ಬೈಟುಕಾಫಿ

ಗಾನ ಯಾನ

ಯಾರದೇ ಮನೆಗೆ ಹೋಗಿ, ಅಲ್ಲಿ ನಿಮಗೆ ಎಂಟ್ಹತ್ತಾದರೂ 'ಸಂಗೀತಾ'ದ ಧ್ವನಿಮುದ್ರಿತ ಸಿಡಿ, ಕ್ಯಾಸೆಟ್ಟುಗಳು ಕಾಣಸಿಗುತ್ತವೆ...

ಗಾನ ಯಾನ
Published On :

ಯಾರದೇ ಮನೆಗೆ ಹೋಗಿ, ಅಲ್ಲಿ ನಿಮಗೆ ಎಂಟ್ಹತ್ತಾದರೂ 'ಸಂಗೀತಾ'ದ ಧ್ವನಿಮುದ್ರಿತ ಸಿಡಿ, ಕ್ಯಾಸೆಟ್ಟುಗಳು ಕಾಣಸಿಗುತ್ತವೆ. ಯಾವುದೇ ಮಂಗಳ ಕಾರ್ಯದ ವೇಳೆ 'ಗಜಮುಖನೆ ಗಣಪತಿಯೆ', 'ಎದ್ದೇಳು ಮಂಜುನಾಥ', 'ರಾಘವೇಂದ್ರ ಭಕ್ತಿಗೀತೆ'ಗಳು ಕೇಳುತ್ತಿರುತ್ತವೆ. ಅಷ್ಟೊಂದು ಜನಪ್ರಿಯ, ಜನಜನಿತ ಹಾಡುಗಳಿವು. ಆದರೆ ಈ ಹಾಡುಗಳ ಕ್ಯಾಸೆಟ್ಟಿನ ಇತಿಹಾಸ, ಇದರ ಹಿಂದಿನ ಸಾಧಕನ ಶ್ರಮ ಬಹುಶಃ ಹೆಚ್ಚಿನವರಿಗೆ ಗೊತ್ತಿಲ್ಲ. ಮಹೇಶ್‌ರ ಜೀವನಗಾಥೆ 'ಸಂಗೀತಯಾನ' ಕೃತಿಯಲ್ಲಿ ಇವೆಲ್ಲ ಇದೆ. ನಾಳೆಯೇ (ಮೇ 4) ಅದರ ಬಿಡುಗಡೆ...


