ಸಹಸ್ರಾಕ್ಷಿಗಳಿಂದ ನೋಡಿದ ಅರವಿಂದರ ಕಾವ್ಯ ಜಗತ್ತು
ಕಳೆದ ಶತಮಾನದ ಎಪ್ಪತ್ತು ಮತ್ತು ಎಂಬತ್ತರ ದಶಕದ ಕನ್ನಡ ಕಾವ್ಯದಲ್ಲಿ ಹೊಸದೊಂದು ಧಾರೆ ಕಂಡುಬಂತು. ದಲಿತ ಸಾಹಿತಿಗಳು ಮನಬಿಚ್ಚಿ ತಮ್ಮ ನೋವನ್ನು ಅಕ್ಷರದಲ್ಲಿ ...
ಕಳೆದ ಶತಮಾನದ ಎಪ್ಪತ್ತು ಮತ್ತು ಎಂಬತ್ತರ ದಶಕದ ಕನ್ನಡ ಕಾವ್ಯದಲ್ಲಿ ಹೊಸದೊಂದು ಧಾರೆ ಕಂಡುಬಂತು. ದಲಿತ ಸಾಹಿತಿಗಳು ಮನಬಿಚ್ಚಿ ತಮ್ಮ ನೋವನ್ನು ಅಕ್ಷರದಲ್ಲಿ ಸಾಕ್ಷಾತ್ಕರಿಸಿದರು. ಹಾಗೆ ಬರೆದ ಪ್ರಮುಖರಲ್ಲಿ ಡಿ.ಸಿದ್ದಲಿಂಗಯ್ಯ, ದೇವನೂರು ಮಹಾದೇವ, ಶಿವತೀರ್ಥನ್, ಗಂಗಾರಾಮ್ ಚಂಡಾಳ ಮೊದಲಾದವರು ಪ್ರಮುಖರು. ಅವರ ಸಾಲಿನಲ್ಲಿ ನಿಲ್ಲುವವರು ಅರವಿಂದ ಮಾಲಗತ್ತಿಯವರು.
ಆರಂಭದಲ್ಲಿ ಕೇವಲ ದಲಿತರ ದನಿಯಾಗಿ ಕೇಳಿಸಿದ್ದ ಅವರ ಕಾವ್ಯ ಇಂದು ಸಮಾಜದ ಎಲ್ಲ ಶೋಷಿತರ ಪರವಾಗಿ ದನಿ ಎತ್ತುತ್ತ್ತಿದೆ. ಬದುಕಿನ ಇತರ ಆಯಾಮಗಳ ಕಡೆಗೂ ಅವರು ಮುಖಮಾಡಿದ್ದಾರೆ. ಇದು ಅವರ ಕವಿಪ್ರಜ್ಞೆಯ ಬೆಳವಣಿಗೆಯನ್ನು ಸೂಚಿಸುತ್ತದೆ. ಕನ್ನಡದ ಪ್ರಮುಖ ದಲಿತ ಕವಿಗಳು ಒಂದೋ ಎರಡೋ ಮಹತ್ವದ ಕೃತಿಗಳನ್ನು ನೀಡಿ ನಂತರ ಹಿನ್ನೆಲೆಗೆ ಸರಿದಂತೆ ಇದ್ದಾರೆ. ಅಂಥದ್ದರಲ್ಲಿ ಅರವಿಂದ ಮಾಲಗತ್ತಿಯವರು ನಿರಂತರವಾಗಿ ಕಾವ್ಯೋದ್ಯೋಗದಲ್ಲಿ ತೊಡಗಿಕೊಂಡಿರುವುದು ಗಮನಾರ್ಹ.
