ಬೈಟುಕಾಫಿ

ತರಕಾರಿ ಹಿರಿಯ ಪ್ರಾಥಮಿಕ ಶಾಲೆ!

Published On :

ಶಾಲಾ ವಿದ್ಯಾರ್ಥಿಗಳಿಗೆ ಸರ್ಕಾರ ಬಿಸಿಯೂಟಕ್ಕಾಗಿ ಅಕ್ಕಿಯ ಜೊತೆಗೆ ಬೇಳೆ ಕಾಳನ್ನು ನೀಡುತ್ತಿದೆ. ಮಕ್ಕಳಿಗೆ ಎಲ್ಲಾ ದಿನವೂ ಕೇವಲ ಬೇಳೆ ನೀಡಿದರೆ ಅವರಿಗೆ ಊಟ ರುಚಿಸುವುದಾದರೂ ಹೇಗೆ? ಜೊತೆಗೆ ಸಾಂಬಾರಿನಲ್ಲಿ ಪೌಷ್ಟಿಕಾಂಶ ಬೇಡವೇ? ಎಂಬ ಹಲವು ಮಂದಿಯ ಪ್ರಶ್ನೆಗೆ ಈ ಶಾಲೆಯಲ್ಲಿ ಉತ್ತರವಿದೆ. ವಿಭಿನ್ನ ಬಗೆಯ ತರಕಾರಿಗಳನ್ನು ಶಾಲಾ ಆವರಣದಲ್ಲಿ ಬೆಳೆಸಿ ಅದನ್ನು ಮಕ್ಕಳಿಗಾಗಿ ಬಳಸುವ ಪುತ್ತೂರು ತಾಲೂಕಿನ ಕುಂಬ್ರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹತ್ತೂರಿನ ಶಾಲೆಗಳಿಗೆ ಮಾದರಿ.
ಬಹುತೇಕ ಶಾಲೆಗಳಲ್ಲಿ ಬಿಸಿಯೂಟಕ್ಕೆ ಬೇಳೆ ಸಾರು ಮಾತ್ರವಿದ್ದರೆ, ಕುಂಬ್ರ ಸರ್ಕಾರಿ ಶಾಲೆಯಲ್ಲಿ ಬೇಳೆ ಕಾಳಿನ ಜೊತೆಗೆ ಬಸಳೆ, ಹರಿವೆ, ಸೌತೆಕಾಯಿ, ಬೆಂಡೆಕಾಯಿ, ಚೀನಿಕಾಯಿ, ಬಾಳೆಕಾಯಿ, ಸಾಂಬಾರು ಸೊಪ್ಪು, ಕೆಸುವಿನ ಗೆಡ್ಡೆ ಹೀಗೆ ವಿಧವಿಧ ತರಕಾರಿಗಳ ಸಾಂಬಾರು ಸಿಗುತ್ತದೆ.  ಕುಂಬ್ರ ಶಾಲೆಯಲ್ಲಿ 250ಕ್ಕೂ ಅಧಿಕ ಮಕ್ಕಳು ಕಲಿಯುತ್ತಿದ್ದಾರೆ. ಶಾಲೆಗೆ 2.50 ಎಕ್ರೆ ಜಮೀನಿದೆ. ಈ ಜಾಗದಲ್ಲಿ ಶಾಲಾ ಶಿಕ್ಷಕರು ಮತ್ತು ಮಕ್ಕಳು ತರಕಾರಿ ತೋಟ ನಿರ್ಮಿಸಿದ್ದಾರೆ. ತಾವೇ ಬೆಳೆಸಿದ ತರಕಾರಿಯನ್ನು ಇಲ್ಲಿ ಸಾಂಬಾರಿಗಾಗಿ ಬಳಸುತ್ತಿದ್ದಾರೆ.
ತೋಟವನ್ನು ವಿದ್ಯಾರ್ಥಿಗಳೇ ನಿರ್ವಹಿಸುತ್ತಾರೆ. ಆ ಮೂಲಕ ಮಕ್ಕಳಿಗೆ ಸ್ವಾವಲಂಬನೆ, ಕೃಷಿ, ಪರಿಸರದ ಪಾಠ. ಶಾಲೆಗೆ ಬೇಕಾದಷ್ಟು ತರಕಾರಿಯನ್ನು ಈ ತೋಟದಲ್ಲಿ ಬೆಳೆಸಲಾಗುತ್ತಿದೆ. ಆವರಣದ ಸುತ್ತ ತೆಂಗಿನ ಮರಗಳಿದ್ದು ಇಲ್ಲಿ ಬೆಳೆದ ತೆಂಗಿನ ಕಾಯಿಯೂ ಬಳಕೆಯಾಗುತ್ತದೆ.
ಯಾವುದೇ ರಾಸಾಯನಿಕ ಗೊಬ್ಬರವನ್ನು ತೋಟಕ್ಕೆ ಬಳಸುತ್ತಿಲ್ಲ. ತರಗೆಲೆ ಸೊಪ್ಪುಗಳು, ಸೆಗಣಿ ಹಾಗೂ ತೊಳೆದ ನೀರು ಗೊಬ್ಬರವಾಗಿ ಬಳಕೆಯಾಗುತ್ತದೆ. ಇಲ್ಲಿನ ಶಿಕ್ಷಕ ಬಾಲಕೃಷ್ಣರ ಮುತುವರ್ಜಿ, ಇತರ ಶಿಕ್ಷಕರ ಮತ್ತು ಎಸ್‌ಡಿಎಂಸಿ ಸಹಕಾರದಿಂದ ಶಾಲಾ ಆವರಣ ಹಸಿರು ತರಕಾರಿಗಳೊಂದಿಗೆ ಕಂಗೊಳಿಸುತ್ತಿದೆ.

= ಸಂಶುದ್ದೀನ್ ಸಂಪ್ಯ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.