ಸಾಪ್ತಾಹಿಕಪ್ರಭ

ಭವ ಬಂಧನದೊಳು...

Published On :

'ಯಾಕೆ ಬಂದಿ ಜೀವಡಡಡ...ಯಾಕೆ ಬಂದಿಡಡಡ...ಲೋಕದ ಅನುಭವ ಬೇಕಾಯಿತೇ ನಿನಗೆಡಡಡ...' ಎಂದು ಸರಾಗವಾಗಿ ಈ ಜೀವವನ್ನು ದಾಸರು ಪ್ರಶ್ನಿಸಿದ್ದಾರೆ. ಅಂದರೆ ಬಂದ ಜೀವಕ್ಕೂ ಒಂದು ಅರ್ಥವಿರಬೇಕು, ಆ ಅರ್ಥ ಈ ಲೋಕದ ಅನುಭವದಿಂದ ಬರಬೇಕು. ಆದರೆ ಆ ಅನುಭವ ಹೇಗಿರಬೇಕು? ಹೇಗೆ ಅದನ್ನು ಬದುಕಲ್ಲಿ ಅಳವಡಿಸಿಕೊಳ್ಳಬೇಕು? ನಾವೋ ಹುಲುಮಾನವರು. ಹೇಳಿಕೇಳಿ ಉಪ್ಪು, ಹುಳಿ, ಖಾರ ತಿಂದ ಜೀವ. ಭವ ಬಂಧನಗಳಲ್ಲಿ ಸಿಲುಕಿ ನರಳಾಡುತ್ತಿರುವವರು. ಮೂರು ಮುಕ್ಕಾಲು ಗಳಿಗೆಯ ಈ ಬದುಕಲ್ಲಿ ನಾವು ಕಂಡುಕೊಳ್ಳುವ, ಕೊಂಡುಕೊಳ್ಳುವ, ಹಂಚುವ, ಬಿತ್ತುವ, ಪ್ರೀತಿ, ವಿಶ್ವಾಸ, ಸಂಬಂಧಗಳು ಯಾವತ್ತಿದ್ದರೂ ನಮ್ಮನ್ನು ಪೊರೆಯುವ, ನಮ್ಮನ್ನು ವಿಶ್ಲೇಷಿಸುವ, ನಮ್ಮ ಮೌಲ್ಯವನ್ನು ನಿರ್ಧರಿಸುವ, ಆಯ್ಕೆಯನ್ನು ನಿರ್ಣಯಿಸುವ, ನಮ್ಮ ಇರುವಿಕೆಯ ಹಾಳೆಗೆ ಮುನ್ನುಡಿಯೋ, ಬೆನ್ನುಡಿಯೋ ಆಗಬಲ್ಲವುಗಳು. ಅದಕ್ಕಾಗಿಯೇ ಅಲ್ಲವೆ, ನಾವೆಲ್ಲರೂ ನಮ್ಮ ಬದುಕ ಹಾಳೆಗಳಲ್ಲಿ ಈ ಪದಗಳನ್ನು ಅಂದವಾಗಿಯೂ ಚಂದವಾಗಿಯೂ ಬರೆದಿಡಲು ಪ್ರಯತ್ನಿಸುತ್ತಿರುವುದು!
