ನಮ್ಮ ಮುದ್ದು ಮೀನಾ
ಸೆಳೆವಳು ಎಲ್ಲರ ಗಮನ
ಪಿಳಿಪಿಳಿ ಕಣ್ಣು ಮೊಂಡು ಮೂಗು
ನಕ್ಕಳೆಂದರೆ ಜಗವೇ ಬೆರಗು
ಬೆಳಗಿನ ಜಾವ ಏಳುತ್ತಾಳೆ
ಮನೆಯವರನ್ನು ಎಬ್ಬಿಸ್ತಾಳೆ
ಬೆಕ್ಕು ನಾಯಿ ನೋಡುತ್ತಾಳೆ
ಕೇಕೆ ಹಾಕಿ ನಗುತ್ತಾಳೆ
ಮಾತು ಗೀತು ಒಂದೂ ಇಲ್ಲ
'ಆಂ' 'ಊಂ'ನಲ್ಲೇ ಮುಗಿಸುವಳೆಲ್ಲ
ಮನೆ ಎಂದರೆ ತಾ ಬೇಜಾರು
ವಿಹಾರವೆಂದರೆ ಹೂಂ ತಯಾರು
ನಕ್ಕರೆ ಸಕ್ಕರೆ ಹಂಚಿದಂತೆ
ಅತ್ತರೆ ಮುತ್ತುಗಳುದುರಿದಂತೆ
ಕಂಡರೆ ಪುಟ್ಟ ಮಕ್ಕಳನ್ನು
ಹರ್ಷದಿ ಬಡಿವಳು ಕೈಗಳನ್ನು
ನೋಡುವುದಕ್ಕೆ ಬಲು ಚೂಟಿ
ಜೊತೆಜೊತೆಗೇನೇ ಬಲು ಘಾಟಿ
ಆಹಾ ಇವಳ ದರ್ಬಾರು
ಮಿನಿಸ್ಟ್ರಿಗಿಂತ ಬಲು ಜೋರು
= ಪ್ರಾಣೇಶ ಗುಡಿ