ಯುಗದ ನೆನಪು ಸೋನಿಯಾ ಗಾಂಧಿ
ಇತ್ತೀಚಿನ ದಿನಗಳಲ್ಲಿ ದೇಶದ ಅತಿಪ್ರತಿಷ್ಠಿತ ಮಾಧ್ಯಮವೂ 'ಸೋನಿಯಾ ದಿನಗಳು' ಎನ್ನುವ ಪದಗುಚ್ಛದ ಬಳಕೆಯನ್ನು ದೊಡ್ಡ ರೀತಿಯಲ್ಲೇ ಆರಂಭಿಸಿದೆ. 2004ರ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಿದ್ದು ಸೋನಿಯಾ ಗಾಂಧಿ ಅವರ ಪ್ರಚಾರದಿಂದಲೇ ಎನ್ನುವ ಭಾವನೆ ಇತ್ತು. ಆಗ ಆಕೆ ಪ್ರಧಾನಿ ಪೀಠವನ್ನು ಒಲ್ಲೆ (ಅಪರಿಗ್ರಹ) ಎಂದು ಹೇಳಿ ಆ ಸ್ಥಾನದಲ್ಲಿ ಮನಮೋಹನ ಸಿಂಗ್ ಅವರನ್ನು ಪ್ರತಿಷ್ಠಾಪಿಸಿದಾಗ ಒಂದು ರೀತಿಯ ದ್ವಂದ್ವ ಶಕ್ತಿ ಕೇಂದ್ರಗಳ ವ್ಯವಸ್ಥೆ ರೂಪಗೊಂಡಿತ್ತು.
ಆದರೆ ಕಳೆದ ಒಂದು ದಶಕದಲ್ಲಿ (ಏಳೆಂಟು ತಿಂಗಳು ಕಡಿಮೆಯಾಗಿರಬಹುದು) ಸೋನಿಯಾ ಗಾಂಧಿ ಅನುಮಾನಕ್ಕೆ ಆಸ್ಪದವೇ ಇಲ್ಲದ ರೀತಿಯಲ್ಲಿ, ರಾಜಕೀಯವಾಗಿ, ಆಡಳಿತಾತ್ಮಕವಾಗಿ ತಮ್ಮ ಶಕ್ತಿಯೇ ಮುಖ್ಯ ಎನ್ನುವುದನ್ನು ಪ್ರದರ್ಶಿಸಿದ್ದಾರೆ. ಇದಕ್ಕೆ ಅವರು ಬಳಸಿದ್ದು ಸಂಯುಕ್ತ ಪ್ರಗತಿಪರ ಕೂಟದ ಅಧ್ಯಕ್ಷೆಯ ಅಧಿಕಾರ ಹಾಗೂ ರಾಷ್ಟ್ರೀಯ ಸಲಹಾ ಮಂಡಳಿಯ ಪ್ರಮುಖ ಸ್ಥಾನದ ಅಧಿಕಾರದ ಮಾರ್ಗವನ್ನು. ಮಾಹಿತಿ ಹಕ್ಕಿನ ಕಾಯಿದೆ, ಶಿಕ್ಷಣದ ಹಕ್ಕಿನ ಕಾಯಿದೆ, ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ, ಈಗ ರಾಷ್ಟ್ರೀಯ ಆಹಾರ ಭದ್ರತೆಯ ವ್ಯವಸ್ಥೆ ಕಾಯಿದೆ ಜಾರಿಗೆ ಬಂದಿದ್ದು ಸೋನಿಯಾ ಗಾಂಧಿ ಅವರ ಒತ್ತಡದಿಂದಲೇ ಎನ್ನುವುದು ರಹಸ್ಯವಲ್ಲ.
