ಇಗೋಳಿ ನಾಟಕ!
ಜನಮಾನಸದಿಂದ ದೂರವಾಗುತ್ತಿದೆ ಎನ್ನುವಾಗಲೇ ಹೊಸ ಹುಟ್ಟು ಪಡೆಯುವುದು ನಾಟಕರಂಗದ ಗುಣ. ಸಾಣೆಹಳ್ಳಿ ಶಿವಸಂಚಾರ,..

ಜನಮಾನಸದಿಂದ ದೂರವಾಗುತ್ತಿದೆ ಎನ್ನುವಾಗಲೇ ಹೊಸ ಹುಟ್ಟು ಪಡೆಯುವುದು ನಾಟಕರಂಗದ ಗುಣ. ಸಾಣೆಹಳ್ಳಿ ಶಿವಸಂಚಾರ, ಸಾಗರದ ನೀನಾಸಂ, ಬೆಂಗಳೂರಿನ ಹವ್ಯಾಸಿ ತಂಡಗಳು, ಮಂಚಿಕೇರಿಯ ರಾಜರಾಜೇಶ್ವರಿ ರಂಗ ಬಳಗಗಳು ಹೀಗೆ ಹೊಸತನ ಅಳವಡಿಸಿಕೊಂಡು ಭರವಸೆ ಮೂಡಿಸುತ್ತಿವೆ. ಈ ಸಾಲಿನಲ್ಲಿ ಗೋಳಿಯ ಸಿದ್ಧಿವಿನಾಯಕ ಹವ್ಯಾಸಿ ನಾಟ್ಯ ಕಲಾ ಸಂಘವೂ ಒಂದು.
ಒಂದಲ್ಲ ಎರಡಲ್ಲ ಕಳೆದ 56 ವರ್ಷಗಳಿಂದ ಸಿದ್ಧಿ ವಿನಾಯಕ ಸಂಘ ರಂಗಾಸಕ್ತರಿಗೆ ರಸದೌತಣ ಉಣ ಬಡಿಸುತ್ತಿದೆ. ಶಿರಸಿಯಿಂದ 12 ಕಿ.ಮೀ. ದೂರದಲ್ಲಿರುವ ಗೋಳಿ ಗ್ರಾಮ ಸಿದ್ಧಿವಿನಾಯಕ ದೇವಾಲಯದಿಂದ ಹೆಸರುವಾಸಿ. ಹಾಗೇ ನಾಟಕ ಕಲೆಯಿಂದಲೂ ಗೋಳಿ ತನ್ನದೇ ಛಾಪು ಮೂಡಿಸಿದೆ.
ಸಾಮಾಜಿಕ ನಾಟಕದ ಜತೆಗೆ ಪೌರಾಣಿಕ ನಾಟಕಗಳನ್ನ್ನು ಯಶಸ್ವಿಯಾಗಿ ರಂಗದ ಮೇಲೆ ತಂದಿರುವ ಹೆಗ್ಗಳಿಕೆ ಗೋಳಿಯ ಸಿದ್ಧಿವಿನಾಯಕ ನಾಟಕ ಸಂಘದ್ದು. 'ಚಂದ್ರಕಾಂತ ಬಿ.ಎ.' ಎನ್ನ್ನುವ ಸಾಮಾಜಿಕ ನಾಟಕ ಜಿಲ್ಲೆಯ ಹೊರಗಡೆಯೂ ಅಭಿನಯಿಸಲ್ಪಟ್ಟು ಸಾರ್ವಜನಿಕರ ಮೆಚ್ಚುಗೆ ಗಳಿಸಿದೆ. ಇತ್ತೀಚಿನ ವರ್ಷಗಳಲ್ಲಿ ಎರಡು ವರ್ಷಕ್ಕೊಮ್ಮೆ ಎನ್ನ್ನುವಂತೆ ಪೌರಾಣಿಕ ನಾಟಕಗಳನ್ನ್ನು ಯಶಸ್ವಿಯಾಗಿ ರಂಗದ ಮೇಲೆ ತರಲಾಗುತ್ತಿದೆ. ಉಷಾ ಸ್ವಯಂವರ, ಕುರುಕ್ಷೇತ್ರ, ಶ್ರೀಕೃಷ್ಣ ಗಾರುಡಿ, ಚವತಿ ಚಂದ್ರ, ಕರ್ಣ, ಪಾಂಡವಾಶ್ವಮೇಧ, ಗಣೇಶ ಮಹಿಮೆ ಮುಂತಾದ ಹಲವಾರು ಕೃತಿಗಳನ್ನು ಪ್ರದರ್ಶಿಸಿ ಜನರಿಂದ ಸೈ ಎನ್ನಿಸಿಕೊಂಡಿದೆ.
