ಬೈಟುಕಾಫಿ

ಆರ್‌ಜೆ ಆರತಿ ಕುಲಕರ್ಣಿ

ಆರ್‌ಜೆ ಆರತಿ ಕುಲಕರ್ಣಿ
Published On :

ಪೂರ್ತಿ ಹೆಸರು ಆರತಿ ಕುಲಕರ್ಣಿ. ಟಿವಿ ಪರದೆ ಮೇಲೆ  ದೃಶ್ಯವಾಗಿ ಬಂದ್ರೆ ಆರತಿ. ರೇಡಿಯೋದಲ್ಲಿ ಶ್ರಾವ್ಯವಾಗಿ ಬಂದರೆ ಆರ್‌ಜೆ ಆರತಿ. ಫೇಸ್‌ಬುಕ್‌ನಲ್ಲಿ ಎಲ್ಲರ ಪಾಲಿನ 'ಗೆಳತಿ ಆರತಿ'! ಇದು  ಲಕ್ಷ್ಮಿ ಬಾರಮ್ಮ ಧಾರಾವಾಹಿಯ ಶ್ವೇತಾ ಪಾತ್ರಧಾರಿಯ  ಮೂರು  ಸಾಲಿನ ಪರಿಚಯ. ಬೆಳ್ಳಿತೆರೆಯ ಆರತಿಯೇ ಈಕೆಗೆ ಸ್ಫೂರ್ತಿ ಇರಬಹುದೇನೋ ಎಂಬಷ್ಟು,  ಕಂಗಳಲ್ಲೇ ನಟಿಸುವುದನ್ನು ಕರಗತ ಮಾಡಿಕೊಂಡಿರುವ ಆರತಿಗೆ ಆಕೆಯ ಕನಸುಗಳೆಲ್ಲ ಒಂದೊಂ ದಾಗಿ ನೆರವೇರುತ್ತಿರುವ ಸಂತಸ. ಆದರೆ ಈ ಕನಸುಗಳನ್ನೂ ಸಾಕಾರ ಮಾಡಿಕೊಳ್ಳುವಲ್ಲಿ ಆಕೆ ಪಟ್ಟಿರುವ ಶ್ರಮ ಹಾಗೂ ಎಡೆಬಿಡದ ಛಲ ಮಾತ್ರ ನಿಜಕ್ಕೂ ಪ್ರಶಂಸಾರ್ಹ.  ನೆಟ್ಟಿರುವ ಗುರಿಯನ್ನು ತಲುಪಲು  ತಾಳ್ಮೆ ಮತ್ತು ಸತತ ಪರಿಶ್ರಮ ಜೊತೆಗೆ, 'ಯಾವುದೇ ಕಾರಣಕ್ಕೂ ಮುಂದಿಟ್ಟ ಹೆಜ್ಜೆ ಹಿಂದಿಡೋ ಮಾತೇ ಇಲ್ಲ' ಎಂಬ ಆತ್ಮವಿಶ್ವಾಸ ಮುಖ್ಯ ಎಂಬುದು ಆರತಿಯಿಂದ ಪ್ರತಿ ಆಕಾಂಕ್ಷಿಯೂ ಕಲಿಯಬೇಕಿರೋ ಪಾಠ.

ಜಮಖಂಡಿ ಹುಡುಗಿ ನೀವು. ಬೆಂಗಳೂರಿಗೆ ಉದ್ಯೋಗ ಹುಡುಕ್ಕೊಂಡು ಬಂದ ನಿಮಗೆ ಬಣ್ಣದ ಗೀಳು ಅಂಟಿದ್ದು ಹೇಗೆ ?
ಬಣ್ಣದ ಗೀಳು ಇಲ್ಲದ ಮನುಷ್ಯನೇ ಇಲ್ಲ ಅನ್ನೋದು ನನ್ನ ಬಲವಾದ ಭಾವನೆ. ಪ್ರತಿಯೊಬ್ಬರಲ್ಲೂ ಒಬ್ಬ ನಟ ಇರ್ತಾರೆ ಅಥವಾ ಗೊತ್ತಿದ್ದೋ ಗೊತ್ತಿಲ್ಲದೆಯೋ ನಟನೆ ಮಾಡುತ್ತಲೇ ಇರುತ್ತಾರೆ. ಅವಕಾಶ ಸಿಕ್ಕರೆ ನಾನೂ ಯಾಕೆ ತೆರೆಮೇಲೆ ಕಾಣಿಸಬಾರದು ಅನ್ನೋದು ಎಲ್ಲರಿಗೂ ಇದ್ದೇ ಇರುತ್ತೆ. ಕೆಲವರು ಬಯಕೆಯನ್ನು ಸುಪ್ತವಾಗಿ ಇಟ್ಟುಕೊಳ್ಳುತ್ತಾರೆ. ನಾನು ಆ ಗೀಳನ್ನು ಸೀರಿಯಸ್ಸಾಗಿ ತಗೊಂಡೆ ಅಷ್ಟೇ.

