ಅಮರ ಪೂಜೆ
ಎಂತೆಂಥದೋ ವಿಚಿತ್ರ ನಂಬಿಕೆ ಹರಕೆಗಳನ್ನು ಕೇಳಿದ್ದೇವೆ. ಆದರೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲ್ಲೂಕಿನ...

ಎಂತೆಂಥದೋ ವಿಚಿತ್ರ ನಂಬಿಕೆ ಹರಕೆಗಳನ್ನು ಕೇಳಿದ್ದೇವೆ. ಆದರೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲ್ಲೂಕಿನ ಅಂಡಗಿ ಗ್ರಾಮದ ಕ್ಯಾದಿಗಿಕೊಪ್ಪದ ಆರಣ್ಯದಲ್ಲಿ ವನಸ್ತ್ರೀಯರು ಸೀರೆಯುಟ್ಟು, ರವಿಕೆ ತೊಟ್ಟು ಬಣ್ಣ ಬಣ್ಣದ ಬಳೆಯ ಕಿಣಿ ಕಿಣಿ ಸದ್ದಿನೊಂದಿಗೆ ಹಸಿರು ನಗೆ ಬೀರುತ್ತಾವೆ ಎಂದರೆ ನಂಬುತ್ತೀರಾ?
ಮರಗಳಿಗೆ ಸೀರೆ ಉಡಿಸುವುದು, ಪೂಜೆ ಮಾಡುವುದು, ಹರಕೆ ಹೊರುವುದು ನಮ್ಮಲ್ಲಿ ಸಾಮಾನ್ಯ. ಇಂಥ ಭಾಗ್ಯ ಕೆಲವೇ ಜಾತಿಯ ಮರ ಗಿಡಗಳಿಗೆ ಮಾತ್ರ. ಆದರೆ ಇಲ್ಲಿ ಕಾಡಿನಲ್ಲಿರುವ ನೂರಾರು ಮರ ಗಿಡಗಳಿಗೆ ಇಂಥ ಭಾಗ್ಯ ದೊರೆತಿದೆ.
ಇದರ ಹಿಂದೆ ಒಂದು ಕಥೆಯಿದೆ. ಇಲ್ಲಿ ಒಂದು ಗುರುಮಠವಿದೆ. 2000ನೇ ಇಸವಿಯಲ್ಲಿ ಕ್ಯಾದಿಕೊಪ್ಪ ಗ್ರಾಮದ ಭಕ್ತರ ಆಶಯದಂತೆ ಶ್ರೀ ಸದ್ಗುರು ಅವಧೂತ ಕಲ್ಮೇಶ್ವರ ಸ್ವಾಮಿಗಳು ಇಲ್ಲಿ ಮಠ ಕಟ್ಟಲು ಭೂಮಿ ಪೂಜೆ ನೆರವೇರಿಸಿದರು. ಪ್ರಕೃತಿ ಮರ ಗಿಡಗಳನ್ನು ಅಪಾರವಾಗಿ ಪ್ರೀತಿಸುತ್ತಿದ್ದ ಸ್ವಾಮೀಜಿ ಮರಗಿಡಗಳನ್ನು ಪೂಜಿಸುತ್ತಾ ಅವುಗಳ ಮಹತ್ವವನ್ನು ಭಕ್ತರಿಗೆ ತಿಳಿಸುತ್ತಾ, ಅವುಗಳಲ್ಲಿ ದೇವತೆಯ ಸ್ವರೂಪವನ್ನು ಕಂಡರು. ಪ್ರತಿ ಮರ ಗಿಡದಲ್ಲಿ ಒಂದೊಂದು ದೇವತೆಗಳು ವಾಸವಾಗಿವೆ, ಅವುಗಳನ್ನು ಪೂಜ್ಯ ಭಾವನೆಯಿಂದ ಕಂಡಾಗ ಅವು ನಮ್ಮನ್ನು ರಕ್ಷಿಸುತ್ತವೆ ಎಂದರು. ಅಂದಿನಿಂದ ಅಲ್ಲಿಗೆ ಬರುವ ಭಕ್ತರು ಮರ ಗಿಡಗಳನ್ನು ಪೂಜಿಸಲು ಪ್ರಾರಂಭಿಸಿದರು.
ಸ್ವಾಮೀಜಿ ಐಕ್ಯರಾಗಿ ಐದಾರು ವರ್ಷ ಕಳೆದಿವೆ. ಆದರೆ ಅವರು ಮರಗಿಡಗಳನ್ನು ರಕ್ಷಿಸಲು ಕೈಗೊಂಡ, ಸೀರೆ ತೊಡಿಸುವ ಸಂಪ್ರದಾಯ ಈಗಲೂ ಮುಂದುವರೆದಿದೆ. ಇಲ್ಲಿಗೆ ಆಗಮಿಸುವ ಭಕ್ತರು ಸಾವಿರಾರು ರುಪಾಯಿ ಬೆಲೆ ಬಾಳುವ ಸೀರೆಗಳನ್ನು ಮರಗಳಿಗೆ ತೊಡಿಸಿ ಅವುಗಳಲ್ಲಿ ದೇವತೆಯನ್ನು ಕಾಣುತ್ತಾರೆ.
ಮಠದ ಸುತ್ತಲಿನ ಎಲ್ಲ ಮರಗಳಿಗೆ ಸೀರೆ ರವಿಕೆ ತೊಡಿಸಿ ಪ್ರಕೃತಿ ಮಾತೆಯನ್ನು ಸಂರಕ್ಷಿಸಲಾಗಿದೆ. ಅಮವಾಸ್ಯೆಯ ದಿನವಂತೂ ಇಲ್ಲಿ ಜನ ಜಾತ್ರೆ. ಬಂದವರೆಲ್ಲಾ ಹೊಸ ಬಟ್ಟೆಯನ್ನು ತರುತ್ತಾರೆ. ವನಸ್ತ್ರೀಯರು ಅದನ್ನು ತೊಟ್ಟು ಕಂಗೊಳಿಸುತ್ತಾರೆ. ಹೀಗಾಗಿ ಇಲ್ಲಿರುವ ಮರಗಳು ಕೊಡಲಿ ಏಟಿನ ಭಯದಿಂದ ಮುಕ್ತವಾಗಿವೆ. ಕೊಡಲಿ ಹಿಡಿಯುವವರು ಸಹ ಸೀರೆ ಧರಿಸಿದ ವೃಕ್ಷಗಳಿಗೆ ಕೈ ಮುಗಿದು ಹೋಗುತ್ತಾರೆ.
- ಟಿ.ಶಿವಕುಮಾರ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


