Corporate ಚರ್ಚೆ ಅನಗತ್ಯ

'ವಿವೇಕಾನಂದ ಇರದಿದ್ದರೆ ಕನ್ನಡದಲ್ಲಿ ಕುವೆಂಪು ಇಲ್ಲ, ಕುವೆಂಪು ಇಲ್ಲದೇ ಕನ್ನಡ ಸಾಹಿತ್ಯ ಇಲ್ಲ. ಪಾಶ್ಚಾತ್ಯ ಲೇಖಕರನ್ನೇ ಚರ್ಚೆ ಮಾಡುವ ಬದಲು ಭಾರತೀಯ...
Corporate ಚರ್ಚೆ ಅನಗತ್ಯ
Updated on: 


'ವಿವೇಕಾನಂದ ಇರದಿದ್ದರೆ ಕನ್ನಡದಲ್ಲಿ ಕುವೆಂಪು ಇಲ್ಲ, ಕುವೆಂಪು ಇಲ್ಲದೇ ಕನ್ನಡ ಸಾಹಿತ್ಯ ಇಲ್ಲ. ಪಾಶ್ಚಾತ್ಯ ಲೇಖಕರನ್ನೇ ಚರ್ಚೆ ಮಾಡುವ ಬದಲು ಭಾರತೀಯ ಸಂಸ್ಕೃತಿಯ ಬಗ್ಗೆ ಏಕಾಗಬಾರದು?' ಎನ್ನುವ ಯುವ ವಿಮರ್ಶಕ ಜಿ.ಬಿ.ಹರೀಶ್, ಕನ್ನಡ ವಿಮರ್ಶೆಯಲ್ಲಿ ವಿಶಿಷ್ಟ ಧ್ವನಿ. ಅವರ ಜತೆಗೊಂದು ಮಾತುಕತೆ.



ವಿಮರ್ಶಾ ಪ್ರಕಾರವನ್ನೇಕೆ ಆಯ್ದುಕೊಂಡಿರಿ?
ನಾನು ಹಾಸನ ಸಿಟಿಯಲ್ಲಿ ಬೆಳೆದವನು. ವಿಪರೀತ ಓದುತ್ತಿದ್ದೆ. ಒಮ್ಮೆ ಹಿಜಡಾಗಳ ಸಮ್ಮೇಳನ ನೋಡಲು ಹೋದಾಗ ಅಲ್ಲಿ ರೂಪಾ ಹಾಸನ ಸಿಕ್ಕಿದ್ದರು. ನನಗೆ ಬರೆಯುವಂತೆ ಪ್ರೇರೇಪಿಸಿದ್ದರು. ಸಂಚಯ ಸಾಹಿತ್ಯ ಸ್ಪರ್ಧೆಯ ಡಿ.ವಿ. ಪ್ರಹ್ಲಾದ್ ನನ್ನನ್ನು ಉತ್ತೇಜಿಸುತ್ತಾ ಬಂದರು. ವಿಮರ್ಶೆಯಲ್ಲಿ ಇದುವರೆಗೆ ಏನಾದರೂ ಅಪಾಯದ ಕೆಲಸ ಮಾಡಿದ್ದರೆ ಅದರ ಶ್ರೇಯಸ್ಸು ಇವರಿಗೆ ಸಲ್ಲುತ್ತದೆ. ಮೊದಲಿಗೆ ಕುವೆಂಪು ಕುರಿತು ದೀರ್ಘ ವಿಮರ್ಶೆಯನ್ನು ಶತಮಾನೋತ್ಸವಕ್ಕೆ ಬರೆದೆ. ಅದು ವಿಪರೀತ ಉದ್ದವಿದ್ದ ಕಾರಣ ವಿಮರ್ಶೆ ಬರೆಯಲು ಹೇಳಿದವರು ಅದನ್ನು ತೆಗೆದುಕೊಳ್ಳಲಿಲ್ಲ! ಮೊದಲು ಕವಿತೆಗಳನ್ನು ಬರೆದೆ, 150 ಕವಿತೆಗಳು. ಆದರೆ, ಬೆಂಗಳೂರಿಗೆ ಬಂದ ಮೇಲೆ ಪುಸ್ತಕಗಳ ಮೇಲೆ ಎಲ್ಲರ ಅಭಿಪ್ರಾಯ ಕೇಳುತ್ತಾ ನನ್ನ ಅಭಿಪ್ರಾಯ ಬೇರೆಯದೇ ಇರೋದನ್ನು ಗಮನಿಸುತ್ತಿದ್ದೆ. ಎಲ್ಲರೂ ಹೇಳೋದೇ ನೀವು ಹೇಳೋದಾದ್ರೆ ವಿಮರ್ಶೆ ಮಾಡಬಾರದು ಎಂಬುದು ನನ್ನ ಪಾಲಿಸಿ. ನನ್ನ ಹಿಂದೆ ಲಂಕೇಶ್ ಇದ್ದಾರೆ. ಅವರು ಒಮ್ಮೆ ಹೇಳಿದ್ದ ಮಾತು, 'ಲೇಖಕ ನಿರ್ಲಕ್ಷ್ಯದ ಬೆಳಕಿನಲ್ಲಿ ಬೆಳೆಯಬೇಕು' ಎಂಬುದು ಇಂದಿಗೂ ನನಗೆ ಸ್ಫೂರ್ತಿ.
ವಿಮರ್ಶಕರು ಹೊಸಬರ ಕೃತಿಗಳನ್ನು ಗಮನಿಸುತ್ತಿಲ್ಲ, ವಿಮರ್ಶೆ ಮೂಲಕ ನ್ಯಾಯ ಒದಗಿಸುತ್ತಿಲ್ಲ ಎಂಬ ದೂರಿದೆ. ಏನನ್ನುತ್ತೀರಿ?
ಅದು ತಕ್ಕಮಟ್ಟಿಗೆ ನಿಜ. ವಿಮರ್ಶಕರನ್ನ ಗಂಡು ಎಂದು ನೋಡಬಾರದು.. critic is a women.. ಆತನಿಗೆ ಹೆಂಗರುಳು ಇರಬೇಕು. ತಾಯಿ, ತಂಗಿ, ಅಕ್ಕಾ ಆದಾಗಲೇ ಆತ ಒಂದು ಕೃತಿಗೆ ನ್ಯಾಯ ಒದಗಿಸಲು ಸಾಧ್ಯ.  ವಿಮರ್ಶಕರ ಗಡಿಯಾರ 70ಕ್ಕೋ, 80ಕ್ಕೋ ನಿಂತುಬಿಟ್ಟಿದೆ. ಯುವ ಜನಾಂಗದ ಓ.ಎಲ್. ನಾಗಭೂಷಣ, ಡಿ.ಆರ್. ನಾಗರಾಜ್, ಜಿ.ಎಚ್. ನಾಯಕ್ ಇವರು ಹುಟ್ಟಿದ್ದೇ ವಿಮರ್ಶೆ ಬರಿಯಲಿಕ್ಕೆ ಎಂಬ ಪತಿವ್ರತಾ ನಿಷ್ಠೆ ಹೊಂದಿದವರು. ಇವತ್ತಿನ ಸಂದರ್ಭದಲ್ಲಿ specific  ಆದ ವಿಮರ್ಶಕ ಪ್ರಾಣಿಯನ್ನು ಸಾಹಿತ್ಯದ ಕಾಡಿನಲ್ಲಿ ನೋಡಲು ಸಾಧ್ಯವಿಲ್ಲ. ಒಂದು ವರ್ಷಕ್ಕೆ 6-7 ಸಾವಿರ ಪುಸ್ತಕಗಳು ಬಿಡುಗಡೆಯಾಗುತ್ತವೆ. ಅಸಲಿಯಾಗಿ ಎಲ್ಲಿ ಲೇಖಕರನ್ನು ಓದುಗರಿಗೆ ಪರಿಚಯಿಸುವುದು? ಈ ಟೈಪ್ ಸಾಹಿತ್ಯ ಮಾತ್ರ ಮಾರ್ಕೇಟ್‌ನಲ್ಲಿ ಓಡುತ್ತದೆ ಎಂಬ ಕಾನ್ಸೆಪ್ಟ್ ಇದೆ. ಶ್ರೀನಿವಾಸರಾಜು, ಕಾಯ್ಕಿಣಿ, ಪ್ರತಿಭಾ, ಅಬ್ದುಲ್ ರಶೀದ್, ಎಚ್.ಎಸ್. ಶಿವಪ್ರಕಾಶ್... ಇವರೆಲ್ಲಾ ಬೆಳಕಿಗೆ ಬಂದದ್ದು ವಿಮರ್ಶೆಯಿಂದಾಗಿ. ಇಂದು ವಿಮರ್ಶಕರ ಸಂಖ್ಯೆಗೆ ಲೇಖಕರ ಅಪಾರವಾದ ಸಂಖ್ಯೆ ಹೊಂದಿಕೆ ಆಗ್ತಾ ಇಲ್ಲ. ಪತ್ರಿಕೆಯಲ್ಲಿ ಸ್ಥಳಾವಕಾಶದ ಸಮಸ್ಯೆ. ಹೊಸ ಕೃತಿ ಬಗ್ಗೆ ಎರಡು ಮೂರು ಪ್ಯಾರಾದಷ್ಟು ಜಾಗ ಕೊಟ್ಟು ಇಷ್ಟೇ ಬರೀಬೇಕು ಎಂದರೆ ಅಷ್ಟು ಜಾಗದಲ್ಲಿ ಯಾವ ರೀತಿಯಲ್ಲಿ ಲೇಖಕರ ಕೃತಿಗೆ ನ್ಯಾಯ ಒದಗಿಸಲು ಸಾಧ್ಯ?


