ಪತ್ರಿಕೆ ತನ್ನ ಗುಣಮಟ್ಟ ಕಳೆದುಕೊಂಡಿತು

ಆದರೆ ದಿನಪತ್ರಿಕೆಗಳನ್ನು ನಡೆಸುವ ಶಕ್ತಿಯಾಗಲೀ, ಯೋಗ್ಯತೆಯಾಗಲಿ ಅವರಿಗೆ ಇರಲಿಲ್ಲ. ಈ ಕಾರಣದಿಂದ ಪತ್ರಿಕೆ ತನ್ನ ಗುಣಮಟ್ಟವನ್ನು ಆಕರ್ಷಣೆಯನ್ನು ಕಳೆದುಕೊಂಡಿತು. ಪ್ರಸಾರ, ವರಮಾನಗಳೆರಡೂ ಪಾತಾಳಕ್ಕಿಳಿದವು. ಈ ಮಧ್ಯೆ ಅರಸು ಮತ್ತು ಎಚ್.ಆರ್. ಬಸವರಾಜರ ಮಧ್ಯೆ ಭಿನ್ನಾಭಿಪ್ರಾಯವೂ ಬಂದು ಅದು ಕೆಲವೇ ದಿನಗಳಲ್ಲಿ ವಿಕೋಪಕ್ಕೆ ಹೋಯಿತು.
ರ ಜೆ ಮುಗಿದ ನಂತರ ನಿಮ್ಮನ್ನು ನಿವೃತ್ತಗೊಳಿಸಲಾಗುವುದು. ಆದರೆ ಟ್ರಸ್ಟ್ನ ವಿರುದ್ಧ ನೀವು ನಡೆಸುತ್ತಿರುವ ಚಟುವಟಿಕೆಗಳ ಬಗ್ಗೆ ತನಿಖೆ ನಡೆಸಲು ಆಡಳಿತ ವರ್ಗ ಸ್ವತಂತ್ರವಿದೆ ಎಂದು ಬರೆದಿತ್ತು. ಅದನ್ನು ಓದಿದ ನನಗೆ ಆಘಾತವಾದಂತಾಯಿತು. ಆದರೂ ತೋರಿಸಿಕೊಳ್ಳಲಿಲ್ಲ. ಮೇಜಿನ ಮೇಲಿದ್ದ ಕಾಫಿಯನ್ನು ಕುಡಿದು 'ಶಾಮಣ್ಣ ನಿವೃತ್ತನಾಗಲು ನನ್ನ ಅಭ್ಯಂತರವಿಲ್ಲ. ಕೂಡಲೆ ಹೋಗುತ್ತೇನೆ. ಆದರೆ ನೀವು ಪತ್ರದ ಕೊನೆಯ ವಾಕ್ಯವನ್ನು ತೆಗೆದು ಹಾಕಿರಿ. ನಾನು ಟ್ರಸ್ಟ್ನ ವಿರೋಧಿಯಲ್ಲ. ಅದರ ಸಂಸ್ಥಾಪಕರಲೊಬ್ಬ. ಅದನ್ನು ಉಳಿಸುವುದಕ್ಕಾಗಿಯೇ ಹೋರಾಟ ನಡೆಸಿದ್ದೇನೆ. ಒಂದು ವೇಳೆ ನೀವು ಈ ವಾಕ್ಯ ತೆಗೆಯದಿದ್ದರೆ ಪಶ್ಚಾತ್ತಾಪ ಪಡಬೇಕಾಗುವುದು. ಟ್ರಸ್ಟನ್ನು ಉಳಿಸಲು ನಾನು ಹೋರಾಟ ಮಾಡಬೇಕಾಗುವುದು' ಎಂದು ಹೇಳಿದೆ. ಆದರೆ ಶಾಮಣ್ಣ ತನ್ನ ಅಸಹಾಯಕತೆ ವ್ಯಕ್ತಪಡಿಸಿದರು. ನಾನು ಕೂಡಲೇ ಹೊರಗೆ ಬಂದೆ. ಭದ್ರತಾ ಪಡೆಯ ಮುಖ್ಯಾಧಿಕಾರಿ ಆ ರೂಮಿನ ಬಾಗಿಲಲ್ಲಿ ನಿಂತಿದ್ದ. ನನ್ನನ್ನು ನನ್ನ ರೂಮಿನೊಳಗೇ ಬಿಡಲಿಲ್ಲ. ಗೇಟಿನಿಂದ ಹೊರಗೆ ಹೋಗುವಂತೆ ನನಗೆ ಹೇಳಿ, ನನ್ನನ್ನು ಕರೆದುಕೊಂಡು ತಾನೂ ಗೇಟಿನವರೆಗೆ ಬಂದ.
