ಸಾಪ್ತಾಹಿಕಪ್ರಭ

ಪಾಕಿಸ್ಥಾನಮಾನ

ಪಾಕಿಸ್ಥಾನಮಾನ
Published On :

ನಾನು ಮತ್ತು ಸುವರ್ಣ ನ್ಯೂಸ್ ಚಾನಲ್‌ನ ವಿಜಯಲಕ್ಷ್ಮಿ ಆತಂಕ ಮತ್ತು ಕುತೂಹಲದಿಂದಲೇ ಒಂದು ಅಂಗಡಿ ಒಳಗೆ ಹೋದೆವು. ಒಂದಷ್ಟು ಸಿಡಿ, ಪುಸ್ತಕಗಳನ್ನು ನೋಡುತ್ತಿದ್ದಂತೆ ಆತನಿಗೆ ನಾವು ಭಾರತೀಯರೆಂದು ಗೊತ್ತಾಯಿತು. ಆತ ಅದೆಷ್ಟು ಕಳಕಳಿಯಿಂದ ನಮ್ಮನ್ನು ಮಾತನಾಡಿಸಿದನೆಂದರೆ ನೀವು ಖಂಡಿತ ನಂಬುವುದಿಲ್ಲ.
ಬೇಡ ಬೇಡವೆಂದರೂ ಆತ ನಮಗಾಗಿ ಕುಡಿಯಲು ಪೆಪ್ಸಿ ತರಿಸಿದ. ನಮಗೆ ಒಳಗೊಳಗೇ ಅಳುಕು. ಆತನ ಒತ್ತಾಯಕ್ಕೆ ಮಣಿದು ಕುಡಿದೆವು. ಆತ ಹರಟುತ್ತಲೇ ಇದ್ದ. ಭಾರತದ ಬಗ್ಗೆ ಆಸಕ್ತಿಯಿಂದ ವಿಚಾರಿಸಿದ. ದಿಲ್ಲಿಯ ಕರೋಲ್‌ಬಾಗ್ ಪ್ರದೇಶ ಹೇಗಿದೆ ಎಂಬುದನ್ನು ವಿಚಾರಿಸಿಕೊಂಡ. ಆಸೆಪಟ್ಟರೂ ಭಾರತಕ್ಕೆ ಹೋಗಲಾಗುತ್ತಿಲ್ಲ ಎಂದು ಅಲವತ್ತುಕೊಂಡ.
ಹೀಗೆ ಮಾಡಿದ್ದು ಒಬ್ಬ ಪಾಕಿಸ್ತಾನಿ! ಅದು ಕೂಡ ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್‌ನಲ್ಲಿ!!
ಪಾಕಿಸ್ತಾನದ ಪಾಪಿ ಕೃತ್ಯಗಳನ್ನು ನೋಡುವ ನಮಗೆ ಈ ಘಟನೆಯನ್ನು ಊಹಿಸಲೂ ಸಾಧ್ಯವಿಲ್ಲ. ಅವರ ಹರ್ಕತ್ತುಗಳನ್ನು ನೋಡಿದರೆ ಪಾಕಿಸ್ತಾನ ಎಂಬುದಕ್ಕಿಂತ ಪಾಪಿಸ್ತಾನ ಎಂದು ಕರೆಯುವುದೇ ಸೂಕ್ತ ಅನ್ನಿಸುತ್ತದೆ. ನಾನೂ ಅಂತಹದೇ ಭಾವನೆ ಹೊಂದಿದ್ದೆ. ಆದರೆ ಎಸ್.ಎಂ.ಕೃಷ್ಣ ಅವರು ವಿದೇಶಾಂಗ ಸಚಿವರಾಗಿದ್ದಾಗ ಪಾಕಿಸ್ತಾನಕ್ಕೆ ಹೋಗುವ ಅವಕಾಶ ಲಭಿಸಿತ್ತು. ಪಾಕಿಸ್ತಾನ ನೆಲದಲ್ಲಿ ಆದ ಅನುಭವಗಳು ನಮ್ಮ ಊಹೆ ಮತ್ತು ಕಲ್ಪನೆಗೆ ವಿರುದ್ಧವಾಗಿದ್ದವು. ಅಂಗಡಿ ಮಾಲಿಕನ ಮಾತುಗಳಿಂದ ವಿಶ್ವಾಸ ಬಂದು ಸಾಕಷ್ಟು ಜನರನ್ನು ಮಾತನಾಡಿಸಿದೆವು. ಒಬ್ಬರೂ ಭಾರತವನ್ನು ಬಯ್ಯಲಿಲ್ಲ. ಭಾರತೀಯರನ್ನು ದೂಷಿಸಲಿಲ್ಲ. ಕಕ್ಕುಲತೆಯಿಂದ ಭಾರತದ ವಿವಿಧ ಸ್ಥಳಗಳ ಬಗ್ಗೆ ವಿಚಾರಿಸಿಕೊಂಡರು.
