ಸಾಪ್ತಾಹಿಕಪ್ರಭ

ಜಮುನಾಕೆ ತೀರ... ಎಂದರೆ ಅಬ್ದುಲ್ ಕರೀಮರೇ!

'ಜಮುನಾಕೆ ತೀರ ಕೈಸೆ ಜಾವು...' (ರಾಗ ಭೈರವಿ), 'ಫಗವಾ ಬ್ರಜ ದೇಖನ ಕೋ ಚಲೂ ರಿ...' (ರಾಗ ಬಸಂತ್), 'ಸೋಚ ಸಮಝ ನಾದಾನ್...' (ರಾಗ ಪೀಲು) ...

ಜಮುನಾಕೆ ತೀರ... ಎಂದರೆ ಅಬ್ದುಲ್ ಕರೀಮರೇ!
Published On :

'ಜಮುನಾಕೆ ತೀರ ಕೈಸೆ ಜಾವು...' (ರಾಗ ಭೈರವಿ), 'ಫಗವಾ ಬ್ರಜ ದೇಖನ ಕೋ ಚಲೂ ರಿ...' (ರಾಗ ಬಸಂತ್), 'ಸೋಚ ಸಮಝ ನಾದಾನ್...' (ರಾಗ ಪೀಲು) ಉಸ್ತಾದ್ ಅಬ್ದುಲ್ ಕರೀಂ ಖಾನರ ಈ ಒಂದೊಂದು ರಾಗಗಳೂ , ಆ ಚೀಜ್‌ಗಳೂ ಅಜರಾಮರ. ಸೂರ್ಯ-ಚಂದ್ರ-ನಕ್ಷತ್ರಗಳಿರುವವರೆಗೂ ತಮ್ಮ ಈ ಅದ್ಭುತ ಗಾಯನದಿಂದ ಸಂಗೀತ ರಸಿಕರ - ಸಂಗೀತಗಾರರ ಮನದಲ್ಲಿ 'ಜಮುನಾಕೆ ತೀರ...' ಎಂದರೆ ಅಬ್ದುಲ್ ಕರೀಮರೇ ಎಂಬಷ್ಟು ಶಾಶ್ವತ ಮುದ್ರೆ ಒತ್ತಿ ಹೋಗಿದ್ದಾರೆ ಅವರು.
ಕಲ್ಲುಸಕ್ಕರೆಯಂತಹ ಧ್ವನಿ, ಅದಕ್ಕೆ ಬೆಣ್ಣೆಯಂತಹ ನಯ - ಎಲ್ಲೂ ಒಂದಿನಿತೂ ಊನವಿಲ್ಲ. ಭುವಿಗಿಳಿದ ಗಂಧರ್ವರೇ ಅವರು ಎಂದರೆ ಖಂಡಿತ ಅತಿಶಯೋಕ್ತಿ ಅಲ್ಲ.
ಉಸ್ತಾದ್ ಅಬ್ದುಲ್ ಕರೀಂ ಖಾನರು ಹುಟ್ಟಿದ ಊರೇ 'ಕಿರಾನಾ'. ಉತ್ತರ ಪ್ರದೇಶದ ಶಾಮಲಿ ಜಿಲ್ಲೆಯ ಈ ಚಿಕ್ಕ 'ಕಿರಾನಾ' ಅಥವಾ 'ಕೈರಾನಾ' ಎಂಬ ಊರಿನಿಂದಲೇ ಇದಕ್ಕೆ 'ಕಿರಾನಾ ಘರಾಣೆ' ಎಂಬ ಹೆಸರು ಬಂತು. ಪಂಡಿತ ಗೋಪಾಲ ನಾಯಕ ಅಥವಾ ಬೀನ್ ವಾದಕ ಉಸ್ತಾದ್ ಬಂದೇ ಅಲಿ ಖಾನ್ ಇದರ ಪ್ರವರ್ತಕರೆಂದು ಗುರುತಿಸಲ್ಪಟ್ಟರೂ ಕೂಡ ಈ ಘರಾಣೆ ಒಂದು ಮಹಾ ವೃಕ್ಷವಾಗಿ ಬೆಳೆಯಲು ಕಾರಣ ಉಸ್ತಾದ್ ಅಬ್ದುಲ್ ಕರೀಂ ಖಾನರ ಗಂಧರ್ವ ಗಾಯನ- ಅವರ ಪರಿಶ್ರಮ - ಅವರ ಜನಪ್ರಿಯತೆ ಎಂಬುದು ಸುಳ್ಳಲ್ಲ.