ಈ ಘಟನೆ ಮುಂದೆ ಹನ್ನೆರಡು ವರ್ಷಗಳ ನನ್ನ ವನವಾಸಕ್ಕೆ ಕೋರ್ಟ್ ವ್ಯವಹಾರಗಳಿಗೆ ನಾಂದಿಯಾಯಿತು. ಅಲ್ಲದೆ ಕೆ.ಪಿ.ಪಿ. ಕಂಪೆನಿಯವರಿಗೂ ಅಂದಿನಿಂದಲೇ 'ಶನಿಕಾಟ' ಪ್ರಾರಂಭವಾಯಿತು.
ದಿವಾಕರರು ಎಂ.ವೈ. ಘೋರ್ಪಡೆಯವರೊಡನೆ ಮಾಡಿಕೊಂಡಿದ್ದ ಎರಡು ರಹಸ್ಯ ಒಪ್ಪಂದಗಳ ನಿಜ ಸಂಗತಿಗಳು ಕೋರ್ಟಿನಲ್ಲಿ ಬಯಲಾದವು. ಇವುಗಳನ್ನು ಓದಿ ಅನೇಕರು ದಿಗ್ಭ್ರಾಂತರಾದರು. ಬೆಚ್ಚಿಬಿದ್ದರು. ದಿವಾಕರರ ಮೂರ್ಖತನವನ್ನು. ಪುತ್ರ ವ್ಯಾಮೋಹವನ್ನು ಮತ್ತು ಸಂಯುಕ್ತ ಕರ್ನಾಟಕಕ್ಕೆ ಮಾಡಿದ ದ್ರೋಹವನ್ನು ಕಂಡು ವಿಷಾದಿಸಿದರು. ಸಿಬ್ಬಂದಿ ಗಾಬರಿಯಾದರು. ತಮ್ಮ ಭವಿಷ್ಯದ ಗತಿ ಏನು? ಎಂದು ಚಿಂತಿಸಿದರು. ಆದರೆ ಈ ಅನಾಹುತವನ್ನು ಹೇಗೆ ವಿರೋಧಿಸಬೇಕೆಂಬ ಬಗ್ಗೆ ಮಾತ್ರ ಯಾರೂ ಯೋಚಿಸಲಿಲ್ಲ. ಮಾಲೀಕರು ಯಾರಾದರೇನು, ನಮಗೆ ನಮ್ಮ ಸಂಬಳ ಬಂದರೆ ಸಾಕು ಎಂಬ ಸಂತೃಪ್ತಿಯಿಂದ ಸಮಾಧಾನದಿಂದ ಅನೇಕರು ಸುಮ್ಮನಾದರು. ಇವರಲ್ಲಿ ಕೆಲವರು ಹೊಸ ಆಡಳಿತ ವರ್ಗದವರೊಡನೆ ಸೇರಿಕೊಂಡು ಅವರಿಗೆ ಎಲ್ಲಾ ರೀತಿಯಿಂದಲೂ ಬೆಂಬಲಕೊಟ್ಟು, ಸಹಕರಿಸಿದರಲ್ಲದೆ ನನ್ನಿಂದ ದೂರವಾದರು. ಇವರಲ್ಲಿ ಎ.ಜಿ. ಗುಂಡಾಭಟ್ ಅತಿ ಮುಖ್ಯನಾದವನು. ವಿಶ್ವಾಸದ್ರೋಹದಲ್ಲಿ ನಿಪುಣ. ಹಣ ಗಳಿಸುವುದರಲ್ಲಿ ನಿಸ್ಸೀಮ. ಅಪ್ರಾಮಾಣಿಕತೆಯಲ್ಲಿ ಪ್ರವೀಣ. 1974ನೇ ನವೆಂಬರ್ ತಿಂಗಳಿನಿಂದ 1986ನೇ ಮಾರ್ಚ್ 25ರವರೆಗೆ ನನ್ನ ಮಾಜಿ ಸಹೋದ್ಯೋಗಿಗಳು ನನ್ನನ್ನು ಒಮ್ಮೆಯೂ ಸಂಪರ್ಕಿಸಲಿಲ್ಲವೆಂದು ಹೇಳಿದರೆ ಆಶ್ಚರ್ಯವೆನಿಸಬಹುದು. ಆದರೆ ಇದು ಕಟು ಸತ್ಯ. ಇಷ್ಟೇ ಅಲ್ಲ, ಅಕಸ್ಮಾತ್ ಯಾರಾದರೂ ದಾರಿಯಲ್ಲಿ ಸಿಕ್ಕರೆ, ತಲೆ ತಿರುಗಿಸಿಕೊಂಡು ನೋಡಿಯೂ ನೋಡದವರಂತೆ ಹೋಗುತ್ತಿದ್ದರು. ನಾನು ಮಾತ್ರ ಈ ಅವಮಾನಗಳಿಗೆ ಸ್ವಲ್ಪವೂ ಗಮನ ಕೊಡದೆ ಕೋರ್ಟು ಪ್ರಕರಣಗಳ ಬಗ್ಗೆ ಹೆಚ್ಚು ಗಮನ ಕೊಡುತ್ತಿದ್ದೆ..