ಭಾರತದಿಂದ ನೋಡಿದರೆ ಪಾಕಿಸ್ತಾನದ ಮೇಲೆ ರೋಷ ಉಕ್ಕುತ್ತದೆ. ಅದೇ ಪಾಕಿಸ್ತಾನಕ್ಕೆ ಹೋಗಿ ನೋಡಿದರೆ ಮರುಕ ಉಂಟಾಗುತ್ತದೆ. ಅಲ್ಲಿನ ಸಾಮಾನ್ಯ ಜನರಿಗೆ ಭಾರತದ ಬಗ್ಗೆ ದ್ವೇಷವಿಲ್ಲ. ಅವರು ಅವರದ್ದೇ ದೇಶದ ರಾಜಕಾರಣಿಗಳು ಮತ್ತು ಸೈನ್ಯವನ್ನು ದೂರುತ್ತಾರೆ. ಪಾಕಿಸ್ತಾನ ಸೈನ್ಯದ ಬಗ್ಗೆ ಅಲ್ಲಿನ ಜನರಿಗೆ ಬಲವಾದ ಅನುಮಾನವಿದೆ. ಸೈನ್ಯಕ್ಕೆ ಪ್ರತಿವರ್ಷ ಹಣ ಹೆಚ್ಚು ಮಾಡಲಿ ಎಂಬ ಕಾರಣಕ್ಕೇ ಅವರು ಈ ರೀತಿಯೆಲ್ಲ ಮಾಡುತ್ತಾರೆ ಎಂಬುದು ಸಾಮಾನ್ಯ ಜನರ ನಂಬಿಕೆ.
ಅಲ್ಲಿನ ಜನ ಅತ್ಯಂತ ಕೆಟ್ಟ ಸ್ಥಿತಿಯಲ್ಲಿ ಜೀವನ ನಡೆಸುತ್ತಿದ್ದಾರೆ. ಕಾಡುವ ಬಡತನ. ನೀಗದ ನಿರುದ್ಯೋಗ. ಪ್ರತಿಭೆಯಿದ್ದರೂ ಸಿಗದ ಅವಕಾಶ. ದೇಶಾದ್ಯಂತ ನಿರುದ್ಯೋಗ ತಾಂಡವವಾಡುತ್ತಿದೆ. ಸದಾ ಭಯದ ನೆರಳಲ್ಲೇ ಜಿ ವನ ನಡೆಸಬೇಕು. ಯಾವಾಗ, ಎಲ್ಲಿ ಬೇಕಾದರೂ ಬಾಂಬ್ ಸ್ಫೋಟಿಸಬಹುದು. ಸತ್ತವ ಸತ್ತ, ಬದುಕಿದವ ಬಚಾವ್. ಟಿವಿ ನೋಡಿದರೂ ಬಂದು ಕೊಲ್ಲಬಹುದು. ಮಗಳನ್ನು ಶಾಲೆಗೆ ಕಳುಹಿಸಿದರೂ ಬಂದು ಗುಂಡಿಕ್ಕಬಹುದು. ಈ ಕಾರಣಗಳಿಂದಾಗಿಯೇ ಜನರಲ್ಲಿ ಅಸಹನೆ, ಹತಾಶೆ ಹೆಚ್ಚುತ್ತಿದೆ. ಪರಿಣಾಮವಾಗಿಯೇ ಮೂಲಭೂತವಾದ, ಭಯೋತ್ಪಾದನೆಯತ್ತ ಹೆಚ್ಚೆಚ್ಚು ಜನ ವಾಲುತ್ತಿದ್ದಾರೆ. ಯಾವುದೂ ಉದ್ಯೋಗ ಸಿಗದಿದ್ದರೆ ಭಯೋತ್ಪಾದಕರಾಗುವುದೇ ಉದ್ಯೋಗ!
ಉತ್ತಮ ಭವಿಷ್ಯದ ಕನಸು ಕಾಣಲೇ ಅವರು ಹೆದರುವಂತಾಗಿದೆ.