ಕವಿಗಳು ಮೊದಲು 'ನಾವೂ ಮನುಷ್ಯರು' ಎಂದು ಸಾರಿಕೊಳ್ಳುವ ಅಗತ್ಯವಿದೆ. ಕಾವ್ಯ ಜನಮುಖಿಯಾಗಬೇಕಾದರೆ ನೆಲಕ್ಕೆ ಸಂಬಂಧಿಸಿದ್ದಾಗ ಮಾತ್ರ ಸಾಧ್ಯ. ಹೀಗಾಗಿ ಕವಿ ಮೊದಲು ಮನುಷ್ಯನಾಗಿರಬೇಕಾಗುತ್ತದೆ ಎಂದು ಅರವಿಂದ ಮಾಲಗತ್ತಿಯವರು ತಮ್ಮ ಈ 'ಸಹಸ್ರಾಕ್ಷಿ' ಕವನ ಸಂಕಲನದ ಮುನ್ನುಡಿಯಲ್ಲಿ ಬರೆದಿದ್ದಾರೆ. ಅಲ್ಲಿಯೇ ಬರೆದ ಇನ್ನೊಂದು ಮಾತು, 'ಕಾವ್ಯ ಹೇಗಿಬೇಕು ಎಂದರೆ- ಅತ್ತ ಮುಗಿಲಲ್ಲಿಯೇ ತೇಲಾಡುವಂತಿರಬಾರದು ಅಥವಾ ಇತ್ತ ನೆಲಕ್ಕೆ ಹತ್ತಿದ ಉಣ್ಣೆಯಂತೆಯೂ ಇರಬಾರದು. ಇವೆರಡರ ನಡುವೆ ಕಾವ್ಯ ಉಯ್ಯಾಲೆಯಂತಾಗಬೇಕು- ಈ ಹೇಳಿಕೆಗಳಿಗೆ ಉದಾಹರಣೆಯಾಗಬಲ್ಲ ಹಲವು ಕವಿತೆಗಳು ಇದರಲ್ಲಿವೆ.
'ಮೂಕನಿಗೆ ಬಾಯಿ ಬಂದಾಗ' ಕೃತಿಯಿಂದ ಈ ಸಂಕಲನದವರೆಗೆ ಅರವಿಂದ ಕವಿಯಾಗಿ ಅರಳಿದ ಪರಿ ಅಪರೂಪದ್ದು. ಮೊದಲಿಗೆ ಅವರು ಬಾಯಿ ತೆರೆದಾಗ ಹೊಮ್ಮಿದ್ದು ಆಕ್ರೋಶ. ಕೋಪದ ಬಿರುನುಡಿಗಳು. ಈಗ ತುಂಬಾ ಮಾಗಿದ್ದಾರೆ. ಅವರ ಕಾವ್ಯದಲ್ಲಿ ಸಂಯಮವನ್ನು ನಾವೀಗ ಕಾಣಬಹುದು. ಅಳೆದು ತೂಗಿ ಪದ ಪ್ರಯೋಗವನ್ನು ಅವರು ಇಲ್ಲಿ ಮಾಡಿದ್ದಾರೆ. 'ಗುರಿ ಇರಲಿ ಗಗನದೆಡೆಗೆ ನಡೆ ಇರಲಿ ಭುವಿಯೆಡೆಗೆ' ಎನ್ನುವ ಕಾವ್ಯ ಧೋರಣೆ ಅವರದು. ಸಮಕಾಲೀನ ಸಾಮಾಜಿಕ ಮತ್ತು ರಾಜಕೀಯ ವ್ಯವಸ್ಥೆಯ ಬಗ್ಗೆ ಈಗಲೂ ಅವರಲ್ಲಿ ಜಿಗುಪ್ಸೆ ಇದೆ. ಅಸಹ್ಯವೆನಿಸುತ್ತದೆ ಅವರಿಗೆ.
