ಹೆಚ್ಚೆಸ್ವಿ ಹೆಚ್ಚು ಸವಿ
ಮಕ್ಕಳಿಗಾಗಿ ನಾಲ್ಕು ಕಾದಂಬರಿ, ಮೂರು ನಾಟಕ, ನಾಲ್ಕು ಕವನ ಸಂಗ್ರಹ ತಂದಿದ್ದೀರಿ. ಒಬ್ಬ ಗಂಭೀರ ಸಾಹಿತಿ ಇಷ್ಟು ಹಗುರವಾಗಲು ಹೇಗೆ ಸಾಧ್ಯವಾಯಿತು?

ಎಲ್ಲಿಂದ, ಯಾವ ಮಗುವಿನಿಂದ ಕದ್ದಿರಿ ಆ ಮುಗ್ಧ ನಗುವನ್ನ? ಮಕ್ಕಳ ರಚನೆಯಲ್ಲಿ ನೀವು ಕಂಡ ಖುಷಿ ಏನು?
ಯಾರು ತನ್ನೊಳಗೆ ಮಗುವೊಂದನ್ನು ಸಲುಹಿರುತ್ತಾನೋ ಅವನು ಮಕ್ಕಳ ಕವಿ ಆಗಬಲ್ಲ. ಆ ಮಗು ಪ್ರತಿಯೊಬ್ಬ ವ್ಯಕ್ತಿಯೊಳಗೂ ಇರುತ್ತದೆ. ಅನೇಕರು ಆ ಮಗುವಿನ ಕತ್ತು ಹಿಸುಕಿರುತ್ತಾರೆ. ಆದರೆ, ಆ ಮಗುವನ್ನು ಯಾರು ಆರೈಕೆ ಮಾಡಿ ಮುಂದೆ ಹೋಗುತ್ತಾರೋ ಅಂಥವರು ಮಕ್ಕಳ ಕವಿ ಆಗಲು ಸಾಧ್ಯ. ಹಾಗಾಗಿ, ನಾನು ಆ ನಗುವನ್ನು ಕದ್ದಿದ್ದು ನನ್ನ ಮಗುವಿನಿಂದಲೇ.
ನಾವು ರಚಿಸಿದ್ದನ್ನು ಅವು ಆಸ್ವಾದಿಸಿ, ಆನಂದಿಸಿ ಕುಣಿದಾಗಲೇ ನಮಗೊಂದು ಖುಷಿ ದಕ್ಕುತ್ತದೆ. ಈ ಮಕ್ಕಳನ್ನು ಮೆಚ್ಚಿಸುವುದು ಬಹಳ ಕಷ್ಟ. ಏಕೆಂದರೆ, ಮಗು ಯಾವ ಸೌಜನ್ಯಕ್ಕೂ ತನಗೆ ಇಷ್ಟವಾಗದೇ ಇರುವುದನ್ನು ಒಪ್ಪುವುದಿಲ್ಲ. ಅದಕ್ಕೆ ಬೇಸರವಾದರೆ ಅದು ನಿದ್ದೆಗೆ ಜಾರುತ್ತದೆ. ಆಕಳಿಸುತ್ತದೆ. ನಮ್ಮ ಕವನಗಳನ್ನು ಕೇಳಿದಾಗ ಆ ಮಗುವಿನ ಕಣ್ಣಲ್ಲಿ ಕಂಗೊಳಿಸುವ ಹೊಳಪು, ಅದರ ಅರಳುವ ಮುಖ ನಮಗೊಂದು ನೈಜ ವಿಮರ್ಶೆಯ ಮೌಲ್ಯಮಾಪನ.