ಅತ್ತ ಕೆ.ಪಿ.ಪಿ. ಕಂಪನಿಗೂ ಪತ್ರಿಕೆಗಳನ್ನು ನಡೆಸುವುದು ಅಷ್ಟೊಂದು ಸುಲಭವಾಗಿರಲಿಲ್ಲ. ಹಣದ ತೊಂದರೆ ದಿನ ದಿನಕ್ಕೆ ಹೆಚ್ಚಾಗುತ್ತಿತ್ತು. ಪ್ರಸಾರ ತೀರ ನೆಲಕ್ಕಿಳಿದಿತ್ತು. ಜಾಹಿರಾತು ವರಮಾನವೂ ಹೆಚ್ಚಾಗಿರಲಿಲ್ಲ. ಈ ಮಧ್ಯೆ ಅರಸು ಅವರ ರಾಜಕೀಯ ಬದಲಾಯಿಸುತ್ತಿತ್ತು. ಹೊಸ ಪಕ್ಷ ಕಟ್ಟಿ ಚುನಾವಣೆಗಳನ್ನು ಎದುರಿಸಬೇಕೆಂದು ನಿರ್ಧರಿಸಿದ್ದರು. ಅದಕ್ಕಾಗಿ ಒಂದು ಪತ್ರಿಕೆಯನ್ನು ಅವರು ಹುಡುಕುತ್ತಿದ್ದರು. ಮೂರು ವರ್ಷದಲ್ಲಿ ಸುಮಾರು ಒಂದು ಕೋಟಿ ರೂ.ಗೂ ಹೆಚ್ಚು ನಷ್ಟ ಅನುಭವಿಸಿದ್ದ ಕೆ.ಪಿ.ಪಿ. ಆದಷ್ಟು ಬೇಗನೆ ಪತ್ರಿಕೆಯಿಂದ ಬಿಡುಗಡೆಯಾಗಲು ಯೋಚಿಸುತ್ತಿತ್ತು. ಅತ್ತ ಘೋರ್ಪಡೆಯವರಿಗೂ ಕಾಂಗ್ರೆಸ್ ಪಕ್ಷ ಬಿಟ್ಟು ಹೋಗುವುದು ಸರಿಯಿಲ್ಲವೆಂದು ಜ್ಞಾನೋದಯವಾಗಿತ್ತು. ಆಗ ಅವರು ಅರಸುರವರೊಡನೆ ಮಾತನಾಡಿ ಪತ್ರಿಕೆಯನ್ನು ಮಾರಲು ಒಪ್ಪಿ ಒಂದು ಒಪ್ಪಂದ ಮಾಡಿಕೊಂಡರು. ಆ ಒಪ್ಪಂದ ಹಿಂದೆ ಕೆ.ಪಿ.ಪಿ. ಯವರು ಟ್ರಸ್ಟಿನೊಡನೆ ಮಾಡಿಕೊಂಡಿದ್ದ ಒಪ್ಪಂದದ ಮಾದರಿಯಲ್ಲಿಯೇ ಇತ್ತು. ಸುಪ್ರಸಿದ್ಧ ಅಬಕಾರಿ ಗುತ್ತಿಗೆದಾರರೂ ಅರಸು ಅವರ ಮಿತ್ರರೂ ಆದ ಹೆಚ್.ಆರ್. ಬಸವರಾಜ ಈ ಮೊದಲೇ 'ಜಯ ಕರ್ನಾಟಕ ನ್ಯೂಸ್ ಪ್ರಿಂಟರ್ಸ್' ಎಂಬ ಕಂಪನಿಯನ್ನು ಸ್ಥಾಪಿಸಿ, ಪ್ರಜಾ ಪ್ರಭುತ್ವ ಎಂಬ ವಾರಪತ್ರಿಕೆಯನ್ನು ನಡೆಸುತ್ತಿದ್ದರಿಂದ ಈ ಕಂಪನಿಗೆ ಸಂಯುಕ್ತ ಕರ್ನಾಟಕದ ಖರೀದಿ ಹೆಚ್ಚು ಕಷ್ಟವಾಗಲಿಲ್ಲ. 12.12.1977 ರಂದು ಈ ಎರಡೂ ಕಂಪನಿಗಳ ನಡುವೆ ಆದ ಒಪ್ಪಂದದಂತೆ ಜಯ ಕರ್ನಾಟಕ ಕಂಪನಿ ಕೆ.ಪಿ.ಪಿ.ಯ ಎಲ್ಲ ಸಾಲಗಳನ್ನು ತೀರಿಸಲು ಮತ್ತು ಎಂ.ವೈ. ಘೋರ್ಪಡೆಯವರಿಗೆ 25 ಲಕ್ಷ ರೂ. ನಗದು ಕೊಡಲು ಒಪ್ಪಿಕೊಂಡು, ಸಂಯುಕ್ತ ಕರ್ನಾಟಕ ಪತ್ರಿಕೆಯ ಒಡೆತನವನ್ನು ಪಡೆದುಕೊಂಡಿತು.