ಹಾಗಾದ್ರೆ ನಟಿ ಆಗಬೇಕು ಅನ್ನೋದು ನಿಮ್ಮ ಗುರಿ ಆಗಿತ್ತಾ?
ಇಲ್ಲ. ನಾನು ನಟಿ ಆಗೋ ಬಗ್ಗೆ ಯೋಚಿಸಿರಲಿಲ್ಲ. ಆದರೆ ನಾನು ಬೆಂಗಳೂರಿಗೆ ಕಾಲಿಟ್ಟ ದಿನಗಳಲ್ಲಿ , ಆಗಷ್ಟೇ  ಎಫ್‌ಎಂ ರೇಡಿಯೋಗಳು ಹುಟ್ಟಿಕೊಂಡಿದ್ದವು. ಅದರಲ್ಲಿ ಆರ್‌ಜೆ ಗಳು ಪಟಪಟ ಮಾತನಾಡೋದನ್ನು ಕೇಳಿದಾಗ, ನನ್ನ ಕನ್ನಡವೂ ಚೆನ್ನಾಗಿದೆ, ದನಿಯೂ ಚೆನ್ನಾಗಿದೆ, ನಾನೂ ಇವರ ಥರ ಆರ್‌ಜೆ ಆಗಬೇಕು ಅಂತ ಅನಿಸಿಬಿಟ್ಟಿತು. ಅದನ್ನೇ ಗುರಿ ಎಂಬಂತೆ ಪರಿಗಣಿಸಿದೆ. ನನ್ನ ಆರ್ಕುಟ್ ಪ್ರೊಫೈಲಿನಲ್ಲೂ, ದೊಡ್ಡದಾಗಿ 'ಆರತಿ- ವಾಂಟ್ಸ್ ಟು ಬಿಕಂ ಆರ್‌ಜೆ' ಅಂತ ಬರೆದುಕೊಂಡಿದ್ದೆ. ಆ ನಿಟ್ಟಿನಲ್ಲಿ ನಾನು ಮಾಡಿದ ಪ್ರಯತ್ನ ಫಲ ಕೊಟ್ಟಿತು. ಎಫ್‌ಎಮ್ ರೇನ್‌ಬೋ ಕನ್ನಡ ಕಾಮನಬಿಲ್ಲು ನನಗೆ ಅವಕಾಶ ಒದಗಿಸಿತು. ಈಗ ನನ್ನದೇ ಆದ ಕೇಳುಗ ಮಿತ್ರರನ್ನು ಸೃಷ್ಟಿಸಿಕೊಂಡಿದ್ದೇನೆ.

ಧಾರಾವಾಹಿಗೆ  ಎಂಟ್ರಿ ಆಗಿದ್ದು  ಹೇಗೆ?
ಅದು ಆಕಸ್ಮಿಕ. ಖಾಸಗಿ ಉದ್ಯೋಗ ಮಾಡಿಕೊಂಡು ಬದಿಯಲ್ಲಿ ಆರ್‌ಜೆ ಆಗಿ ಮಾತನಾಡುತ್ತಿದ್ದಾಗ, ಒಮ್ಮೆ ಫೋಟೋ ಶೂಟ್ ಮಾಡಿಸಿದ್ದೆ. ನಟನೆಯ ಬಗ್ಗೆ ಒಲವಿದ್ದರೂ, ನಾನಾಗಿ ಅವಕಾಶ ಹುಡುಕಿ ಹೋಗಿರಲಿಲ್ಲ. ಅಚ್ಚರಿ ಎಂಬಂತೆ ಎಸ್ಸೆಸೆಲ್ಸಿ ನನ್ಮಕ್ಳು ಧಾರಾವಾಹಿಯಿಂದ ಕರೆ ಬಂದಾಗ ಇಲ್ಲ ಅನ್ನಲಿಲ್ಲ. ಆಗ ಕ್ಯಾಮರ ಎದುರಿಸಿದ್ದು, ನಟನೆಯೆಡೆಗೆ  ಗಂಭೀರವಾಗಿ ನೋಡುವಂತೆ ಮಾಡಿತು. ಪಾರ್ವತೀ ಪರಮೇಶ್ವರ, ಕುಲಗೌರವ ಮುಂತಾದ ಧಾರಾವಾಹಿಯಲ್ಲಿ ಕಾಣಿಸಿಕೊಂಡೆ.