ಕನಸನ್ನು ಎಲ್ಲರೂ ಕಾಣುತ್ತಾರೆ. ಬೆನ್ನೇರಿ ಅದನ್ನು ನನಸಾಗಿಸಿಕೊಳ್ಳುವವರು ಕೆಲವರು ಮಾತ್ರ. ಅಂಥ ಕೆಲವರಲ್ಲಿ ಒಬ್ಬರು ಕನ್ನಡಿಗ ಎಚ್.ಎಂ. ಮಹೇಶ್! ಚಿಕ್ಕಂದಿನಿಂದಲೂ ಸಂಗೀತದ ಬಗ್ಗೆ ಆಸಕ್ತಿ ಬೆಳೆಸಿಕೊಂಡ ಮಹೇಶ್, ಕಾಲೇಜು ವಿದ್ಯಾಭ್ಯಾಸ ಮುಗಿಯುತ್ತಿದ್ದಂತೆ ಹಿನ್ನೆಲೆ ಗಾಯಕನಾಗಬೇಕೆಂಬ ಕನಸು ಹೊತ್ತು, ಮಂಗಳೂರಿನಿಂದ ಮದ್ರಾಸಿನ ರೈಲೇರಿದರು!
ಅಲ್ಲಿ ಎವಿಎಂ ಚೆಟ್ಟಿಯಾರ್‌ರ 'ಸರಸ್ವತಿ ಸ್ಟೋರ್ಸ್‌'ನಲ್ಲಿ ಕೆಲಸ. ಟಿ.ಜಿ. ಲಿಂಗಪ್ಪ, ವಿಜಯ-ಭಾಸ್ಕರ್, ಎಂ. ರಂಗರಾವ್, ರಾಜನ್-ನಾಗೇಂದ್ರ, ಚಿ. ಉದಯಶಂಕರ್‌ರಂಥ ಖ್ಯಾತ ಸಂಗೀತ ನಿರ್ದೇಶಕರ, ಚಿತ್ರ ಸಾಹಿತಿಗಳ, ಗೀತರಚನೆಕಾರರ, ಹಾಡುಗಾರರ ಸ್ನೇಹ ಸಂಪಾದನೆ. ಇದರಿಂದ ಹಿನ್ನೆಲೆ ಗಾಯಕನಾಗಲೇಬೇಕೆಂಬ ಅವರ ಆಸೆ ಮತ್ತಷ್ಟೂ ಗಟ್ಟಿ.
ಅಷ್ಟರಲ್ಲಾಗಲೇ ಮಹೇಶ್ ಅನೇಕ ಕನ್ನಡ, ಹಿಂದಿ, ತುಳು ಚಿತ್ರಗಳಿಗೆ ಹಿನ್ನೆಲೆ ಗಾಯಕರಾಗಿದ್ದರು. ಇನ್ನೇನು ಕನಸು ನನಸಾಗುತ್ತಿದೆ ಎಂಬ ಖುಷಿಯಲ್ಲಿರುವಾಗ ಹಠಾತ್ತನೆ ಹಿನ್ನೆಲೆ ಗಾಯನಕ್ಕೆ ಬ್ರೇಕ್ ಬಿತ್ತು. ಇದು ರೆಕಾರ್ಡಿಂಗ್ ಸಂಸ್ಥೆಯ ಹುಟ್ಟಿಗೆ ಕಾರಣವಾಯಿತು.

'ಸಂಗೀತಾ'ದ ಹುಟ್ಟು
ಮಹೇಶ್ 'ಸಂಗೀತಾ' ಸಂಸ್ಥೆ ಆರಂಭಿಸುವುದಕ್ಕೂ ಮೊದಲು ಡಾ. ರಾಜ್‌ಕುಮಾರ್ ದಂಪತಿ ಬೆಂಬಲ ದೊರೆಯುವುದಾದರೆ ಮಾತ್ರ ನನ್ನ ಪ್ರಯತ್ನಕ್ಕೆ ಕೈಹಾಕುವುದಾಗಿ ಚಿ. ಉದಯಶಂಕರ್‌ರಲ್ಲಿ ಹೇಳಿದ್ದರು. ಅಣ್ಣಾವ್ರು ಹಾಗೂ ಪಾರ್ವತಮ್ಮ ರಾಜ್‌ಕುಮಾರ್‌ರ ಬೆಂಬಲದ ಆಶ್ವಾಸನೆ ದೊರಕಿದ ನಂತರ 1980ರ ಮಾರ್ಚ್‌ನಲ್ಲಿ ಅಣ್ಣಾವ್ರ 'ರಾಘವೇಂದ್ರ ಭಕ್ತಿಗೀತೆ' ರೆಕಾರ್ಡ್ ಮಾಡುವುದರ ಮೂಲಕ 'ಸಂಗೀತಾ' ಆರಂಭಿಸಿದರು. ಆರಂಭದಲ್ಲಿ ರಾಜ್‌ಕುಮಾರ್, ಭದ್ರಗಿರಿ ಅಚ್ಯುತದಾಸ, ಎಸ್. ಜಾನಕಿ, ಬಿ.ಕೆ. ಸುಮಿತ್ರಾ ಸೇರಿದಂತೆ ಖ್ಯಾತ ಗಾಯಕರು ಹಾಡಿದ 13 ಧ್ವನಿಮುದ್ರಿಕೆಗಳು ಸಂಸ್ಥೆಗೆ ಭದ್ರ ಬುನಾದಿ ಹಾಕಿದವು. ಚಿ. ಉದಯಶಂಕರ್, ವಿಜಯ ನಾರಸಿಂಹ ಸೇರಿದಂತೆ ಆ ಕಾಲದ ಖ್ಯಾತ ಗೀತರಚನೆಕಾರರು 'ಸಂಗೀತಾ'ಗೆ ನೂರಾರು ಭಕ್ತಿಗೀತೆಗಳನ್ನು ಬರೆದುಕೊಟ್ಟಿದ್ದಾರೆ.
ಸುಗಮಸಂಗೀತದ ದಿಕ್ಕುಗಳನ್ನು ವಿಸ್ತರಿಸುತ್ತಾ ಹೋದರು ಮಹೇಶ್. ನಾಡಿನ ಪ್ರಮುಖ ಕವಿಗಳ ಎಲ್ಲ ಗೀತೆಗಳೂ ಕ್ಯಾಸೆಟ್ಟಿನಲ್ಲಿ ಗೂಡು ಕಟ್ಟಿದವು. ಹಿಂದೂಸ್ತಾನಿ, ಕರ್ನಾಟಕ ಶಾಸ್ತ್ರೀಯ ಸಂಗೀತಗಾರರ,  ಹೊಸ ಪ್ರತಿಭೆಗಳ ನೂರಾರು ಧ್ವನಿಸುರುಳಿಗಳು 'ಸಂಗೀತಾ'ದಿಂದ ಬಿಡುಗಡೆಯಾದವು.