ಈ ಮಧ್ಯೆ ಟ್ರಸ್ಟಿನ ಹಿತೈಷಿಗಳಲ್ಲಿ ಕೆಲವರು ಚಾರಿಟಿ ಕಮೀಷನರ್ರ ಅನುಮತಿ ಪಡೆದ ಪತ್ರಿಕೆಗಳ ಪರಭಾರೆ ವಿರುದ್ಧ ಧಾರವಾಡ ಜಿಲ್ಲಾ ನ್ಯಾಯಾಲಯದಲ್ಲಿ ದಾವೆ ದಾಖಲು ಮಾಡಿದ್ದರು. ಈ ದಾವೆ ಹಾಕಿಸಲು ನಾನೇ ಕಾರಣ ಎಂಬುದನ್ನು ಬೇರೆ ಹೇಳಬೇಕಾಗಿಲ್ಲ. ಜಯ ಕರ್ನಾಟಕ ಕಂಪೆನಿಯವರು ಮೊದಲು ಮಾಡಿದ ಕೆಲಸವೆಂದರೆ ಖಾದ್ರಿ ಶಾಮಣ್ಣ ಮತ್ತು ಎನ್.ವಿ. ಜಯಶೀಲರಾಯರನ್ನು ಓಡಿಸಿದ್ದು ಮತ್ತು ಅವರ ಸ್ಥಾನದಲ್ಲಿ ಆರ್.ಬಿ. ಕುಲಕರ್ಣಿ (ರಾವ್ ಬಹದ್ದೂರ್) ಮತ್ತು ಅವರ ಮಿತ್ರ ಶಹಾಪೂರ್ ಎಂಬಿಬ್ಬರನ್ನು ನೇಮಿಸಿಕೊಂಡರು. ಇದು ಆ ಕಂಪೆನಿ ಮಾಡಿದ ಮೊದಲ ತಪ್ಪು. ಏಕೆಂದರೆ ಇವರಿಬ್ಬರೂ ಸಾಹಿತಿಗಳು, ದೊಡ್ಡ ದೊಡ್ಡ ಕಾದಂಬರಿಗಳನ್ನು ಬರೆಯಬಲ್ಲವರು. ಆದರೆ ದಿನಪತ್ರಿಕೆಗಳನ್ನು ನಡೆಸುವ ಶಕ್ತಿಯಾಗಲೀ, ಯೋಗ್ಯತೆಯಾಗಲಿ ಅವರಿಗೆ ಇರಲಿಲ್ಲ. ಈ ಕಾರಣದಿಂದ ಪತ್ರಿಕೆ ತನ್ನ ಗುಣಮಟ್ಟವನ್ನು ಆಕರ್ಷಣೆಯನ್ನು ಕಳೆದುಕೊಂಡಿತು. ಪ್ರಸಾರ, ವರಮಾನಗಳೆರಡೂ ಪಾತಾಳಕ್ಕಿಳಿದವು. ಈ ಮಧ್ಯೆ ಅರಸು ಮತ್ತು ಎಚ್.ಆರ್. ಬಸವರಾಜರ ಮಧ್ಯೆ ಭಿನ್ನಾಭಿಪ್ರಾಯವೂ ಬಂದು ಅದು ಕೆಲವೇ ದಿನಗಳಲ್ಲಿ ವಿಕೋಪಕ್ಕೆ ಹೋಯಿತು. ಇದರಿಂದ ಬೇಸತ್ತು ಬಸವರಾಜರು ತಾ: 01-01-1980 ರಿಂದ ಬೆಂಗಳೂರು ಸಂಯುಕ್ತ ಕರ್ನಾಟಕ ಮುದ್ರಣವನ್ನು ನಿಲ್ಲಿಸಿ, ಕಚೇರಿಗೆ ಬೀಗಮುದ್ರೆ ಹಾಕಿದರು. ಇದರ ವಿರುದ್ಧ ಕಾರ್ಮಿಕರು ಮತ್ತು ಪತ್ರಕರ್ತರು ಮುಷ್ಕರ ಹೂಡಿದರು. ಚಳವಳಿ ಮಾಡಿದರು. ಆದರೆ ಬಸವರಾಜರು ಪತ್ರಿಕೆಗಳನ್ನು ತಾವು ನಡೆಸುವುದು ಸಾಧ್ಯವೇ ಇಲ್ಲವೆಂದು ಸ್ಪಷ್ಟವಾಗಿ ಹೇಳಿದರು. ಆಗ ಆರ್. ಗುಂಡುರಾಯರು ರಾಜ್ಯದ ಮುಖ್ಯಮಂತ್ರಿಗಳಾಗಿದ್ದರು. ರಾಜ್ಯದ ಎಲ್ಲ ಪತ್ರಿಕೆಗಳು ಅವರನ್ನು ವಿರೋಧಿಸುತ್ತಿದ್ದವು. ತಮ್ಮ ಬೆಂಬಲಕ್ಕೂ ಒಂದು ಪತ್ರಿಕೆಯನ್ನು ಹೊಂದಲು ಅವರು ಯೋಚಿಸುತ್ತಿದ್ದರು. ಆಗ ಅವರ ಮಿತ್ರ ಕೆ.ಕೆ. ಮೂರ್ತಿಯವರು ಅವರ ನೆರವಿಗೆ ಬಂದು, ನಿಂತು ಹೋಗಿದ್ದ ಸಂಯುಕ್ತ ಕರ್ನಾಟಕ ಪತ್ರಿಕೆಯನ್ನು ಪುನಃ ಪ್ರಾರಂಭಿಸಲು ಸಲಹೆ ಮಾಡಿದರಲ್ಲದೆ, ಸರ್ಕಾರದ ಮಧ್ಯಸ್ಥಿಕೆಯಿಂದ ಬೆಳಗಾವಿಯ ಚಾರಿಟಿ ಕಮೀಷನರನ್ನೇ ಕೋರ್ಟ್ ರಿಸೀವರ್ ಆಗಿ ನೇಮಿಸಲು ವ್ಯವಸ್ಥೆ ಮಾಡಿದರು ಮತ್ತು ಅವರ ಮುಖಾಂತರ ಸಂಯುಕ್ತ ಕರ್ನಾಟಕ ಬೆಂಗಳೂರು ಮುದ್ರಣವನ್ನು ಪ್ರಾರಂಭಿಸುವುದಕ್ಕೂ ಸಿದ್ಧತೆ ಮಾಡಿದರು. ಆದರೆ ಇದಕ್ಕೆ ನಾನು ಒಪ್ಪಲಿಲ್ಲ. ಆಗ ಮೂರ್ತಿಯವರು ಹಿಂದೆ ಸಂಯುಕ್ತ ಕರ್ನಾಟಕದಲ್ಲಿ ಜಂಟಿ ಸಂಪಾದಕರೆಂದು ಕೆಲಸ ಮಾಡುತ್ತಿದ್ದ ಎಸ್.ವಿ. ಜಯಶೀಲರಾವ್ ಮತ್ತು ಅವರ ಬೆಂಬಲಿಗರ ನೆರವಿನಿಂದ ಮತ್ತು ಕೋರ್ಟ್ ರಿಸೀವರ್ ವಾಮದೇವ್ ಅವರ ಸಮ್ಮತಿಯಿಂದ 1981ನೇ ಡಿಸೆಂಬರ್ 19ನೇ ರಾತ್ರಿಯೇ ಪತ್ರಿಕೆಯ ಎಲ್ಲಾ ಕೆಲಸಗಾರರನ್ನು ಬರಮಾಡಿಕೊಂಡು, 20ನೇ ತಾ: ಬೆಳಿಗ್ಗೆ ಪತ್ರಿಕೆಯನ್ನು ಮುದ್ರಿಸಿದರು. ಇದರ ಪ್ರತಿಯೊಂದನ್ನು ಮುಖ್ಯಮಂತ್ರಿಯವರು ಮತ್ತು ಅವರ ಮಿತ್ರ ಕೆ.ಕೆ. ಮೂರ್ತಿಯವರು 20ನೇ ತಾ: ಬೆಳಿಗ್ಗೆ ವಿಮಾನ ನಿಲ್ದಾಣದಲ್ಲಿ ಅಂದಿನ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿಯವರಿಗೆ ಕೊಟ್ಟು ಇದು ಕಾಂಗ್ರೆಸ್ಸಿಗೆ ಬೆಂಬಲ ಕೊಡುವ ಪತ್ರಿಕೆ ಎಂದು ತಿಳಿಸಿದರು. ಪ್ರಧಾನಿಯವರು ಬಹಳ ಸಂತೋಷ ಪಟ್ಟರಂತೆ.