ಗಂಭೀರ ಧಾಟಿಯಲ್ಲಿ ಸಾಗುತ್ತಲೇ ನಡುವೆ ಮಕ್ಕಳ ಸಾಹಿತ್ಯದಲ್ಲೂ ಕೈಯ್ಯಾಡಿಸಿದವರು ಹಲವರು. ಆದರೆ, ಮಕ್ಕಳ ಸಾಹಿತ್ಯದಿಂದಲೇ ಬರವಣಿಗೆ ಆರಂಭಿಸಿದವರಿಗೆ ಗಂಭೀರ ಸಾಹಿತ್ಯಕ್ಕೇರಲು ಸಾಧ್ಯವೇ?
ನಮ್ಮಲ್ಲಿ ಫುಲ್ಟೈಮ್ ಮಕ್ಕಳ ಸಾಹಿತಿ ಅಂತ ಯಾರೂ ಇಲ್ಲ. ದೊಡ್ಡವರಿಗೆ ಬರೆದವರು ಮಕ್ಕಳಿಗೂ ಬರೆದರು. ಕುವೆಂಪು 'ರಾಮಾಯಣ ದರ್ಶನಂ' ಬರೆದರು, ಇತ್ತ 'ಕಿಂದರಿಜೋಗಿ'ಯನ್ನೂ ಬರೆದರು. ಕಾರಂತರೂ ಹಾಗೆಯೇ. ಶಿಶು ಸಾಹಿತ್ಯ ರಚನೆ ಪ್ರತಿ ಲೇಖಕನ ಸಾಂಸ್ಕೃತಿಕ ಹೊಣೆ. ಮಕ್ಕಳನ್ನು ಕಡೆಗಣಿಸಲೇಬಾರದು. ಹಾಗೆ ನೋಡಿದರೆ, ಜಿ.ಪಿ. ರಾಜರತ್ನಂ, ಪಂಜೆ ಮಂಗೇಶರಾಯರೂ ಮಕ್ಕಳ ಸಾಹಿತ್ಯದಲ್ಲಿ ಅದ್ವಿತೀಯ ಕೃಷಿ ಮಾಡಿದವರು. ಮಕ್ಕಳಿಗೆ ಬರೆಯಬೇಕೆಂದು ಎಚ್ಚರ ಮೂಡಿಸಿದ್ದೇ ಇವರು. ಮಕ್ಕಳಿಗೇ ಒಂದು ಭಾಷೆ ರೂಪಿಸಿದರು. ಮಕ್ಕಳ ತೊದಲು ಮಾತನ್ನು ಬಳಸುವಂಥ ಪ್ರಯತ್ನ ರತ್ನಾಕರವರ್ಣಿ, ಪುರಂದರದಾಸರ ಕಾಲದಲ್ಲೇ ಆಗಿದೆ. ಮಕ್ಕಳಿಗಾಗಿಯೇ ಒಂದು ಡಿಕ್ಷನರಿ ರೂಪಿಸಬೇಕೆಂಬ ಸಲಹೆ ನನ್ನದು. ಪ್ರತಿ ಮನೆಯಲ್ಲೂ ತಾಯಂದಿರು ತಾವು ಕೇಳುವಂಥ ಮಕ್ಕಳ ಪದಗಳನ್ನು ದಾಖಲಿಸಬೇಕು. ರತ್ನಾಕರವರ್ಣಿಯವರ ಒಂದು ರಚನೆಯಲ್ಲಿ ರಾಜನು 'ಚಿದಂಬರ ಪುರುಷ' ಅಂತ ಮಗುವಿಗೆ ಹೇಳಿಕೊಡುತ್ತಾನೆ. ಅದು 'ಚಿದಂಬರ ಪುಸ' ಎಂದು ಉಚ್ಛರಿಸುತ್ತದೆ. ಈ ಮುಗ್ಧತೆಯಿಂದ ಉಂಟಾಗುವ ನಗು