ಅವರ ಗಾಯನಕ್ಕೆ ಕಣ್ಣೀರಿಡದವರೇ ಇಲ್ಲ. ಕ್ಷಣಮಾತ್ರದಲ್ಲಿ ಭಾವೋದ್ದೀಪನ ಮಾಡುವ ಸಿದ್ಧಿ ಇತ್ತು ಅವರಿಗೆ. ರಾಗದ ಒಂದೊಂದೂ ಸ್ವರಗಳನ್ನು ಅನುಭವಿಸುವುದನ್ನು ಪ್ರಾರಂಭಿಸಿದವರೇ ಇವರು ಎನ್ನಬಹುದು. ಸ್ವರವನ್ನು ಹಾಡಿ ಹಾಡಿ ಅದರಲ್ಲಿ ಮುಳುಗುವುದು, ಇನ್ನಷ್ಟು, ಮತ್ತಷ್ಟು, ಕೊನೆಯೇ ಇಲ್ಲ ಅದಕ್ಕೆ...ಆದ್ದರಿಂದಲೇ ತಿಳಿದವರು ಈ ಘರಾಣೆಯ ಬಗ್ಗೆ ಹೇಳುವಾಗ 'ಹತ್ತಿ ಹಿಂಜಿ ಹಿಂಜಿ ಬತ್ತಿ ಮಾಡಿದಂತೆ' ಎನ್ನುತ್ತಾರೆ. ಸ್ವರದಲ್ಲಿ ಸ್ವರವನ್ನು, ಲಯದಲ್ಲಿ ಲಯವನ್ನು ಅರಸುತ್ತ ಅದರ ಕೇಂದ್ರದೆಡೆಗೆ ಸಾಗುತ್ತ ಅದರೊಳಗೆ ಒಂದಾಗುವುದು ಈ ಘರಾಣೆಯ ವಿಶಿಷ್ಟತೆ. ಇದರಿಂದ ಕಿರಾನಾ ಘರಾಣೆ ನೀರ ಸುಳಿಯಂತೆ ವಿಸ್ತಾರವಾಗುತ್ತ, ಆಳವಾಗುತ್ತ ಹೋಗುತ್ತದೆ. ಈ ಘರಾಣೆಯ ಗಾಯಕರು ಗಂಟೆಗಟ್ಟಲೆ ಸ್ವರ ವಿಸ್ತಾರದಲ್ಲಿ, ಆಲಾಪನೆಯಲ್ಲಿ ಮೈಮರೆಯಲು ಸಾಧ್ಯವಾಗುತ್ತದೆ.
ಕರ್ನಾಟಕಕ್ಕೂ, ಉಸ್ತಾದ್ ಅಬ್ದುಲ್ ಕರೀಂ ಖಾನರಿಗೂ ಬಹಳ ನಂಟು. ಮೈಸೂರು ಮಹಾರಾಜರ ಅಸ್ಥಾನ ಗಾಯಕರಾಗಿ ಇಲ್ಲಿನ ದರ್ಬಾರಿನಲ್ಲಿ ಹಾಡಲು ಬರುತ್ತ ಬರುತ್ತ ಕರ್ನಾಟಕೀ ಸಂಗೀತದ ಬಗ್ಗೆ ಅವರಿಗೆ ಅಪಾರ ಆದರ - ಪ್ರೀತಿ ಬೆಳೆಯಿತು. ವಿದ್ವಾನ್ ಮೈಸೂರು ವಾಸುದೇವ್ ಆಚಾರ್ಯರ ಜೊತೆ ದಿನಗಟ್ಟಲೆ ಸಂಗೀತದ ವಿಚಾರ ವಿನಿಮಯ, ಚಿಂತನೆ ಮಾಡುತ್ತಿದ್ದರು ಉಸ್ತಾದರು. ಕರ್ನಾಟಕೀ ಪದ್ಧತಿಯಲ್ಲಿ 'ಸ್ವರ'ಗಳನ್ನು ಹಾಡುವ ವಿಧಾನವನ್ನು ಬಹಳ ಇಷ್ಟಪಟ್ಟು ಅದನ್ನು ಹಿಂದುಸ್ತಾನೀ ಸಂಗೀತದಲ್ಲಿ ಅಳವಡಿಸಿದ ಹೆಗ್ಗಳಿಕೆ ಉಸ್ತಾದ್ ಅಬ್ದುಲ್ ಕರೀಂ ಖಾನರಿಗೆ ಸಲ್ಲುತ್ತದೆ. ಅಲ್ಲದೇ ಉಸ್ತಾದರು ಕರ್ನಾಟಕೀ ರಾಗವನ್ನು ಕಲಿತು ಹಾಡಿದ ರೆಕಾರ್ಡಿಂಗ್ ಕೂಡ ಇದೆ.