ಉತ್ಕೃಷ್ಟ ಗುಣಮಟ್ಟದ ಕ್ಯಾಸೆಟ್
'ಸಂಗೀತಾ'ದಲ್ಲಿ ಜೊಳ್ಳು ಸಾಹಿತ್ಯ ನುಸುಳಲು ಮಹೇಶ್ ಬಿಟ್ಟಿಲ್ಲ. ಸಂಸ್ಥೆಯ ಪ್ರಸಾರ, ಪ್ರಚಾರ ಹೆಚ್ಚಾದಂತೆ ಕರ್ನಾಟಕ, ಆಂಧ್ರ, ತಮಿಳುನಾಡಿನ ಹೆಸರಾಂತ ಸಂಗೀತಗಾರರೂ ಬಂದು ಸಂಗೀತಾದಲ್ಲಿ ತಮ್ಮ ಧ್ವನಿಮುದ್ರಿಸಿದರು. 'ಸಂಗೀತಾ'ದಲ್ಲಿ ತಮ್ಮ ಧ್ವನಿ ಇರುವುದೇ ಕಲಾವಿದರಿಗೆ ಹೆಮ್ಮೆಯ ವಿಷಯವಾಯಿತು. ಸಂಗೀತಾ ಮುಂದೆ ಕಾಂಪ್ಯಾಕ್ಟ್ ಸಿ.ಡಿ.ಗಳನ್ನೂ ಮಾರುಕಟ್ಟೆಗೆ ತಂದಿತು. ಭಾವಗೀತೆ, ನಾಡಗೀತೆ, ತತ್ವಪದ, ಜನಪದ ಗೀತೆ, ಭಕ್ತಿಗೀತೆ, ಕೀರ್ತನೆ, ತಾಳಮದ್ದಲೆ, ದಾಸರಪದ, ವ್ಯಕ್ತಿ, ವಿಷಯ, ವಿಚಾರಗಳ ವೈವಿಧ್ಯಮಯ ಕ್ಯಾಸೆಟ್ಟುಗಳು 'ಸಂಗೀತಾ'ದ ಕ್ರೆಡಿಟ್ಟು ಹೆಚ್ಚಿಸಿದವು. ಇದುವರೆಗೆ ಸಂಸ್ಥೆ 4000ಕ್ಕೂ ಹೆಚ್ಚು ಧ್ವನಿಸುರುಳಿಗಳನ್ನು ಹೊರತಂದಿದೆ. ಬಾಲಮುರಳಿಕೃಷ್ಣರ 200ಕ್ಕೂ ಹೆಚ್ಚು ಧ್ವನಿಸುರುಳಿ ಹೊರತಂದ ಹೆಗ್ಗಳಿಕೆ. ಮಹೇಶ್‌ಗೆ ರಾಜ್ಯೋತ್ಸವ ಗೌರವ ಸಿಕ್ಕಿದೆ. ಇದು ಸುಗಮಸಂಗೀತದ ಪ್ರಸರಣಕ್ಕೆ ಸಂದ ಮೊಟ್ಟ ಮೊದಲ ಗೌರವವೂ ಹೌದು.
ತಮಿಳುನೆಲ ಮದ್ರಾಸ್‌ನಲ್ಲಿದ್ದುಕೊಂಡೇ ಕನ್ನಡ ಭಾಷಾ ಸಂಸ್ಕೃತಿಗೆ ದುಡಿದ, ದೂರದ ಶ್ರೀಲಂಕಾದಲ್ಲೂ ಕನ್ನಡ ಹಾಡುಗಳು ರಿಂಗಣಿಸುವಂತೆ ಮಾಡಿದ (ರೇಡಿಯೊ ಸಿಲೋನ್‌ನಲ್ಲಿ ಕನ್ನಡ ಚಿತ್ರಗೀತೆಗಳು ಪ್ರತಿ ದಿನ ಪ್ರಸಾರವಾಗುವಂತಾದುದು ಇವರ ಯತ್ನದಿಂದ) ಹೆಗ್ಗಳಿಕೆ ಮಹೇಶ್ ಅವರದು. ಮಹೇಶ್ ಅವರ ಗಾನಯಾನ ಹೀಗೆಯೇ ಸಾಗಲಿಟಿ