ಆದರೆ ಪತ್ರಿಕೆಯನ್ನು ಪ್ರಾರಂಭಿಸಿದ ರಿಸೀವರ್ ವಾಮದೇವ್ ಅವರಿಗೆ ಬಹಳ ಕಸಿವಿಸಿಯಾಗಿತ್ತು. ಕೋರ್ಟ್ ಅಪ್ಪಣೆ ಇಲ್ಲದೆ ಅವರು ಪತ್ರಿಕೆಯನ್ನು ಪ್ರಾರಂಭಿಸಿದ್ದರು. ಸರ್ಕಾರದಿಂದ ನಿರೀಕ್ಷಿಸಿದ ಸಹಾಯ, ಬೆಂಬಲ ಸಿಗಲಿಲ್ಲ. ಬ್ಯಾಂಕುಗಳು ಸಹ ಸಾಲ ಸೌಲಭ್ಯಗಳನ್ನು ಕೊಡಲಿಲ್ಲ. ಆಗ ವಾಮದೇವರು ತಾವಾಗಿಯೇ ರಾಜೀನಾಮೆ ಕೊಟ್ಟರು. ಅವರ ಸ್ಥಾನದಲ್ಲಿ ಜಿಗಜಿನ್ನಿ ಎಂಬ ವಕೀಲರನ್ನು ಹೈಕೋರ್ಟು ನೇಮಿಸಿತು. ಅವರು ಬಹಳ ಒಳ್ಳೆಯವರು. ವಿವೇಕಿಗಳು, ಪತ್ರಿಕೆಯನ್ನು ಸುಧಾರಿಸಲು ಅನೇಕ ಯೋಜನೆಗಳನ್ನು ಹಾಕಿಕೊಂಡಿದ್ದರು. ಆದರೆ ಅಷ್ಟರಲ್ಲಿ ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿ, ಲೋಕ ಶಿಕ್ಷಣ ಟ್ರಸ್ಟಿನ ಎಲ್ಲಾ ಆಸ್ತಿಗಳನ್ನು ಮತ್ತು ಪ್ರಕಟಣೆಗಳನ್ನು ಸ್ವಾಧೀನಪಡಿಸಿಕೊಂಡಿತು. ಇದನ್ನು ವಿರೋಧಿಸಿ ಅವರು ಹೈಕೋರ್ಟಿನಲ್ಲಿ ಅರ್ಜಿ ಕೊಟ್ಟರು. ಅದು ಅಂಗೀಕಾರವಾಯಿತು. ಆದರೆ ವಿಚಾರಣೆ ಎರಡು ವರ್ಷ ನಡೆಯಿತು. ನ್ಯಾ.ಕೆ. ಜಗನ್ನಾಥ ಶೆಟ್ಟಿ ಮತ್ತು ನ್ಯಾಯ ದೊಡ್ಡ ಚಕಾಳೇಗೌಡರನ್ನೊಳಗೊಂಡ ನ್ಯಾಯ ಪೀಠ ವಿಚಾರಣೆ ನಡೆಸಿ ಟ್ರಸ್ಟಿನ ಆಸ್ತಿಗಳು ಮತ್ತು ಪ್ರಕಟಣೆಗಳು ಈಗಾಗಲೇ ಮಾರಾಟವಾಗಿರುವುದರಿಂದ ಅವು ಟ್ರಸ್ಟಿನ ಆಸ್ತಿಗಳಲ್ಲವೆಂದು ಅಭಿಪ್ರಾಯ ಪಟ್ಟು ಅವನ್ನು ಕೂಡಲೇ ರಿಸೀವರರಿಗೆ ಕೊಡಲು ಆದೇಶಿಸಿದರು. ಆದರೆ ಇದಕ್ಕೂ ಮೊದಲು ರಿಸೀವರರಾಗಿದ್ದ ಜಗಜಿನ್ನಿಯವರು ಅಮೆರಿಕಕ್ಕೆ ಹೋಗಿದ್ದರು. ಆದ್ದರಿಂದ ಕೋರ್ಟಿನವರೇ ಆಗ ಚಾರಿಟಿ ಕಮೀಷನ್ರಾಗಿದ್ದ ಎಸ್.ಎ. ಪಾಟೀಲ್ ಎಂಬುವವರನ್ನು ರಿಸೀವರನ್ನಾಗಿ ನೇಮಿಸಿದರು. ಸರ್ಕಾರದ ಆಡಳಿತಾಧಿಕಾರಿಗಳು ಟ್ರಸ್ಟಿನ ಎಲ್ಲಾ ಆಸ್ತಿಗಳನ್ನು ಮತ್ತು ಪ್ರಕಟಣೆಗಳನ್ನು ರಿಸೀವರರಿಗೆ ವಹಿಸಿಕೊಟ್ಟರು.
