ಕ್ಯೂಬಾ ಕಿಡಿಯ ನೈಜ ಪಯಣ
ಅರ್ಜೆಂಟೀನಾದಲ್ಲಿ ಹುಟ್ಟಿ, ಕ್ಯೂಬಾದ ಪುಟ್ಟ ರಾಜ್ಯದಲ್ಲಿ ಗೆರಿಲ್ಲಾ ಯುದ್ದ ಮಾಡಿ ಯಶಸ್ವಿಯಾದ ಎರ್ನೆಸ್ಟೋ ಚೆಗುವೆರಾ 21ನೇ ಶತಮಾನದ ಅತ್ಯಂತ ಕುತೂಹಲಕಾರಿ ವ್ಯಕ್ತಿ...

ಚಿತ್ರ: ಚೆ (ಭಾಗ1) 2009
ಭಾಷೆ: ಇಂಗ್ಲಿಷ್- ಸ್ಪೇನ್
ನಿರ್ದೇಶನ: ಸ್ಟೀವನ್ ಸಾಂಡರ್ಬಗ್
ಅವಧಿ: 134 ನಿಮಿಷ
ತಾರಾಗಣ: ಬೆನಿಸಿಯಾ ಡೆಲ್ ಟೊರೊ, ಜೂಲಿಯಾ ಆರ್ಮಾಂಡ್, ಆಸ್ಕರ್ ಐಸಾಕ್, ಪ್ಯಾಬ್ಲೊ ಗಿವಾರಾ, ಡೇಮಿಯನ್ ಬಿಚಿರ್, ರಾಡ್ರಿಗೊ ಸ್ಯಾಂಟೊರೊ.
ಅರ್ಜೆಂಟೀನಾದಲ್ಲಿ ಹುಟ್ಟಿ, ಕ್ಯೂಬಾದ ಪುಟ್ಟ ರಾಜ್ಯದಲ್ಲಿ ಗೆರಿಲ್ಲಾ ಯುದ್ದ ಮಾಡಿ ಯಶಸ್ವಿಯಾದ ಎರ್ನೆಸ್ಟೋ ಚೆಗುವೆರಾ 21ನೇ ಶತಮಾನದ ಅತ್ಯಂತ ಕುತೂಹಲಕಾರಿ ವ್ಯಕ್ತಿ. ಒಂದು ಕಡೆ ಕ್ರಾಂತಿಕಾರಿ ಹೋರಾಟಗಾರಿಗೆ ಸ್ಫೂರ್ತಿಯಾಗಿ ನಿಲ್ಲುತ್ತಲೇ ಮತ್ತೊಂದು ಕಡೆ ಶೋಕಿಯ ವಸ್ತುವಾಗಿಬಿಟ್ಟ. ನೋಡಲು ಸುಂದರವಾಗಿದ್ದ, ಆಳೆತ್ತರದ ದೇಹ, ಕುರುಚುಲು ಗಡ್ಡ, ಬಾಯಿಯಲ್ಲೊಂದು ಸಿಗಾರ್, ಪುಟ್ಟ ನಕ್ಷತ್ರವಿದ್ದ ಟೋಪಿ ಧರಿಸುತ್ತಿದ್ದ 'ಚೆ', ಪ್ರವಾಹದಂತೆ ಯುವ ಜನಾಂಗವನ್ನು ಅಕರ್ಷಿಸಿದ.
ನಿಜಕ್ಕೂ 'ಚೆ' ಕ್ಯೂಬಾದಲ್ಲಿ ಮಾಡಿದ್ದೇನು? ಎಂಬ ಕುತೂಹಲವನ್ನು ತಣಿಸುವ ಅಪರೂಪದ ಚಿತ್ರವೊಂದು 'ಚೆ' ಹೆಸರಿನಲ್ಲೇ ಮೂಡಿ ಬಂದಿದೆ. ಎರಡು ಭಾಗಗಳಲ್ಲಿ ಈತನ ಹೋರಾಟದ ಪಯಣದ ಮೇಲೆ ಬೆಳಕು ಚೆಲ್ಲುವ ಚಿತ್ರಗಳು ತಯಾರಾಗಿದೆ. ಅಲ್ಲದೆ ಲ್ಯಾಟಿನ್ ಅಮೆರಿಕದ ಹಳ್ಳಿಗಳಲ್ಲಿ ಈತ ನಡೆಸಿದ ಅಲೆಮಾರಿ ಪಯಣವನ್ನು ಆಧರಿಸಿ 'ದಿ ಮೋಟರ್ ಸೈಕಲ್ ಡೈರೀಸ್' ಚಿತ್ರ ಸಹ ಬಂದಿದೆ. ಮೋಟರ್ಸೈಕಲ್ನಲ್ಲಿ ಹೊರಡುವ ಚೆಗುವೆರಾ, ತನ್ನ ಜೀವನದ ಅನುಭವವನ್ನು ಹೇಳುವ ಕಥೆ ಇದು. ಅವನ ಬದುಕು ಬದಲಿಸಿದ ಪಯಣವಿದು. ಈ ಚಿತ್ರದ ಸ್ಫೂರ್ತಿಯಿಂದ ಸೃಷ್ಟಿಯಾದದ್ದು ತೆಲುಗಿನ 'ಗಮ್ಯಂ'. ಇದೇ ಚಿತ್ರ ಕನ್ನಡಕ್ಕೆ 'ಸವಾರಿ' ಹೆಸರಿನಲ್ಲಿ ರಿಮೇಕ್ ಆಯಿತು.