ರಂಗಾಸಕ್ತರಾಗಿದ್ದ ಮಾಧವರಾಯರು ಗೋಳಿಯಲ್ಲಿ ಸಿದ್ಧಿವಿನಾಯಕ ನಾಟ್ಯಕಲಾ ಸಂಘಕ್ಕೆ ಚಾಲನೆ ನೀಡಿದವರು. ಸಾಮಾಜಿಕ ನಾಟಕಗಳ ನಿರ್ದೇಶನದಲ್ಲಿ ತುಡುಗುಣಿಯ ಸತ್ಯನಾರಾಯಣ ಭಟ್ಟ, ಕೆಳಗಿನ ಹಲಸಿಗಿಯ ರಾಮಕೃಷ್ಣ ಭಟ್ಟ, ತುಂಬೆಮನೆಯ ಶಾಂತಣ್ಣ ಅಗ್ರಗಣ್ಯರಾಗಿದ್ದರು. ಪೌರಾಣಿಕ ನಾಟಕ ನಿರ್ದೇಶನದಲ್ಲಿ ರಾಮಚಂದ್ರ ಹೆಗಡೆ ಹಾರೂಗಾರ, ಸುಬ್ರಾಯ ಭಟ್ಟ ಹೊಸ್ಮನೆ, ಶಂಕರನಾರಾಯಣ ಹಾರೂಗಾರ, ಸುಬ್ರಾಯ ಆಚಾರಿ ಮಾಸ್ತರ್, ಎಂ. ಎಸ್. ಹೆಗಡೆ ಮುತ್ಮುರ್ಡು ಪ್ರಮುಖರು. ಗ್ರಾಮೀಣ ಪ್ರದೇಶದಲ್ಲಿ ಪೌರಾಣಿಕ ನಾಟಕವಾಡಿ ಸೈ ಎನ್ನಿಸಿಕೊಳ್ಳುವಷ್ಟರ ಮಟ್ಟಿಗೆ ಗೋಳಿ ನಾಟ್ಯಕಲಾ ಸಂಘ ಪ್ರಬುದ್ಧತೆ ಮೆರೆಯುತ್ತಿದೆ. ಪ್ರತಿಸಲ ನಾಟಕ ಆಯೋಜಿಸಿದಾಗಲೂ ಜನಜಂಗುಳಿ. ಕಲಾಸಕ್ತರ ಬೇಡಿಕೆಯ ಮೇರೆಗೆ ಹೆಚ್ಚು ಪ್ರದರ್ಶನ ಆಡಿದ್ದೂ ಉಂಟು. ಇದು ಗೋಳಿಯ ಸುತ್ತಮುತ್ತಲಿನ ಊರಿನವರ ಕಲಾಸಕ್ತಿಗೆ ಸಾಕ್ಷಿಯಾಗಿದೆ.
ಭೂಕೈಲಾಸ
ಇದೀಗ ಗೋಳಿ ಗ್ರಾಮ 'ಭೂ ಕೈಲಾಸ ನಾಟಕ' ಪ್ರದರ್ಶನಕ್ಕೆ ಸಿದ್ಧಗೊಳ್ಳುತ್ತಿದೆ. ಮೇ 6ರಿಂದ 12ರವರೆಗೆ ಪ್ರತಿದಿನ ರಾತ್ರಿ ನಾಟಕ ಪ್ರದರ್ಶನಗೊಳ್ಳಲಿದೆ. ಕಳೆದ 45 ದಿನಗಳಿಂದ ನಾಟಕದ ತಯಾರಿ ನಡೆಯುತ್ತಿದೆ. ಸ್ಥಳೀಯರೇ ಕಲಾವಿದರು. ಹಿಮ್ಮೇಳನದ ಸಂಗೀತವೂ ಸ್ಥಳೀಯರದ್ದಾಗಿದೆ. ನಾಟಕಕ್ಕೆ ಅಗತ್ಯ ಪರಿಕರ ಸಿದ್ಧಿವಿನಾಯಕ ದೇವಾಲಯದಲ್ಲೇ ತಯಾರಿಸಲಾಗುತ್ತಿದೆ. ಪ್ರತಿಸಲವೂ ಹೊಸತನ ಮೆರೆಯುವ ನಾಟ್ಯಕಲಾ ಸಂಘ ಈ ವರ್ಷದ ನಾಟಕದಲ್ಲಿ ಪುಷ್ಪಕ ವಿಮಾನದಲ್ಲಿ ಕುಬೇರನ ಆಗಮನ, ಸಮುದ್ರ ತೀರ, ಸಮುದ್ರದಲ್ಲಿ ಮರಳುಲಿಂಗ ಮುಳುಗುವ ದೃಶ್ಯ, ಉದ್ಯಾನವನ ಸೇರಿದಂತೆ ಹಲವಾರು ವಿಶೇಷತ್ನೆ ತಂದಿದೆ.
ಗೋಳಿ ದೇವಾಲಯ ಸಾಕಷ್ಟು ಬೆಳೆದಿದೆ. ಗ್ರಾಮಸ್ಥರ ಒಗ್ಗಟ್ಟು, ಹಳೆಯ ಸಂಪ್ರದಾಯ, ಕಲಾಸಕ್ತಿ, ಸ್ಪಷ್ಟ ಭಾಷೆ ಈ ಮುಂತಾದವುಗಳಿಗಾಗಿ ನಾಟಕ ಪ್ರದರ್ಶನಕ್ಕೆ ಮುಂದಾಗಿದ್ದೇವೆ. ಸುತ್ತಮುತ್ತಲಿನ ನೂರಾರು ಗ್ರಾಮಗಳ ಸ್ವಯಂ ಸೇವಕರು ಸೇವಾ ಮನೋಭಾವದಿಂದ ದುಡಿಯುತ್ತಿದ್ದಾರೆ.
- ವಿ. ಆರ್. ಭಟ್ಟ ಠೊಣ್ಣೆಮನೆ
ಅಧ್ಯಕ್ಷರು, ಸಿದ್ಧಿವಿನಾಯಕ ದೇವಾಲಯ, ಗೋಳಿ
- ವಿಶ್ವಾಮಿತ್ರ ಹೆಗಡೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