ನಾವು ಎಷ್ಟೋ ಬಾರಿ ಪಾಕಿಸ್ತಾನ ಬೇರೆಯಾಗಿದ್ದೇ ಒಳ್ಳೆಯದಾಯಿತು ಅಂದುಕೊಳ್ಳುತ್ತೇವೋ ಹಾಗೆ ಅವರು ಕೂಡ ನಮ್ಮ ದೇಶವನ್ನು ನೋಡಿ ಬೇರೆಯಾಗದೇ ಇದ್ದಿದ್ದರೆ ಒಳ್ಳೆಯದಿತ್ತು ಅಂದುಕೊಳ್ಳುತ್ತಾರೆ. ಇದನ್ನು ನಾವು ಉಳಿದುಕೊಂಡಿದ್ದ ಹೋಟೆಲ್‌ನ ವೇಟರ್ ಹೇಳಿಯೂಬಿಟ್ಟ. ಭಾರತ ಮತ್ತು ಪಾಕಿಸ್ತಾನದ ಸ್ಥಿತಿಯನ್ನು ನೋಡಿದರೆ ದೇಶ ಇಬ್ಭಾಗವಾಗದಿದ್ದರೇ ಒಳ್ಳೆಯ ಜೀವನ ನಡೆಸಬಹುದಿತ್ತು ಅನಿಸುತ್ತಿದೆ ಎಂದು ಆತ ಹೇಳಿದಾಗ ನನ್ನ ಕಿವಿಗಳನ್ನು ನಾನೇ ನಂಬದಾದೆ.
ರಾಜಧಾನಿ ಇಸ್ಲಾಮಾಬಾದ್‌ನಲ್ಲಿ ರಸ್ತೆಗಳು ಚೆನ್ನಾಗಿಯೇ ಇವೆ. ಆದರೆ ವಾಹನಗಳಲ್ಲಿ ಬಡತನ ಎದ್ದು ಕಾಣುತ್ತದೆ. ಆರಂಭದ ಕಾಲದ ಮಾರುತಿ 800ಗಳನ್ನು ಇನ್ನೂ ಕಾಣಬಹುದು. ನಮ್ಮ ರಾಜ್ಯದಲ್ಲಿ ಬಳಕೆಯಲ್ಲೇ ಇಲ್ಲದ ಆಟೋರಿಕ್ಷಾಗಳು ಅಲ್ಲಿನ ರಸ್ತೆಗಳನ್ನು ತುಂಬಿಕೊಂಡಿವೆ. ಓಡಾಡುವ ಅತ್ಯಂತ ಹಳೆಯ ಬಸ್ಸು, ಲಾರಿಗಳನ್ನು ನೋಡಿದರೆ ಸಾಕು ದೇಶದ ಬಡತನ ಕಣ್ಣಿಗೆ ರಾಚುತ್ತದೆ. ಅಲ್ಲಿನ ಮನೆ, ವಿಮಾನ ನಿಲ್ದಾಣ ನೋಡಿದರೆ ಸಾಕು ದೇಶದ ಆರ್ಥಿಕ ಸ್ಥಿತಿ ಎಂಥದ್ದು ಎಂಬುದು ಅರಿವಿಗೆ ಬರುತ್ತದೆ. ಪಾಕಿಸ್ತಾನ ಎಂಬ ದೇಶ ಇಂದಿಗೂ ನಡೆಯುತ್ತಿದ್ದರೆ ಅದಕ್ಕೆ ವಿದೇಶಿ ಆರ್ಥಿಕ ಸಹಾಯವೇ ಕಾರಣ. ಅಮೆರಿಕದಿಂದ ಬರುವ ಡಾಲರ್ ಮೂಲಕವೇ ದೇಶ ನಡೆಯಬೇಕು. ತನ್ನ ಸಾಮರ್ಥ್ಯದ ಮೇಲೆ ನಿಲ್ಲುವ ಶಕ್ತಿ ಕಳೆದುಕೊಂಡು ಅದೆಷ್ಟೋ ವರ್ಷಗಳಾಗಿಬಿಟ್ಟಿವೆ.
ರಾಜಕೀಯ ಅಸ್ಥಿರತೆ ಆ ದೇಶದಲ್ಲಿ ಅಭಿವೃದ್ಧಿ ಎಂಬ ಮಾತನ್ನೇ ತಿಂದುಹಾಕಿದೆ. ರಾಜಕೀಯ ಅಸ್ಥಿರತೆ ಒಂದು ದೇಶದ ಮೇಲೆ, ಅಲ್ಲಿನ ಜನ ಜೀವನದ ಮೇಲೆ ಎಂತಹ ಪರಿಣಾಮ ಬೀರಬಹುದು ಎಂಬುದಕ್ಕೆ ಪಾಕಿಸ್ತಾನಕ್ಕಿಂತ ಉತ್ತಮ ಉದಾಹರಣೆ ಮತ್ತೊಂದಿಲ್ಲ.
