ಬದುಕಿನಲಿ ಇದೇನಿದು ನದಿಯೊಂದು ಓಡಿದೆ?
ಉತ್ತರಾಖಂಡದ ವಿನಾಶಲೀಲೆಯ ಬಗೆಗೆ ಆರೋಪ ಪಟ್ಟಿ ಎಂದೋ ಸಿದ್ಧಗೊಂಡಿದೆ. ಸಮಸ್ಯೆಯಿರುವುದು ಅದನ್ನು ಸಲ್ಲಿಸುವುದು ಯಾರಿಗೆ ಎಂಬುದರ ಬಗ್ಗೆ. ಏಕೆಂದರೆ...

ಉತ್ತರಾಖಂಡದ ವಿನಾಶಲೀಲೆಯ ಬಗೆಗೆ ಆರೋಪ ಪಟ್ಟಿ ಎಂದೋ ಸಿದ್ಧಗೊಂಡಿದೆ. ಸಮಸ್ಯೆಯಿರುವುದು ಅದನ್ನು ಸಲ್ಲಿಸುವುದು ಯಾರಿಗೆ ಎಂಬುದರ ಬಗ್ಗೆ. ಏಕೆಂದರೆ ಸರಕಾರ ಸೇರಿದಂತೆ ಸಮಸ್ತ ಮಾನವ ಜನಾಂಗವೇ ಇದರ ಹೊಣೆ ಹೊರಲು ಸಿದ್ಧಗೊಳ್ಳಬೇಕಿದೆ. ಸ್ವಯಂಕೃತ ಅಪರಾಧವನ್ನು ಒಪ್ಪಿಕೊಳ್ಳುವ ವೈಶಾಲ್ಯ ನಮ್ಮಲ್ಲಿ ಸದ್ಯಕ್ಕೆ ಉಳಿದಿಲ್ಲ. ಹೀಗಾಗಿದ್ದರ ಬಗೆಗೆ- ಅಂದರೆ ಕೋಟ್ಯಂತರ ರು. ಮೌಲ್ಯದ ಆಸ್ತಿ ಪಾಸ್ತಿ ಹಾನಿ, ಲಕ್ಷಕ್ಕೆ ಮೀರಿದ ಜೀವ ನಷ್ಟ, ಒಂದಿಡೀ ಸಂಸ್ಕೃತಿಯ ನಾಶ, ಅಪೂರ್ವ ಅರಣ್ಯ ಸಂಪತ್ತಿನ ಮುಳುಗಡೆ ಇವೆಲ್ಲ ಆದದ್ದು ಕೇವಲ ಪ್ರವಾಹದಿಂದಲ್ಲ. ಅದಕ್ಕೆ ಕಾರಣವಾದ ನಮ್ಮ ನಿರ್ಲಜ್ಜ ವರ್ತನೆಯಿಂದ. ಅಭಿವೃದ್ಧಿಯ ಭ್ರಮೆಯಿಂದ. ಸ್ವಾರ್ಥದ ಪರಾಕಾಷ್ಠೆಯಿಂದ. ಪ್ರಕೃತಿಯ ಮೇಲಿನ ರಾಕ್ಷಸೀಯ ದೌರ್ಜನ್ಯದಿಂದ. ತೀರ್ಥಕ್ಷೇತ್ರವನ್ನೂ ವ್ಯಾಪಾರೀಕರಣಗೊಳಿಸಿದ ಲೋಲುಪತೆಯಿಂದ. ಮನುಷ್ಯನಲ್ಲಿ ಮೂಲಭೂತವಾಗಿ ಹುದುಗಿರುವ ಅಹಮಿಕೆಯಿಂದ. ಕಂಡೂ ಕಾಣದಾದ ಅಂಧತ್ವದಿಂದ. ಮೌಢ್ಯದಿಂದ... ಹೇಳುತ್ತ ಹೋದರೆ ಚಾರ್ಜ್ಶೀಟ್ ಬೆಳೆಯುತ್ತ ಹೋಗುತ್ತದೆ. ಮುಗಿಯದಾಗುತ್ತದೆ. ದೇವನದಿ ಗಂಗೆಗೆ ಅಂತ್ಯವಿದೆ. ಆರೋಪ ಪಟ್ಟಿಗಿಲ್ಲ.
ಹೇಗಿತ್ತು ಹೇಗಾಯ್ತು ?
ಚಾಜರ್ಶೀಟ್ ಕೈಗೆತ್ತಿಕೊಳ್ಳುವ ಮುನ್ನ ಒಂದಷ್ಟು ಅಂಕಿ ಅಂಶಗಳ ಮೇಲೆ ಕಣ್ಣಾಡಿಸಬಹುದೇನೋ. 1882ರ ಸುಮಾರಿಗೆ ಹಿಮಾಲಯದ ಪವಿತ್ರ ಕ್ಷೇತ್ರಗಳಲ್ಲಿ ಒಂದಾದ ಕೇದಾರನಾಥದಲ್ಲಿ ಇದ್ದುದು ದೇಗುಲ ಬಿಟ್ಟರೆ ಕೇವಲ ಒಂದೇ ಚಂದ್ರಶಾಲೆ. ಅದು ಧರ್ಮ ಛತ್ರ. ಅಲ್ಲಿಗೆ ತೆರಳಬೇಕಿದ್ದ ಯಾತ್ರಾರ್ಥಿಗಳು ಕಿರಿದಾದ ಬೆಟ್ಟಗಳ ಸರಣಿಯಲ್ಲಿ ನಡೆದೇ ಹೋಗಬೇಕಿತ್ತು. ದೇವರನ್ನು ತಲುಪುವುದು ಸಾಹಸ ಮಾತ್ರವಲ್ಲ, ಅದು ಸಾಧನೆ. ತಪಸ್ಸು. ದೈವಸಾನಿಧ್ಯದ ದುರ್ಲಭತೆಗೆ ಸಂಕೇತವದು. ಆ ಕಾರಣಕ್ಕೇ ಇಂಥ ಯಾತ್ರೆಗೆ ಹೊರಡುವವರನ್ನು ಮರಳಿ ಬರುತ್ತಾರೋ ಇಲ್ಲವೋ ಎಂಬ ಆತಂಕದಲ್ಲೇ ಕಳುಹಿಸಿಕೊಡಲಾಗುತ್ತಿತ್ತು. ಮರಳಿ ಬಂದರೆ ಸಾಕ್ಷಾತ್ ದೈವತ್ವದೊಂದಿಗೆ ಸತ್ಕರಿಸಲಾಗುತ್ತಿತ್ತು. ಕಳೆದ ಶತಮಾನದ ಅಂತ್ಯದ ವೇಳೆಗೆ ಅಂದರೆ 1990ರ ಹೊತ್ತಿಗೆ ಕೇದಾರದಲ್ಲಿ ಇಪ್ಪತ್ತಕ್ಕೂ ಹೆಚ್ಚು ಕಟ್ಟಡಗಳು ತಲೆ ಎತ್ತಿದ್ದವು. ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಅಲ್ಲಲ್ಲಿ ತಂಗುದಾಣಗಳು, ಖಾಸಗಿ ವಸತಿ ಗೃಹಗಳು ಕಾಣಿಸಿಕೊಂಡವು. ಗೌರಿಕುಂಡದವರೆಗೂ ಅಂದರೆ ಕೇದಾರದಿಂದ 14 ಕಿ.ಮೀ. ಕೆಳಗಿನವರೆಗೂ ರಸ್ತೆ ನಿರ್ಮಾಣವಾಗಿತ್ತು. ಕೇದಾರ ಯಾತ್ರೆ ಈಗ ಅಷ್ಟೊಂದು ಪ್ರಯಾಸವಲ್ಲ ಎಂಬ ಮನೋಭಾವ ಮೂಡಿದ್ದ ಹಿನ್ನೆಲೆಯಲ್ಲೇ ಪ್ರವಾಸಿಗರ ಸಂಖ್ಯೆಯೂ ವೃದ್ಧಿಸಿತ್ತು.
ಹೊಸಶತಮಾನ ಕಾಲಿಟ್ಟಿತು ನೋಡಿ. ಹೇಳಿಕೇಳಿ ಅದು ಅಭಿವೃದ್ಧಿಯ ಯುಗ. ರಸ್ತೆಗಳು ಬೆಟ್ಟವನ್ನು ಸೀಳಿಕೊಂಡು ಮೈದಳೆದವು. ಕಟ್ಟಡಗಳು ಬೆಳಗಾಗುವುದರೊಳಗೆ ತಲೆ ಎತ್ತಿದವು. ಇಪ್ಪತ್ತಿದ್ದವು ಇನ್ನೂರಾಯಿತು. ಅದು ದುಪ್ಪಟ್ಟಾಗಲು ಹೆಚ್ಚು ದಿನ ಹಿಡಿಯಲಿಲ್ಲ. ಅಲ್ಲಿ ಹೋಟೆಲ್, ಐಷಾರಾಮಿ ವಸತಿಗೃಹಗಳು, ಚಹಾದಂಗಡಿಯಿಂದ ಆರಂಭಿಸಿ ಬ್ಯಾಂಕ್ಗಳವರೆಗೆ ಎಲ್ಲವೂ ಅಸ್ತಿತ್ವ ಪಡೆದವು. ನಡೆಯಲಾರದವರನ್ನು ಹೊತ್ತೊಯ್ಯಲು ಇಪ್ಪತ್ತು ಸಾವಿರದಷ್ಟು ಕುದುರೆಗಳು ಪ್ರತಿದಿನ ಬೆಟ್ಟದ ನೆತ್ತಿಯ ಮೇಲೆ ಖರಪುಟ ಸದ್ದು ಮೊಳಗಿಸಿದವು. ಐದು ಸಾವಿರಕ್ಕೂ ಹೆಚ್ಚು ಡೋಲಿಗಳಲ್ಲಿ ವೃದ್ಧರು, ಅಬಲರನ್ನು ಹೊತ್ತು ನಡೆಯಲು ಸಿದ್ಧರಾದ ಟಿಬೇಟಿಯನ್, ನೇಪಾಳಿ ಕೂಲಿಗಳು ಪ್ರತಿದಿನ ಟೊಂಕ ಕಟ್ಟುತ್ತಿದ್ದರು. ಗೌರಿಕುಂಡದ ಕೆಳಗೆ ನಿಂತು ನೋಡಿದರೆ ಮೇಲಿನ ಕೇದಾರಕ್ಕೆ ಹೊರಟಿದ್ದ ಟ್ರಕಿಂಗ್ ಪಾಥ್ನಲ್ಲಿ ಇರುವೆ ಸಾಲುಗಳಂತೆ ಜನ ಎಡೆಬಿಡದೇ ಸಾಗುತ್ತಿದ್ದರು. ಇದರ ಹೊರತಾಗಿ ಗುಪ್ತ ಕಾಶಿಯಿಂದ ಒಂಬತ್ತು ಖಾಸಗಿ ಸಂಸ್ಥೆಗಳ 18 ಹೆಲಿಕಾಪ್ಟರ್ಗಳು ನೇರ ಕೇದಾರಕ್ಕೆ ತಲಾ ಐವತ್ತು ಸುತ್ತುಗಳ ಓಡಾಟವನ್ನು ನಡೆಸುತ್ತಿದ್ದವು. ಮೊನ್ನೆಮೊನ್ನೆ ಪ್ರವಾಹದ ದುರಂತ ನಡೆಯುವ ಜೂನ್ 16ರ ಬೆಳಗ್ಗೆ ಕೇದಾರದಲ್ಲಿನ ಕಟ್ಟಡಗಳ ಲೆಕ್ಕ ತೆಗೆದರೆ ಸಂಖ್ಯೆ 420 ಮೀರುತ್ತಿತ್ತು. ಹೇಗೇ ಲೆಕ್ಕಾಚಾರ ಹಾಕಿದರೂ ಒಂದೂವರೆ ಲಕ್ಷ ಮಂದಿ ಪ್ರತಿದಿನ ಕೇದಾರದಲ್ಲಿ ಓಡಾಡುತ್ತಿದ್ದರಿ. ಹಿಮನೆಲ ಬಿಸಿಯಾಗಬಾರದೆನ್ನಲು ಕಾರಣವೇನಿದೆ?