ಸಂತೋಷ ಎನ್ನುವುದು ಕೊಡುವವರ ಮತ್ತು ಕೊಳ್ಳುವವರ ನಡುವಿನ ಸಂಬಂಧ. ಯಾವುದೇ ಒಂದು ವಸ್ತು ಕೊಟ್ಟಷ್ಟೂ ಖರ್ಚಾಗದೆ ಉಳಿಯುವುದಿದ್ದರೆ ಅದು ಸಂತೋಷ ಮಾತ್ರ. ಬದುಕೂ ಅಷ್ಟೇ, ಸಂತೋಷಮಯವಾಗಿರಬೇಕು. ಕುವೆಂಪು ಹೇಳ್ತಾರೆ ನೋಡಿ, 'ಆನಂದಮಯ ಈ ಜಗ ಹೃದಯ' ಅಂತ, ಹಾಗಿರಬೇಕು. ಚಿಲ್ಲರೆ ವಿಷಯಗಳಿಗಾಗಿ, ಅಹಂನ ಪ್ರತಿಷ್ಠೆಗಾಗಿ ಬಂಧವನ್ನು, ನೆಮ್ಮದಿಯನ್ನು, ನಿತ್ಯದ ಬದುಕನ್ನು ಕಳೆದುಕೊಳ್ಳುವುದನ್ನು ನೋಡಿದರೆ ದಾಸರು ಹಾಡಿದಂತೆ 'ಯಾಕೆ ಬಂದಿ ಜೀವ...' ಎಂದು ಕೇಳಬೇಕೆನ್ನಿಸುತ್ತದೆ. ನಾವು ಏನೆನ್ನುವುದನ್ನು ಮನಗಂಡು, ನಮ್ಮ ಇತಿಮಿತಿಗಳನ್ನು ಅವಲೋಕಿಸಿ, ನಮ್ಮ ಹಿನ್ನಲೆ, ಕೌಶಲ್ಯ, ಪ್ರತಿಭೆಯ ಜೊತೆಗೆ ನಮ್ಮ ಗುಣ ಮಂದಾರವನ್ನೂ ಕಂಡುಕೊಂಡು ಸಂಬಂಧದಲ್ಲಿ ಮುಂದಡಿ ಇಡುವುದು ಸೂಕ್ತವಲ್ಲವೇ? ಬದುಕಲ್ಲಿ ಕಲಿಕೆ ನಿರಂತರ. ಯಾವತ್ತು ನಮ್ಮಿಂದ ಏನನ್ನೂ ಕಲಿಯಲು ಸಾಧ್ಯವಾಗುವುದಿಲ್ಲವೋ ಅಂದಿಗೇ ನಮಗೆ ವಯಸ್ಸಾಯಿತೆಂದು ತಿಳಿಯಬಹುದು. ಕಲಿಕೆಯು ವಯಸ್ಸನ್ನು ನಿರ್ಣಯಿಸುವ ಒಂದು ಪರಿಕರ ಅಷ್ಟೆ. ಬದುಕಲ್ಲೂ ಕಲಿಕೆಯು ಮುಂದುವರಿಯಬೇಕು.
ಬದುಕಿನ ಅಧ್ಯಾಯಗಳಲ್ಲಿ ಏರುಪೇರುಗಳು ಸಾಮಾನ್ಯ. ಬಂಧಗಳು ಅಲ್ಲಿ ಪ್ರಮುಖ ಪಾತ್ರವನ್ನೂ ವಹಿಸಿರುತ್ತವೆ. ಅಂದು ಬೆನ್ನಿಗೆ ನಿಂತಿದ್ದ ಆ ಬಂಧವು ನಂತರದ ದಿನಗಳಲ್ಲಿ ನಮ್ಮ ವೈಯಕ್ತಿಕ ಬೆಳವಣಿಗೆಗೆ, ಪ್ರಶಂಸೆಗೆ, ಜನಪ್ರಿಯತೆಗೆ ತೊಡಕಾದಾಗ ಆ ಬಂಧವೂ ಕ್ರಮೇಣ ಮಸುಕಾಗಿ ಬಿಡುತ್ತವೆ. ಬಾಳುವ ಬದುಕಿನಲ್ಲಿ ಘಟಿಸುವ ಕೆಲವು ಘಟನೆಗಳು ನಮ್ಮ ನಿತ್ಯ ಬದುಕಿನ ಸುಖದ ಕ್ಷಣಗಳನ್ನು ಕಸಿಯುವಂತಿರಬಾರದು. ಅಷ್ಟಕ್ಕೂ ಸುಂದರ ಬದುಕಿನ ರಸಮಯ ಕ್ಷಣಗಳನ್ನು ನಾವು ಯಾಕೆ ಕಳೆದುಕೊಳ್ಳಬೇಕು ಹೇಳಿ?