ಅಭದ್ರತೆ ಆ ದೇಶದ ಭವಿಷ್ಯವನ್ನೇ ಅಂಧಕಾರದಲ್ಲಿ ಮುಳುಗಿಸಿದೆ. ಎಲ್ಲ ಸೌಲಭ್ಯ ಪುಕ್ಕಟೆ ಕೊಡುತ್ತೇವೆ ಎಂದರೂ ಒಬ್ಬರೇ ಒಬ್ಬರೂ ಉದ್ಯಮ ಸ್ಥಾಪಿಸಲು ಮುಂದೆ ಬರುತ್ತಿಲ್ಲ. ಅಷ್ಟು ದೊಡ್ಡ ದೇಶದಲ್ಲಿ ಸಿನಿಮಾ ಉದ್ಯಮ ಎಂಬ ಹೆಸರೇ ಇಲ್ಲ. ಪರಿಣಾಮವಾಗಿ ಉದ್ಯೋಗ ಸೃಷ್ಟಿ ಎಂಬ ಮಾತೇ ಇಲ್ಲಿಲ್ಲ. ಅಲ್ಲಿನ ಸರ್ಕಾರಕ್ಕೇ ತಾನು ಉದ್ಯಮ ಸ್ಥಾಪಿಸುವವರಿಗೆ ಭದ್ರತೆ ಕೊಡಬಲ್ಲೆ ಅಥವಾ ಕನಿಷ್ಠ ಭದ್ರತೆಯ ಭರವಸೆಯನ್ನಾದರೂ ನೀಡಬಲ್ಲೆ ಎಂಬ ಆತ್ಮವಿಶ್ವಾಸವಿಲ್ಲ. ಉದ್ಯಮ ಸ್ಥಾಪಿಸಲು ಮುಂದೆ ಬರುವವರಿಗೂ ಸರ್ಕಾರದಿಂದ ಭದ್ರತೆ ದೊರೆಯುತ್ತದೆ ಎಂಬ ನಂಬಿಕೆಯಿಲ್ಲ. ಇದೆಲ್ಲ ಹೋಗಲಿ ಅಲ್ಲಿನ ಜನಕ್ಕೇ ಅವರ ಸರ್ಕಾರ, ಸೈನ್ಯದ ಮೇಲೆ ನಂಬಿಕೆಯಿಲ್ಲ.
ನಿಮ್ಮ ಮನೆ ಪಕ್ಕದಲ್ಲಿ ಒಬ್ಬ ಪುಂಡನ ಮನೆಯೂ ಇದೆ ಅಂದುಕೊಳ್ಳಿ. ಆತನಿಗೆ ಕಾನೂನು, ಪೊಲೀಸು, ಜೈಲು ಯಾವುದೂ ಲೆಕ್ಕಕ್ಕಿಲ್ಲ. ಆತ ನಿಮ್ಮ ಮಗಳನ್ನು ಚುಡಾಯಿಸುತ್ತಾನೆ. ಮನೆಗೆ ಕಲ್ಲು ಎಸೆಯುತ್ತಾನೆ. ಅಪ್ಪ-ಅಮ್ಮನ ಮಾತು ಕೇಳುವುದಿಲ್ಲ. ಅಂಥವನನ್ನು ಹೇಗೆ ನಿಭಾಯಿಸುತ್ತೀರಿ?
ಥೇಟು ಇದೇ ಸ್ಥಿತಿ ಭಾರತ ಸರ್ಕಾರದ್ದು. ಪಾಕಿಸ್ತಾನ ಕಿತಾಪತಿ ಮಾಡುತ್ತಿದೆ ಎಂಬುದು ಗೊತ್ತು. ಅದನ್ನು ಹೇಳಬೇಕಾದಲ್ಲಿ ಹೇಳುತ್ತಿದ್ದೇವೆ ಕೂಡ. ಆದರೆ ಪಾಕಿಸ್ತಾನ ಒಂದು ವಿಚಿತ್ರ ರಾಷ್ಟ್ರ. ಅಲ್ಲಿ ಪ್ರಧಾನಿಯೊಂದಿಗೆ ಮಾತುಕತೆ ನಡೆಸುತ್ತೀರಾ? ಅವರಿಗೆ ದೂರು ಕೊಡುತ್ತೀರಾ? ಅವರಿಗೆ ಸೈನ್ಯದ ಮೇಲೆ ಯಾವುದೇ ನಿಯಂತ್ರಣವಿಲ್ಲ. ಸೈನ್ಯ ಅಥವಾ ಐಎಸ್‌ಐ ಜತೆ ಮಾತುಕತೆ ನಡೆಸುತ್ತೀರಾ? ಅದನ್ನು ಅಂತಾರಾಷ್ಟ್ರೀಯವಾಗಿ ಮಾನ್ಯ ಮಾಡಲಾಗುವುದಿಲ್ಲ. ಅವರು ಮಾತುಕತೆಗೆ ಕುಳಿತರೂ ಅವರು ಅದನ್ನು ಪಾಲಿಸುತ್ತಾರೆ ಎಂಬ ನಂಬಿಕೆಯಿಲ್ಲ. ಸರ್ಕಾರಕ್ಕೆ ಐಎಸ್‌ಐ ಮೇಲೆ ನಿಯಂತ್ರಣವಿಲ್ಲ. ಐಎಸ್‌ಐಗೆ ಸೈನ್ಯದ ಮೇಲೆ ನಿಯಂತ್ರಣವಿಲ್ಲ. ಸೈನ್ಯಕ್ಕೆ ಐಎಸ್‌ಐ ಮೇಲೆ ನಿಯಂತ್ರಣವಿಲ್ಲ. ಯಾರು ಪಾಕಿಸ್ತಾನ ಸರ್ಕಾರವನ್ನು ನಡೆಸುತ್ತಿದ್ದಾರೆ? ಅವರ ಉದ್ದೇಶವೇನು? ಅವರ ರೀತಿ-ನೀತಿಗಳೇನು? ಅವರು ಜವಾಬ್ದಾರಿವಂತರೇ?