'ಹುಡುಗಿಯರು
ಅಪ್ಪಿಕೊ ಚಳುವಳಿ ಮಾಡಿದರೆ
ಮುದುಕರೂ ಒಪ್ಪಿಕೊ ಚಳುವಳಿ ಮಾಡ್ತಾರೆ
ಮಲಹೊರುವವರು
ಅಪ್ಪಿಕೊ ಚಳುವಳಿ ಮಾಡಿದರೆ
ಆಗೆಲ್ಲರೂ ತಪ್ಪಿಸಿಕೊ ಚಳುವಳಿ ಮಾಡುವವರೆ!' ಎಂಬಲ್ಲಿಯ ವ್ಯಂಗ್ಯದ ತೀವ್ರತೆಯನ್ನು ನೋಡಿ. ಜಾಗತಿಕ ವಿದ್ಯಮಾನದಲ್ಲಿ ಭಾರತದ ಸ್ಥಿತಿಯೇನು ಎಂದು ಚಿಂತಿಸಿ ಬರೆದ ಕೆಲವು ಕವಿತೆಗಳೂ ಇದರಲ್ಲಿವೆ. ಸಮಕಾಲೀನ ಭಾರತ ಹಾಗೆಯೇ ಕರ್ನಾಟಕದ ದುಸ್ಥಿತಿಯನ್ನು ಕಂಡು ಮರುಗಿದ ಕವನಗಳೂ ಇಲ್ಲಿವೆ. ಕನ್ನಡನಾಡಿನ ಸದ್ಯದ ರಾಜಕೀಯ, ಆರ್ಥಿಕ ದುರಂತವೆಂದರೆ ಗಣಿಗಾರಿಕೆ. ಸ್ವಾರ್ಥ ಹೇಗೆ ಮನುಷ್ಯನನ್ನು ವಿವೇಕಹೀನನನ್ನಾಗಿಸಿ ಸಮಾಜಕ್ಕೆ ಹೊರೆಯನ್ನಾಗಿ ಮಾಡುತ್ತದೆ ಎಂಬ ಕುರಿತು ಅವರು ವಿಷಾದಿಸುತ್ತಾರೆ. 'ಅಳುವನೊ ರಾಮ' ಕವಿತೆಯಲ್ಲಿ ಪ್ರಕೃತಿ ಸಂಪತ್ತಿನ ಶೋಷಣೆ ಇಂದು ಹೇಗೆ ನಡೆದಿದೆ, ಹಿಂದೆ ಪ್ರಕೃತಿಯನ್ನು ದೇವರ ಹೆಸರಿನಲ್ಲಿ ಹೇಗೆ ರಕ್ಷಿಸುತ್ತಿದ್ದರು ಎಂಬುದನ್ನು ಹೇಳಿದ್ದಾರೆ. ಕವಿತೆಯ ಗೇಯ ಗುಣದಿಂದ ಅದನ್ನು ಹಾಡಬಹುದಾಗಿದೆ.
ರಾಮಾ ರಾಮಾ ಎನ್ನುತ್ತಿವೆ
ರಾಮನಗರದ ಬಂಡೆಗಳೂ
ರಾಮನಿಲ್ಲದ ರಾಮನಾಡಿನಲಿ
ರಾಮ ಬಂಡೆಗಳ ಕಗ್ಗೊಲೆಯೋ.... ಹೀಗೆ ಕವಿತೆ ಆರಂಭವಾಗುತ್ತದೆ. ಇಂಥ ಇನ್ನೂ ಹಲವು ಗೇಯ ಗೀತೆಗಳು ಇದರಲ್ಲಿವೆ. ನೋವಿನ ತೀವ್ರ ಅಭಿವ್ಯಕ್ತಿಗೆ ಗೇಯತೆಯ ಅಗತ್ಯ ಕವಿಗೆ ಕಂಡುಬಂದಿದೆ.