ಈ ನಾಲ್ಕೂ ಯೋಜನೆಗಳಿಗೆ ಸಂಸತ್ತಿನ ಅಂಗೀಕಾರ ಮುದ್ರೆಯನ್ನು ಒತ್ತಿಸುವಲ್ಲಿ ಸೋನಿಯಾ ಪಾತ್ರವೇ ನಿರ್ಣಾಯಕ. ಸರ್ಕಾರದ ನೌಕರಶಾಹಿಯ ಅಡ್ಡಿ, ಪಂಡಿತರ ಹೀಯಾಳಿಕೆ, ಪ್ರತಿಪಕ್ಷಗಳ ಮೂದಲಿಕೆಗಳೆಲ್ಲವನ್ನೂ ಎದುರಿಸಿ, ಸಹಿಸಿಕೊಂಡು ರಾಜಕೀಯ ಬೆಂಬಲದಿಂದಲೇ ಅತಿ ಮಹತ್ವದ 'ಆರ್ಥಿಕ ಕ್ರಾಂತಿ'ಯ ಕಾಯಿದೆಗಳನ್ನು ಜಾರಿಗೆ ತರುವುದರಲ್ಲಿ ಯಶಸ್ವಿಯಾಗಿದ್ದರಿಂದಲೇ, 2004-2013ರ ಅವಧಿಯನ್ನು ಸೋನಿಯಾ ದಿನಗಳು ಅಥವಾ ವರ್ಷಗಳು ಎಂದು ಜನ ಭಾವಿಸುವುದು. ಅದು ಜನರ ಆಡು ಮಾತಿನಲ್ಲಿ ಇದ್ದಿದ್ದು ಈಗ ಪ್ರತಿಷ್ಠಿತ ಮಾಧ್ಯಮ ಪ್ರಪಂಚದಲ್ಲಿ, ರಾಜಕೀಯ ಇತಿಹಾಸಕಾರರ ನಿಘಂಟುಗಳಲ್ಲೂ ಸೇರಿಕೊಂಡಿದೆ. ಲಕ್ಷ ಲಕ್ಷ ಕೋಟಿ ರುಪಾಯಿಗಳನ್ನು ದೇಶದ ಉದ್ದಗಲದ ವಿಶಾಲ ಪ್ರದೇಶದ ಬಡವರಿಗೆ ದಕ್ಕುವಂತೆ ಮಾಡಿದ ಯೋಜನೆಗಳಿವು ಎಂದು ಸೋನಿಯಾ ಗಾಂಧಿ ಅವರನ್ನು ಹೊಗಳುವವರೂ ಇದ್ದಾರೆ. ಈ ಯೋಜನೆಗಳ ಒಟ್ಟಾರೆ ಪರಿಣಾಮವಾಗಿ ದೇಶದ ಆರ್ಥಿಕ ವ್ಯವಸ್ಥೆಯೇ ಎಕ್ಕಹುಟ್ಟಿ ಹೋಗುತ್ತದೆ ಎನ್ನುವ ಪಂಡಿತರೂ ಇದ್ದಾರೆ. ಇವೆರಡರಲ್ಲಿ ಯಾವುದು ಸರಿ ಎನ್ನುವುದನ್ನು ಈಗಲೇ ಹೇಳುವುದಕ್ಕೆ ಆಗದು.
ಅವರ ಸಂಸತ್ತಿನ ಜೀವನದ ದೀರ್ಘ ಅವಧಿಯಲ್ಲಿ ಸೋನಿಯಾ ಗಾಂಧಿ ಮಾಡಿರುವುದು ಎರಡೇ ಎರಡು ಪ್ರಮುಖ ಭಾಷಣಗಳಷ್ಟೇ. ಮೊದಲನೆಯದು ಪ್ರತಿಪಕ್ಷದ ನಾಯಕಿಯಾಗಿ ವಾಜಪೇಯಿ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯವನ್ನು ಮಂಡಿಸಿ, ಒಂಬತ್ತು ಅಂಶಗಳ ಆರೋಪಗಳ ಪಟ್ಟಿಯನ್ನು ಹೊರಿಸಿದಾಗ. ಎರಡನೆಯದು ಕಳೆದ ವಾರ ರಾಷ್ಟ್ರೀಯ ಆಹಾರ ಭದ್ರತಾ ಶಾಸನವನ್ನು ಬೆಂಬಲಿಸಿ ಮಾತನಾಡಿದಾಗ. ಅವರು ತಮ್ಮ ಸಂಸದೀಯ ಜೀವನದಲ್ಲಿ ಈ ಘಳಿಗೆಗಳನ್ನೇ ಮಹತ್ವದ ಘಳಿಗೆಗಳೆಂದು ಭಾವಿಸಿರಬಹುದು. ಮೊದಲ ಭಾರಿ ಭಾಷಣದ ಅನಂತರವೇ ಅವರ ಆರೋಗ್ಯ ಸ್ವಲ್ಪ ಕೆಟ್ಟಿತ್ತು. ಆರೋಗ್ಯ ಪರೀಕ್ಷೆಗಾಗಿ ಅಮೆರಿಕಕ್ಕೆ ಹೋಗಿ ಬಂದರು (ಅದು ಆಗ ರಹಸ್ಯವಾಗಿತ್ತು).