ಇದ್ಯಾವ ಪ್ರಶ್ನೆಗೂ ನಿಮಗೆ ಉತ್ತರವೇ ಸಿಗುವುದಿಲ್ಲ. ಅಲ್ಲಿನ ಸೈನ್ಯ, ಐಎಸ್‌ಐ ಮತ್ತು ಸರ್ಕಾರ ನಡೆಸುವವರು ಕುತಂತ್ರಿಗಳು. ಅವರು ಕೇವಲ ಭಾರತದ ಮೇಲಷ್ಟೇ ಅಲ್ಲ. ಅವರವರ ನಡುವೆಯೇ ಕುತಂತ್ರ ಮಾಡಿಕೊಂಡೇ ಜೀವನ ನಡೆಸುತ್ತಾರೆ. ಸರ್ಕಾರ ನಡೆಸುವವರ ಮೇಲೆ ಸೈನ್ಯ ಸದಾ ನಿಯಂತ್ರಣ ಸಾಧಿಸಲು ಪ್ರಯತ್ನಿಸಿದರೆ, ಸೈನ್ಯದ ಮೇಲೆ ಹಿಡಿತ ಸಾಧಿಸಲು ಸರ್ಕಾರ ಪ್ರಯತ್ನಿಸುತ್ತಿರುತ್ತದೆ. ಸರ್ಕಾರ-ಐಎಸ್‌ಐ ಮತ್ತು ಸೈನ್ಯ ಪರಸ್ಪರ ಒಬ್ಬರ ಮೇಲೆ ಒಬ್ಬರು ವಿಶ್ವಾಸ ಹೊಂದಿಲ್ಲ. ಸೈನ್ಯ ಯಾವಾಗ ಆಡಳಿತವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತದೆ ಎಂಬುದು ಸರ್ಕಾರಕ್ಕೆ ಗೊತ್ತಿಲ್ಲ!
ಈ ಕಾರಣಕ್ಕಾಗಿಯೇ ಅವರದ್ದೇ ಪ್ರಧಾನ ಮಂತ್ರಿ ಭಾರತದೊಂದಿಗೆ ಮಾತುಕತೆ ನಡೆಸುತ್ತಿದ್ದಂತೆ ಸೈನ್ಯ ಗಡಿಯಲ್ಲಿ ಗುಂಡಿನ ದಾಳಿ ನಡೆಸುತ್ತದೆ. ಗುಂಡುಹಾರಿಸುತ್ತೀರಲ್ಲ ಸ್ವಾಮಿ ಅಂತ ಪ್ರಧಾನಿಗಳ ಗಮನ ಸೆಳೆದರೆ ಅವರು ಗೊತ್ತೇ ಇಲ್ಲ ಎಂದು ತಮ್ಮ ಅಸಹಾಯಕ ಸ್ಥಿತಿ ಪ್ರದರ್ಶಿಸುತ್ತಾರೆ. ಎಲ್ಲವೂ ಶಾಂತವಾಗಿದೆ ಅನ್ನಿಸಿದಾಗ ಐಎಸ್‌ಐ ಉಗ್ರರನ್ನು ನುಗ್ಗಿಸುತ್ತದೆ. ಆ ದೇಶದೊಂದಿಗೆ ಉತ್ತಮ, ಸೌಹಾರ್ದಯುತ ಸಂಬಂಧ ಹೊಂದಬೇಕು ಅಂದರೆ ಯಾರ ಬಳಿ ಮಾತುಕತೆ ನಡೆಸಬೇಕು? ಯಾರ ಬಳಿ ದೂರನ್ನು ಹೇಳಬೇಕು? ಯಾರ ಬಳಿ ಹೋರಾಡಬೇಕು ಎಂಬುದೇ ಸ್ಪಷ್ಟವಿಲ್ಲ! ಸೈನ್ಯ, ಐಎಸ್‌ಐನೊಳಗೆ ಉಗ್ರರ ಸಂಘಟನೆ ಸದಸ್ಯರು ಬೆರೆತುಹೋಗಿದ್ದಾರೆ. ಇದು ಪಾಕಿಸ್ತಾನದ ಸರ್ಕಾರಕ್ಕೂ ಗೊತ್ತಿದೆ. ಆದರೆ ಇದಕ್ಕೆ ಏನೂ ಮಾಡುವ ಸ್ಥಿತಿಯಲ್ಲಿ ಸರ್ಕಾರವಿಲ್ಲ. ಮಾತನಾಡಿದರೆ ಅವರಿಗೇ ಬಾಂಬ್ ಇಡಲು ಹೇಸರು ಎಂಬುದು ಕೂಡ ಅಷ್ಟೇ ಸತ್ಯ. ಪಾಕಿಸ್ತಾನದ ಸರ್ಕಾರ, ಐಎಸ್‌ಐ ಮತ್ತು ಸೈನ್ಯ ಎಷ್ಟು ಪಾಕಡಾಗಳು ಎಂದರೆ ದೇಶ ನಡೆಸಲು ಅಮೆರಿಕದಿಂದಲೇ ದುಡ್ಡು ತೆಗೆದುಕೊಂಡು, ಅವರಿಗೇ ಗೊತ್ತಿಲ್ಲದಂತೆ ಬಿನ್ ಲಾಡೆನ್‌ನನ್ನು ಸಾಕುತ್ತಿದ್ದರು! ಹೀಗಾಗಿ ದಾವೂದ್ ಇಬ್ರಾಹಿಂ ಪಾಕಿಸ್ತಾನದಲ್ಲೇ ಇದ್ದಾನೆ ಅಂದರೆ ಅದೇನೂ ಅಚ್ಚರಿಯ ಸಂಗತಿಯಲ್ಲ.
ಮಾರುಕಟ್ಟೆಯಲ್ಲಿ ಸಿಕ್ಕಿದ ಸಿಕಂದರ್ ಹೇಳುವ ಪ್ರಕಾರ, 'ಭಾರತ ಮತ್ತು ಪಾಕಿಸ್ತಾನ ಸದಾ ದ್ವೇಷಿಸುತ್ತಲೇ ಇರಬೇಕು ಎಂಬುದು ಅಮೆರಿಕದ ಪಿತೂರಿ. ಅವರಿಂದ ನಮ್ಮ ಸೈನ್ಯಕ್ಕೆ ಹಣ ಬರುತ್ತಲೇ ಇರಬೇಕು. ಅಮೆರಿಕವನ್ನು ಮೆಚ್ಚಿಸಲು ಮತ್ತು ಹೆಚ್ಚು ಹಣ ಪಡೆಯಲು ನಮ್ಮ ಸೈನ್ಯದವರೂ ಆಗಾಗ ದಾಳಿ ಮಾಡುತ್ತಿರುತ್ತಾರೆ. ಯುದ್ಧಗಳು ನಡೆಯದೇ ಇದ್ದರೆ ಶಸ್ತ್ರಾಸ್ತ್ರ ತಯಾರಿಕರಿಗೆ ವ್ಯಾಪಾರವೇ ಇರುವುದಿಲ್ಲ. ಅಲ್ವಾ ಸಾರ್? ನಮ್ಮ ರಾಜಕಾರಣಿಗಳನ್ನಂತೂ ನಂಬುವಂತೆಯೇ ಇಲ್ಲ. ದೇಶ ಇಷ್ಟೆಲ್ಲ ಬಡಬಿದ್ದಿದೆ. ಆದರೆ ಅವರು ಮಾತ್ರ ಶ್ರೀಮಂತರಾಗಿದ್ದಾರೆ. ಪ್ರತಿಯೊಬ್ಬ ರಾಜಕಾರಣಿಯೂ ವಿದೇಶದಲ್ಲಿ ಆಸ್ತಿ ಹೊಂದಿದ್ದಾರೆ. ಅವರಿಗೆ ಜನರಿಗಿಂತ ಸ್ವಹಿತಾಸಕ್ತಿಗಳ ಕುರಿತೇ ಹೆಚ್ಚು ಕಾಳಜಿ' ಎಂದ. ಇದು ಪಾಕಿಸ್ತಾನದ ಸಾಮಾನ್ಯ ಪ್ರಜೆಯೊಬ್ಬನ ನಂಬಿಕೆ ಮತ್ತು ಅನಿಸಿಕೆ. ಆತ ಹೆಚ್ಚೇನೂ ಕಲಿತವನು ಕೂಡ ಅಲ್ಲ.