ಆದರೆ ಪತ್ರಿಕೆಗಳನ್ನು ನಡೆಸುವ ಅನುಭವವಾಗಲೀ ಸಾಮರ್ಥ್ಯವಾಗಲೀ ಅವರಿಗೆ ಇರಲಿಲ್ಲ. ಅಲ್ಲದೆ ಕೋರ್ಟ್ ರಿಸೀವರರಿಗೆ ಸಾಕಷ್ಟು ಹಣದ ಬೆಂಬಲವೂ ಇರಲಿಲ್ಲ. ಆದ್ದರಿಂದ ಪತ್ರಿಕೆಗಳು ಸರಿಯಾಗಿ ನಡೆಯುತ್ತಿರಲಿಲ್ಲ. ಮುದ್ರಣ ಕಾಗದಕ್ಕೆ ಹಣವಿರಲಿಲ್ಲ. ಸಂಬಳ ಕೊಡಲು ಸಾಲ ಮಾಡಬೇಕಾಗಿತ್ತು. ಭ್ರಷ್ಟಾಚಾರ ತುಂಬಿ ತುಳುಕುತ್ತಿತ್ತು. ಸಿಬ್ಬಂದಿ ಕೆಲಸವನ್ನೇ ಮಾಡುತ್ತಿರಲಿಲ್ಲ. ರಿಸೀವರರಾದ ಪಾಟೀಲರು ಧಾರವಾಡದಲ್ಲಿರುತ್ತಿದ್ದರು. ಅವರ ಕಚೇರಿಯ ಒಬ್ಬ ಗುಮಾಸ್ತ ಬೆಂಗಳೂರು ಕಚೇರಿಯ ಆಡಳಿತವನ್ನು ನೋಡಿಕೊಳ್ಳುತ್ತಿದ್ದ. ಪತ್ರಿಕೆ ಹೆಸರಿನಲ್ಲಿ ಮಾತ್ರ. ಅದಕ್ಕೆ ಪ್ರಸಾರವಾಗಲೀ ವರಮಾನವಾಗಲೀ ಸ್ವಲ್ಪವೂ ಇರಲಿಲ್ಲ. ಸರ್ಕಾರಿ ಜಾಹೀರಾತುಗಳ ಸಲುವಾಗಿ ಪತ್ರಿಕೆಯನ್ನು ಪ್ರಕಟಿಸಲಾಗುತ್ತಿತ್ತು. ಅಷ್ಟರಲ್ಲಿ ಎಸ್.ಎ. ಪಾಟೀಲರು ಚಾರಿಟಿ ಕಮೀಷನರ ಹುದ್ದೆಯಿಂದ ನಿವೃತ್ತರಾದರು. ಆದ್ದರಿಂದ ಅವರು ಸಂಯುಕ್ತ ಕರ್ನಾಟಕ ಪತ್ರಿಕೆಯ ಆಡಳಿತದ ಹುದ್ದೆಯನ್ನೂ ಬಿಡಬೇಕಾಯಿತು. ಆಗ ಬೆಳಗಾವಿಯಲ್ಲಿ ಜಿಲ್ಲಾ ನ್ಯಾಯಾಧೀಶರಾಗಿ ನಿವೃತ್ತನಾಗಿದ್ದ ಆರ್.ಜೆ. ದೇಸಾಯಿ ಎಂಬುವವರ ಹೆಸರನ್ನು ಸೂಚಿಸಲಾಯಿತು. ಮೊದಲು ಅವರು ಒಪ್ಪಲಿಲ್ಲ. ಆದರೆ ನಮ್ಮ ಮಿತ್ರರಾದ ಸುರೇಶ್ ಜೋಷಿ ಎಂಬ ವಕೀಲರ ಮನೆಯಲ್ಲಿ ಭೇಟಿಯಾಗಿ ಪತ್ರಿಕೆಯ ಇತಿಹಾಸ ಮತ್ತು ಪರಿಸ್ಥಿತಿಯನ್ನು