ಬೆಳಕಿಗಾಗಿ ಕತ್ತಲು
ಬೆಳಕಿನ ಸ್ವಾವಲಂಬನೆ ಹಿಮಾಲಯನ್ ಸಾಮ್ರಾಜ್ಯಗಳ ಆಡಳಿತವನ್ನು ಕುರುಡಾಗಿಸಿದ್ದಂತೂ ನಿಜ. ಕಡಿದಾದ ಕಣಿವೆಯಲ್ಲಿ ಮೈದುಂಬಿ ಧುಮುಕುತ್ತಿದ್ದ ನದಿಗಳನ್ನು ನೋಡಿಯೂ ಉದ್ಯಮಿಗಳು ಕೈಕಟ್ಟಿ ಕುಳಿತುಕೊಂಡರೆ ಅವರನ್ನು ಅಲ್ಪತೃಪ್ತರೆನ್ನುವುದಿಲ್ಲವೇ? ಯಾವಾಗ ದೇಶದ ಉದ್ಯಮಿಗಳು ಉತ್ತರಾಖಂಡದ ಹಸಿರಾಚ್ಛಾದಿತ ಗಿರಿಶಿಖರಗಳ ಶ್ರೇಣಿಯಲ್ಲಿ ಓಡಾಡಿ ಹೋದರೋ ಆಗಲೇ ಇಂಥದ್ದೊಂದು ದುರಂತಕ್ಕೆ ಮುನ್ನುಡಿ ಬರೆದಾಗಿ ಹೋಗಿತ್ತು. ನದಿಯ ನೀರು ವ್ಯರ್ಥವಾಗಿ ಸಮುದ್ರ ಸೇರುತ್ತಿದೆ(?) ಎಂಬ ಆಧುನಿಕ ಸಂಶೋಧನೆಯನ್ನಾಧರಿಸಿ ಈ ನದಿಗಳ ಮೂಲಕ 9 ಸಾವಿರ ಮೆಗಾವಾಟ್ ವಿದ್ಯುತ್ ಉತ್ಪಾದನೆಗೆ ಯೋಜನೆ ರೂಪಿಸಲಾಯಿತು. ಕೇಂದ್ರ ವಿದ್ಯುತ್ ಆಯೋಗ ಹಾಗೂ ಉತ್ತರಾಖಂಡ ಸರಕಾರಗಳು ಜಂಟಿಯಾಗಿ ಈ ಒಪ್ಪಂದಕ್ಕೆ ಸಹಿ ಹಾಕಿದವು. ಅಲಕೆ, ಭಾಗೀರಥಿ, ಮಂದಾಕಿನಿಯ ಒಡಲಲ್ಲಿ 70ಕ್ಕೂ ಹೆಚ್ಚು ಅಣೆಕಟ್ಟುಗಳನ್ನು ಯೋಜಿಸಲಾಯಿತು. ಅಧಿಕೃತ ಮೂಲಗಳ ಪ್ರಕಾರ ನದಿ ಕಣಿವೆಯ ಪ್ರತಿ 7 ಕಿ.ಮೀ.ಗೆ ಒಂದರಂತೆ ಅಣೆಕಟ್ಟು ಸ್ಥಾಪಿಸಿ ಜಲ ವಿದ್ಯುತ್ ಉತ್ಪಾದಿಸುವುದು ಉದ್ದೇಶ. ಈ ಪೈಕಿ ಹಲವು ಈಗಾಗಲೇ ಅಸ್ತಿತ್ವ ಪಡೆದಿವೆ. ಅವುಗಳಲ್ಲಿ ಹನುಮಾನ್ ಚೆಟ್ಟಿ ಸೇರಿದಂತೆ 9 ಕ್ಕೂ ಹೆಚ್ಚು ಒಡ್ಡುಗಳು ಸಹ ಮೊನ್ನಿನ ಪ್ರವಾಹದಲ್ಲಿ ಕೊಚ್ಚಿ ಹೋದವು. ಅವುಗಳಲ್ಲಿ ಸಂಗ್ರಹಗೊಂಡಿದ್ದ ನೀರೂ ನದಿಗೆ ಸೇರಿ ಪ್ರವಾಹದ ಭೀಕರತೆ ಇನ್ನಷ್ಟು ಹೆಚ್ಚಲು ಕಾರಣವಾಯಿತು ಎನ್ನುತ್ತಾರೆ ಸ್ಥಳೀಯರು. ಜತೆಗೆ ಪ್ರವಾಹದ ಸೆಳೆತಕ್ಕೆ ಸಿಲುಕಿ ಇನ್ನಷ್ಟು ಒಡ್ಡುಗಳು ಕೊಚ್ಚಿ ಹೋಗದಂತೆ ತಡೆಯುವ ಉದ್ದೇಶದಿಂದ ಸರಕಾರವೇ ಸ್ವಯಂ ಪ್ರೇರಿತವಾಗಿ ಉಳಿದ ಅಣೆಕಟ್ಟುಗಳ ಬಾಗಿಲು ತೆರೆದು ನೀರನ್ನು ಹೊರಬಿಟ್ಟಿತು. ಇದರಿಂದ ಪ್ರವಾಹದ ನೀರಿನ ಮಟ್ಟ ಮತ್ತಷ್ಟು ಹೆಚ್ಚಿ, ಮುಳುಗಡೆಯ ಪ್ರಮಾಣ ಬೆಳೆಯಿತು.
