ಬೈಟುಕಾಫಿ

ಯಕ್ಷಮಯ್ಯ

ಯಕ್ಷಮಯ್ಯ
Published On :

ಯಕ್ಷಗಾನವೆಂದರೆ ಕೇವಲ ಕಲೆಯೋ ಇಲ್ಲಾ ಮನರಂಜನೆಯೋ ಅಷ್ಟೇ ಅಲ್ಲ. ವಿಶಾಲ ಕಂಗಳಿಂದ ಒಳನೋಟ ಬೀರಿದರೆ ಅಲ್ಲಿ ಅನೇಕ ವಿಚಾರಗಳು ಮನೆ ಮಾಡಿರುತ್ತವೆ. ಹಿಮ್ಮೇಳ, ಮುಮ್ಮೇಳ, ನಾಟ್ಯ, ಪಠ್ಯ, ಅಭಿನಯ,ಪುರಾಣ, ಸಾಹಿತ್ಯ ಹೀಗೆ ಕೆದಕಿದಷ್ಟೂ ವಿಚಾರಗಳು ಅನಾವರಣಗೊಳ್ಳುತ್ತವೆ. ಅಧ್ಯಯನಕ್ಕೆ ಪ್ರೇರಣೆಯೂ ದೊರೆಯುತ್ತದೆ. ಯಕ್ಷಗಾನವನ್ನು ವ್ಯವಸ್ಥಿತವಾಗಿ ಆಯೋಜಿಸಿದಾಗ ಮಾತ್ರ ಇಂತಹ ಉದ್ದೇಶ ಈಡೇರಲು ಮತ್ತು ಅದರ ಪರಿಕಲ್ಪನೆ ಸಾಕಾರಗೊಳ್ಳಲು ಸಾಧ್ಯ. ಈ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಬೆಂಗಳೂರಿನ 'ಮೈಯ್ಯಾಸ್‌' ಯಕ್ಷಗಾನ ವೈಭವ.
ಹೊಟೇಲ್ ಉದ್ಯಮದಿಂದ ಹಿಡಿದು ಕ್ರಿಕೆಟ್‌ವರೆಗೂ ವಿಭಿನ್ನ ಅಭಿರುಚಿಗಳಿಗೆ ಮನೆಮಾತಾಗಿರುವ ಸದಾನಂದ ಮಯ್ಯ ಯಕ್ಷಗಾನ ಸಂಘಟಿಸುವಲ್ಲೂ ಎತ್ತಿದ ಕೈ. ಕಳೆದ ಐದು ವರ್ಷಗಳಿಂದ ವಿಭನ್ನ ಪರಿಕಲ್ಪನೆಯೊಂದಿಗೆ ಮೂಡಿಬರುತ್ತಿರುವ ಯಕ್ಷಗಾನ ವೈಭವವನ್ನು ಪ್ರೀತಿಸುವ ಪ್ರೇಕ್ಷಕ ಗಡಣವೇ ಬೆಂಗಳೂರಿನಲ್ಲಿ ಹುಟ್ಟಿಕೊಂಡಿದೆ ಎಂದಾಗ ಅದರ ಮಹತ್ವ ಅರಿವಿಗೆ ಬಾರದಿರದು. ಈ ಕಾರ್ಯಕ್ರಮದ ಯಶಸ್ಸಿನ ಹಿಂದೆ ಅವರ ಪತ್ನಿ ಮತ್ತು ಪುತ್ರ ಸುದರ್ಶನ ಮಯ್ಯ ಅವರ ಆಸಕ್ತಿಯೂ ಕೆಲಸ ಮಾಡಿದೆ.