ಇದೆಯಲ್ಲ, ಅದು ಬಹಳ ನಿರ್ಮಲ. ಈಗ ದೊಡ್ಡ ವಿದ್ವಾಂಸರು ಇರುತ್ತಾರೆ, ಅವರು ವಿದ್ವತ್ ಸಭೆಯಲ್ಲೂ ಮಾತಾಡುತ್ತಾರೆ. ಮನೆಯಲ್ಲಿ ಮಗುವಿನೊಂದಿಗೂ ಮಾತಾಡುತ್ತಾರೆ. ಇಲ್ಲಿ ಭಾಷೆಯ ಶೈಲಿ ಬದಲಾಗುತ್ತದೆಯಷ್ಟೇ. ಒಂದೇ ಕೊಳಲಿನಲ್ಲಿ ಮಕ್ಕಳ ಗೀತೆಯನ್ನೂ ನುಡಿಸಬಹುದು, ಶಾಸ್ತ್ರೀಯ ಸಂಗೀತವನ್ನೂ ನುಡಿಸಬಹುದು. ಎರಡರಲ್ಲೂ ಸ್ವರಶುದ್ಧಿ ಮುಖ್ಯ. ಅದಕ್ಕಿರುವ ಕಾವ್ಯಮೌಲ್ಯ ಕಳೆದುಹೋಗುವ ಹಾಗಿಲ್ಲ. ಮಕ್ಕಳ ಸಾಹಿತ್ಯ ಅಂತ ಉಡಾಫೆ ಮಾಡುವ ಹಾಗಿಲ್ಲ.
ಮಕ್ಕಳಿಗಾಗಿ ನಾಲ್ಕು ಕಾದಂಬರಿ, ಮೂರು ನಾಟಕ, ನಾಲ್ಕು ಕವನ ಸಂಗ್ರಹ ತಂದಿದ್ದೀರಿ. ಒಬ್ಬ ಗಂಭೀರ ಸಾಹಿತಿ ಇಷ್ಟು ಹಗುರವಾಗಲು ಹೇಗೆ ಸಾಧ್ಯವಾಯಿತು?
ಹಗುರವಾಗುವುದಲ್ಲ ಇದು. ಗಂಭೀರ ಸಾಹಿತಿಯೂ ಮಕ್ಕಳಿಗೆ ತಕ್ಕಂತೆ ಬರೆಯಬಲ್ಲ ಎಂಬ ಪ್ರಯತ್ನ ಇದು. ಬಹಳ ಸ್ಪಷ್ಟವಾದ ಪ್ರಯತ್ನ. ದೊಡ್ಡವರಿಗಾಗಿ ದೊಡ್ಡವರು ಬರೆಯುವುದು ಸುಲಭ. ಇಲ್ಲಿ ಲೇಖಕ ಮಗುವಾಗಲೇಬೇಕು. ಕಾಲಯಂತ್ರದಲ್ಲಿ ಹಿಂದಿರುಗಿ ಪಯಣಿಸಬೇಕು. ಇದರೊಂದಿಗೆ ಮುಗ್ಧತೆ, ಕಲ್ಪನಾಶೀಲತೆಯನ್ನೂ ಬಳಸಿಕೊಳ್ಳಬೇಕು.
ಸದ್ಯ ಮಕ್ಕಳ ಸಾಹಿತ್ಯಕ್ಕೆ ಕೊಡುಗೆ ನೀಡುತ್ತಿರುವವರಲ್ಲಿ ನೀವು , ನಾ. ಡಿಸೋಜ, ವೈದೇಹಿ, ಕೆ.ವಿ. ತಿರುಮಲೇಶ್, ರಾಧೇಶ್ ತೋಳ್ಪಾಡಿ, ಆನಂದಪಾಟೀಲರು ಪ್ರಮುಖರು. ಉಳಿದ ಪ್ರಮುಖರು ಇತ್ತ ಮುಖಮಾಡಲು ಏನುಮಾಡಬೇಕು?