ಇಲ್ಲಿ ಇನ್ನೊಂದು ಗಮನಿಸಬೇಕಾದ ಸಂಗತಿ, ಎರಡು ಗುಡ್ಡಗಳನ್ನು ಬೆಸೆದು ಒಡ್ಡು ಕಟ್ಟುವುದು ಸುಲಭದ ಮಾತಲ್ಲ. ಅದಕ್ಕಾಗಿ ಬಲಿಷ್ಠ ಅಡಿಪಾಯ ಅಗತ್ಯ. ಇದಕ್ಕಾಗಿ ನದಿ ಪಾತ್ರದಲ್ಲಿನ ಬಂಡೆಗಳನ್ನು ಸಿಡಿಮದ್ದುಗಳನ್ನು ಇಟ್ಟು ಸ್ಫೋಟಿಸಲಾಗಿದೆ. ಕಣಿವೆಯುದ್ದಕ್ಕೂ ನಿರಂತರ ನಡೆದ ಇಂಥ ಸ್ಫೋಟಗಳ ಸರಣಿ ನದಿ ಪಾತ್ರವನ್ನು ದುರ್ಬಲಗೊಳಿಸಿದೆ. ನದಿ ದಂಡೆಯಲ್ಲಿನ ಸಾವಿರಾರು ಮರಗಳನ್ನು ಕತ್ತರಿಸಲಾಗಿದೆ. ಇದು ನದಿಗಳ ದಿಕ್ಕನ್ನು ಬದಲಿಸಿತು. ಕೆಲವೆಡೆ ಬಲವಂತದಿಂದ ನದಿಯ ದಿಕ್ಕನ್ನು ಬದಲಿಸಿಕೊಂಡು ಹೋಗಲಾಗಿದೆ. ಅಲಕಾನಂದ, ಮಂದಾಕಿನಿ ಸಂಗಮ ತಾಣದಿಂದ ತುಸುವೇ ದೂರದಲ್ಲಿ ವಿದ್ಯುತ್ ಯೋಜನೆಗಾಗಿ 20 ಕಿ. ಮೀ. ಸುರಂಗ ತೋಡಿ ನದಿಯನ್ನು ತಿರುಗಿಸಲಾಗಿದೆ. ಪ್ರವಾಹ ಎಲ್ಲೆಂದರಲ್ಲಿ ನುಗ್ಗಲು ಇವೆಲ್ಲವೂ ಕಾರಣವಲ್ಲವೇ? ನೀರು ನಿಂತು ಬೆಟ್ಟಗಳ ಬುಡ ಸಡಿಲಗೊಂಡು ಭೂ ಕುಸಿತಗಳು ಏರ್ಪಟ್ಟು ಪ್ರವಾಹದ ಬಿರಿಸು ಹೆಚ್ಚಿದ್ದಕ್ಕೆ ಯಾರು ಹೊಣೆ?
ಹಿಮಾಲಯ ಪರ್ವತ ಶ್ರೇಣಿಗಳೆಂದರೆ ಅವಿನ್ನೂ ಹೆಜ್ಜೆಯಿಡಲು ಕಲಿಯುತ್ತಿರುವ, ದೃಢವಾಗಿ ನಿಲ್ಲಲಾರದ ಹಸುಳೆಯಿದ್ದಂತೆ. ಸಮುದ್ರತಳದಲ್ಲಿ ಭೂ ಫಲಗಳ ಚಲನೆಯಿಂದ ದಕ್ಷಿಣದ ಪ್ರದೇಶಗಳು ಒತ್ತಡಕ್ಕೆ ಒಳಗಾಗಿ ಉತ್ತರದಲ್ಲಿ ತಲೆ ಎತ್ತಿ ಸಾವಿರಾರು ವರ್ಷಗಳ ಹಿಂದೆ ಸೃಷ್ಟಿಗೊಂಡ ಹಿಮಾಲಯ ಗಟ್ಟಿ ಪದರುಗಳಿಂದ ಆದದ್ದಲ್ಲ. ಅಲ್ಲಿನ ಉನ್ನತ ಗಿರಿಶಿಖರಗಳು ಸುಭದ್ರ ಹಿಡಿತವನ್ನು ಹೊಂದಿಲ್ಲ. ಅದೊಂದು ರೀತಿಯಲ್ಲಿ ಹೊಯ್ದು ನಿಲ್ಲಿಸಿದ ಮಣ್ಣಿನ ರಾಶಿಯಿದ್ದಂತೆ. ಆದರೆ ಹಸಿರಿನಿಂದ ಆವೃತ್ತಗೊಂಡು, ತನ್ನೊಡಲಲ್ಲಿ ಅಸಂಖ್ಯ ಝರಿ, ತೊರೆಗಳನ್ನು ನಿರ್ಮಿಸಿಕೊಂಡು, ನಟ್ಟನಡುವೆ ನದಿಗಳನ್ನು ಹರಿಗೊಟ್ಟು ಒಟ್ಟಾರೆ ಭೂ ಸ್ವರ್ಗದಂತೆ ಕಂಗೊಳಿಸುತ್ತದೆ. ಜತೆಗೆ ಬಹುತೇಕ ಪುಣ್ಯ ನದಿಗಳು, ಸಂಗಮತಾಣಗಳು, ಮಹತ್ವದ ಪುಣ್ಯಕ್ಷೇತ್ರಗಳು ಈ ಬೆಟ್ಟಗಳಗುಂಟ ಇವೆ. ಚಳಿಯ ದಿನಗಳಲ್ಲಿ ಶಿಖರಗಳ ಮೇಲೆ ಹಚ್ಚಡ ಹೊದೆಸುವ ಮನಮೋಹಕ ಮಂಜಿನ ಪದರ. ಪ್ರವಾಸಿಗರ ನೆಚ್ಚಿನ ತಾಣವೆನಿಸಿಕೊಳ್ಳಲು ಇನ್ನೇನು ಬೇಕು? ಸರಕಾರ ಇದನ್ನೇ ಬಂಡವಾಳವಾಗಿಸಿಕೊಂಡು ಉದ್ದಿಮೆಯನ್ನು ಅಭಿವೃದ್ಧಿಪಡಿಸಲು ಹವಣಿಸಿತು. ಕಳೆದ ನಾಲ್ಕೈದು ವರ್ಷಗಳಲ್ಲಿ ಕೇದಾರ ಮತ್ತು ಬದರಿಗೆ ಭೇಟಿ ನೀಡುವವರ ಸಂಖ್ಯೆ ಗಣನೀಯ ಹೆಚ್ಚಳಗೊಂಡಿದೆ. ಹೀಗಾಗಿ ಪ್ರವಾಸಿಗರಿಗೆ ಮೂಲ ಸೌಕರ್ಯ ಕಲ್ಪಿಸಲು ಸರಕಾರ ಮುಂದಾಯಿತು. ಬೆಟ್ಟಗಳನ್ನು ಸೀಳಿ ರಸ್ತೆ ನಿರ್ಮಿಸಲಾಯಿತು. ಇದಕ್ಕಾಗಿ ಬಂಡೆಗಳನ್ನು ಬುಡಮೇಲು ಮಾಡಲಾಯಿತು. ಮರಗಳನ್ನು ಕಡಿದುರುಳಿಸಲಾಯಿತು. ರಸ್ತೆ ಇದ್ದ ಮೇಲೆ ವಾಹನಗಳು ಹೆಚ್ಚುವುದು ಸಹಜ. ಐದು ವರ್ಷದ ಹಿಂದಷ್ಟೇ ಉತ್ತರಾಖಂಡದಲ್ಲಿ 83 ಸಾವಿರ ವಾಹನಗಳು ನೋಂದಣಿಗೊಂಡಿದ್ದವು. ಕಳೆದ ವರ್ಷ ಇದು 1,80,000ಕ್ಕೆ ಏರಿಕೆಯಾಗಿದೆ. ವಾಹನಗಳ ಭರಾಟೆ ಹೆಚ್ಚಿದಂತೆಲ್ಲ ಬೆಟ್ಟಗಳ ಬುಡ ಅಭದ್ರಗೊಂಡಿತು. ಭೂ ಕುಸಿತ ಹೆಚ್ಚಿತು. ವಾಯು ಮಾಲಿನ್ಯದ ಪ್ರಮಾಣ ಹೆಚ್ಚುತ್ತಾ ಸಾಗಿ ವಾತಾವರಣದ ಬಿಸಿ ಏರಿತು.
