ಎದ್ದ ತಕ್ಷಣ ನೀರು ಕುಡಿಯಿರಿ!

ನನ್ನದೊಂದು ಅಭ್ಯಾಸ. ಮುಂಜಾನೆ ಬ್ರಶ್ ಮಾಡಿದ ತಕ್ಷಣ ಅಡುಗೆ ಮನೆಗೆ ಹೋಗುತ್ತೇನೆ. ಚಹಾ ಕುಡಿಯಲಲ್ಲ, ನೀರು ಕುಡಿಯಲು. ಒಂದು ತಂಬಿಗೆಯಷ್ಟು ನೀರು ಕುಡಿಯುತ್ತೇನೆ. ಅದಕ್ಕಾಗಿ ತಾಮ್ರದ ತಂಬಿಗೆಯಲ್ಲಿ ಹಿಂದಿನ ರಾತ್ರಿಯೇ ನೀರು ತುಂಬಿಸಿಟ್ಟಿರುತ್ತೇನೆ. ಸಂಬಂಧಿಗಳ ಮನೆಗೆ ಹೋದಾಗಲೂ ಈ ಅಭ್ಯಾಸ ತಪ್ಪಿಸುವುದಿಲ್ಲ. ಅಲ್ಲಿ ರಾತ್ರಿ ಮಲಗುವಾಗಲೇ ಹೇಳಿರುತ್ತೇನೆ, 'ನನ್ನ ಹಾಸಿಗೆ ಬಳಿ ಒಂದು ಬಿಂದಿಗೆ ನೀರು ಇಟ್ಟಿರಿ'. 'ರಾತ್ರಿ ಬಾಯಾರಿಕೆ ಆಗುತ್ತದೆಯಾ' ಎಂದು ಕೆಲವರು ಕೇಳುವುದುಂಟು, 'ಅಲ್ಲ, ಬೆಳಗ್ಗೆ ಎದ್ದ ತಕ್ಷಣ ಕುಡಿಯಲು' ಎನ್ನುತ್ತೇನೆ. ಏಳುತ್ತಿದ್ದಂತೆ ಬಾಯಾರಿಕೆ ಆಗಿರುತ್ತದೆ ಅಂತಲ್ಲ, ದಿನವಿಡೀ ಫ್ರೆಶ್ ಆಗಿರಲು ನೀರು ಬೇಕು.
ಮೆದುಳು ಕ್ರಿಯಾಶೀಲವಾಗಿರಲು ಸತ್ವಯುತ ಆಹಾರಗಳ ಜತೆಗೆ ನೀರು ಕೂಡ ಮುಖ್ಯ. ಬಾಯಾರಿಕೆ ಆದಾಗ ನಿಮ್ಮ ಮುಂದೆ ಗಂಭೀರ ವಿಷಯವೊಂದನ್ನು ಪ್ರಸ್ತಾಪಿಸಿದರೆ ಹೇಗಿರುತ್ತದೆ? ಕೋಪ ನೆತ್ತಿಗೇರುತ್ತದೆ ತಾನೆ? ಅದು ನಮ್ಮ ತಪ್ಪಲ್ಲ. ನೀರಿನ ಕೊರತೆ ಆದಾಗ ಮೆದುಳು ಯೋಚಿಸುವ ಶಕ್ತಿಯನ್ನು ಕಳೆದುಕೊಳ್ಳುತ್ತದೆ. ಮೆದುಳಿನ ಶೇ 90ರಷ್ಟು ಭಾಗದ ನೀರಿನಿಂದಲೇ ಕೂಡಿರುತ್ತದೆ. ಅದರಲ್ಲಿ ಶೇ 10ರಷ್ಟು ಕಡಿಮೆ ಪ್ರಮಾಣ ಕಡಿಮೆ ಆದರೂ ಯೋಚಿಸುವ ಸಾಮರ್ಥ್ಯವೂ ಕಡಿಮೆ ಆಗುತ್ತದೆ. ಬಾಯಾರಿಕೆ ಆಗಲಿ, ಆಗದೇ ಇರಲಿ. ಆಗಾಗ ನೀರು ಕುಡಿಯುತ್ತಿರುವುದು