ಹೌದು, ಅವರೂ ಮಕ್ಕಳ ರಚನೆಗಳನ್ನು ಬರೆಯಬೇಕು. ಇತ್ತೀಚೆಗೆ ಬಹಳ ಗಂಭೀರ ಸಾಹಿತಿ ಅಂತ ಅನ್ನಿಸಿಕೊಂಡವರೂ ಮಕ್ಕಳ ಸಾಹಿತ್ಯದಲ್ಲಿ ಉತ್ತಮ ಕೆಲಸ ಮಾಡಿದ್ದಾರೆ. ವೈದೇಹಿ ಎಷ್ಟು ಸುಂದರ ನಾಟಕ ಬರೆದಿದ್ದಾರೆ. ಬಿ.ವಿ. ಕಾರಂತರು, ಕೆ.ವಿ. ಸುಬ್ಬಣ್ಣರೂ ಬರೆದರು. ಕೆ.ವಿ. ತಿರುಮಲೇಶ್ ಮಕ್ಕಳಿಗೋಸ್ಕರ ಪದ್ಯ ರಚಿಸಿದರು. ಮಕ್ಕಳ ಸಾಹಿತ್ಯ ಹೆಚ್ಚಾಗಿ ನಮ್ಮ ಹೆಣ್ಣುಮಕ್ಕಳಿಂದ ಬರಬೇಕಾಗಿತ್ತು. ದಿನಾ ಇಡೀ ಆರೈಕೆ ಮಾಡುವವರು ಅವರೇ. ಮಕ್ಕಳನ್ನು ತುಂಬಾ ಪ್ರೀತಿಸುವವರೂ ಅವರೇ. ಮಕ್ಕಳ ಮನಸ್ಸನ್ನು, ದೇಹವನ್ನು ಒಟ್ಟಿಗೆ ಬೆಳೆಸುವಂಥವರು ತಾಯಿಯಂದಿರು. ಅಂಥವರು ಮಕ್ಕಳ ಸಾಹಿತ್ಯವನ್ನೇಕೆ ನಿರ್ಮಾಣ ಮಾಡಲಿಲ್ಲ ಎಂಬುದು ನನಗೆ ಪ್ರಶ್ನೆ.
ನಿಮ್ಮ ಮೇಲೆ ಪ್ರಭಾವ ಬೀರಿದ ಸಮಕಾಲೀನ ಮಕ್ಕಳ ಸಾಹಿತಿ ಯಾರು?
ನನ್ನ ಮೇಲೆ ಹೆಚ್ಚು ಪ್ರಭಾವ ಬೀರಿದವರು ಪಂಜೆ ಮಂಗೇಶರಾಯರು ಮತ್ತು ಕುವೆಂಪು. ಪಂಜೆ ಅವರ ಪದ್ಯಗಳಲ್ಲಿ ಲಯ, ವಿನ್ಯಾಸಗಳು ಅದ್ಭುತ. ಮಕ್ಕಳಿಗೆ ಪ್ರಾಸಗಳು ತುಂಬಾ ಇಷ್ಟ. ಅವರು ಅದನ್ನು ಕೊಟ್ಟರು. ಮಕ್ಕಳಿಗೆ ಇನ್ನೊಂದು ಇಷ್ಟವೆಂದರೆ, ಕಥೆ. ಆ ನಿಟ್ಟಿನಲ್ಲಿ ಅದ್ಭುತವಾದ ಕೊಡುಗೆ ನೀಡಿದವರು ಕುವೆಂಪು. ಇವರ ಪ್ರಭಾವ ನನ್ನ ಮೇಲೆ ಸದಾ ಇರುತ್ತದೆ.
ಮಕ್ಕಳ ಸಾಹಿತ್ಯ ರಚಿಸುವಾಗ ಜೀವನಾನುಭವ ಮತ್ತು ವೈಚಾರಿಕ ಸೆಳೆತಗಳು ಮುಖಾಮುಖಿಯಾಗುವ ಸಾಧ್ಯತೆ ಇದೆಯೇ?
