ಸಾಪ್ತಾಹಿಕಪ್ರಭ

ಡಿಸೋಜಾ ಮತ್ತು ಸಾಗರದ ಕಥೆ

Published On :

ಕಥೆ, ಕವನ, ಮಕ್ಕಳ ಸಾಹಿತ್ಯ, ನಾಟಕ... ಹೀಗೆ ಸಾಹಿತ್ಯದ ಎಲ್ಲ ಕ್ಷೇತ್ರಗಳಲ್ಲಿ ಕೈಯಾಡಿಸಿದ ಕನ್ನಡ ಸಾಹಿತಿಗಳ ಸಾಲಿನಲ್ಲಿ ಡಾ. ನಾ. ಡಿಸೋಜಾ ಕೂಡಾ ಒಬ್ಬರು. ಇದುವರೆಗೂ 98 ಕೃತಿಗಳನ್ನು ಹೊರ ತಂದಿರುವ ಡಿಸೋಜಾ ಅವರದ್ದು ಸಾಹಿತ್ಯ ನಡೆ ವಿಭಿನ್ನವಾದದ್ದು. ಅವರೀಗ ತಮ್ಮ ಬದುಕಿನ ಒಳನೋಟವನ್ನು 'ಬುತ್ತಿ'ಯ ರೂಪದಲ್ಲಿ ಓದುಗರಿಗೆ ಉಣಬಡಿಸಿದ್ದಾರೆ. ಇಲ್ಲಿ ಡಿಸೋಜಾ ಅವರ ಬದುಕಿನ ಒಳನೋಟಗಳೇ ಮೈ ಚೆಲ್ಲಿದ್ದರೂ ಅದು ಆತ್ಮಕಥೆಯಾಗಿ ರೂಪುಗೊಂಡಿರುವುದರಲ್ಲಿ ಯಾವುದೇ ಅನುಮಾನ ಉಳಿಯುವುದಿಲ್ಲ.
ಆತ್ಮಕಥೆ ಎಂದರೇನು? ಒಬ್ಬ ಸೆಲೆಬ್ರಿಟಿ ತನ್ನ ಹುಟ್ಟು, ತನ್ನ ತಂದೆ-ತಾಯಿ ಪೂರ್ವಾಪರ, ಬಂಧು ಬಳಗ, ಬೆಳೆದು ಬಂದ ರೀತಿಯನ್ನೇ ವಿವರಿಸುವುದಾ? ಇದನ್ನಷ್ಟೇ ಮಾಡಿದರೆ, ಅದು ಶುಷ್ಕ ಸಾಹಿತ್ಯವಾಗುವುದರಲ್ಲಿ ಯಾವುದೇ ಸಂದೇಹವೇ ಇಲ್ಲ. ಆದರೆ, ಇಲ್ಲಿ ಡಿಸೋಜಾ ತಮ್ಮ ಕಥನ ಹೇಳುವುದರ ಜತೆ ಜತೆಗೆ ತಮ್ಮ ಸಮಕಾಲಿನ ಜಗತ್ತನ್ನು ಕೂಡಾ ಓದುಗರಿಗೆ ಪರಿಚಯಿಸುತ್ತಾ ಹೋಗುತ್ತಾರೆ. ಅವರು ಈ ಬುತ್ತಿಯಲ್ಲಿ ನಿಜವಾದ ಹೀರೋ ಅಂದರೆ 'ಸಾಗರ' ಊರು. ಬುತ್ತಿಯನ್ನು ಬಿಚ್ಚಿ ಉಣ್ಣುತ್ತಾ ಹೋದಂತೆ ಸಾಗರ ಕೂಡಾ ನಿಮ್ಮ ಮುಂದೆ ಅನಾವರಣಗೊಳ್ಳುತ್ತಾ ಹೋಗುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಅವರ ಎಷ್ಟೋ ಕಥೆ, ಕವನ, ನಾಟಕಗಳಿಗೆ ಸಾಗರ ಮತ್ತು ಅದರ ಸುತ್ತಮುತ್ತಲಿನ ಪರಿಸರವೇ ಸ್ಫೂರ್ತಿ ಮತ್ತು ಕಥಾವಸ್ತು. ತನ್ನ ಕಥೆಯೊಂದಿಗೆ ಸಮಕಾಲೀನ ಜಗತ್ತನ್ನು ಬಿಚ್ಚಿಡುತ್ತಾ ಹೋದರೆ ಆ ಆತ್ಮಕಥೆ ವಿಭಿನ್ನವಾಗಿ ನಿಲ್ಲುವುದರಲ್ಲಿ ಸಂಶಯವಿಲ್ಲ. ಈ ಮಾತು ಡಿಸೋಜಾ ಅವರ ಬುತ್ತಿಗೂ ಅನ್ವಯಿಸುತ್ತದೆ.