ಬಂದ ಪುಸ್ತಕಗಳನ್ನೆಲ್ಲಾ ಓದುವಂಥ ವಿಮರ್ಶಕರು ಎಲ್ಲಿರಲು ಸಾಧ್ಯ? ಆಗಿನ ಕಾಲದಲ್ಲಿ ಅಂಥ ವಿಮರ್ಶಕರು ಇದ್ದರು ಬಿಡಿ. ತಮ್ಮ ಕೊನೆಯ ದಿವಸಗಳಲ್ಲೂ ಅವರು ಪುಸ್ತಕಗಳನ್ನು ಕೈಲಿಟ್ಟುಕೊಂಡು ಓದುತ್ತಿದ್ದರು. ಪುಸ್ತಕ ಪ್ರಕಟಣೆಯ ಪ್ರವಾಹಕ್ಕೆ ಹೋಲಿಸಿದರೆ ವಿಮರ್ಶೆಯ ಶೇಕಡಾ ಲೆಕ್ಕ ಕಡಿಮೆಯೇ. ಅಲ್ಲದೆ, ವಿಮರ್ಶೆಯ ಭಾಷೆ ಕಠಿಣತೆಯ ಸೋಗಿನಿಂದ ಬಳಲುತ್ತಿದೆ.

ಅಮೂರರು ಮತ್ತಿತರ ಲೇಖಕರು ಕಾರ್ಪೋರೇಟ್ ಜಗತ್ತಿನ ಲೇಖಕರನ್ನು ಅನುಮಾನದಿಂದ ನೋಡಬೇಕು ಎಂಬ ಹೇಳಿಕೆ ನೀಡಿರುವುದು ಎಷ್ಟು ಪ್ರಸ್ತುತ?
ಈಗ ಸಾಹಿತ್ಯಗಳನ್ನು ಅವರ ಜಾತಿ, ಧರ್ಮ, ಲಿಂಗದ ಮೂಲಕ ನೋಡದೆ, ಅವರ ಕೃತಿಯನ್ನು ಗಮನದಲ್ಲಿ ಇಟ್ಟುಕೊಂಡು ಚರ್ಚಿಸುವುದು ಆರೋಗ್ಯಕರ. ಅದನ್ನು ಬಿಟ್ಟು ಕಾರ್ಪೋರೇಟ್‌ನಲ್ಲಿರುವ ಲೇಖಕರು ಉನ್ನತ ಉದ್ಯೋಗಗಳಲ್ಲಿದ್ದಾರೆ ಹಾಗೂ ಉನ್ನತ ಮಟ್ಟದ ಜೀವನಶೈಲಿಯಲ್ಲಿ ಜೀವಿಸುತ್ತಿದ್ದಾರೆ ಎಂದ ಮಾತ್ರಕ್ಕೆ ಅವರ ಕೃತಿಯ ಬಗ್ಗೆ ಕೇವಲವಾಗಿ ನೋಡಿ ಹೇಳಿಕೆ ನೀಡಿರುವುದು ಸರಿಯಲ್ಲ. ಅವರ ಕೃತಿಗಳಲ್ಲಿ ದೋಷವಿದ್ದರೆ, ಅದನ್ನ ಚರ್ಚೆ ಮಾಡಲಿ. ಕಾರ್ಪೋರೇಟ್ ಎಂಬುದು ಪತ್ರಿಕೆಗಳನ್ನೂ ಒಳಗೊಂಡಿದೆ. ಕಾರ್ಪೋರೇಟ್ ಜಗತ್ತಿನಲ್ಲಿ ದುಡ್ಡು ಮಾಡದೆ ಯಾರೂ ಕೈಕಟ್ಟಿ ಕುಳಿತಿರಲು ಆಗದು. 