ಒಳ್ಳೆಯದು. ಗ್ಲಾಸ್‌ಗಟ್ಟಳೆ ಕುಡಿಯಬೇಕು ಅಂತಲ್ಲ. ಒಂದೆರಡು ಗುಟುಕು ಹೀರಿದರೂ ಸಾಕು. ಆಗಾಗ ನೀರು ಕುಡಿಯುತ್ತಿದ್ದರೆ ಮಾನಸಿಕ ಬಳಲಿಕೆ ಕಾಡುವುದಿಲ್ಲ, ನೆನಪಿನ ಶಕ್ತಿ ಕುಂದುವುದಿಲ್ಲ. ಅದಕ್ಕಾಗಿ ನಿಮ್ಮ ಬ್ಯಾಗಿನಲ್ಲಿ ನೀರಿನ ಬಾಟಲ್ ಸದಾ ಇರಲಿ. ಗಂಟೆ, ಎರಡು ಗಂಟೆಗೊಮ್ಮೆ ನೀರು ಗುಟುಕರಿಸುತ್ತಿರಿ.
ಬೆಳಗ್ಗೆ ಎದ್ದತಕ್ಷಣ ಏಕೆ ನೀರು ಕುಡಿಯಬೇಕು? ಸಾಮಾನ್ಯವಾಗಿ ಮಲಗುವುದಕ್ಕೆ ಎರಡು ಗಂಟೆ ಮೊದಲು ನೀರು ಕುಡಿದಿರುತ್ತೀರಿ. ಸರಾಸರಿ ಆರು ಗಂಟೆ ನಿದ್ದೆ ಮಾಡುತ್ತೀರಿ ಎಂದುಕೊಳ್ಳೋಣ. ಅಂದರೆ ಎಂಟು ಗಂಟೆ ಕಾಲ ನೀರು ಕುಡಿಯುವುದಿಲ್ಲ. ಈ ಅವಧಿಯಲ್ಲಿ ಉಸಿರಾಡುವಾಗ, ಬೆವರಿನ ಮೂಲಕ ಸಾಕಷ್ಟು ನೀರು ಶರೀರದಿಂದ ಹೊರ ಹೋಗಿರುತ್ತದೆ. ಅಂದರೆ ಒಂದು- ಮೆದುಳಿಗೆ ಎಂಟು ಗಂಟೆವರೆಗೆ ನೀರು ಪೂರೈಕೆ ಇರುವುದಿಲ್ಲ. ಎರಡು- ಶರೀರ, ಆ ಮೂಲಕ ಮೆದುಳಿನಲ್ಲಿ ಇರುವ ನೀರಿನ ಕೆಲ ಅಂಶ ಹೊರಹೋಗಿರುತ್ತದೆ. ಹೀಗಾಗಿ ಮೆದುಳಿಗೆ ನೀರಿನ ಅಗತ್ಯ ಬಹಳ ಆಗಿರುತ್ತದೆ. ಎದ್ದ ತಕ್ಷಣ ನೀರು ಕುಡಿಯುವುದರಿಂದ ಈ ಕೊರತೆ ನೀಗಿ, ಮೆದುಳಿಗೂ ಶಕ್ತಿ ಬರುವುದರಿಂದ ಫ್ರೆಶ್‌ನೆಸ್ ಅನುಭವ ನಿಮಗೆ ಆಗುತ್ತದೆ. ಆಗಾಗ ನೀರು ಕುಡಿಯುತ್ತಿದ್ದರಂತೂ ಇಡೀ ದಿನ ನಿಮ್ಮದೇ ಆಗಿರುತ್ತದೆ. ನಾಳೆಯಿಂದ ನೀವೂ ಎದ್ದ ತಕ್ಷಣ ನೀರು ಕುಡಿಯುತ್ತೀರಿ ತಾನೆ?
-ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