ಡಾ. ರಾಜ್ ದಂಪತಿ ಸ್ನೇಹ
ಮಹೇಶ್ 'ಸರಸ್ವತಿ ಸ್ಟೋರ್ಸ್‌'ನಲ್ಲಿದ್ದಾಗ ಉದಯಶಂಕರ್ ಮೂಲಕ ಅಣ್ಣಾವ್ರ ಸಂಪರ್ಕ ಸ್ನೇಹ. ಆ ಸ್ನೇಹ ಎಷ್ಟು ಗಾಢವಾಗಿತ್ತೆಂದರೆ ಮುಂದೆ ಅಣ್ಣಾವ್ರು ಮದ್ರಾಸಿಗೆ ಬಂದಾಗಲೆಲ್ಲ ಮಹೇಶ್‌ರ ಮನೆಯಲ್ಲಿ ಊಟ, ತಿಂಡಿ ಮಾಡಿಯೇ ಸ್ಟುಡಿಯೋಗೆ ಹೋಗುತ್ತಿದ್ದರು.



ಡೌನ್‌ಲೋಡ್ ಮಾಡ್ಕೊಳ್ಳಿ...



ಸಂಗೀತಾ ಸಂಸ್ಥೆ ಈಗ ಬೆಂಗಳೂರಿನಲ್ಲೂ ಶಾಖೆಯನ್ನು ಹೊಂದಿದೆ. ನಮಗೆ ಬೇಕಾದ ಸಂಗೀತಾದ ಹಾಡುಗಳನ್ನು sangeethamusic.com ಮೂಲಕ ಡೌನ್‌ಲೋಡ್ ಮಾಡಿಕೊಳ್ಳಬಹುದು. ಮಹೇಶ್ ಸಂಪರ್ಕ ಸಂಖ್ಯೆ, 8884408558.

-ಶಶಿರೇಖಾ ಹೆಗಡೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.