ಅರವಿಂದ ಮಾಲಗತ್ತಿಯವರು ತಮ್ಮ ಕವಿತೆಗಳಲ್ಲಿ ಬದುಕನ್ನು ವ್ಯವಸ್ಥೆಗೆ ಮುಖಾಮುಖಿಯಾಗಿಸುತ್ತಾರೆ. ಆ ಮೂಲಕ ಅವರು ಪ್ರಶ್ನೆಗಳನ್ನು ಹುಟ್ಟುಹಾಕುತ್ತಾರೆ. ಮನುಷ್ಯನ ಲೌಕಿಕ ಮತ್ತು ಅಲೌಕಿಕ ಬಿಕ್ಕಟ್ಟುಗಳನ್ನು ಅವರು ಒರೆಗೆ ಹಚ್ಚುವರು. 'ನಾಕು ದಿನದ/ ಬಾಳೆವು ಇದುವು/ ಬಳಕೊಂಡು ಉಣಬೇಕು/ ಕಳಕೊಂಡು ಹೋಗುದು/ ಏನೈತಿ ಜಗದಾಗ/ ಕೊಟ್ಟು ಬದುಕಬೇಕು/' ಎನ್ನುವಲ್ಲಿಯ ಜೀವನ ತತ್ವವನ್ನು ನೋಡಬೇಕು.
ಅಮೆರಿಕದಂಥ ದೈತ್ಯ ಮಿಲಿಟರಿ ಶಕ್ತಿ, ಅದಕ್ಕೆ ಸವಾಲಾಗುವ ಮುಸ್ಲಿಂ ಮೂಲಭೂತಭೂತವಾದದ ಆರ್ಭಟ,
ದಲಿತರು ಮಧ್ಯಮವರ್ಗದವರು ಕಟ್ಟಿಕೊಳ್ಳುವ ಆಶಾಗೋಪುರಗಳನ್ನು ನಮ್ಮ ಭ್ರಷ್ಟ ಸಾಮಾಜಿಕ ವ್ಯವಸ್ಥೆ ಹೇಗೆ ನಿರ್ಮೂಲ ಮಾಡುತ್ತದೆ ಎಂಬುದನ್ನು ಮಾಲಗತ್ತಿ ತಮ್ಮ ಕವಿತೆಗಳಲ್ಲಿ ಹೇಳಲು ಪ್ರಯತ್ನಿಸಿದ್ದಾರೆ.
ಅರವಿಂದ ಮಾಲಗತ್ತಿಯವರಿಗೆ ಕಾವ್ಯ ಎನ್ನುವುದು ಸಾಮಾಜಿಕ ವಿಮರ್ಶೆ, ಸಮಾಜಕ್ಕೆ ಹತ್ತಿದ ಕ್ಯಾನ್ಸರ್ ಗಡ್ಡೆಯನ್ನು ಕೊಯ್ದುಹಾಕುವ ಕರಗಸ. ಕಾವ್ಯ ಅವರಿಗೆ ಆತ್ಮಾವಲೋಕನದ ಸ್ವವಿಮರ್ಶೆಯ ಸಾಧನ. ಜಗ ಹೊತ್ತಿ ಉರಿಯುತ್ತಿರುವಾಗ ನಾನೇನೂ ಮಾಡಲು ಆಗುತ್ತಿಲ್ಲವಲ್ಲ ಎಂಬ ಹಳಹಳಿಕೆ ಅವರದು. ಶೋಷಿತರ ಅಸ್ತಿತ್ವದ ಬಿಕ್ಕಟ್ಟಿನ ಪ್ರಜ್ಞೆಯನ್ನು ಅವರು ಶಬ್ದಗಳಲ್ಲಿ ಹಿಡಿದಿಡುತ್ತಾರೆ. 'ನೀ ದಾಟುದ ಕಲಿ' ಕವನದ ಈ ಸಾಲುಗಳನ್ನು ನೋಡಿದಾಗ ಇದು ನಮ್ಮ ಅರಿವಿಗೆ ಬರುತ್ತದೆ:
'ಇಲ್ಲದ್ದ ನೆನಸಿ ಅಳುವುದು ಬ್ಯಾಡ
ಇದ್ದುದ್ದ ಮರ್ತು ಬದುಕುದು ಬ್ಯಾಡ
ಇದ್ದದಿರಲಿ ಇಲ್ಲದ್ದಿರಲಿ ಇದ್ದೂ ಇರಲಾರದಿರಲಿ
ಮರುಗುದು ಬ್ಯಾಡ ಸುಮ್ಕ' ಎಂದಾಗ ಇದು ನಮಗೆ ಶೋಷಿತನ ಸ್ವಾತಂತ್ರ್ಯ ಗೀತದ ಹಾಗೆ ಕೇಳಿಸುತ್ತದೆ.