ತಿಳಿಸಿ, ಒಪ್ಪಿಕೊಳ್ಳಲೇಬೇಕೆಂದು ಒತ್ತಾಯಿಸಿದೆ. ಕೊನೆಗೆ ಒಪ್ಪಿದರು. ಅವರು ಕಲ್ಬುರ್ಗಿಯ ಸುಪ್ರಸಿದ್ಧ ಕಾಂಗ್ರೆಸ್ ಮುಖಂಡರಾಗಿದ್ದ ಜನಾರ್ಧನರಾವ್ ದೇಸಾಯಿಯವರ ಮಕ್ಕಳು, ಜಿಲ್ಲಾ ನ್ಯಾಯಾಧೀಶರಾಗಿ ಒಳ್ಳೆಯ ಹೆಸರು ಪಡೆದಿದ್ದರು. ಆದ್ದರಿಂದ ಅವರ ಹೆಸರನ್ನು ನಾನು ನಮ್ಮ ವಕೀಲರ ಮುಖಾಂತರ ಸೂಚಿಸಿದೆ. ಹೈಕೋರ್ಟಿನಲ್ಲಿಯೂ ಇದು ಅನುಮೋದನೆಯಾಯಿತು. ದೇಸಾಯಿಯವರು ಕೇವಲ ಚರಾಸ್ತಿಗಳಿಗೆ ರಿಸೀವರಾಗಿದ್ದರು. ಅಂದರೆ ಪತ್ರಿಕೆಗಳನ್ನು ನಡೆಸುವುದು ಮಾತ್ರ ಅವರ ಜವಾಬ್ದಾರಿಯಾಗಿತ್ತು. ಆದರೆ ಟ್ರಸ್ಟಿನ ಸ್ಥಿರಾಸ್ತಿಗಳು ಇನ್ನೊಬ್ಬ ರಿಸೀವರರ ಕೈಯಲ್ಲಿ ಹುಬ್ಬಳ್ಳಿ ತಹಶೀಲ್ದಾರರ ಕೈಯಲ್ಲಿ ಇದ್ದವು. ಇದರಿಂದ ಪತ್ರಿಕೆಗಳು ನಡೆಸುವುದಕ್ಕೆ ಬಂಡವಾಳವೇ ಇರುತ್ತಿರಲಿಲ್ಲ. ಮುದ್ರಣ ಕಾಗದ ಖರೀದಿಗೆ ಹಣವಿಲ್ಲದೆ ಎಷ್ಟೋ ಸಲ ಪ್ರಸಾರವನ್ನೇ ಕಡಿಮೆ ಮಾಡುತ್ತಿದ್ದರು. ಸಿಬ್ಬಂದಿಗೆ ಸಂಬಳವನ್ನು 3-4 ಕಂತುಗಳಲ್ಲಿ ಕೊಡುತ್ತಿದ್ದರು. ಬ್ಯಾಂಕುಗಳಿಂದ ಹಣದ ನೆರವು ಸಿಗುವ ಸಂಭವವೂ ಇರಲಿಲ್ಲ. ಏಕೆಂದರೆ, 1974ಕ್ಕೆ ಮೊದಲಿನಿಂದಲೂ ಇದ್ದ ಸುಮಾರು 30 ಲಕ್ಷ ರೂ.ಗಳಷ್ಟು ಟ್ರಸ್ಟ್ ಸಾಲವನ್ನು ಕೆ.ಪಿ.ಪಿ. ಕಂಪೆನಿಯವರಾಗಲೀ, ಜಯಕರ್ನಾಟಕ ಕಂಪನಿಯವರಾಗಲೀ ತೀರಿಸಿರಲಿಲ್ಲ.
(ಮುಂದುವರಿಯುವುದು)
-ಕೆ.ಶ್ಯಾಮರಾವ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