ಆದರೆ ಅಲ್ಲಿನ ಮಾಧ್ಯಮದವರಲ್ಲಿ ಭಾರತದ ಬಗ್ಗೆ ದ್ವೇಷವಿದೆ. ಭಾರತ ಮತ್ತು ಪಾಕಿಸ್ತಾನದ ವಿದೇಶಾಂಗ ಸಚಿವರು ನಡೆಸಿದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಕೇಳುತ್ತಿದ್ದ ಪ್ರಶ್ನೆಗಳೇ ಅದಕ್ಕೆ ಸಾಕ್ಷಿ ಒದಗಿಸುತ್ತಿದ್ದವು. ಮೂರು ದಿನ ಅಲ್ಲೇ ಉಳಿದಿದ್ದ ಸಂದರ್ಭದಲ್ಲಿ, ಅಲ್ಲಿನ ಪತ್ರಿಕೆಗಳಲ್ಲಿ ಪ್ರಕಟವಾದ ವರದಿಗಳನ್ನು ಓದಿದೆ. ಮಾಧ್ಯಮಗಳು ಎಷ್ಟು ಚೆನ್ನಾಗಿ ಭಾರತದ ವಿರುದ್ಧ ವಿಷಬೀಜ ಬಿತ್ತುತ್ತಿವೆ ಎಂಬುದು ಅರಿವಾಗಿತ್ತು. ಪಾಕಿಸ್ತಾನದ ಸರ್ಕಾರ, ಸೈನ್ಯ ಮತ್ತು ಐಎಸ್‌ಐನ ಸತತ ಪ್ರಯತ್ನದಿಂದ ಒಂದು ಕಾಲದಲ್ಲಿ ಭಾರತ ಗೆಲ್ಲದಿದ್ದರೇನು ಪಾಕಿಸ್ತಾನ ಗೆದ್ದಿತಲ್ಲ ಎಂದು ಸಮಾಧಾನ ಪಡುತ್ತಿದ್ದ ನಾವು, ಭಾರತ ಗೆಲ್ಲದಿದ್ದರೂ ಪರ್ವಾಗಿಲ್ಲ, ಪಾಕಿಸ್ತಾನ ಸೋತರೆ ಸಾಕು ಎಂದು ಆಶಿಸುವ ಮಟ್ಟಕ್ಕೆ ಬಂದಿದ್ದೇವೆ.
ಪಾಕಿಸ್ತಾನದ ಸಾಮಾನ್ಯ ಜನ ಭಾರತದೊಂದಿಗೆ ಉತ್ತಮ ಸಂಬಂಧವನ್ನೇ ಇಷ್ಟಪಡಬಹುದು. ಭಾರತದ ಜನರೂ ಪಾಕಿಸ್ತಾನದೊಂದಿಗೆ ಉತ್ತಮ ಬಾಂಧವ್ಯ ಇದ್ದರೆ ಉತ್ತಮ ಎಂದು ಹೇಳಬಹುದು. ಎರಡೂ ದೇಶದ ಜನರ ಅಭಿಪ್ರಾಯಗಳಿಗೆ ಸಿಗುವ ಬೆಲೆ ಅಷ್ಟಕ್ಕಷ್ಟೇ. ಜನರ ಅಭಿಪ್ರಾಯಗಳು ಏನೇ ಇರಲಿ ಭಾರತ-ಪಾಕಿಸ್ತಾನ ಉತ್ತಮ ಸಂಬಂಧ ಹೊಂದುವುದು ಅಸಾಧ್ಯದ ಮಾತು. ಇದು ನಮ್ಮ ದೇಶಕ್ಕಂಟಿದ ಕಾಯಂ ಸಮಸ್ಯೆ. ಅದರೊಂದಿಗೇ ಜೀವಿಸುವುದನ್ನು ಕಲಿಯಬೇಕಿದೆ. ಅದನ್ನು ಎದುರಿಸಿ ನಿಲ್ಲುವುದನ್ನೂ ರೂಢಿಸಿಕೊಳ್ಳಬೇಕಿದೆ. ಇದು ನಮ್ಮ ಅನಿವಾರ್ಯ ಕರ್ಮ.
ಸಂಗೀತ, ನ್ಯತ್ಯ, ಗುಂಡು!