ಅದಾದ ಅನಂತರ ಆಗಾಗ ಅಮೆರಿಕಕ್ಕೆ ಹೋಗಿ ಬರುವುದು ವಾಡಿಕೆಯಾಗಿದೆ. ಎರಡನೆಯ ಪ್ರಮುಖ ಸಂದರ್ಭದಲ್ಲಿ ಬಡವರ ಅನ್ನದ ಸಮಸ್ಯೆಯನ್ನು ನೀಗಿಸುವ ಮಹಾ ಸಮಸ್ಯೆ ಕುರಿತ ವಿಧೇಯಕದ ಬೆಂಬಲವಾಗಿ ಭಾವನಾ ಪ್ರಧಾನ ಭಾಷಣ ಮಾಡಿದ ಅನಂತರ ಸೋನಿಯಾ ಗಾಂಧಿಗೆ ಉಸಿರು ಕಟ್ಟಿದಂತಾಗಿ, ಸಂಗಾತಿಯೊಬ್ಬರ ನೆರವು ಪಡೆದು ಆಸ್ಪತ್ರೆಗೆ ಹೋದರು.
ಅವರದ್ದೇ ಎನ್ನಬುದಾದ ವಿಧೇಯಕದ ಪರವಾಗಿ ಮತ ನೀಡಲೂ ಸೋನಿಯಾ ಗಾಂಧಿ ಲೋಕಸಭೆಯಲ್ಲಿ ಇರಲಿಲ್ಲ. ಹೌದು ಅವರ ಆರೋಗ್ಯ ಇನ್ನೂ ಸುಧಾರಿಸಬೇಕಾಗಿದೆ. ಲೋಕಸಭೆಯಲ್ಲಿ ಅವರ ಭಾಷಣದ ಪ್ರಸಾರವನ್ನು ಕಂಡಾಗ, ಅವರ ಮುಖದಲ್ಲಿ ಉತ್ಸಾಹ ಇರಬೇಕಾಗಿದ್ದ ಜಾಗದಲ್ಲಿ ಸುಸ್ತಾದ ಸೂಚನೆ ನೀಡುವ ಲಕ್ಷಣ ಇತ್ತು.
ಈಚಿನ ದಿನಗಳಲ್ಲಿ ಅವರ ನಡಿಗೆಯ ವೇಗವೂ ಕಡಿಮೆಯಾಗಿದೆ. 67ನೇ ವಯಸ್ಸು ಅವರ ಮುಖದ ಮೇಲೆ ಕಾಣುವುದಿಲ್ಲ ಎನ್ನುವ ಸ್ಥಿತಿಯಲ್ಲೇನೂ ಅವರಿಲ್ಲ. ಮಾಡಬೇಕಾದ ಕೆಲಸವನ್ನೆಲ್ಲ ಮಾಡಿ ಮುಗಿಸುವ, ಸಾಧ್ಯವಾದರೆ ಮಕ್ಕಳಾದ ರಾಹುಲ್ ಗಾಂಧಿ, ಪ್ರಿಯಾಂಕಾ ಅವರ ಭವಿಷ್ಯವನ್ನು ಭದ್ರ ಮಾಡುವ ಬಯಕೆಯನ್ನು ಆಗೀಗ ಅಂತರಂಗದ ಮಾತುಕತೆಗಳಲ್ಲಿ ಕೆಲವರಲ್ಲಿ ತೋಡಿಕೊಂಡಿದ್ದಾರೆ. ಸೋನಿಯಾ ಗಾಂಧಿ ಅವರಿಗೆ ವಾಸ್ತವದಲ್ಲಿ ಈಗ ಆತ್ಮೀಯರು ಎನ್ನುವವರೇ ಇಲ್ಲ. ಮಗ ರಾಹುಲ್ - ಮಗಳು ಪ್ರಿಯಾಂಕಾ ಅವರನ್ನು ಬಿಟ್ಟರೆ ಅನೇಕರ ಜತೆ ಒಳ್ಳೆಯ ಸಂಪರ್ಕ ಇದ್ದರೂ ಆತ್ಮೀಯತೆಯನ್ನು ಪ್ರದರ್ಶಿಸುವುದಿಲ್ಲ.
