ಬೈಟುಕಾಫಿ

ದೊಡ್ಡ ಗುಣ

Published On :

ಬೇಕಾದಷ್ಟು ಆಸ್ತಿ-ಅಂತಸ್ತು ಎಲ್ಲವು ಇದ್ದೂ ಏನು ಉಪಯೋಗ? ನಾಲಿಗೆ ಬಯಸಿದ್ದನ್ನು ತಿನ್ನೋಕೂ ಪಡೆದುಕೊಂಡು ಬಂದಿರಬೇಕಲ್ಲ.ಪತಿಗೆ ಸಕ್ಕರೆ ಕಾಯಿಲೆಯೊಂದಿಗೆ ಬೈಪಾಸ್ ಸರ್ಜರಿಯೂ ಆಗಿರುವುದರಿಂದ ಸಿಹಿ, ಎಣ್ಣೆ-ತುಪ್ಪವನ್ನು ಕಣ್ಣಿನಿಂದ ನೋಡಬೇಕಷ್ಟೆ. ಅವರಿಗಿಲ್ಲದ ಮೇಲೆ ನನಗೇಕೆ ಎನ್ನುವಂತಹ ಪತಿವ್ರತೆ ನಾನಲ್ಲವಾದರೂ ಅವರಿಗೂ ಚಪಲವಾಗಬಹುದೆಂಬ ಅನಿಸಿಕೆಯೋ, ಅಪ್ಪಿ-ತಪ್ಪಿಯೂ ಈ ಕಾಯಿಲೆ ನನ್ನ ಬಳಿ ಸುಳಿಯಬಾರದೆಂಬ ಮುಂಜಾಗರೂಕತೆಯೋ ಅಪರೂಪಕ್ಕೊಮ್ಮೆ ಸಿಹಿಯನ್ನು ಸವಿಯುತ್ತಿದ್ದುದುಂಟು.
ಅವರಿವರು ಕೊಡುವ ಸ್ವೀಟ್ ಪ್ಯಾಕೆಟ್‌ಗಳು, ಅದರಲ್ಲೂ ತಂಗಿಯ ಮಗ ಪ್ರಮೋಶನ್ ಸಿಕ್ಕಿತೆಂದು ತಂದುಕೊಟ್ಟ ಡ್ರೈಫ್ರೂಟ್ಸ್ ಬರ್ಫಿಪ್ಯಾಕೆಟ್, ದಿನಕ್ಕೆರಡು ಸಲ ಕಣ್ತುಂಬ ನೋಡಿ ಫ್ರಿಜ್ಗೆ ಸೇರಿಸುತ್ತಿದ್ದೆ.
ಕೆಲಸಕ್ಕೆ ಬರುವ ವೆಳ್ಳಿಗೆ ಸರಿಯಾದ ಪೋಷಣೆಯಿಲ್ಲದಿದ್ದರೂ ಅದೆಂತಹ ಕಳೆ, ಎಂತಹ ಆರೋಗ್ಯ. ಕಂಕುಳ ಕೂಸಿಗೆ ಮೂರು ವರ್ಷವಾದರೆ ಅವಳೀಗ ಆರು ತಿಂಗಳ ಗರ್ಭಿಣಿ. ಸ್ವೀಟ್‌ಗೆ ಡೇಟ್ ಆಗಿ ಹೋಗಿರುವುದರಿಂದ ಎಸೆಯುವ ಬದಲು ವೆಳ್ಳಿಗಾದರೂ ಕೊಡೋಣವೆನ್ನಿಸಿತು. ಪಾಪ....ಬಸುರಿ ಹೆಂಗಸು, ಅವರಿಗೆಲ್ಲಿ ಇಂತಹ ಸಿಹಿ ಸಿಕ್ಕೀತು?
ಕೆಲಸ ಮುಗಿಸುತ್ತಿದ್ದಂತೆ ವೆಳ್ಳಿಗೆ ಆ ಸಿಹಿ ಕೊಟ್ಟಾಗ ಆ ಮುಗ್ಧೆಯ ಸಂತಸ ಕಂಡು ಯಾಕೋ ನನ್ನ ಹೃದಯದ ತಾಳ ತಪ್ಪಿತ್ತು. ವಿದೇಶದಲ್ಲಿರುವ ಆರು ತಿಂಗಳ ಬಸುರಿ ಸೊಸೆ, ಅವಳು ಆರೋಗ್ಯದ ಬಗ್ಗೆ ತೆಗೆದುಕೊಳ್ಳುತ್ತಿರುವ ಕಾಳಜಿ ನೆನಪಾಯಿತು. ನಾವು ಬೇರೆಯವರಿಗೆ ಏನು ಕೊಡೋದಾದ್ರೂ ಒಳ್ಳೆಯದನ್ನೇ ಕೊಡ್ಬೇಕು. ತಾವು ತಿನ್ನಲು ಇಟ್ಟುಕೊಂಡಿದ್ದನ್ನೇ ಬೇರೆಯವರಿಗೆ ಕೊಟ್ಟು ತೃಪ್ತಿಪಡುತ್ತಿದ್ದ ಅಮ್ಮ ಏಕೋ ನೆನಪಾಗಿದ್ದರು.
ಈ ಪ್ಯಾಕೆಟ್ ಬೇಡ, ಎದುರಿಗಿರುವ ಸ್ವೀಟ್ ಸ್ಟಾಲ್‌ನಲ್ಲಿ ಇಂತಹುದೇ ಹೊಸ ಸ್ವೀಟ್ ತೆಗೆದುಕೊಂಡು ಹೋಗು ಮರೀಬೇಡ ಮತ್ತೆ.. ಎಂದು ಇನ್ನೂರು ರೂಪಾಯಿಗಳನ್ನು ಕೊಟ್ಟಾಗ ನನ್ನ ಚರ್ಯೆ ಅರ್ಥವಾಗದೆ ಅದೇ ಅಮಾಯಕ ಭಾವದಲ್ಲಿ, 'ನಿಮ್ಮದೆಷ್ಟು ದೊಡ್ಡ ಗುಣ ಅಮ್ಮಾವ್ರೆ' ಎಂದು ಕೃತಜ್ಞತೆಯ ನೋಟ ಹರಿಸುತ್ತಾ ಹೊರಟಿದ್ದಳು.


-ಶಾರದಾ ವಿ. ಮೂರ್ತಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.