ಕಾಶ್ಮೀರದಲ್ಲಿ ಮ್ಯೂಸಿಕ್ ಬ್ಯಾಂಡ್‌ಗೆ ನಿಷೇಧ ಹೇರಿ ಫತ್ವಾ ಹೊರಡಿಸಲಾಗುತ್ತದೆ. ಇಸ್ಲಾಂ ಪ್ರಕಾರ ಮದ್ಯ ಸೇವನೆ ನಿಷಿಧ್ಧ. ವೇಶ್ಯಾವಾಟಿಕೆ ಮಹಾಪರಾಧ. ಸೆಕ್ಸ್ ಸಿನಿಮಾಗಳನ್ನು ನೋಡುವುದು ಕೂಡ ಅಪರಾಧ. ನಾವು ಪಾಕಿಸ್ತಾನಕ್ಕೆ ಹೋದಾಗ ಇಸ್ಲಾಮಾಬಾದ್‌ನ ಹೊರಭಾಗದಲ್ಲಿರುವ ಮರ್ಗಲಾ ಹಿಲ್ಸ್‌ನಲ್ಲಿ ನಮಗಾಗಿ ಪಾಕಿಸ್ತಾನಿ ವಾರ್ತಾ ಸಚಿವರು ಔತಣಕೂಟ ಏರ್ಪಡಿಸಿದ್ದರು. ಅಲ್ಲಿ ಮದ್ಯವೂ ಇತ್ತು. ಸಂಗೀತವೂ ಇತ್ತು! ಇಲ್ಲಿ ಹಾಡಿದರೆ ವಿರೋಧ. ಅಲ್ಲೇ ಹಾಡಿದರೆ ವಿನೋದ!! ಪಾಕಿಸ್ತಾನದ ಸಚಿವರು ನಮ್ಮೊಂದಿಗೆ ಗುಂಡು ಹಾಕಲಿಲ್ಲ. ಆದರೆ ಗುಂಡು ಹಾಕಿಸಲು ಮಾತ್ರ ಅವರು ಮರೆಯಲಿಲ್ಲ! ನಾವು ಕುಡಿಯುವಂತಿಲ್ಲ, ಆದರೆ ಕುಡಿಸಬಹುದು ಎಂದು ಜೋಕ್ ಕೂಡ ಕಟ್ ಮಾಡಿದರು. ಸಾಕಷ್ಟು ಪಾಕಿಸ್ತಾನಿಗಳು ಅಲ್ಲಿ ಗುಂಡು ಹಾಕುತ್ತ ಕುಳಿತಿದ್ದರು. ಪಾಕಿಸ್ತಾನದ ಲಾಹೋರ್‌ನಲ್ಲಿ ವೇಶ್ಯಾವಾಟಿಕೆಯ ದೊಡ್ಡ ಜಾಗವೇ ಇದೆ. ಇಡೀ ಪಾಕಿಸ್ತಾನದಲ್ಲಿ ಸಿನಿಮಾ ಉದ್ಯಮ ಎಂಬುದೇ ಇಲ್ಲ. ಬಾಲಿವುಡ್ ಸಿನಿಮಾಗಳೇ ಅವರ ಪಾಲಿಗೆ ಸಿನಿಮಾ. ಹೀಗಿದ್ದರೂ ಅಲ್ಲಿ ಸೆಕ್ಸ್ ಸಿನಿಮಾ ನೋಡುವವರಿಗೇನೂ ಕೊರತೆಯಿಲ್ಲ! ಪ್ರಸಿದ್ಧ ಗಾಯಕರಲ್ಲಿ ಒಬ್ಬರಾದ ನುಸ್ರತ್ ಫತೇ ಅಲಿಖಾನ್ ಪಾಕಿಸ್ತಾನದವರು! ಇಸ್ಲಾಮಾಬಾದ್‌ನಲ್ಲಿ ತಿರುಗಾಡಿದಾಗ ಬುರ್ಖಾ ಹಾಕದೇ ತಿರುಗಾಡುತ್ತಿದ್ದ ಸಾಕಷ್ಟು ಹೆಂಗಸರು, ಹುಡುಗಿಯರು ಇದ್ದರು. ಇಲ್ಲಿ ಮಾತ್ರ ಬುರ್ಖಾ ಧರಿಸುವ ಬಗ್ಗೆ ಒತ್ತಾಯಿಸಲಾಗುತ್ತದೆ. ಇಂತಹ ಹಲವು ವೈರುಧ್ಯಗಳು ಪಾಕಿಸ್ತಾನದಲ್ಲಿ ನಿಮಗೆ ಸಾಕಷ್ಟು ಸಿಗುತ್ತವೆ.


- ವಿನಾಯಕ ಭಟ್ಟ ಮೂರೂರು
vakradantha@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.