ನಟ್ಸ್ ಬಳಕೆಯಲ್ಲೂ ಇರಲಿ ಸಮತೋಲನ

ನೀವು ಬೀಜ (ನಟ್ಸ್ ಕೊಳ್ಳಲು ಅಂಗಡಿಗೆ ಹೋದಾಗ ಯಾವುದೇ ಒಂದು ರೀತಿಯ ನಟ್ಸ್ ಆಯ್ದುಕೊಳ್ಳಬೇಡಿ. ಅಥವಾ ರುಚಿ ಎಂದುಕೊಂಡು ಒಂದೇಬಗೆಯ ಬೀಜಗಳನ್ನು ಅತಿಯಾಗಿ ಸೇವಿಸಬೇಡಿ. ಹಾಗೆ ಮಾಡಬಾರದು ಅಂತಲ್ಲ, ವೆರೈಟಿ ಇದ್ದಷ್ಟೂ ಮೆದುಳಿನ ಆರೋಗ್ಯಕ್ಕೆ ಒಳ್ಳೆಯದು. ಆಕ್ರೋಟು, ಗೋಡಂಬಿ, ಬಾದಾಮಿ, ಆಗಸೆ, ಶೇಂಗಾ, ಸೂರ್ಯಕಾಂತಿ, ಕುಂಬಳಕಾಯಿ... ವೈವಿಧ್ಯ ಇದ್ದರೆ ನಾಲಿಗೆಗೂ ರುಚಿ, ಬೌದ್ಧಿಕ ಸಾಮರ್ಥ್ಯ ಹೆಚ್ಚಿಸಿಕೊಳ್ಳಲೂ ಸಹಕಾರಿ. ಹಲವು ಬಗೆಯ ಡ್ರೈಫ್ರೂಟ್ಗಳನ್ನು ಒಳಗೊಂಡ ಪೊಟ್ಟಣಗಳೇ ಈಗ ಮಾರುಕಟ್ಟೆಯಲ್ಲಿ ಸಿಗುತ್ತವೆ. ಬೀಜಗಳಲ್ಲಿ ಟ್ರೈಪ್ಟೊಫಾನ್ ಎನ್ನುವ ಅಮಿನೊ ಆಮ್ಲ ಇರುತ್ತದೆ. ಅದನ್ನು ಮೆದುಳು ಸೆರೊಟಿನಿನ್ ಆಗಿ ಪರಿವರ್ತಿಸಿಕೊಳ್ಳುತ್ತದೆ. ಖಿನ್ನತೆ, ಒತ್ತಡ, ನಿದ್ರಾಹೀನತೆ ಇತ್ಯಾದಿ ಸಮಸ್ಯೆಗಳಿಂದ ನಮ್ಮನ್ನು ಪಾರು ಮಾಡುವುದು ಮಾತ್ರವಲ್ಲ, ನಮ್ಮ ನೆನಪಿನ ಶಕ್ತಿ ಹೆಚ್ಚಿಸುತ್ತವೆ. ತ್ವರಿತವಾಗಿ ಯೋಚಿಸುವ ಸಾಮರ್ಥ್ಯ ನೀಡುತ್ತವೆ. ಯಾವುದೇ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸುವ ಶಕ್ತಿಯನ್ನು ನೀಡುತ್ತವೆ. ಸಂಕ್ಷಿಪ್ತವಾಗಿ ಹೇಳಬೇಕು ಅಂತಾದರೆ ಮಾನಸಿಕ ಅನಾರೋಗ್ಯಕ್ಕೆ ನಾವು ಒಳಗಾಗದಂತೆ ನೋಡಿಕೊಳ್ಳುತ್ತವೆ. ಇವು ನೈಸರ್ಗಿಕ ಪೇನ್ಕಿಲ್ಲರ್ಗಳು ಸಹ. ಅಡ್ರೆನಾಲಿನ್, ನೊರಾಡ್ರೆನಾಲಿನ್ ಇತ್ಯಾದಿ ರಾಸಾಯನಿಕಗಳ ಸ್ರವಿಕೆಗೆ ಉತ್ತೇಜನ ನೀಡುವ ಮೂಲಕ ಮೂಡ್ ಸುಸ್ಥಿತಿಯಲ್ಲಿಡುವ ಕೆಲಸವನ್ನೂ ಮಾಡುತ್ತವೆ. ಒಮ್ಮೊಮ್ಮೆ ಜೀರ್ಣಾಂಗಕ್ಕೆ ಸಂಬಂಧಿಸಿದ ತೊಂದರೆಗಳು ಉಂಟಾದಾಗಲೂ ಮಾನಸಿಕವಾಗಿ ನಾವು ಯಾತನೆ ಅನುಭವಿಸುವುದುಂಟು. ಆ ರೀತಿಯ ತೊಂದರೆಗಳು ಬಾರದಂತೆಯೂ ಬೀಜಗಳು ನಮ್ಮನ್ನು ಕಾಪಾಡುತ್ತವೆ.
