ಸಾಪ್ತಾಹಿಕಪ್ರಭ

ಪೇಂತಿಯಾನ್

2500 ವರ್ಷ ಇತಿಹಾಸವುಳ್ಳ ಇಟಲಿ ದೇಶದ ರಾಜಧಾನಿ ರೋಮ್ ನಗರದ ಹೆಸರು ಕೇಳದವರಾರು? ರೋಮನ್ನು ಸ್ಮಾರಕಗಳ ನಗರವೆಂದೇ ಹೇಳಬಹುದು...

ಪೇಂತಿಯಾನ್
Published On :

2500 ವರ್ಷ ಇತಿಹಾಸವುಳ್ಳ ಇಟಲಿ ದೇಶದ ರಾಜಧಾನಿ ರೋಮ್ ನಗರದ ಹೆಸರು ಕೇಳದವರಾರು? ರೋಮನ್ನು ಸ್ಮಾರಕಗಳ ನಗರವೆಂದೇ ಹೇಳಬಹುದು. ಕಿರಿದಾದ ರಸ್ತೆಗಳು, ಸ್ವಲ್ಪ ಅವ್ಯವಸ್ಥೆಯ ವಾಹನ ಸಂಚಾರ, ಬೇಸಿಗೆಯ ಇರುಸು ಮುರುಸಿನ ಸೆಖೆ ರೋಮಿಗೆ ಕಾಲಿಟ್ಟ ತಕ್ಷಣ ಕಾಣಿಸಿತು.
್ಧ್ಯ ಇಟಲಿ ದೇಶದಲ್ಲಿ ಗಂಡು ಮಕ್ಕಳು ತಡವಾಗಿ ಮದುವೆಯಾಗುತ್ತಾರೆ. ಅಮ್ಮನ ಆರೈಕೆಯಲ್ಲಿ ಆರಾಮವಾಗಿರೋಣ, ಮದುವೆಗೆ ಏನು ಅವಸರ ಎಂಬ ನಿಲುವು. ಜೇನಿನ ಹೊಳೆ ಮತ್ತು ರಕ್ತದ ಹೊಳೆ ಕಂಡಿರುವ, ರೋಮಿನ ಮೂಲಕ ಹರಿಯುವ ಟೈಬರ್ ನದಿ ನಮ್ಮ ಭೇಟಿಯ ಸಮಯದಲ್ಲಿ ನೀರಿನ ಹರಿವಿಲ್ಲದೆ ಸೊರಗಿದಂತೆ ಕಾಣುತ್ತಿತ್ತು.
ಪೇಂತಿಯಾನ್ 2000 ವರ್ಷ ಇತಿಹಾಸವುಳ್ಳ ಹೆಚ್ಚು ಪ್ರಚಾರವಿಲ್ಲದ ಭವ್ಯ ಸ್ಮಾರಕ. ಈ ಕಟ್ಟಡ ರೋಮ್ ಸಾಮ್ರಾಜ್ಯದಲ್ಲಿ ಕ್ರಿಶ್ಚಿಯಾನಿಟಿ ನೆಲೆವೂರುವುದಕ್ಕೂ ಮುಂಚೆ ಪೆಗಾನ್ ಧರ್ಮಪದ್ಧತಿ ಆಚರಿಸುತ್ತಿದ್ದ ಕಾಲದಲ್ಲಿ ನಿರ್ಮಾಣವಾದದ್ದು. ಪೆಗಾನರು ಹಿಂದುಗಳಂತೆ ಬಹುದೇವತಾರಾಧನೆ ಮಾಡುತ್ತಿದ್ದರು. ಗ್ರೀಕ್ ಭಾಷೆಯಲ್ಲಿ ಪೇಂತಿಯಾನ್ ಅಂದರೆ 'ಸರ್ವ ದೇವತೆಗಳಿಗೆ' ಎಂದರ್ಥ. ರೋಮ್ ಸ್ಥಾಪಕ ಮತ್ತು ಮೊದಲ ಸಾಮ್ರಾಟ ಅಗಸ್ಟಸ್‌ನ ಅಳಿಯ ಮತ್ತು ಅಧಿಕಾರಿಯಾದ ಮಾರ್ಕಸ್ ಅಗ್ರಿಪನು ಆಕ್ಟಿಯಮ್ ಕದನದ ಜಯಭೇರಿಯ ನೆನಪಿಗೆ ಕ್ರಿಸ್ತಪೂರ್ವ 27ರಲ್ಲಿ ಪೇಂತಿಯಾನ್ ಕಟ್ಟಿಸಿದ. ಕ್ರಿಸ್ತಶಕ 80ರಲ್ಲಿ ಅಗ್ನಿ ಅನಾಹುತದಲ್ಲಿ ಕಟ್ಟಡ ನಾಶವಾಯಿತು. ಸಾಮ್ರಾಟ ಹೆಡ್ರಿಯಾನ್ ಅದೇ ಸ್ಥಳದಲ್ಲಿ ಈಗ ಕಾಣುವ ಸ್ಮಾರಕವನ್ನು ಕ್ರಿಸ್ತಶಕ 126ರಲ್ಲಿ ಮರುನಿರ್ಮಿಸಿದ.
