮಕ್ಕಳು ಬೀದಿಪಾಲಾಗಿದ್ದರು. ಹೆತ್ತವರ ದುಃಖ ಮೇರೆ ಮೀರಿತ್ತು. ಅವನಿಗೆ ಧೂಮಪಾನದ ಚಟ ಇದ್ದದ್ದು ಮನೆಯವರಿಗೆ ಗೊತ್ತಿರಲೇ ಇಲ್ಲ. ನಿತ್ಯ ಐದಾರು ಸಿಗರೇಟ್ ಸೇದುತ್ತಿದ್ದ. ಮನೆಯವರಿಗೆ ತಿಳಿಯದಂತೆ ಜಾಗ್ರತೆ ವಹಿಸಿದ್ದ ಎನ್ನುವುದು ನಂತರ ಗೊತ್ತಾಯಿತು.
ಈಗಿನ ಯುವ ಪೀಳಿಗೆ, ಅದರಲ್ಲೂ ವಿದ್ಯಾರ್ಥಿಗಳನ್ನು ನೋಡಿದರೆ ನನಗೆ ಕರುಳು ಚುರುಕ್ ಎನ್ನುತ್ತದೆ. ಸುಂದರವಾದ ಬದುಕು ಬಾಳಬೇಕಾಗಿದ್ದವರು ಧೂಮಪಾನ, ತಂಬಾಕು ಸೇವನೆ ಮೊದಲಾದ ದುಶ್ಚಟಗಳನ್ನು ಅಂಟಿಸಿಕೊಂಡು ತಮ್ಮ ಜೀವನವನ್ನು ಎಷ್ಟು ಬೇಗ ಕೊನೆಗೊಳಿಸಿಕೊಳ್ಳುತ್ತಾರಲ್ಲ ಎಂದು ವ್ಯಥೆಯಾಗುತ್ತದೆ. ಅವರ ಅಪ್ಪ ಅಮ್ಮಂದಿರನ್ನು ನೆನೆದು ಸಂಕಟವಾಗುತ್ತದೆ. ಮೊದಲೆಲ್ಲ ಹೋಟೆಲ್, ಬಾರ್ ಮತ್ತು ರೆಸ್ಟೋರೆಂಟ್‌ಗಳ ಎದುರು ಪಾನ್ ಅಂಗಡಿ ಇರುತ್ತಿತ್ತು. ಈಗ ಕಾಲೇಜು ಸಮೀಪವೂ ತಲೆ ಎತ್ತಿವೆ ಮತ್ತು ಅಲ್ಲಿಯೇ ಗುಟ್ಕಾ, ಸಿಗರೇಟ್ ಮೊದಲಾದವು ಭಾರಿ ಪ್ರಮಾಣದಲ್ಲಿ ಮಾರಾಟವಾಗುತ್ತವೆ. ತಮ್ಮ ಮಕ್ಕಳು ಇಂಥ ದುಶ್ಚಟಕ್ಕೆ ಬಿದ್ದಿದ್ದಾರೆ ಎನ್ನುವುದು ಹೆತ್ತವರ ಗಮನಕ್ಕೆ ಬರುವುದೇ ಇಲ್ಲ. ಎಳೆಪ್ರಾಯದಲ್ಲಿ ಅಂಟಿಕೊಳ್ಳುವ ಇಂತಹ ದುರಭ್ಯಾಸಗಳು ಬಹಳ ಸಣ್ಣ ವಯಸ್ಸಿನಲ್ಲಿಯೇ ಅವರ ಬದುಕನ್ನು ನಾಶಗೊಳಿಸಿಬಿಡುತ್ತವೆ.
ಮಾರಣಾಂತಿಕ ಕ್ಯಾನ್ಸರ್‌ಗಳ ಪೈಕಿ ಶ್ವಾಸಕೋಶ ಕ್ಯಾನ್ಸರ್ ಸಹ ಒಂದು. ಹಿಂದೆಲ್ಲ 60 ದಾಟಿದವರು ಹೆಚ್ಚಾಗಿ ಈ ಕ್ಯಾನ್ಸರ್‌ಗೆ ತುತ್ತಾಗುತ್ತಿದ್ದರು. ಏಕೆಂದರೆ ಶ್ವಾಸಕೋಶ ಕ್ಯಾನ್ಸರ್ ತಕ್ಷಣದಲ್ಲಿ ತನ್ನ ಅಸ್ತಿತ್ವ ತೋರಿಸುವುದಿಲ್ಲ. ಅದು ಜೀವ ತೆಗೆಯುವ ಹಂತ ತಲುಪಲು ಹತ್ತಾರು ವರ್ಷಗಳೇ ಬೇಕು. ಆದರೆ ಈಗ ಮಕ್ಕಳು ಬಲುಬೇಗ ತಂಬಾಕು ಸೇವನೆಯ ದಾಸರಾಗುತ್ತಿರುವುದರಿಂದ ಶ್ವಾಸಕೋಶ ಕ್ಯಾನ್ಸರ್‌ಗೆ ತುತ್ತಾಗುವವರ ವಯೋವಾನದಲ್ಲಿಯೂ ಗಣನೀಯ ಇಳಿಕೆ ಕಂಡುಬಂದಿದೆ. ಹೀಗಾಗಿ ಪಾಲಕರು ತಮ್ಮ ಮಕ್ಕಳ ಬಗ್ಗೆ ಈ ವಿಚಾರದಲ್ಲಿ ಸೂಕ್ಷ್ಮ ನಿಗಾ ವಹಿಸುವುದು ಅತ್ಯಗತ್ಯ. ಆಗಾಗ ಮಾತುಕತೆಗಳ ನಡುವೆ ಸಾಂದರ್ಭಿಕವಾಗಿ ತಂಬಾಕು ಸೇವನೆಯ ದುಷ್ಪರಿಣಾಮಗಳ ಬಗ್ಗೆ ಪ್ರಸ್ತಾಪಿಸುತ್ತ ಎಚ್ಚರ ಮೂಡಿಸುವುದು ಅಗತ್ಯ.

(ಮುಂದುವರಿಯುವುದು)

-ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com
ಮೊ.9900113699 (ಎಸ್‌ಎಂಎಸ್‌ಗೆ ಮಾತ್ರ)


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.