ಖಂಡಿತಾ ಸಾಧ್ಯ ಇದೆ. ಏಕೆಂದರೆ, ವೈಚಾರಿಕತೆ ಎನ್ನುವುದು ನಮ್ಮ ವ್ಯಕ್ತಿತ್ವದ ಬೇರೊಂದು ಡಿಪಾರ್ಟ್ಮೆಂಟೇನೂ ಅಲ್ಲ. ನಮ್ಮ ಅಂತರಂಗದ ಅವಿಭಾಜ್ಯ ಅಂಗ. ಅವೆಲ್ಲ ಸೇರಿಯೇ ನಾವಾಗಿದ್ದೇವೆ. ಮಕ್ಕಳಿಗೆ ಯಾವುದನ್ನೂ ಭಾರವಾಗಿ ಹೇಳಬಾರದು.
ಹೇಳುವ ಅನುಭವದೊಂದಿಗೆ ಆ ತಾತ್ವಿಕತೆಗಳೆಲ್ಲ ಸಮ್ಮಿಲನಗೊಂಡು ಕೃತಿಗಿಳಿಸಬೇಕು. ಹಾಗೆ ಬಂದಾಗಲೇ ಅದು ರುಚಿಕಟ್ಟು. ಕೇವಲ ತಾತ್ವಿಕ ಭಾರದಿಂದ ಬಂದರೆ, ಅದು ಅಷ್ಟು ಸ್ವಾದಿಷ್ಟವಲ್ಲ. ನನ್ನ 'ಹಕ್ಕಿಸಾಲು' ಸಂಗ್ರಹದಲ್ಲಿ ವೈಚಾರಿಕ, ಸಾಮಾಜಿಕ ವಿಚಾರಗಳು ಬಂದಿವೆ. ಅದಕ್ಕೆ ರಾಮಚಂದ್ರ ಶರ್ಮ ವಿಮರ್ಶೆ ಮಾಡಬೇಕಾದರೆ, 'ಮಕ್ಕಳಿಗೆ ಅಷ್ಟೇ ಅಲ್ಲ. ದೊಡ್ಡವರಿಗೂ ಒಳ್ಳೆಯ ಅನುಭವ ನೀಡುವ ಕವಿತೆಗಳು' ಅಂತ ಬರೆದರು. ಅಂದರೆ, ಮಕ್ಕಳ ಕವಿತೆ ದೊಡ್ಡವರಿಗೂ ಪಾಠ. ಮಕ್ಕಳ ಸಹಜ ಮುಗ್ಧ ಮಾತುಗಳಲ್ಲಿ ದೊಡ್ಡ ವಿಚಾರಗಳೇ ಇರುತ್ತವೆ.
ನೀವು ರಚಿಸಿದ ಮಕ್ಕಳ ಪ್ರಕಾರ, ಮಕ್ಕಳನ್ನು ಸಾರ್ಥಕವಾಗಿ ತಲುಪಿದೆ ಅಂತ ಅನ್ನಿಸಿದೆಯೇ? ತಲುಪಿದ್ದರೆ ಅದು ಹೇಗೆ ಗೊತ್ತಾಗಿದೆ?