ಬ್ರೇಕ್ ಕೊಟ್ಟಿದ್ದು ಯಾವ ಧಾರಾವಾಹಿ?
ಮಹಾನವಮಿ. ಮಹಾನವಮಿಯ ಕಾವೇರಿ ಪಾತ್ರ ನನ್ನನ್ನು ಜನಪ್ರಿಯಗೊಳಿಸಿತು. ಒರಿಜಿನಲ್ ಕಾವೇರಿ ಪಾತ್ರಕ್ಕೆ ರೀಪ್ಲೇಸ್ ಆದವಳು ನಾನು. ಒಪ್ಪುತ್ತಾರಾ ಜನ ಎಂಬ ಆತಂಕವಿತ್ತು. ನನ್ನದೇ ಹುಬ್ಬಳ್ಳಿ ಭಾಷೆ ನನಗೆ ಪಾತ್ರವನ್ನು ಗೆಲ್ಲಲು ಅನುಕೂಲ ಮಾಡಿಕೊಟ್ಟಿತು. ನಿರ್ದೇಶಕ ಕಲಾಗಂಗೋತ್ರಿ ಮಂಜು ನನ್ನನ್ನು ತಿದ್ದಿತೀಡಿ ನಟಿಯನ್ನಾಗಿ ಮಾಡಿದರು. ಆ ಪಾತ್ರದ ಯಶಸ್ಸಿನ  ಸಂಪೂರ್ಣ ಶ್ರೇಯಸ್ಸು ಅವರಿಗೇ ಸಲ್ಲಬೇಕು.

ಅಂಥ ಹಿಟ್ ಪಾತ್ರ ಮಾಡಿ ನಡುವೆ ವಿಶ್ರಾಂತಿ ತಗೊಂಡ ಕಾರಣ?
ಆಗ ನಾನು ಮಾಡಿದ್ದು ಗ್ಲಾಮರ್ ಇಲ್ಲದ ಪಾತ್ರ. ಹಾಗಂತ ಎಲ್ಲವೂ ಅದೇ ಥರದ ಪಾತ್ರ ಮಾಡಲಾಗುತ್ತದೆಯೇ?  ಹಾಗಾಗಿ ಕೊಂಚ ಬ್ರೇಕ್ ತಗೊಂಡು ಎಲ್ಲ ಥರದ ಪಾತ್ರಗಳಿಗೂ ಸೈ ಎನ್ನುವಂತೆ ತಯಾರಾಗಿ ಬಂದೆ. ಅದರ ಫಲವೇ ಸದ್ಯದ ಲಕ್ಷ್ಮೀ ಬಾರಮ್ಮ ಧಾರಾವಾಹಿಯ ಶ್ವೇತಾ ಪಾತ್ರ.

ಸಿನಿಮಾ ಆಸಕ್ತಿ ಇಲ್ಲವೇ?
ಸೂಕ್ತ ಪಾತ್ರ ಸಿಕ್ಕರೆ ಸಿನಿಮಾ ಕೂಡ ಇಷ್ಟವೇ. ಆಪ್ತರಕ್ಷಕ ಮತ್ತು ಮಿಸ್ಟರ್ ಪೇಂಟರ್ ಚಿತ್ರಗಳಲ್ಲಿ ನಟಿಸಿದೆ. ವಿಷ್ಣುವರ್ಧನ್‌ರ ಕೊನೆಯ ಚಿತ್ರದಲ್ಲಿ ನಾನೂ ಇದ್ದೆ ಎಂಬ  ಭಾವ ಅನನ್ಯ. ಅದನ್ನು ಬೇಸರವೋ ಸಂತಸವೋ ಹೇಳಲಾರೆ.

ನಟನೆಗೆ ಯಾರು ಸ್ಪೂರ್ತಿ ?
ನಮ್ಮ ಎಲ್ಲ ಹಿರಿಯ ನಟನಟಿಯರೂ ನನಗೆ ಸ್ಫೂರ್ತಿ ಮತ್ತು ಮಾದರಿ. ಸದ್ಯದಲ್ಲಿ ಕಿರುತೆರೆಯ ಅನುಭವಿ ನಟಿ ಚಂದ್ರಕಲಾ ನನಗೆ ತುಂಬಾ ಇಷ್ಟ. ಅವರೊಬ್ಬ ಪರಿಪೂರ್ಣ ಹಾಗೂ ಪ್ರಬುದ್ಧ ಕಲಾವಿದೆ. ಋತು ಮತ್ತು ಲಕ್ಷ್ಮಿ ಗೌಡ ಕೂಡ ನನ್ನಿಷ್ಟದ ನಟಿಯರು. ಋತು ಅವರ ವೃತ್ತಿಪರತೆ ನಂಗಿಷ್ಟ.

ನಟನೆ, ರೇಡಿಯೋ ಮಾತು ಇದಲ್ಲದೆ ನಿಮ್ಮಲ್ಲಿ ಇನ್ಯಾವ ಪ್ರತಿಭೆ ಅಡಗಿದೆ ?
ನಾನು ಚೆನ್ನಾಗಿ ಬರೆಯಬಲ್ಲೆ, ಪೇಂಟಿಂಗ್, ಮ್ಯೂಸಿಕ್ ಕೂಡ ಗೊತ್ತು.

= ನವಿಲ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.