ನಿರ್ದಿಷ್ಟವಾಗಿ 'ಚೆ' ಹಡಗಿನ ಮೂಲಕ ಕ್ಯೂಬಾಗೆ ಬಂದ ನಂತರ ಅಲ್ಲಿಂದ ಆರಂಭವಾದ ಆತನ ಗೆರಿಲ್ಲಾ ಹೋರಾಟದ ಚಿತ್ರಣವನ್ನು ಕೊಡುವ 'ಚೆ, ಭಾಗ-1' ಚಿತ್ರ, 1964ರಲ್ಲಿ ಹೆವನ್ನಲ್ಲಿ ಪತ್ರಕರ್ತೆಯೊಬ್ಬಳ ಸಂದರ್ಶನದ ಮೂಲಕ ಆರಂಭವಾಗುತ್ತದೆ. ವಿಶೇಷ ಎಂದರೆ ಸಂದರ್ಶನ ಕೊಟ್ಟದ್ದು ನಿಜವಾದ ಚೆಗುವೆರಾ. ಕಪ್ಪು ಬಿಳುಪಿನ ದೃಶ್ಯಗಳಲ್ಲಿ ಚೆ ಪಾಲ್ಗೊಂಡ ಸಮಾರಂಭ, ಆತ ಮಾಡಿದ ಭಾಷಣ, ಸಂದರ್ಶನದ ನಿಜವಾದ ದೃಶ್ಯಗಳ ಸಂಯೋಜನೆಯಲ್ಲಿ ಈ ಚಿತ್ರ ರೂಪುಗೊಂಡಿದೆ. ವಿದೇಶಿ ಪತ್ರಕರ್ತೆ ಮುಂದೆ ಕೂತು ಸಂದರ್ಶನದಲ್ಲಿ ಚೆ ಹೇಳುವ ಮಾತುಗಳಿಗೆ ಅನುಗುಣವಾಗಿ ಪ್ರಸ್ತುತ ದೃಶ್ಯಗಳನ್ನು ಕಟ್ಟುತ್ತಾರೆ ನಿರ್ದೇಶಕ ಸ್ಟೀವನ್ ಸಾಂಡರ್ಬಗ್. ಬ್ಲಾಕ್ ಆಂಡ್ ವೈಟ್ನ 'ಚೆ' ಹಾಗೂ ಗೆರಿಲ್ಲಾ ದೃಶ್ಯಗಳಲ್ಲಿ ಕಾಣುವ 'ಚೆ' ಬೇರೆ ಬೇರೆ. ಒಂದು ನೈಜ ರೂಪ, ಮತ್ತೊಂದು ಪಾತ್ರಧಾರಿ. ಹೀಗೆ ಎರಡು ಕಾಲಘಟ್ಟಗಳನ್ನು ಒಟ್ಟಿಗೆ ಪ್ರೇಕ್ಷಕನ ಮುಂದಿಡುವ 'ಚೆ' ಚಿತ್ರ, ಕ್ಯೂಬಾದ ಜನ ಸಾಮಾನ್ಯರ ಅಂತರಂಗದ ಧ್ವನಿಗೆ ಸಾಕ್ಷಿಯಾಗುತ್ತದೆ. ನಿರೂಪಣೆಯಲ್ಲಿ ವರ್ತಮಾನಕ್ಕೆ ಬಂದಾಗ ಸ್ವಲ್ಪ ಮಟ್ಟಿಗೆ ಚಿತ್ರ ಬೋರು ಹೊಡೆಸುತ್ತದೆ. ಕಾಡಿನಿಂದ ಗೆರಿಲ್ಲಾಗಳು ಏಕಾಏಕಿ ನಾಡಿಗೆ ಲಗ್ಗೆ ಇಟ್ಟಾಗ ಚಿತ್ರಕ್ಕೆ ರೋಚಕತೆಯ ಬಣ್ಣ ಬರುತ್ತದೆ. ಮುಂದೆ ಸರ್ಕಾರ ಮತ್ತು ಗೆರಿಲ್ಲಾಗಳ ನಡುವೆ ಸಮರವನ್ನು ಸಿನಿಮಾ ಅದ್ಭುತವಾಗಿ ಚಿತ್ರಿಸುತ್ತದೆ. ಕ್ರಾಂತಿಯ ಕಿಡಿ ನಗರವನ್ನೇ ಆವರಿಸಿಕೊಳ್ಳುತ್ತಿರುವಾಗ ಒಬ್ಬ ಪೊಲೀಸ್ ಅಧಿಕಾರಿ ಚೆಗುವೆರಾನ ಬಳಿ ಬಂದು 'ಬನ್ನಿ ಶರಣಾಗತರಾಗಿ' ಎಂದಾಗ, 'ಇದು ಜನರ ಕ್ರಾಂತಿಕಾರಿ ಚಳವಳಿ. ಪೊಲೀಸ್ ಕ್ಯಾಂಪ್ ಅಲ್ಲ' ಎನ್ನುವ ಚೆಗುವೆರಾನ ತೀಕ್ಷ್ಣ ಮಾತು ಆತನ ವ್ಯಕ್ತಿತ್ವ ಮತ್ತು ಇಡೀ ಕ್ಯೂಬಾ ಜನರ ಹೋರಾಟವನ್ನು ಬಿಂಬಿಸುತ್ತದೆ. 'ಶೇ. 1.5ರಷ್ಟು ಭೂಮಾಲೀಕರು ಶೇ.46ರಷ್ಟು ಭೂಮಿಯನ್ನು ನಿಯಂತ್ರಿಸುತ್ತಿದ್ದಾರೆ' ಇದು ಚಿತ್ರದ ಆರಂಭದಲ್ಲಿ ಬರುವ ಸಂಭಾಷಣೆ. ಕ್ಯೂಬಾ, ಗ್ವಾಟೆಮಾಲಾ, ಬೊಲಿವಿಯಾ, ಪೆರು, ರಷ್ಯಾ ಅಥವಾ ಭಾರತವೇ ಆಗಿರಬಹುದು ಜಗತ್ತಿನ ಯಾವುದೇ ಮೂಲೆಯಲ್ಲಿ ಜನ ಇಂಥ ಕ್ರಾಂತಿಯನ್ನು ಈ ಮೇಲಿನ ಮಾತಿನ ಹಿನ್ನೆಲೆಯಲ್ಲಿ ಅರ್ಥ ಮಾಡಿಕೊಳ್ಳಬೇಕಿದೆ.
ಚೆಗುವೆರಾನ ಸಂದರ್ಶನ, ಸಮಾರಂಭದ ದೃಶ್ಯಗಳಿಂದ ಒಂದು ಹಂತದಲ್ಲಿ ಇದು ಸಾಕ್ಷ್ಯ ಚಿತ್ರದಂತೆ ಕಾಣುತ್ತದೆ. ಆದರೆ ನೋಡುಗನ ಕುತೂಹಲ ಕಾಯ್ದುಕೊಳ್ಳುವುದು ಇದೇ ಕಪ್ಪು ಬಿಳುಪಿನ ಚೆಗುವೆರಾನ ನೈಜ ದೃಶ್ಯಗಳು. ಸ್ಟೀವನ್ ಸಾಂಡರ್ಬಗ್, ನಿರ್ದೇಶನ, ನಿರ್ಮಾಣ, ಸಂಕಲನ ಹೀಗೆ ಸಿನಿಮಾದ ಬಹುತೇಕ ವಿಭಾಗಗಳಲ್ಲಿ ಕೆಲಸ ಮಾಡಿದ್ದಾರೆ. ಈ ಚಿತ್ರ ಹತ್ತಾರು ಸಿನಿಮೋತ್ಸವಗಳಲ್ಲಿ ಪ್ರದರ್ಶನಗೊಂಡಿದೆ. ಚೆಗುವೆರಾ ಜೀವನ ಮತ್ತು ಅವನ ಹೋರಾಟದ ಕಥೆ 14 ಚಿತ್ರಗಳಿಗೆ ಜೀವ ನೀಡಿದೆ. ಶೋಷಿತ ಸಮುದಾಯಕ್ಕೆ ಕ್ರಾಂತಿಯ ಸಂದೇಶವನ್ನು ನೀಡಿದ ಚೆ ಈಗಲೂ ಜಗತ್ತಿನ ಕ್ರಾಂತಿಕಾರಿ ಹೋರಾಟಗಾರರಿಗೆ, ಚಿಂತಕರಿಗೆ ಸ್ಫೂರ್ತಿ. <
-ಆರ್. ಕೇಶವಮೂರ್ತಿ
keshavarkm1@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