ಖಂಡಿತಾ ತಲುಪಿದೆ. ಅದು ಹೇಗೆ ಗೊತ್ತಾಗುತ್ತೆ ಎಂದರೆ, ಎಷ್ಟೋ ಮಕ್ಕಳು ನನ್ನ ಕಂಡಾಗ ತಾವು ಓದಿದ ಕವಿತೆಗಳನ್ನು, ಅಭಿನಯಿಸಿದ ನಾಟಕಗಳ ಬಗ್ಗೆ ನನ್ನಲ್ಲಿ ಹೇಳಿಕೊಳ್ಳುತ್ತಾರೆ. ಅಲ್ಲದೆ, ಎರಡು ಪೀಳಿಗೆಗಳಿಗೂ ನನ್ನ ರಚನೆಗಳು ತಲುಪಿವೆ. ಯಾವ ಹೆಣ್ಣು ಮಗು ನನ್ನ ಪದ್ಯ ಓದಿ ಸಂತೋಷ ಪಡ್ತೋ, ಅದೇ ಹೆಣ್ಣು ಮಗು ಇವತ್ತು ತಾಯಿಗಾಗಿ ತನ್ನ ಮಗುವಿಗೆ ಅದೇ ಪದ್ಯಗಳನ್ನು ಹೇಳಿಕೊಡುತ್ತಿದೆ. ಹೀಗಾಗಿ, ನನ್ನ ರಚನೆಗಳು ಪರಂಪರೆಯಾಗಿ ದಾಟುತ್ತಿವೆ. ನನ್ನ 'ಅಳಿಲು ರಾಮಾಯಣ', 'ಕುಣಿ ಕುಣಿ ನವಿಲೆ' ಎಂಬ ನಾಟಕಗಳಿಗೆ ಒಳ್ಳೆಯ ಮನ್ನಣೆ ಸಿಕ್ಕಿದೆ. ಮಲ್ಲಾಡಿಹಳ್ಳಿಯಲ್ಲಿ ಪ್ರತಿವರ್ಷ ಪ್ರದರ್ಶನ ನಡೆಯುತ್ತದೆ. ಅವು ಸಾವಿರಾರು ಮಕ್ಕಳನ್ನು ತಲುಪಿವೆ.
ನಮ್ಮೆದುರಲ್ಲೇ ಅನೂಹ್ಯ ಅವತಾರದಲ್ಲಿ ಇಂಗ್ಲಿಷ್ ಪೀಳಿಗೆ ಎದ್ದೇಳುತ್ತಿದೆ. ಇನ್ನು ಅವರನ್ನು ಕನ್ನಡದತ್ತ ಸೆಳೆಯುವುದು ಹೇಗೆ?
ನಿಜಕ್ಕೂ ನಮ್ಮನ್ನು ಕಂಗೆಡಿಸಿರುವ ಪ್ರಶ್ನೆ ಇದು. ಇಂದು ನಗರದ ಮಕ್ಕಳು ಇಂಗ್ಲಿಷ್ಮಯರಾಗಿದ್ದಾರೆ. ಆದರೆ, ಹಳ್ಳಿಗಳಲ್ಲಿ ನಮಗೆ ಕನ್ನಡ ಗ್ರಾಹಕ ಮಕ್ಕಳು ಇದ್ದಾರೆ. ಸದ್ಯಕ್ಕಂತೂ ಇದು ಅಷ್ಟು ಭಯಭೀತವಾದುದಲ್ಲ. ಆದರೆ, ಮುಂದೆ ಸಿಟಿ ಮಕ್ಕಳನ್ನು ಕಳೆದುಕೊಳ್ಳುತ್ತೇವೋ ಅಂತ ಅನ್ನಿಸುತ್ತಿದೆ. ಅವರ್ಯಾರೂ ಈಗ ಕನ್ನಡವನ್ನು ಓದುವ, ಬರೆಯುವ ಕೆಲಸ ಮಾಡುತ್ತಿಲ್ಲ. ನಮ್ಮ ಶಿಕ್ಷಣ ವ್ಯವಸ್ಥೆಯಲ್ಲೇ ಇದಕ್ಕೆ ಪರಿಹಾರ ಕಂಡುಕೊಳ್ಳಬೇಕು. ಪ್ರೌಢಶಾಲೆಯವರೆಗೆ ಕನ್ನಡ ಕಡ್ಡಾಯವಾಗಬೇಕು. ಇಲ್ಲದೆ ಹೋದರೆ ಇದೊಂದು ದೊಡ್ಡ ದುರಂತವೇ ಆದೀತು.
ಪಂಚತಂತ್ರದೊಳಗಿದ್ದ ನಮ್ಮ ಮಗುವಿನ ಮನಸ್ಸು ಹ್ಯಾರಿಪಾಟರ್ನತ್ತ ಹಾರಿದೆಯಾ?