2009ರ ಮೇ ತಿಂಗಳಲ್ಲಿ ಬೆಂಗಳೂರಿನ ಎಡಿಎ ರಂಗಮಂದಿರದಲ್ಲಿ ಪ್ರಥಮವಾಗಿ ಮಯ್ಯಾಸ್ ಯಕ್ಷಗಾನ ವೈಭವ ಕನ್ನಡ ಭಾಷೆ, ಸಾಹಿತ್ಯ, ಪದ್ಯ- ಗದ್ಯಗಳ ಸತ್ವ- ತತ್ವಗಳನ್ನು ತಿಳಿಸುವ ಸದುದ್ದೇಶದಿಂದ ಬಯಲಾಟ ಆಯೋಜಿಸಲ್ಪಟ್ಟಿತ್ತು. ನುರಿತ ಕಲಾವಿದರ ಕೂಡುವಿಕೆಯಲ್ಲಿ 6 ಪ್ರಸಂಗ ಪ್ರದರ್ಶಿಸಲಾಯಿತು. ತಾಂತ್ರಿಕ ಅಭಿಯಂತರ ಸುಧೀಂದ್ರ ಹೊಳ್ಳ ಸಂಯೋಜಿಸಿದ್ದರು. 'ಸಂಭಾಷಣಾ ವೈವಿಧ್ಯ' ಪ್ರಸಂಗಗಳು ಜನಮನಸೂರೆಗೊಂಡಿದ್ದವು.
ಈ ಯಕ್ಷರಥಯಾತ್ರೆ 2012ರಲ್ಲಿ 'ಯಕ್ಷ ಸಂಕ್ರಮಣ' ಹಾಗೂ 2013ರಲ್ಲಿ ಕಲ್ಯಾಣೋತ್ಸವ ಎಂಬ ಹೆಸರಿನಲ್ಲಿ ಯಕ್ಷಗಾನ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದವು. ಹತ್ತಾರು ಪೌರಾಣಿಕ ಆಖ್ಯಾನಗಳಲ್ಲಿ ನೂರಾರು ಕಲಾವಿದರು ಭಾಗವಹಿಸಿ ಪ್ರದರ್ಶನಗಳೆಲ್ಲ ಪ್ರಶಂಸೆಗೆ ಒಳಗಾದವು. ಈ ಸಂದರ್ಭ ವಿಚಾರ ಮಂಥನ ಗೋಷ್ಠಿಗಳು ವಿನೂತನವಾಗಿ ಸಂಯೋಜಿಸಲ್ಪಟ್ಟವು.
ಇದೀಗ ಯಕ್ಷಗಾನದ 'ಪಠ್ಯ' ಮತ್ತು 'ನಾಟ್ಯ'ಗಳಿಗೆ ಒತ್ತು ನೀಡಿ ಮಯ್ಯಾಸ್ ಯಕ್ಷಗಾನ ವೈಭವ 'ಪಠ್ಯ ಪ್ರಾಂಜಲ, ನಾಟ್ಯ ಶಾಂತಲ' ಕಾರ್ಯಕ್ರಮವನ್ನು ಮೇ 18ರಂದು ಬೆಂಗಳೂರಿನ ಜಯನಗರದ ಶ್ರೀ ಶಿವರಾತ್ರೀಶ್ವರ ಸೆಂಟರ್ ಸಭಾಂಗಣದಲ್ಲಿ ಸಂಯೋಜಿಸಿದೆ. ಮಾಗಧ ವಧೆ, ವೀರಮಣಿ ಕಾಳಗ, ವಿಶ್ವಾಮಿತ್ರ ಮೇನಕೆ ಪ್ರಸಂಗಗಳು ಯಜ್ಞ ಕಮಲ ವೇದಿಕೆಯಲ್ಲಿ ಅನಾವರಣಗೊಳ್ಳಲಿವೆ. 'ನೇಮ್ ಆ್ಯಂಡ್ ಫೇಮ್‌' ಈವಂಟ್‌ಗೆ ಮೈಯ್ಯಾಸ್ ಯಕ್ಷಗಾನ ಸಾಕ್ಷಿ.ಟಿ

- ಬಿ. ಜನಾರ್ದನ ಹಂದೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.