1946ರ ಡಿಸೆಂಬರ್ 9 ರಂದು ಇಟಲಿಯ ಒಂದು ಸಾಮಾನ್ಯ ಹಳ್ಳಿಯಲ್ಲಿ ಹುಟ್ಟಿದ ಎಡ್ವಿಗೆ ಆಲ್ಬಿನ ಮೈನೋ, ಸೋನಿಯಾ ಗಾಂಧಿಯಾಗಿ ಪರಿವರ್ತನೆಯಾಗಿ, ಭಾರತದಂತಹ ನೂರಿಪ್ಪತ್ತು ಕೋಟಿಗೂ ಹೆಚ್ಚಿನ ಜನರಿರುವ ನಾಡಿನ ಭವಿಷ್ಯವನ್ನು ರೂಪಿಸುವ ಹಂತ ತಲುಪಿದ್ದರಲ್ಲಿ ಆರಂಭದಲ್ಲಿ ಅವರ ಕಾಣಿಕೆ ಏನೂ ಇಲ್ಲ. 1964ರ ಸುಮಾರಿನಲ್ಲಿ ಮೈನೋ ಹೆಸರನ್ನೇ ಹೊತ್ತು ಕೇಂಬ್ರಿಜ್ನ ಒಂದು ಶಾಲೆಯಲ್ಲಿ ಇಂಗ್ಲಿಷ್ ಕಲಿಯಲಿಕ್ಕೆ ಹೋದಾಗಲೇ ಅಲ್ಲಿ ರಾಜೀವ ಗಾಂಧಿ ಟ್ರಿನಿಟಿ ಕಾಲೇಜಿನ ವಿದ್ಯಾರ್ಥಿಯಾಗಿದ್ದರು. ಪರಿಚಯ, ತಿರುಗಾಟ, ಪ್ರಣಯದ ಅನಂತರ ಭಾರತದಲ್ಲೇ ಮದುವೆ. 'ಸೋನಿಯಾ' ಅತ್ತೆ ಇಂದಿರಾಗಾಂಧಿ ಇಟ್ಟ ಹೆಸರು. ಮುಂದೆ, ಇಂದಿರಾ ಗಾಂಧಿಯ ಹತ್ಯೆಯ ದುರಂತದ ಅನಂತರ ಪ್ರಧಾನಿ ಪತ್ನಿ. ರಾಜೀವ ಗಾಂಧಿಯ ಹತ್ಯೆಯ ಅನಂತರ ಪತಿಯ ಉತ್ತರಾಧಿಕಾರಿಯಾಗಲು ಕಾಲ ಬೇಕಾಯಿತು. ಅಲ್ಲೂ ಅವರ ಸ್ವಂತ ಪ್ರಯತ್ನ ಕಡಿಮೆ. ರಾಜೀವ್ ಹತ್ಯೆಯ ಅನಂತರ ಒಂದು ವರ್ಷ ಮನೆ ಬಿಟ್ಟು ಹೊರಗೇ ಬರಲಿಲ್ಲ. ಹಲವು ನಾಯಕರು, ಸೀತಾರಾಮ್ ಕೇಸರಿ ಅವರನ್ನು ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ಇಳಿಸಿ, ಅಲ್ಲಿ ಸೋನಿಯಾ ಗಾಂಧಿಯನ್ನು ಕೂಡಿಸಿದಾಗಲೂ ಆಕೆ ಮೌನ ಗೊಂಬೆಯೇ. 1980 ರಲ್ಲೇ ಭಾರತೀಯ ಪೌರತ್ವವನ್ನು ಪಡೆದಿದ್ದ ಸೋನಿಯಾ ಗಾಂಧಿ ಸ್ವತಃ ರಾಜಕೀಯವನ್ನು ಪ್ರವೇಶಿಸಿದ್ದು ಕೊಲ್ಕತ್ತಾ ಕಾಂಗ್ರೆಸ್ ಅಧಿವೇಶನದಲ್ಲಿ ಪಕ್ಷದ ಸದಸ್ಯತ್ವವನ್ನು ಪಡೆದಾಗಲೇ.