ಹ್ಹ ಹ್ಹ ಹ್ಹ. ಹ್ಯಾರಿಪಾಟರ್ಗಿಂತ ನಮ್ಮ ಪಂಚತಂತ್ರ ಕಥೆಗಳು ಅದ್ಭುತವಾಗಿವೆ. ನಾವು ಹ್ಯಾರಿಪಾಟರ್ನಿಂದ ಏನೂ ತಿಳಿಯಬೇಕಾದ್ದಿಲ್ಲ. ಆದರೆ, ಪ್ರಚಾರ ನೋಡಿ... ಇದು ಬಹಳ ಅಪಾಯಕಾರಿ. ಹೀಗಾಗಿ ಹ್ಯಾರಿಪಾಟರ್ ಬಿಡುಗಡೆಯಾಗುವ ಮೊದಲೇ ಲಕ್ಷಾಂತರ ಪ್ರತಿಗಳು ಖರ್ಚಾಗುತ್ತವೆ. ಅದೂ ಭಾರತದಲ್ಲಿ. ಅದೇ ಕನ್ನಡದಲ್ಲಿರುವಂಥ ಅದ್ಭುತವಾದ ಮಕ್ಕಳ ಕೃತಿಗಳಿಗೆ ಪ್ರಚಾರವೇ ಸಿಗುವುದಿಲ್ಲ. ಇವನ್ನು ಕೇಳುವವರೇ ಇಲ್ಲವಾಗಿದೆ. ಮಾಧ್ಯಮಗಳು ಈ ವಿಚಾರದಲ್ಲಿ ಚುರುಕಾಗಿ ಕೆಲಸ ಮಾಡಬೇಕಿದೆ.
ಮಕ್ಕಳನ್ನು ಸಾಹಿತ್ಯಮುಖಿಯಾಗಿಸಲು ಪೋಷಕರಿಗೊಂದಿಷ್ಟು ಸಲಹೆ ಕೊಡಿ.
ನಾನು ಹೇಳುವುದು ಇಷ್ಟೇ. ನಗರದ ತಾಯಿ ತಂಗಿಯರು, ಮಕ್ಕಳನ್ನು ಕನ್ನಡದ ನಾಟಕಗಳಿಗೆ ಕರೆದೊಯ್ಯಬೇಕು. ಕಡೇಪಕ್ಷ ಸ್ಕೂಲಲ್ಲಿ ಸಿಗದ ಕನ್ನಡ ಹೊರಗಡೆಯಾದರೂ ಸಿಗಬೇಕು. ಹಾಗೆ ಸ್ಕೂಲಿನ ಹೊರಗಡೆ ಕನ್ನಡ ಕೊಡುವ ಕೇಂದ್ರಗಳೆಂದರೆ ರಂಗಭೂಮಿ, ಸಿನಿಮಾ. ಪಂಜೆ, ರಾಜರತ್ನಂ, ಕುವೆಂಪು, ಪುರಾಣಿಕರ ಗೀತೆಗಳ ಸಿ.ಡಿ.ಗಳನ್ನು ನಿತ್ಯ ಕೇಳಿಸಬೇಕು. ದಿನದಲ್ಲಿ ಇಷ್ಟು ಸಮಯ ಇದಕ್ಕಂತಲೇ ಮೀಸಲಿಡಬೇಕು. ಕಡೇಪಕ್ಷ ಅವರಿಗೆ ಕನ್ನಡ ಮಾತಾಡಲು ಬಂದರೂ ಸಾಕು. ಕನ್ನಡದಲ್ಲಿ ಮಾತಾಡಿದರೆ ಅವರನ್ನು ಪ್ರೋತ್ಸಾಹಿಸಬೇಕು. ಮನೆಯಲ್ಲಿ ಕಡ್ಡಾಯವಾಗಿ ಕನ್ನಡ ಮೀಡಿಯಂ ತರಬೇಕು. ಇದು ಯಾರ ಹಂಗಿಲ್ಲದ ಕೆಲಸ.
- ಸಂ: ಕೀರ್ತಿ ಕೋಲ್ಗಾರ್
kolgarkeerthi@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