ಘಟಿಸಿದ ಘಟನೆಗಳು ಆ ಕ್ಷಣದ ಕೆಟ್ಟ ಕನಸು. ಒಪ್ಪಿಕೊಳ್ಳೋಣ. ಅದನ್ನು ನೋಡಿಯಾಯಿತು, ಪರಾಮರ್ಶಿಸಿಯೂ ಆಯಿತು, ಅನುಭವಿಸಿಯೂ ಆಯಿತು. ಹಾಗಿದ್ದೂ ತಿರುತಿರುಗಿ ಅದೇ ವಿಷಯಕ್ಕೆ ಜೋತು ಬೀಳುವುದು, ನಿತ್ಯ ಬದುಕಿನ ಸುಗಂಧ ಕ್ಷಣಗಳಿಂದ ವಂಚಿತರಾಗುವುದು ಎಷ್ಟರ ಮಟ್ಟಿಗೆ ಸರಿ? ಹಾಗಂತ ಅಂದು ನಮ್ಮ ಬೆನ್ನಿಗೆ ನಿಂತಿದ್ದ ಆ ಬಂಧವನ್ನು ಸಾರಸಗಟಾಗಿ ನಿರಾಕರಿಸಿ ಬಿಡುವುದು ಸಲ್ಲ. ಬದುಕಿನ ಈ ಮ್ಯಾರಥಾನ್ ಓಟದಲ್ಲಿ ನಮ್ಮೊಂದಿಗೆ ಹಲವು ಬಂಧಗಳು ಖುಷಿಯಾಗಿಯೇ ಓಡುತ್ತಿರುತ್ತವೆ. ಕೆಲವೊಂದು ಬಂಧಗಳು, ಸಿಹಿ ಹಂಚಿದರೆ, ಕೆಲವೊಂದು ಕಹಿ, ಹುಳಿಯನ್ನು ಹಂಚುತ್ತವೆ... ಅದೊಂದು ಸಹಜ ಪ್ರಕ್ರಿಯೆ. ಅದನ್ನು ನಾವು ಹೇಗೆ ಸ್ವೀಕರಿಸುತ್ತೇವೆ ಎನ್ನುವುದರ ಮೇಲೆ ನಿಂತಿರುತ್ತದೆ ನಮ್ಮ ಬದುಕು ಮತ್ತು ಆ ಬಂಧ. ಹಾಗಂತ ನಮ್ಮ ಬದುಕಲ್ಲಿಯೂ ಜಿನುಗಬೇಡವೇ ಮಕರಂದ? ನಿತ್ಯದ ಬದುಕಿನಲ್ಲಿ ನಮ್ಮ ಎಲ್ಲಾ ಸಂಬಂಧಗಳು ಹಸಿರಾಗಿರಬೇಕು. ಅಲ್ಲೋ ಇಲ್ಲೊ ಘಟಿಸುವ, ಘಟಿಸಿದ ಘಟನೆಗಳು ನಮ್ಮನ್ನು ನೋಯಿಸಿದರೆ ಆ ನೋವು, ಸೆಡವುಗಳೆಲ್ಲಾ ಆ ಘಟನೆಗೆ ಮಾತ್ರ ಸಂಬಂಧ ಪಟ್ಟಿರಬೇಕೆ ಹೊರತು ಆ  ಬಂಧಕ್ಕಲ್ಲ. ಆ ಬಂಧ ಕಟ್ಟಿಕೊಟ್ಟ ಪ್ರೀತಿಗೋ, ತೋರಿದ ವಿಶ್ವಾಸಕ್ಕೋ ಖಂಡಿತಾ ಅಲ್ಲ. ಬಂಧ ಯಾವತ್ತೂ ವಿಜಯಿ! ನಮ್ಮ ವ್ಯವಹಾರವು ಬಂಧವನ್ನು ಮುರುಟಿಸುವಂತಿರಬಾರದು, ಕರಟಿಸಲೂಬಾರದು. ಅಭಿಪ್ರಾಯ ಭೇದವಿರುವ ವಿಷಯದ ಕುರಿತಂತೆ ನಮ್ಮ ಸ್ಪಷ್ಟ ನಿಲುವನ್ನು ಪ್ರಕಟಿಸಿ ಬದುಕಿನ ಸಹಜ ಸ್ಥಿತಿಯತ್ತ ಮುಂದಡಿ ಇಡುವುದು ಜಾಣ್ಮೆ. ಅದು ಸೂಕ್ತವೂ ಹೌದು. ನಮ್ಮ ಕ್ರಿಯೆ, ಪ್ರತಿಕ್ರಿಯೆಗಳು ಆ ವಿಷಯಕ್ಕೆ, ಘಟಿಸಿದ ಘಟನೆಗಳಿಗೆ ಮಾತ್ರ ಸೀಮಿತವಾಗಿರಬೇಕು. ಹಾಗಿದ್ದಲ್ಲಿ ಮಾತ್ರ ನಾವು ನಮ್ಮ ಎಲ್ಲಾ ಸಂಬಂಧವನ್ನು ಶುಭ್ರವಾಗಿಟ್ಟುಕೊಳ್ಳಬಹುದು. ಅದು ಮುಂದುವರಿದು ಬಂಧವನ್ನು ಹೊಸಕಿ ಹಾಕುವಂತಿರಬಾರದು. ಹಾಗಾದಲ್ಲಿ ಅದು ಅರ್ಥ ಕಳಕೊಂಡ ಅನುಬಂಧವಾಗಿ ಬಿಡುತ್ತದೆ. ಬದುಕಲ್ಲಿ ನಡೆಯುವ ಸಣ್ಣಪುಟ್ಟ ಘಟನೆಗಳಿಗೆ ನಾವು ನಮ್ಮ ಸುಂದರ, ಸ್ವಪ್ನ ಸಂತೋಷಗಳನ್ನು ಕಳೆದುಕೊಳ್ಳುವುದರಲ್ಲಿ ಯಾವ ಅರ್ಥವಿದೆ?
ಬದುಕಿರುವುದು ಬಾಳಿ ಬೆಳೆಯುವುದಕ್ಕೆ, ಬೆಳೆದು ತೊನೆಯುವುದಕ್ಕೆ. ಮತ್ತೆಮತ್ತೆ ಹಳೆ ರಾಗ ಅದೇ ತಾಳ ಹಿಡಿದು ಜಗ್ಗುವುದು ಸರಿಯಲ್ಲ. ಭೂತದೊಳಗೆ ನುಗ್ಗಿ ವರ್ತಮಾನದಲ್ಲಿ ಸುತ್ತು ಹೊಡೆದು ಭವಿಷ್ಯದ ಹಾಳೆಗಳಲ್ಲಿ ಸುಂದರ ಅಕ್ಷರಗಳನ್ನು ಮೂಡಿಸುವಲ್ಲಿ ಕಾರ್ಯಪ್ರವೃತ್ತರಾಗಬೇಕು. ತಪ್ಪುಗಳು, ಅನಾಹುತಗಳು ಜರುಗುವುದು ಸಾಮಾನ್ಯ. ಕುಗ್ಗದೆ, ಬಗ್ಗದೆ, ಬಂಧ ಬೆಳೆಸುವತ್ತ, ಉಳಿಸುವತ್ತ ಚಿಂತಿಸಬೇಕು. ಘಟನೆ ನಡೆಯಿತು, ಅದಕ್ಕೆ ಪ್ರತಿಕ್ರಿಯಿಸಿಯೂ ಆಯಿತು. ಬಿಟ್ಟು ಬಿಡಿ. ಅದನ್ನು ಮುಂದಕ್ಕೆ ಕೊಂಡೊಯ್ಯುವುದು ಬೇಡ. ಅವುಗಳು ಆ ಕ್ಷಣದ ಸತ್ಯಗಳು, ಸುಖಗಳು, ನೋವುಗಳು ಅಷ್ಟೇ. ಮುಂದೆ ಅದೆಷ್ಟು ನಲಿವು, ಸುಖಗಳು ನಮ್ಮೊಡನೆ ನಲಿಯಲಿವೆ. ಹಾಗಾಗಿ ನಮ್ಮ ಭಾರವನ್ನು ಆದಷ್ಟು ಕಡಿಮೆಗೊಳಿಸಿ ಬದುಕನ್ನು ಹಸಿರಾಗಿಸಬೇಕು. ಈ ಕಾಲಘಟ್ಟದಲ್ಲಿ ಮುಂದೆ ಏನೋ ಎಂಬ ಪ್ರಶ್ನೆ ನಮ್ಮ ನಡುವೆ ಸಾಮಾನ್ಯ. ಹಾಗಾಗಿ ನಾವೆಲ್ಲರೂ ಈ ಕ್ಷಣದಲ್ಲಿ ಬದುಕಬೇಕು. ಬದುಕಿನ ಖುಷಿಯನ್ನು ಸವಿಯಬೇಕು. ಆ ಸವಿಯನ್ನು 'ಕಲ್ಲು ಸಕ್ಕರೆ ಕೊಳ್ಳಿರೋ ನೀವೆಲ್ಲರೂ' ಎಂದು ಸಂಬಂಧಗಳ ಜೊತೆಗೆ ಹಂಚಬೇಕು.