ಹೊರನೋಟಕ್ಕೆ ಪೇಂತಿಯಾನ್ ಸಾಧಾರಣ. ಆದರೆ ಮುಖಮಂಟಪದ 16 ಏಕಶಿಲೆಯ ಬೃಹತ್ ಕಂಬಗಳು ಮನ ಸೆಳೆಯುತ್ತವೆ. ಗಂಭೀರವಾಗಿ ನಿಂತಿರುವ ಮುಖಮಂಟಪದ ಕಂಬಗಳ ಹಿಂದೆ ದೊಡ್ಡ ಸಾಹಸವೇ ಇದೆ. ಒಂದೊಂದು ಕಂಬವೂ 12 ಮೀ. ಉದ್ದ, 1.5 ಮೀ. ವ್ಯಾಸ ಮತ್ತು 60 ಸಾವಿರ ಕೆ.ಜಿ. ತೂಕವಿದೆ. ಈ ಕಲ್ಲುಗಳ ಮೂಲ ದೂರದ ಈಜಿಪ್ಟ್. ಗಣಿಯಿಂದ ಹೊರತೆಗೆದು 100 ಕಿ.ಮೀ. ದೂರದ ನೈಲ್ ನದಿ ದಂಡೆಗೆ ಮರದ ಉರುಳು ತುಂಡುಗಳನ್ನು ಬಳಸಿ ಸಾಗಿಸಲಾಯಿತು. ಪ್ರವಾಹದ ವೇಳೆ ತುಂಬಿ ಹರಿಯುವ ನದಿಯ ಮೂಲಕ ತೆಪ್ಪಗಳಲ್ಲಿ ಮೆಡಿಟರೇನಿಯನ್ ಸಮುದ್ರ ದಂಡೆಗೆ ಸಾಗಿಸಲಾಯಿತು. ನಾವೆಗಳಲ್ಲಿ ಸಮುದ್ರ ದಾಟಿಸಿ ರೋಮಿನ ಬಂದರು ಆಸ್ಟಿಯಾಗೆ ತಲುಪಿಸಲಾಯಿತು. ನಂತರ ಟೈಬರ್ ನದಿಯ ಹರಿವಿನ ವಿರುದ್ಧ ತೆಪ್ಪಗಳಲ್ಲಿ ರೋಮ್‌ಗೆ ರವಾನಿಸಲಾಯಿತು. ಕೊನೆಯ 1 ಕಿ. ಮೀ. ದೂರವನ್ನು ಮತ್ತೆ ಉರುಳು ತುಂಡುಗಳನ್ನು ಬಳಸಿ ಸಾಗಿಸಲಾಯಿತು!
ಎತ್ತರದ ಕಂಚಿನ ಬಾಗಿಲುಗಳನ್ನು ದಾಟಿ ಒಳಾಂಗಣಕ್ಕೆ ಕಾಲಿಟ್ಟೆವು. ವಿಶಾಲ ವೃತ್ತಾಕಾರದ ಕೊಠಡಿಯ ಮೇಲ್ಭಾಗ ಗೋಳಾಕಾರದಲ್ಲಿದ್ದು ಮಧ್ಯದಲ್ಲಿ ವರ್ತುಲಾಕಾರದ ಆಕಾಶಕ್ಕೆ ತೆರೆದುಕೊಂಡ ಗವಾಕ್ಷಿಯಿದೆ.  ಸೂರ್ಯರಶ್ಮಿಗಳು ಗೋಡೆಯ ಮೇಲೆ ಬೆಳಕಿನ ಚಿತ್ತಾರವನ್ನು ಮೂಡಿಸಿ ಅಂಗಣವನ್ನು ಬೆಳಗಿಸಿತ್ತು. ವಿಷು ದಿನಗಳಲ್ಲಿ ಸೂರ್ಯನ ಕಿರಣಗಳು ನೇರವಾಗಿ ಅಂಗಣದ ಮಧ್ಯ ಭಾಗಕ್ಕೆ ಬಿದ್ದು ಇಡೀ ಒಳಾಂಗಣವನ್ನು ಸಮಾನವಾಗಿ ಕಾಂತಿಮಯ ಮಾಡುತ್ತದೆಂದು ಗೈಡ್ ಹೇಳಿದರು. ವಿಶೇಷವೆಂದರೆ ಶಿಲ್ಪಿಗಳು ಕಟ್ಟಡದ ಒಳವ್ಯಾಸ ಮತ್ತು ಗವಾಕ್ಷಿಯ ಎತ್ತರ ಒಂದೇ ಅಳತೆಯಿರುವಂತೆ ರೂಪಿಸಿದ್ದಾರೆ. ಒಳಾಂಗಣಕ್ಕೆ ಗವಾಕ್ಷಿ ಮತ್ತು ಮುಖ್ಯ ದ್ವಾರದಿಂದಲೇ ಬೆಳಕು ಹರಿಯಬೇಕು. ಗವಾಕ್ಷಿಯ ಮೂಲಕ ಒಳಬಿದ್ದ ಮಳೆನೀರು ಹರಿದು ಹೋಗಲು ನೆಲದಲ್ಲಿ ಕಾಲುವೆಯ ವ್ಯವಸ್ಥೆಯಿದೆ. ನಾವು ಆ ಬೃಹತ್ ಅಂಗಣದಲ್ಲಿ ಕುಬ್ಜರಾಗುತ್ತೇವೆ.
ಮಂದಿರವನ್ನು ಹಲವು ರೋಮನ್ ದೇವತೆಗಳ ವಿಗ್ರಹಗಳು ಅಲಂಕರಿಸಿದ್ದು ಆ ದೇವತೆಗಳ ಆರಾಧನೆ ನಡೆಯುತ್ತಿತ್ತು. ರೋಮನ್ನರು ಗೋಳದ ಗವಾಕ್ಷಿಯನ್ನು ದೇವರ ಅಕ್ಷಿಯೆಂದೇ ನಂಬಿದ್ದರು. ಕ್ರಿಶ್ಚಿಯಾನಿಟಿ ಭದ್ರವಾಗಿ ನೆಲೆಯೂರಿದ ಆರನೆ ಶತಮಾನದಲ್ಲಿ ಇದು ಸಂತ ಮೇರಿ ಚರ್ಚ್ ಆಯಿತು. ಆ ಕಾಲದಲ್ಲಿ ಅನೇಕ ಪೆಗಾನ್ ಮಂದಿರಗಳು ಧ್ವಂಸಗೊಂಡವು. 17ನೆ ಶತಮಾನದಲ್ಲಿ ಧರ್ಮಗುರು ಎಂಟನೇ ಅರ್ಬನ್ ಮುಖಮಂಟಪದ ಮೇಲ್ಛಾವಣಿಗೆ ಹೊದಿಸಿದ್ದ ಚಿನ್ನದ ಲೇಪನದ ಕಂಚಿನ ಹೊದಿಕೆ ಕೀಳಿಸಿ, ಕರಗಿಸಿ ಫಿರಂಗಿಗಳ ನಿರ್ಮಾಣಕ್ಕೆ ಬಳಸಿದ. ನವೋದಯ ಕಾಲದಿಂದೀಚೆಗೆ ಪೇಂತಿಯಾನ್ ಸಮಾಧಿ ಸ್ಥಳವಾಗಿಯೂ ಬಳಸಲ್ಪಟ್ಟಿದೆ.
ನವೋದಯ ಕಾಲದಿಂದಲೂ ಪೇಂತಿಯಾನ್ ವಾಸ್ತುಶಿಲ್ಪದ ಮೇಲೆ ಪ್ರಭಾವ ಬೀರುತ್ತಾ ಬಂದಿದೆ. 19 ಮತ್ತು 20ನೇ ಶತಮಾನದ ಅನೇಕ ಸಾರ್ವಜನಿಕ ಕಟ್ಟಡಗಳಿಗೆ ಪೇಂತಿಯಾನ್ ಮಾದರಿಯಾಯಿತು. ಪೇಂತಿಯಾನ್ ನೋಡಿದ ಮೇಲೆ ನಮಗೆ ನಮ್ಮ ಗೋಲಗುಮ್ಮಟ, ಬೆಂಗಳೂರಿನ ಪುಟ್ಟಣ್ಣ ಚೆಟ್ಟಿ ಪುರಭವನ ನೆನಪಿಗೆ ಬಾರದಿರದು.

-ಡಾ.ಡಿ.ಎಸ್. ಕೃಷ್ಣರಾವ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.