1999 ರಲ್ಲಿ ಕಾಂಗ್ರೆಸ್ ಅಧ್ಯಕ್ಷೆ. ಆ ಸ್ಥಾನದಲ್ಲೇ ಈಗಲೂ ಮುಂದುವರಿದಿದ್ದಾರೆ. ಸುಮಾರು ಹದಿನೈದು ವರ್ಷಗಳ ಕಾಲ ಸತತವಾಗಿ ಕಾಂಗ್ರೆಸ್ನ ಅಧ್ಯಕ್ಷ ಪೀಠದಲ್ಲಿ ಕೂತವರು ಬೇರೆ ಯಾರೂ ಇಲ್ಲ. ಮೋತಿಲಾಲ ನೆಹರೂ, ಜವಾಹರ ಲಾಲ ನೆಹರೂ, ಇಂದಿರಾ ಗಾಂಧಿ ಯಾರೂ ಅಷ್ಟು ದೀರ್ಘಕಾಲ ದೇಶದ ಅತಿ ಹಳೆಯ ಹಾಗೂ ಅತಿ ದೊಡ್ಡ ರಾಜಕೀಯ ಪಕ್ಷದ ಅಧ್ಯಕ್ಷರಾಗಿರಲಿಲ್ಲ. ಕೆಲವು ಕಾಲ ಸೋನಿಯಾ ಗಾಂಧಿ ಅವರ ಇಟಲಿಯ ಮೂಲವನ್ನು ಹುಡುಕಿ ಲೇವಡಿ ಮಾಡುತ್ತಿದ್ದವರೂ, ಈಗ ಅವರನ್ನು 'ಒಪ್ಪಿಕೊಂಡಿದ್ದಾಗಿದೆ'. ಸದ್ಯದ ಸ್ಥಿತಿಯಲ್ಲಿ ಕಾಂಗ್ರೆಸ್ಸಿಗೆ ಸೋನಿಯಾ ಗಾಂಧಿ ಅವರನ್ನು ಬಿಟ್ಟರೆ, ಬೇರೆ ಯಾರೂ ನಾಯಕರಾಗುವುದನ್ನು ಊಹಿಸಿಕೊಳ್ಳುವುದೂ ಕಷ್ಟ.
ಒಂಬತ್ತು ವರ್ಷಗಳ ಕಾಲ ದೇಶದ ಆಳುವ ಕೂಟದ ರಾಜಕೀಯ ನಾಯಕರಾಗಿ ಎಲ್ಲ ಜವಾಬ್ದಾರಿಯನ್ನು ನಿಭಾಯಿಸಿಕೊಂಡು ಬಂದಿದ್ದಾರೆ. ಅವರ ನಾಯಕತ್ವದಲ್ಲೇ ಕಾಂಗ್ರೆಸ್ ಎರಡು ಚುನಾವಣೆಗಳಲ್ಲಿ ಸಂಸತ್ತಿನಲ್ಲಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿ, ಈಗ ಮತ್ತೆ ಚುನಾವಣೆ ಸಮರಕ್ಕೆ ಸಜ್ಜಾಗುತ್ತಿದೆ. ಸೋನಿಯಾ ಗಾಂಧಿ ನಾಯಕತ್ವದಲ್ಲಿ ಕಾಂಗ್ರೆಸ್ಸಿಗೆ ಹ್ಯಾಟ್ರಿಕ್ ವಿಜಯ ಸಿಗುವುದು ಕಷ್ಟ ಸಾಧ್ಯ, ಅಸಾಧ್ಯ ಎಂದೇನೂ ಅಲ್ಲ.
-ಸತ್ಯ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