ಸುಂದರ ಬದುಕಿನ ಪುಟಗಳಲ್ಲಿ ಬರೆಯಲು ಲೇಖನಿಗಳೂ, ಬಣ್ಣಗಳೂ ಇವೆ ಹಲವಾರು. ಬಣ್ಣ, ಲೇಖನಿ ತೆಗೆದುಕೊಳ್ಳುವ ಮೊದಲು ಒಮ್ಮೆ ಯೋಚಿಸಿಬೇಕು, ಮುಂದೆ ಮಾಡಲು ಹೋಗುತ್ತಿರುವುದೇನನ್ನು ಎಂದು. ಪೋಣಿಸಲು ಹೋಗುವ ಅಕ್ಷರಗಳು ನಮ್ಮ ಬದುಕಿಗೆ ಅರ್ಥ ಹೇಳುವಂತಿರಬೇಕು. ಸುಂದರ ಅಕ್ಷರಗಳಲ್ಲಿ ಕುರೂಪ ವಿಷಯವನ್ನು, ಕುರೂಪ ಅಕ್ಷರಗಳಲ್ಲಿ ಸುಂದರ ವಿಷಯವನ್ನೂ ಬರೆಯಬಹುದು. ಕಣ್ಣಲ್ಲೇ ಇರಿಯಲೂಬಹುದು, ಸುಡಲೂಬಹುದು, ಪ್ರೇಮಿಸಲೂಬಹುದು, ಕಾರುಣ್ಯವನ್ನು ಸ್ಫುರಿಸಲೂಬಹುದು ತಾನೇ? ಅದೇರೀತಿ ಕಿಚ್ಚು  ನಮ್ಮ ಬಾಳಿಗೆ ಸ್ಫೂರ್ತಿಯ ಸೆಲೆಯೂ ಆಗಬಹುದು, ಮಾತ್ಸರ್ಯದ ಬೆಂಕಿಯಾಗಿ ಸುಡಲೂಬಹುದು. ಎಲ್ಲರ ಬದುಕೂ ಶುಭ್ರ ಹಾಳೆಯಂತೆ. ಅದನ್ನು ಜತನದಿಂದ ಕಾಪಿಟ್ಟುಕೊಂಡು ಬರುವ ಹೊಣೆ ಮಾತ್ರ ನಮ್ಮದು. ಇನ್ನೊಬ್ಬರ ನಾಳೆಗಳ ಹಾಳೆಗಳಲ್ಲಿ ಲೇಖನಿ ಮೂಡಿಸುವುದು, ಇನ್ನೊಬ್ಬರ ವರ್ತಮಾನದ ಅಧಿಕೃತ ಹೇಳಿಕೆದಾರರಾಗುವುದು, ಎಲ್ಲರ  ಭೂತದ ಭೂತ ಬಿಡಿಸುವ ಮಂತ್ರವಾದಿಯಾಗುವುದು...ಇವೆಲ್ಲ ಏತಕ್ಕೆ? ಇನ್ನೊಬ್ಬರ ಜೀವಿತಕ್ಕೆ ಲಗ್ಗೆ ಇಡುವ ಹಕ್ಕು ನಮಗ್ಯಾರಿಗೂ ಇಲ್ಲ. ಕಟ್ಟಿಕೊಂಡ ಬಾಳ್ವೆಗೆ ಅರ್ಥ ಬರೆಯುವ ಹೊತ್ತಿನಲ್ಲಿ ಅನರ್ಥವಾಗುವುದನ್ನು ತಪ್ಪಿಸಿಕೊಳ್ಳುವ ಜವಾಬ್ದಾರಿ ಖಂಡಿತಾ ನಮ್ಮದೇ. ನಮ್ಮ ಕೆಲವೊಂದು ತೆವಲುಗಳು, ಅಹಂಗಳು, ಪ್ರತಿಷ್ಠೆಗಳು ನಮ್ಮ ಯೋಚನಾ ಪಥವನ್ನೇ ದಾರಿ ತಪ್ಪಿಸುತ್ತವೆ. ತೆವಲುಗಳ ದಾಸ್ಯತನ ಯಾವತ್ತಿದ್ದರೂ ಬದುಕಿಗೆ ಸಂಕೊಲೆಯೇ.