ಹೆಲಿಕಾಪ್ಟರ್ಗಳ ಓಡಾಟವೂ ವಾಯುಮಂಡಲಕ್ಕೆ ಇಂಗಾಲಾಮ್ಲದ ಕೊಡುಗೆಯನ್ನು ಯಥೇಚ್ಛವಾಗಿ ನೀಡಿತು. ಹಿಮದ ಪದರುಗಳು ಅಲುಗಿ ಕಂಗಾಲಾದವು. ಬಿಸಿಯೇರಿ ಮಂಜು ಕರಗಿ ನದಿಯಲ್ಲಿ ಪ್ರವಾಹ ಸೃಷ್ಟಿಸಿದರೆ ಅದು ಪ್ರಕೃತಿಯ ತಪ್ಪಾಗಲಿಕ್ಕಿಲ್ಲ ಅಲ್ಲವೇ?
ನದಿಯ ಎದೆಯ ಮೇಲೆ
ಎಲ್ಲಕ್ಕಿಂತ ದೊಡ್ಡ ಶಾಪವಾದದ್ದು ನಗರೀಕರಣ. ಕಣಿವೆಯುದ್ದಕ್ಕೂ ಒತ್ತುವರಿ ಎಗ್ಗಿಲ್ಲದೇ ಸಾಗಿತ್ತು. ಒಂದೆಡೆ ಪರ್ವತಗಳ ಉದ್ದಕ್ಕೂ ಕೃಷಿ ಭೂಮಿಗಳು ನಿರ್ಮಾಣಗೊಂಡವು. ಕೃಷಿಗಾಗಿ ಭೂಮಿಯನ್ನು ಉಳುಮೆಗೆ ಒಳಪಡಿಸುತ್ತಿದ್ದಂತೆಯೇ ಭದ್ರವಾಗಿ ನಿಂತಿದ್ದ ಗುಡ್ಡಗಳು ಏಕಾಏಕಿ ಕುಸಿಯಲು ಆರಂಭಿಸಿದವು. ಇನ್ನೊಂದೆಡೆ ನದಿಯ ಇಕ್ಕೆಲಗಳಲ್ಲೂ ಒತ್ತುವರಿ ಹೆಚ್ಚಿ ಅಲ್ಲೆಲ್ಲಾ ಮನೆಗಳು, ಕಟ್ಟಡಗಳು ನಿರ್ಮಾಣಗೊಂಡವು. ಇನ್ನೊಂದೆಡೆ ಕೇದಾರದಂತಹ ಕ್ಷೇತ್ರದ ಹಾದಿಯುದ್ದಕ್ಕೂ ಪಟ್ಟಣಗಳು ಮಿತಿ ಮೀರಿ ಬೆಳೆಯತೊಡಗಿದವು. ಪ್ರವಾಸಿಗಳ ಸಂಖ್ಯೆ ಹೆಚ್ಚುತ್ತಿದ್ದಂತೆಲ್ಲಾ ಹೋಟೆಲ್ಗಳು, ವಾಣಿಜ್ಯ ಸಂಕೀರ್ಣ, ವಸತಿಗಾಗಿ ಬಹುಮಹಡಿ ಕಟ್ಟಡಗಳೂ, ರೆಸಾರ್ಟ್ಗಳು ನಿರ್ಮಾಣಗೊಳ್ಳುತ್ತಲೇ ಇದ್ದವು. ನದಿ ಪಾತ್ರದ ನೂರು ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ನಿರ್ಮಾಣಕ್ಕೆ ನಿಷೇಧವಿದ್ದರೂ ಅದನ್ನು ಯಾರೂ ಗಂಭೀರವಾಗಿ ಪರಿಗಣಿಸಿರಲಿಲ್ಲ. 2012ರಲ್ಲಿ ಭಾಗೀರಥಿ ನದಿ ಪಾತ್ರವನ್ನು ಪರಿಸರ ಸೂಕ್ಷ್ಮ ಪ್ರದೇಶ ಕೇಂದ್ರ ಸರಕಾರ ಘೋಷಿಸಿತ್ತು. ಇದನ್ನು ರಾಜ್ಯ ಸರಕಾರವೇ ವಿರೋಧಿಸಿತು. ಪರಿಸರ ಇಲಾಖೆಯ ಸಮ್ಮತಿಯೂ ಇಲ್ಲದೇ ಕಟ್ಟಡಗಳು ಎದ್ದವು. ರುದ್ರಪ್ರಯಾಗ, ಚಮೋಲಿ, ಶ್ರೀನಗರ ಮತ್ತಿತರೆಡೆ ಅಕ್ರಮ ಕಟ್ಟಡಗಳ ಸಂಖ್ಯೆ ಲೆಕ್ಕಕ್ಕೆ ಸಿಗದಷ್ಟು ಅಗಿತ್ತು. ಸ್ಥಿರವಿಲ್ಲದ ಬೆಟ್ಟವನ್ನು ಇಂಥ ಅಕ್ರಮ ನಿರ್ಮಾಣ ಮತ್ತಷ್ಟು ದುರ್ಬಲಗೊಳಿಸಿತು. ನದಿಯ ಹರಿವಿನ ತಾಣವನ್ನು ಕಿರುದಾಗಿಸಿತ್ತು. ಇದೀಗ ಪ್ರವಾಹ ಇವೆಲ್ಲವನ್ನೂ ನಾಶಗೊಳಿಸಿದ್ದರೆ ಅದರಲ್ಲಿ ಪ್ರಕೃತಿಯ ತಪ್ಪೇನಿದೆ? ಅದು ತನ್ನ ಜಾಗದಲ್ಲಿ ತಾನು ಹರಿದಿದೆ.