ಹಾಗೆ ನೋಡಿದರೆ, 'ಬುತ್ತಿ' ಒಮ್ಮಿಲೇ ಪುಸ್ತಕರೂಪ ತಳೆದಿದ್ದಲ್ಲ. ಇದು ಮೊದಲು ಅಂಕಣ ರೂಪದಲ್ಲಿ 'ಮಣ್ಣಿನ ವಾಸನೆ' ಮತ್ತು 'ಚಾರ್ವಾಕ' ಪತ್ರಿಕೆಗಳಲ್ಲಿ ಪ್ರಕಟಗೊಂಡು, ನಂತರ ಪುಸ್ತಕವಾಗಿ ಹೊರಬಂದಿದೆ. ಅವರೇ ಹೇಳಿದಂತೆ, ಇಲ್ಲಿ ಘಟನೆಗಳು ಒಂದು ಅನುಕ್ರಮದ ರೀತಿಯಲ್ಲಿ ದಾಖಲಾಗುವುದಿಲ್ಲ. ಅವು ಒಮ್ಮೆ ವರ್ತಮಾನಕ್ಕೆ ಬಂದು ಭೂತಕಾಲಕ್ಕೆ ಜಿಗಿದರೆ ಮತ್ತೊಮ್ಮೆ ಭೂತದಿಂದ ವರ್ತಮಾನಕ್ಕಿಳಿಯುತ್ತಿದೆ. ಈ ತಂತ್ರ ಓದುಗರನ್ನು ಆಸಕ್ತಿಯನ್ನು ಮುಂದುವರಿಸಿಕೊಂಡು ಹೋಗುವುದರಲ್ಲಿ ಯಶಸ್ಸು ಕಂಡಿದೆ ಅಷ್ಟೇ ಅಲ್ಲ, ಕುತೂಹಲವನ್ನು ಕೂಡಾ ಹೆಚ್ಚಿಸುತ್ತದೆ. ಇದು ಬುತ್ತಿಯ ಶಕ್ತಿಯೂ ಆಗಿದೆ.
ಬುತ್ತಿಯಲ್ಲಿ ಏನಿಲ್ಲ, ಎಲ್ಲವೂ ಇದೆ. ಲೇಖಕ, ಸಾಹಿತಿಯದ್ದು ಕೇವಲ ಸಾಹಿತಿ ಸೃಜಿಸುವುದು ಮಾತ್ರ ಕೆಲಸವಲ್ಲ. ಆತ, ಅವನು ಆ್ಛಡ್ಝಿಢ್ಝಡಡಿ ಕೂಡಾ ಆಗಬೇಕು ಎನ್ನುವುದು ಡಿಸೋಜಾ ಅವರ ತತ್ವ ಮತ್ತು ಈ ತತ್ವದ ಪ್ರತಿಫಲನ ಬುತ್ತಿಯ ಅನೇಕ ಭಾಗಗಳಲ್ಲಿ ಎದ್ದು ಕಾಣುತ್ತದೆ. ಡಿಸೋಜಾ ಅವರು ಕೆವಲ ಬರವಣಿಗೆಯನ್ನು ಮಾತ್ರ ಕೈಗೊಳ್ಳಲಿಲ್ಲ. ಪರಿಸರಕ್ಕೆ ಧಕ್ಕೆಯಾದಾಗ ಕೂಗು ಹಾಕಿದರು. ಸಾಗರಕ್ಕೆ ಬರುತ್ತಿದ್ದ ರೈಲು ನಿಂತು ಹೋದಾಗ, ಅದರ ಹೋರಾಟದ ಮುಂಚೂಣಿಯಲ್ಲಿ ನಿಂತು ಮತ್ತು ರೈಲು ಓಡುವಂತೆ ಮಾಡುವಲ್ಲಿ ಸಮಷ್ಠಿ ಯತ್ನ ಯಶಸ್ವಿಯಾದರು. ಇದೆಲ್ಲವನ್ನು ಗಮನಿಸಿದರೆ, ಕೆಲವೊಂದು ಸಾರಿ ಸಾಹಿತಿಗಿಂತಲೂ ಸಾಮಾಜಿಕ ಕಾರ್ಯಕರ್ತರಂತೆ ಕಂಡು ಬರುತ್ತಾರೆ! ಇದಕ್ಕೆಲ್ಲ ಅವರಿಗೆ ಬೆನ್ನಿಗೆ ನಿಂತಿದ್ದು ಒಡನಾಡ ಸಾಂಸ್ಕೃತಿಕ ಸಂಘ ಮತ್ತು ಯೂತ್ ಹಾಸ್ಟೆಲ್ ಅಸೋಸಿಯೇಷನ್ ಎಂಬುದು ಓದುತ್ತಾ ಹೋದಂತೆ ಗೊತ್ತಾಗುತ್ತದೆ.