ಕೆಲವು ಬೀಜಗಳು ಹೆಚ್ಚುವರಿ ಪೌಷ್ಟಿಕಾಂಶಗಳನ್ನೂ ಹೊಂದಿರುತ್ತವೆ. ಉದಾಹರಣೆಗೆ ಗೋಡಂಬಿಯಲ್ಲಿ ಕ್ಯಾಲ್ಶಿಯಂ, ಬಾದಾಮಿಯಲ್ಲಿ ಫಿನ್ಯೂಲಾಲುನೈನ್, ಶೇಂಗಾದಲ್ಲಿ ಕೊಲೈನ್ ಇರುತ್ತವೆ. ಇವೆಲ್ಲವೂ ಒಂದೊಂದು ರೀತಿಯಲ್ಲಿ ಮೆದುಳಿನ ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತಿರುತ್ತವೆ. ಫಿನ್ಯೂಲಾಲುನೈನ್ ಮೆದುಳು ಮತ್ತು ನರವ್ಯೂಹದ ನಡುವಿನ ಕೊಂಡಿಯಾಗಿ ಕೆಲಸ ಮಾಡಿದರೆ, ಕೊಲೈನ್ ಮೆದುಳಿನ ಬೆಳವಣಿಗೆ, ಜ್ಞಾಪಕ ಶಕ್ತಿ ವೃದ್ಧಿಗೆ ಸಹಕಾರಿ. ಮೆದುಳು ಮಾತ್ರವಲ್ಲದೆ ನರವ್ಯೂಹ ಸರಿಯಾದ ರೀತಿಯಲ್ಲಿ ಕೆಲಸ ಮಾಡುವಂತೆಯೂ ಈ ರಾಸಾಯನಿಕಗಳು ನೋಡಿಕೊಳ್ಳುತ್ತವೆ. ಮೆದುಳಿನ ಕಾರ್ಯನಿರ್ವಹಣೆಗೆ ಅಡೆತಡೆಯಾಗುವ ಸಂಗತಿಗಳನ್ನು ಇವು ಪರಿಹರಿಸಿಕೊಳ್ಳುತ್ತವೆ. ಆಶ್ಚರ್ಯವಾಗಬಹುದು, ಪಾರ್ಕಿನ್ಸನ್ನಂಥ ಕಾಯಿಲೆ ನಿಯಂತ್ರಣಕ್ಕೂ ಕೆಲವು ಬೀಜಗಳು ಸಹಕಾರಿ, ನರವ್ಯೂಹ ಭಾಗಶಃ ನಿಷ್ಕ್ರಿಯಗೊಂಡಿರುವವರಲ್ಲಿಯೂ ಇವು ಅದ್ಭುತ ಪರಿಣಾಮ ಬೀರಬಲ್ಲವು ಎನ್ನುವುದು ತಜ್ಞರ ಅಭಿಪ್ರಾಯ.
-ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