ಕಾಡು ಕಡಿದು ನಾಡು
ಇನ್ನು ಗಣಿಗಾರಿಕೆ, ವಿದ್ಯುತ್ ಯೋಜನೆಗಳಿಂದಾದ ಅರಣ್ಯ ನಾಶವನ್ನು ಪರಿಗಣಿಸಿದರೆ ಹಿಮಾಲಯ ಕಣಿವೆ ಉಳಿದಿರುವುದೇ ಅಚ್ಚರಿಯ ಸಂಗತಿ. ಪ್ರಮುಖ 14 ಕಣಿವೆಗಳಲ್ಲಿ ವೃಕ್ಷ ಹನನ ನಿರಂತರವೆಂಬಂತಾಗಿ ದಶಕಗಳಾದವು. ಸಿಐಜಿ ವರದಿ ಗಢವಾಲ್ ವ್ಯಾಪ್ತಿಯಲ್ಲಿ ನಡೆದ ಮರಗಳ ಮಾರಣಹೋಮಗಳ ಪರಿಣಾಮ ಭೀಕರ ಅವಘಡದ ಸಾಧ್ಯತೆಯಿದೆ ಎಂದು ಮೂರು ವರ್ಷಗಳ ಹಿಂದೆಯೇ ಎಚ್ಚರಿಸಿತ್ತು. ಭಾಗೀರಥಿ ಮತ್ತು ಅಲಕಾನಂದೆಯ ಹರಿವಿನುದ್ದಕ್ಕೂ ನಡೆದಿರುವ ಅರಣ್ಯ ನಾಶದಿಮದ ಮಣ್ಣಿನ ಸವಕಳಿ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇತ್ತು. ದಿಢೀರ್ ಪ್ರವಾಹ ತಾಳಿಕೊಳ್ಳುವ ಶಕ್ತಿಯನ್ನು ಇಲ್ಲಿನ ಭೂಮಿ ಕಳೆದುಕೊಂಡಿದ್ದರೆ ಮತ್ತೆ ಅಚ್ಚರಿಯೇನಿದೆ?
ಒಡ್ಡು ಒಡೆದಿತ್ತು ನೋಡಾ
ಹಿಮಾಲಯದ ಉದ್ದಕ್ಕೂ ಏನಿಲ್ಲವೆಂದರೂ 200ಕ್ಕೂ ಹೆಚ್ಚು ಹಿಮ ಸರೋವರಗಳಿವೆ. ವಾತಾವರಣದ ಉಷ್ಣತೆ ಹೆಚ್ಚಿದಂತೆಲ್ಲಾ ಇವುಗಳ ನೀರಿನ ಮಟ್ಟವೂ ಹೆಚ್ಚುತ್ತದೆ. ಯಾವುದೇ ಮುನ್ಸೂಚನೆ ಇಲ್ಲದೆಯೇ ಈ ಕೊಳ್ಳಗಳು ಉಕ್ಕುತ್ತವೆ. ಒಂದಲ್ಲಾ ಒಂದು ಒಡ್ಡುಗಳು ಒಡೆಯುತ್ತಲೇ ಇರುತ್ತವೆ. ಹಿಮಾಲಯದ ಶಿಖರಾಗ್ರಗಳಲ್ಲಿರುವ ಇಂಥ ಕೆರೆಗಳಲ್ಲಿ ನೀರನ್ನು ನಿಯಂತ್ರಿಸುವುದು ಯಾರಿಂದಲೂ ಸಾಧ್ಯವಿಲ್ಲ. ಇನ್ನು ಮುನ್ನೆಚ್ಚರಿಕೆಯ ಮಾತಂತೂ ದೂರವೇ ಉಳಿಯಿತು. ಮೊನ್ನೆ ಕೇದಾರ ಪ್ರವಾಹಕ್ಕೂ ಇಂಥದ್ದೇ ಹಿಮಕೊಳದ ಒಡ್ಡು ಕೊಚ್ಚಿ ಹೋಗಿದ್ದೂ ಕಾರಣವೆನ್ನುತ್ತಾರೆ ತಜ್ಞರು. ಕೇದಾರದಿಂದ 12 ಕಿ.ಮೀ. ಉತ್ತರದಲ್ಲಿರುವ ಗಾಂಧಿ ಸರೋವರಕ್ಕೆ ನೀರಿನ ಒಳ ಹರಿವು ಹೆಚ್ಚಿತು. ಆ ಭಾಗದಲ್ಲಿ ಬಿಟ್ಟೂ ಬಿಡದಂತೆ ಸುರಿದ ಮಳೆ, ಹೆಚ್ಚಿದ ಹಿಮಪದರುಗಳ ಕರಗುವಿಕೆಯ ಪ್ರಮಾಣ ಇಂಥ ಏಕಾಏಕಿ ಒಳ ಹರಿವಿಗೆ ಕಾರಣ. ಇಷ್ಟು ಬೃಹತ್ ಪ್ರಮಾಣದ ನೀರನ್ನು ಹಿಡಿದಿಡಲು ಒಡ್ಡಿಗೆ ಸಾಧ್ಯವಾಗಲಿಲ್ಲ. ಅದು ಒಡೆಯುತ್ತಿದ್ದಂತೆ ಸರೋವರದಲ್ಲಿದ್ದ ಅಪಾರ ಜಲರಾಶಿ ಹದ್ದು ಮೀರಿ ಕೇದಾರದತ್ತ ನುಗ್ಗಿ ಬಂತು. ಹಾಗೆ ಬರುವಾಗ ಜತೆಗೆ ಬಂಡೆಗಳ ಸಮೂಹವನ್ನು, ಮಣ್ಣಿನ ರಾಶಿಯನ್ನು ಹೊತ್ತು ತಂತು. ಕೇದಾರದ ಕಟ್ಟಡಗಳು ಆ ರಭಸಕ್ಕೆ ಕುಸಿದವು. ಅವಶೇಷಗಳೊಂದಿಗೆ ಬೆಟ್ಟಗಳು ಜರಿದು ಪ್ರವಾಹದ ಶಕ್ತಿಯನ್ನು ಹೆಚ್ಚಿಸಿದವು. ಮತ್ತೆ ಎಡ ಬಿಡದೇ ಮಳೆ ಸುರಿಯಿತು. ಪ್ರವಾಹ ಹೆಚ್ಚಿತು... ಅಂದುಕೊಂಡಿರದ ಸುನಾಮಿ ಸೃಷ್ಟಿಯಾಗಿತ್ತು. ವಿನಾಶಲೀಲೆಯ ಮತ್ತೊಂದು ಅಧ್ಯಾಯ ಇತಿಹಾಸದಲ್ಲಿ ದಾಖಲಾಯಿತು. ಈಗ ಮರುಗುತ್ತಿದ್ದೇವೆ. ಮಾನವನ ಮರುಳುತನ ಇನ್ನೂ ನಿಂತಿಲ್ಲ. ಯಾವೊಂದು ದುರ್ಘಟನೆಯಿಂದಲೂ ನಾವು ಪಾಠ ಕಲಿಯುವದೇ ಇಲ್ಲ.
ಕಾನೂನು ಮಾಡಲಾಗದ್ದನ್ನು ಪ್ರಕೃತಿ ಮಾಡಿತ್ತು!
ದುರಂತಕ್ಕೆ ಒಂದೇ ತಿಂಗಳು ಹಿಂದೆ ಸರ್ವೋಚ್ಚ ನ್ಯಾಯಾಲಯ ಕೇದಾರದ ಅತಿಕ್ರಮಗಳ ವಿರುದ್ಧ ಗುಡುಗಿತ್ತು. ದೇವ ನೆಲದಲ್ಲಿ ಮಿತಿ ಮೀರಿದ ಒತ್ತುವರಿಯಾಗುತ್ತಿರುವುದರ ವಿರುದ್ಧ, ನದಿ ಪಾತ್ರದಲ್ಲಿ ಹೆಚ್ಚುತ್ತಿರುವ ಅಕ್ರಮ ಕಟ್ಟಡಗಳನ್ನು ಪ್ರತಿಭಟಿಸಿ ಕೇದಾರನಾಥೇಶ್ವರ ದೇಗುಲ ಟ್ರಸ್ಟ್ ನ್ಯಾಯಾಲಯದ ಮೊರೆ ಹೊಕ್ಕಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಲಯ ಎಲ್ಲ ಒತ್ತುವರಿದಾರರಿಗೆ, ಕಟ್ಟಡ ಮಾಲೀಕರಿಗೆ ನೋಟಿಸ್ ಜಾರಿಗೊಳಿಸಿ ತಕ್ಷಣವೇ ತೆರವುಗೊಳಿಸುವಂತೆ ಸೂಚಿಸಿತ್ತು. ಮೇ ತಿಂಗಳಲ್ಲಿ ಜರುಗಿದ ಈ ನ್ಯಾಯಾಂಗ ವಿದ್ಯಮಾನವನ್ನು ಖಂಡಿಸಿ, ಕೇದಾರದ ಸುತ್ತಲಿನ ಅಂಗಡಿ ಮುಂಗಟ್ಟುಗಳ ಮಾಲೀಕರು, ರೆಸಾರ್ಟ್, ಹೋಟೆಲು ಉದ್ದಿಮೆದಾರರು, ಕಟ್ಟಡಗಳ ವಾರಸುದಾರರು, ಘೋಡಾವಾಲಾಗಳು, ಕಾರ್ಮಿಕರು ಬೃಹತ್ ಸಂಖ್ಯೆಯಲ್ಲಿ ಜಮಾಯಿಸಿ ದೇಗುಲದೆದುರೇ ಪ್ರತಿಭಟನೆ ನಡೆಸಿದ್ದರು. ಯಾವುದೇ ಕಾರಣಕ್ಕೂ ತಾವು ತೆರವುಗೊಳಿಸುವುದಿಲ್ಲ. ಇದರಿಂದ ತಮ್ಮ ಜೀವನೋಪಾಯಕ್ಕೆ ಧಕ್ಕೆ ಬರುತ್ತದೆ. ಇವೆಲ್ಲವನ್ನೂ ಸಕ್ರಮಗೊಳಿಸಬೇಕು ಎಂದು ಆಗ್ರಹಿಸಿದ್ದರು. ನ್ಯಾಯಾಲಯ, ಸರಕಾರ, ಕಾನೂನು, ದೇಗುಲ ಟ್ರಸ್ಟ್ ಯಾರಿಂದಲೂ ಆಗದ ಕೆಲಸವನ್ನು ಪ್ರಕೃತಿ ಮಾಡಿ ಮುಗಿಸಿತ್ತು. ಎಲ್ಲವನ್ನೂ ಮೌನವಾಗಿ ನೋಡುತ್ತಿದ್ದ ಕೇದಾರನಾಥೇಶ್ವರ ಸೂಕ್ತ ಬುದ್ಧಿ ಕಲಿಸಲು ತೀರ್ಮಾನಿಸಿದ್ದಿರಬೇಕು. ಪ್ರವಾಹದ ನೆಪದಲ್ಲಿ ಈಗ ಎಲ್ಲವೂ ತನ್ನಿಂದ ತಾನೇ ತೆರವುಗೊಂಡಿದೆ. ಇದು ದೈವ ಲೀಲೆಯೋ ಸಮತೋಲನ ಕಾಪಾಡುವ ಪ್ರಕೃತಿಯ ಜಾಣ್ಮೆಯೋ ಅಪರಾಧಕ್ಕೆ ಸಂದ ಶಿಕ್ಷೆಯೋ ಒಟ್ಟಾರೆ ಆತ್ಮಾವಲೋಕನಕ್ಕೆ ಇದು ಸಕಾಲ.