ಬುತ್ತಿಯಲ್ಲಿ ಶಾಲೆ ಕಲಿಕೆ, ಕೆಲಸ ಹಿಡಿಯುವುದು ಬರವಣಿಗೆ, ಮನೆ ಕಟ್ಟಿದ್ದು, ವೈಯಕ್ತಿಕ ಬದಕು ಎಲ್ಲವನ್ನು ಹದವಾಗಿ ಕಟ್ಟಿಕೊಟ್ಟಿದ್ದಾರೆ. ಬುತ್ತಿ ಓದಿ ಮುಗಿಸದ ಮೇಲೆ ತಟ್ಟನೆ ಗಮನಕ್ಕೆ ಬಂದಿದ್ದು ಅಂದರೆ, ಡಿಸೋಜಾ ಅವರು ತಮ್ಮ ಬದುಕಿನ ಒಳನೋಟಗಳನ್ನು ಹೇಳುತ್ತಾ ಹೇಳುತ್ತಾ ಅವು ಸಾಗರಕ್ಕೂ ಸಂಬಂಧಿಸಿದ್ದು ಎನ್ನುವಂತೆ ಮಾಡಿ ಬಿಡುತ್ತಾರೆ. ಬುತ್ತಿಯನ್ನು ಸಾಗರದಿಂದ ಬೇರ್ಪಡಿಸಿ ನೋಡಲು ಸಾಧ್ಯವೇ ಇಲ್ಲ. ಹಾಗಾಗಿ, ಇದು ಸಾಗರ ಎಂಬ ಪಟ್ಟಣದ ಆತ್ಮಕಥೆ ಎಂದೂ ಹೇಳಿದರೆ ತಪ್ಪಾಗಲಾರದು. ಅಷ್ಟರಮಟ್ಟಿಗೆ ಸಮ್ಮಿಳಿತವಾಗಿದೆ. ಬುತ್ತಿಯಲ್ಲಿ ಸಾಗರ ಕೂಡಾ ಒಂದು ಪಾತ್ರವಾಗಿ ನಿಲ್ಲುತ್ತದೆ. ಮಲೆನಾಡಿನ ಬಗ್ಗೆ ಕೊಂಚವೂ ಗೊತ್ತಿಲ್ಲದವರಿಗೆ ವಿಸ್ಮಯ ಮೂಡಿಸುತ್ತದೆ. ಯಾಕೆಂದರೆ, ಬುತ್ತಿಯಲ್ಲಿ ಬರುವ ಬಹುತೇಕ ಪ್ರಸ್ತಾಪಗಳು ಸಾಗರ ಮತ್ತು ಅದರ ಸುತ್ತಲಿನ ಪ್ರದೇಶಗಳೇ ಆಗಿವೆ. ಬುತ್ತಿಯದ್ದು ಇನ್ನೊಂದು ವೈಶಿಷ್ಟ್ಯ ಎಂದರೆ, ಇದು ಒಮ್ಮೊಮ್ಮೆ ಕಾದಂಬರಿಯಾಗಿ, ಕಥೆಯಾಗಿ ಓದಿಸಿಕೊಂಡು ಹೋಗುತ್ತದೆ. ಅದು ಡಿಸೋಜಾ ಅವರ ಬರವಣಿಗೆಯ ಪ್ಲಸ್‌ಪಾಯಿಂಟ್. ಇಷ್ಟೆಲ್ಲಾ ಇದ್ದಾಗ್ಯೂ, ಒಂದು ಕೊಂಕು ಮಾತೆಂದರೆ, ತಮ್ಮ ಸರಳತನ, ಪ್ರಾಮಾಣಿಕತೆಯನ್ನು ಅತಿ ಎನಿಸುವಷ್ಟು ಬಿಂಬಿಸಿದ್ದಾರೆ. ಹಾಗಂತ ಅದು ತಪ್ಪು ಎನ್ನಲಾಗದು. ಆದರೆ, ಓದುಗನ ಅರಿವಿಗೆ ಇದು ತಾಗುತ್ತದೆ.
ಬುತ್ತಿ(ಡಾ. ನಾ ಡಿಸೋಜಾ ಬದುಕಿನ ಒಳನೋಟಗಳು)
ಲೇಖಕರು: ಡಾ. ನಾ.ಡಿಸೋಜಾ
ಪ್ರಕಾಶಕರು: ಹೇಮಂತ ಸಾಹಿತ್ಯ, ಬೆಂಗಳೂರು
ಬೆಲೆ: 150

= ಮಲ್ಲಿಕಾರ್ಜುನ ತಿಪ್ಪಾರ


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.