ಉಸ್ತಾದ್ ಕರೀಂ ಖಾನರು ಕೇವಲ ತಾವು ಹಾಡಿದ್ದಷ್ಟೇ ಅಲ್ಲ. ಬಹಳ ಮುಖ್ಯವಾಗಿ ಸಂಗೀತವನ್ನು ಬೆಳೆಸಿದರು ಕೂಡ. ಅವರ ಶಿಷ್ಯ ಗಣ ಸಮೂಹವನ್ನು ಅವಲೋಕಿಸಿದರೆ ಅವರ ಪರಿಶ್ರಮದ ಮಹತ್ವತೆಯ ಅರಿವಾಗುತ್ತದೆ. ಅಂತಹ ಅಮೂಲ್ಯ ರತ್ನಗಳನ್ನು ಅವರು ಸಂಗೀತ ಲೋಕಕ್ಕೆ ಕೊಡುಗೆ ನೀಡಿದ್ದಾರೆ. ಪಂ. ಗಣಪತ್‌ರಾವ್ ಬೆಹರೆ (ಬೆಹರೆ ಬುವಾ ಎಂದೇ ಪ್ರಸಿದ್ಧರು), ಪಂ ಬಾಲಕೃಷ್ಣ ಬುವಾ, ಕಪಿಲೇಶರೀ , ಪಂ.ಸವಾಯಿ ಗಂಧರ್ವ, ಪಂ.ದಶರಥ ಬುವಾ ಮುಳೆ, ರೋಶನಾರಾ ಬೆಗಂ - ಒಬ್ಬೊಬ್ಬರೂ ಉಸ್ತಾದರ ಗರಡಿಯಲ್ಲಿ ಪಳಗಿ ಸಂಗೀತದ ಧ್ರುವ ತಾರೆಗಳಾಗಿ ಮಿಂಚಿದವರು. ಇಷ್ಟೇ ಅಲ್ಲ, ದ್ವಿತೀಯ ಪತ್ನಿ ತಾರಾಬಾಯಿ ಮಾನೆಯವರ ಮೂಲಕ ಪಡೆದ ಮಕ್ಕಳಾದ ಹೀರಾಬಾಯಿ ಬಡೋದೇಕರ್, ಪಂ.ಸುರೇಶ್ ಬಾಬು ಮಾನೆ, ಸರಸ್ವತಿ ಬಾಯಿ ರಾಣೆ -ಎಲ್ಲರೂ ಅಪ್ರತಿಮ ಗಾಯಕರೇ.
ಉಸ್ತಾದರು ಎಂಥ ಗುರುಗಳೆಂದರೆ, ಮುಂಬಯಿಯಲ್ಲಿ ಅವರು ಒಂದು ನಾಯಿಗೆ ಸರಿಯಾಗಿ ಸ್ವರ ಹಚ್ಚಲು ಕಲಿಸಿದ್ದರ ಬಗ್ಗೆ ಉಲ್ಲೇಖವಿದೆ. 'ಶಿಶುರ್ವೇತ್ತಿ, ಪಶುರ್ವೇತ್ತಿ, ವೇತ್ತಿ ಗಾನಂ ಫಣಿ' ಎಂಬುದನ್ನು ಕಾರ್ಯರೂಪದಲ್ಲಿ ತಂದು ತೋರಿಸಿದವರು ಅವರು. ಆ ನಾಯಿ ಅಮರೋಲಿ ಹೌಸ್ ಮುಂಬಯಿಯ ಕಾರ್ಯಕ್ರಮದಲ್ಲಿ ಸ್ವರಬದ್ಧವಾಗಿ ವಿಚಿತ್ರವಾಗಿ ಧ್ವನಿಯನ್ನು ಉತ್ಪತ್ತಿ ಮಾಡುತ್ತಿದುದ್ದನ್ನು ನೋಡಿದವರೇ ಇದನ್ನು ಉಲ್ಲಿಖಿಸಿದ್ದಾರೆ. ಇಂಥ ವಿಶಿಷ್ಟ ಗುರು ಉಸ್ತಾದ್ ಅಬ್ದುಲ್ ಕರೀಂ ಖಾನರು.

-ಶ್ರುತಿ ಭಟ್
shrutikbhat@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.