ಎಚ್ಚರಿಸಿತ್ತು
ಮೆಟ್ರಾಲಾಜಿಕಲ್ ಇಲಾಖೆ ಹೇಳುವ ಪ್ರಕಾರ, ಅದು ಉತ್ತರಾಖಂಡದ ಸರ್ಕಾರವನ್ನು ಜೂನ್ 14ರಂದೇ ಎಚ್ಚರಿಸಿತ್ತು. ಸಿಎಜಿ ವರದಿಯು ಹೈಡೆಲ್ ಪ್ರಾಜೆಕ್ಟ್ಗಳಿಂದಾಗಿ ಭಾಗೀರಥಿ, ಅಲಕನಂದಾ ನದಿಗಳನ್ನೊಳಗೊಂಡಂತೆ, ಪರ್ವತಶ್ರೇಣಿಯಲ್ಲಿ ಉಂಟಾಗಬಲ್ಲ ಅತಿದೊಡ್ಡ ಅನಾಹುತವನ್ನು ವರದಿ ಮಾಡಿತ್ತು. ವಿಜ್ಞಾನಿಗಳು ಪದೇಪದೆ 'ಹಿಮಾಲಯದ ಸುನಾಮಿ'ಯಿಂದಾಗಬಹುದಾದ ಹಿಮನದಿಗಳ ದಡಗಳು ಬಿರುಕು ಬೀಳುವುದರ ಬಗ್ಗೆ ಸೂಚನೆ ನೀಡಿದ್ದರು.
ನಷ್ಟದ ಅಳತೆ ಮೀರಿದ್ದೇಕೆ?
-ಅಣೆಕಟ್ಟುಗಳನ್ನು ನಿರ್ಮಿಸಲು ಗುಡ್ಡಗಳಲ್ಲಿ ಸಿಡಿಮದ್ದು ಸಿಡಿಸಲಾಗಿದೆ.
-ಯಾತ್ರಿಗಳ ದಂಡು, ಹೊರಗಿನಿಂದ ಬಂದವರೇ ಅಲೆಗಳಿಂದ ಹಾನಿಗೊಳಗಾಗಬಲ್ಲ ಸ್ಥಳಗಳಲ್ಲಿ ಜಮಾಯಿಸಿದ್ದರು.
-ನದಿ ತೀರಗಳಲ್ಲಿ ನಗರ ನಿರ್ಮಾಣ ಕಾರ್ಯವನ್ನು ಪರೀಕ್ಷಿಸಿಲ್ಲ.
-ಮರಳಿನ ಕಳ್ಳಸಾಗಾಣಿಕೆ, ಇದರಿಂದ ದಡ ಸಮರ್ಥವಾಗಿ ನೀರನ್ನು ತಡೆಯುವುದಿಲ್ಲ.
-ಕರಗುತ್ತಿರುವ ಹಿಮಾಲಯ- ಪರಿಸದರಲ್ಲಿನ ಬದಲಾವಣೆಗಳು ಹಿಮಗಿರಿ ಶ್ರೇಣಿಗೆ ಬಲವಾದ ಪೆಟ್ಟು ನೀಡುತ್ತಿವೆ. ಅಧಿಕ ಪ್ರವಾಹಗಳ ಸಾಧ್ಯತೆ ಇದೆ.
-ಹಿಮಾಲಯದ ಮೇಲ್ಪದರದ ತಾಪಮಾನ 1-2 ಡಿಗ್ರಿ ಸೆಲ್ಸಿಯಸ್ ಹೆಚ್ಚಿದೆ. ಇದು 2050ರ ಹೊತ್ತಿಗೆ ಇನ್ನಷ್ಟು ಹೆಚ್ಚಾಗುವ ಸಂಭವವಿದೆ.
-20,000ದಷ್ಟು ಮಂಜಿನ ಸರೋವರಗಳು, ಮಂಜು ಕರಗುವಿಕೆಯಿಂದಲೇ ಉಂಟಾಗುತ್ತಿದೆ.
-200ಕ್ಕಿಂತ ಹೆಚ್ಚು ಮಂಜಿನ ಸರೋವರಗಳು ಭಯಾನಕ ಮೇಘ ಸಿಡಿತವನ್ನು ಉಂಟುಮಾಡುತ್ತವೆ.
ಬೆಳಕಿನ ದಾಹ ತಂದ ಕತ್ತಲೆ
-168 ಜಲವಿದ್ಯುತ್ ಯೋಜನೆಗಳನ್ನು ಅರುಣಾಚಲ ಪ್ರದೇಶದಲ್ಲಿ ಉದ್ದೇಶಿಸಲಾಗಿದೆ.
-70 ಜಲವಿದ್ಯುತ್ ಯೋಜನೆಗಳನ್ನು ಉದ್ದೇಶಿಸಲಾಗಿದೆ.
-57000 ಎಂಡಬ್ಲ್ಯು, ಅರುಣಾಚಲದಲ್ಲಿರುವ ಜಲ ವಿದ್ಯುತ್ಶಕ್ತಿಯ ಪ್ರಮಾಣ. ಇದು ರಾಷ್ಟ್ರದ ಒಂದನೇ ಮೂರು ಭಾಗದಷ್ಟು.
- ಚಿತ್ರ-ಲೇಖನ:
ರಾಧಾಕೃಷ್ಣ ಎಸ್. ಭಡ್ತಿ
abhyagatha@yahoo.co.in
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