ಅಸ್ತಿತ್ವವಾದಿ ಮತ್ತು ವ್ಯಕ್ತಿವಾದಿ ಹೀಗೆ ಎರಡೂ ಬಗೆಯ ದೃಷ್ಟಿಕೋನಗಳಿಂದ ಸಮಕಾಲೀನ ಸಮಸ್ಯೆಗಳನ್ನು ಅನುಸಂಧಾನ ಮಾಡಿರುವ ಮಾಲಗತ್ತಿಯವರು ಬದಲಾವಣೆಯ ವೇಗಕ್ಕೆ ನಮ್ಮ ಜೀವನ ವಿಧಾನ ತತ್ತರಗೊಳ್ಳುತ್ತಿರುವುದನ್ನು ಕಂಡು ವಿಚಲಿತರಾಗಿದ್ದಾರೆ. ಬದಲಾವಣೆ ಸಹಜವಾದರೂ ಅದು ಇರುವುದನ್ನು ತೊಡೆದುಹಾಕಿ ಬರುವಂತಾಗಬಾರದು. ಇರುವುದನ್ನೂ ಒಳಗೊಂಡು ಹೊಸದನ್ನು ಸಾಧಿಸುವಂತಿರಬೇಕು. ಇದು ಅವರ ಅನಿಸಿಕೆ.
ಸಮಾಜದ ಸೂಕ್ಷ್ಮ ವಿವರಗಳನ್ನು ಗ್ರಹಿಸಲು ಕವಿಗೆ ಸಾವಿರ ಕಣ್ಣಿದ್ದರೂ ಸಾಲದು. ಆ ಹಿನ್ನೆಲೆಯಲ್ಲಿ 'ಸಹಸ್ರಾಕ್ಷಿ' ಎಂದು ಎಂದು ಕೃತಿಗೆ ಹೆಸರಿಟ್ಟಿದ್ದು ಸಾರ್ಥಕ. ಕಾವ್ಯ ಅವರ ಪಾಲಿಗೆ ಸಮಾಜದಲ್ಲಿ ಬದಲಾವಣೆಯನ್ನು ತರಬಲ್ಲ ಕಡೆಗೋಲು. ಮೊಸರು ಕಡೆದಾಗ ಬರುವ ನವನೀತದಂತೆ ಇಂಥ ಕಾವ್ಯದಿಂದ ನವಸಮಾಜದ ಸೃಷ್ಟಿ ಸಾಧ್ಯವೆಂಬ ನಂಬುಗೆ ಅವರದು. ಅರವಿಂದರ ಕಾವ್ಯಪ್ರೇರಣೆಯ ಸೂರ್ಯ ಸದಾ ಬೆಳಗುತ್ತಿರಲಿ.
ಕೃತಿ: ಸಹಸ್ರಾಕ್ಷಿ, ಪ್ರಕಾರ: ಕಾವ್ಯ
ಏಕೆ ಓದಬೇಕು?: ಓದುವ ಖುಷಿಗೆ
ಪ್ರ: ಉಷಾ ಪ್ರಕಾಶನ, ಮೈಸೂರು, ಪುಟಗಳು: 160,
ಬೆಲೆ ರು. 95
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