ಬದುಕು ಎಂಬ ಕಾದಂಬರಿಯಲ್ಲಿ ನಿತ್ಯವೂ ಒಂದು ಹೊಸ ಹಾಳೆಯನ್ನು ತಿರುವಿ ಹಾಕುತ್ತಿರುತ್ತೇವೆ. ಹಾಳೆ ದುಃಖವಾಗಿದ್ದಲ್ಲಿ ಖೇದ ಬೇಡ. ಮತ್ತೊಂದು ಹಾಳೆ ತಿರುವಿ ಹಾಕಿ. ಅಲ್ಲಿ ಸಂತೋಷ ಕಾಯುತ್ತಿರುತ್ತದೆ. ನಾವು ಖುಷಿಯಾಗಿದ್ದಾಗ ಬದುಕು ಉತ್ತಮವಾಗಿರುತ್ತದೆ. ಆದರೆ ನಮ್ಮಿಂದ ಇತರರು ಖುಷಿಯಾಗಿ, ಆನಂದದಿಂದ ಇರುತ್ತಾರೆ ನೋಡಿ. ಆಗ ಬದುಕು ಅದರ ಅತ್ಯುತ್ತಮ ಸ್ಥಿತಿಯಲ್ಲಿರುತ್ತದೆ. ಪೊರೆಯನ್ನು ಕಳಚಿಕೊಳ್ಳುತ್ತಲೇ ಇರಬೇಕು. ಹೊಸತನವನ್ನು, ಒಳ್ಳೆಯತನವನ್ನು ಮೈಗೂಡಿಸಿಕೊಳ್ಳುತ್ತಿರಬೇಕು. ಇನ್ನೊಬ್ಬರ ಗೋರಿಯ ಮೇಲೆ ನಮ್ಮ ಬದುಕನ್ನು ಕಟ್ಟಿಕೊಳ್ಳುವ ದುಷ್ಟ, ಕೆಟ್ಟ ವಿಚಾರವು ನಮ್ಮ ಬಳಿ ಕನಸಲ್ಲೂ ಸುಳಿಯಬಾರದು. ಜೀವಿತಾವಧಿಯಲ್ಲಿ ಬದುಕು ನಗೆ ಹೂವನ್ನು ಅರಳಿಸುತ್ತಲೇ ಇರುತ್ತದೆ. ಅದನ್ನು ಪೋಷಿಸುವ ಮನಸ್ಸು ನಮ್ಮಲ್ಲಿರಬೇಕು. ಯಾರಿಗೂ ಅಲ್ಲದಿದ್ದರೂ ನಮಗಾಗಿಯಾದರೂ ನಾವು ಬದುಕಬೇಕಲ್ಲವೇ? ಮಣ್ಣಲ್ಲಿ ಮಣ್ಣಾಗಿ ಹೋಗುವ ಮೊದಲು ಮಾಡಬೇಕಾದ ಸಾರ್ಥಕ್ಯದ ಕೆಲಸಗಳನ್ನು ಮಾಡಿ ಮುಗಿಸಿ, ಮತ್ತೆ ಮಣ್ಣಲ್ಲಿ ಸೇರಿ ಉತ್ತಮ ಗೊಬ್ಬರವಾಗಿ, ಆ ಗೊಬ್ಬರ ಇನ್ನೆಲ್ಲೋ ಹೋಗಿ ಬಿದ್ದು ಉತ್ತಮ ಪೈರು ಮೊಳಕೆ ಒಡೆದು...ಎಲ್ಲೋ ಮಳೆಯಾದಾಗ ಇಳೆ ಬಿರಿಯುತ್ತಾಳೆ ನೋಡಿ. ಹಾಗೆ ಬದುಕು ಹಸಿರು ಪೈರಿನಂತೆ ನಳನಳಿಸುತ್ತಿರಬೇಕು. ಆ ದಿಸೆಯಲ್ಲಿ ನಾವಿರಬೇಕು. ಸಂಬಂಧಗಳ ಕಣ್ಣಲ್ಲಿ ಸಂತೋಷದ ಪನ್ನೀರು ಹರಿಯಬೇಕೇ ವಿನಃ ನೋವಿನ ಕಣ್ಣೀರಲ್ಲ. ಒಟ್ಟಿನಲ್ಲಿ, ಈ ಜೀವಕ್ಕೆ ಜನ್ಮ ಭಾರವಾಗುವ ಹಾಗೆ ಬದುಕಬಾರದು. ಸಂಬಂಧ ಅನ್ನೋದು ದೊಡ್ಡದು ಕನಾ...

= ಸಂತೋಷ್ ಅನಂತಪುರ


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.