'ಕೆಂಡ ಸಂಪಿಗೆ', 'ಅವಧಿ', 'ಚುಕ್ಕುಬುಕ್ಕು' ಮುಂತಾದ ಬ್ಲಾಗ್‌ಗಳಲ್ಲಿ ಬರೆಯುತ್ತಿರುವವರಲ್ಲಿ ಹೆಚ್ಚಿನ ಮಂದಿಯೆಲ್ಲಾ ಕಾರ್ಪೋರೇಟ್‌ಗೆ ಸೇರಿದವರೇ. ಎಲ್ಲರೂ ಹೊಟ್ಟೆಪಾಡಿಗೆ ಕೆಲಸ ಮಾಡುವುದು, ತಮ್ಮ ಬುದ್ಧಿಶಕ್ತಿಯಿಂದ ಕಾರ್ಪೋರೇಟ್ ಜಗತ್ತಿನಲ್ಲಿ ಕೆಲಸ ಗಿಟ್ಟಿಸಿಕೊಂಡು, ಅದರ ಮಧ್ಯೆ ಸಾಹಿತ್ಯ ಕೃಷಿ ಮಾಡುತ್ತಿರುವುದು ಪ್ರಶಂಸನೀಯವೇ ಸರಿ.

ಕನ್ನಡದ ವಿಮರ್ಶಕರ ಹಳೆ ತಲೆಮಾರಿಗೂ ನಿಮಗೂ ಏನು ವ್ಯತ್ಯಾಸ?
ನಾನು ಕನ್ನಡದ ಬೇರೆ ಪ್ರವಾಹಗಳಾದ ನವೋದಯ, ನವ್ಯ, ಸ್ತ್ರೀವಾದ, ದಲಿತ ಮೊದಲಾದವುಗಳಿಂದ ಉತ್ತಮ ಅಂಶಗಳನ್ನು ಎತ್ತಿಕೊಂಡಿದ್ದೇನೆ. ನವೋದಯದಿಂದ ವಿಸ್ತಾರ ಜಾಸ್ತಿ, ನವ್ಯದಿಂದ ಟೂಲ್ಸ್ ಮೇಲೆ ಮೋಹ ಇತ್ಯಾದಿ. ಸಂಸ್ಕೃತಿ ವಿಮರ್ಶೆಯಲ್ಲಿ ಐರೋಪ್ಯ ಮತ್ತು ಪಾಶ್ಚಾತ್ಯ ಲೇಖಕರು ಹೇಳಿರುವುದನ್ನ ನಮ್ಮ ಸಂಸ್ಕೃತಿಗೆ ಅಳವಡಿಸುವ ಪ್ರಕ್ರಿಯೆ ನಡೆಯುತ್ತಿದೆ. ಡಾಂಟೆ ಮೊದಲಾದವರು ಹೇಳಿರುವುದು ಅವರ ಕಾಲದ ಬಗ್ಗೆ, ಅದನ್ನ ರೆಡಿಮೇಡ್ ಟೆಕ್ನಾಲಜಿ ಥರ ತಗೊಂಡು ಯುರೋಪಿನ ಬೀಜಗಳನ್ನು ಇಲ್ಲಿ ನಾಟಿ ಮಾಡೋದು ಸರಿಯಲ್ಲ.  ಇಲ್ಲಿ ಸಂಸ್ಕೃತಿಯ ವೈವಿಧ್ಯವನ್ನು ವಿಮರ್ಶೆ ಸೆರೆಹಿಡಿಯಲು ಸಾಧ್ಯವಾಗಿಲ್ಲ. ಸಂಸ್ಕೃತಿಯ ಬೇರುಗಳು, ಸಂಗತಿಗಳು, ಸಮುದ್ರದ ಆಳದಲ್ಲಿ ಇಳಿಯುತ್ತಿಲ್ಲ. ಆದರೆ ಲೇಖಕರು ಬರೆಯುತ್ತಿದ್ದಾರೆ. ಕೃತಿಯೇ ವಿಮರ್ಶೆಗೆ ಬೇಕಾದ ಸುಳಿವುಗಳನ್ನು ನೀಡುತ್ತದೆ. ನಾವು ಅದನ್ನು ಗುರುತಿಸುತ್ತಿಲ್ಲ. ಹಳಬರಲ್ಲಿ ಇದಿತ್ತು. ಈಗ ಕಡಿಮೆ ಇದೆ. ನವೋದಯದ ಕಾಲದಲ್ಲಿ ಕನ್ನಡವನ್ನು ಕಟ್ಟಿದಂತೆಯೇ ಮತ್ತೆ ಕನ್ನಡಕ್ಕೆ ಅದೇ ಕಾಲ ಬಂದಿದೆ. ಅದಕ್ಕೆ ವಿಮರ್ಶೆಯ ಪಾತ್ರ ಸಾಹಿತ್ಯದಲ್ಲಿ ಮುಖ್ಯವಾದುದು. ಸಾಹಿತ್ಯವನ್ನು ಸೀಳಿ ವಿಮರ್ಶೆ ಮಾಡುತ್ತೇನೆ ಎಂಬ ಸೀಳು ನೋಟದಿಂದ ಹೊರಗೆ ಬಂದು ಈ ಪಾತ್ರ ಮಾಡಬೇಕಿದೆ, ಹೊಸಬರು ಯಾರೂ ಓದುತ್ತಿಲ್ಲ. ಹಾಗಾದರೆ ಅವರು ಏನನ್ನು ಓದುತ್ತಿದ್ದಾರೆ? ಹ್ಯಾರಿಪಾಟರ್, ಇಂಟರ್ನೆಟ್ ಲಿಟರೇಚರ್ ಇತ್ಯಾದಿ. ಅವರನ್ನು ಓದಿನೆಡೆಗೆ ತಿರುಗಿಸೋ ಕೆಲಸ ಮಾಡಬೇಕಾದುದು ವಿಮರ್ಶೆ. ಎಲ್ಲಾ ವಿಮರ್ಶಕರಿಗೂ ಚರ್ಚೆಯ ಭಾಗ್ಯ ಸಿಗಬೇಕು.  

ಹೆಚ್ಚಿನ ವಿಮರ್ಶಕರು ಮಾರ್ಕ್ಸ್, ಲೋಹಿಯಾ ಎಂದು ಹೇಳುತ್ತಿದ್ದರೆ ನೀವು ಮಾತ್ರ ವಿವೇಕಾನಂದ ಎನ್ನುತ್ತಿದ್ದೀರಿ. ನಿಮ್ಮ ಈ ಆಯ್ಕೆಯ ಕಾರಣ?

ವಿವೇಕಾನಂದರು ನನ್ನ ಬದುಕಿನಲ್ಲಿ ಸಾಕಷ್ಟು ಪ್ರಭಾವ ಬೀರಿದ್ದಾರೆ. ನಾನು ವಿಮರ್ಶಕನಾಗಿ ಎಂಟರ್ ಇದರ ನಂತರವೇ. ವಿವೇಕ ಅವರದ್ದು ಸೀಮಾತೀತ ವ್ಯಕ್ತಿತ್ವ. ನಾನು ನನಗೆ ಅನ್ನಿಸಿದ ಹಾಗೆ ಬರೆಯಬಹುದು. ಆದರೆ ಅವರನ್ನು ಬ್ರಾಂಡ್ ಮಾಡಲು ಆಗಲ್ಲ. ಅವರು source of inspiration to me. ವಿಮರ್ಶೆ ಆಗಿ ಬರೆದೆ ಆನ್ನೋದಕ್ಕಿಂತ ಕರ್ನಾಟಕ ಸಂಸ್ಕೃತಿಯ ವಿದ್ಯಾರ್ಥಿ ಆಗಿ ಬರೆದೆ. ವಿವೇಕಾನಂದ ಇರದಿದ್ದರೆ ಕನ್ನಡದಲ್ಲಿ ಕುವೆಂಪು ಇಲ್ಲ, ಹಿಂದಿಯಲ್ಲಿ ಸೂರ್ಯಕಾಂತ ತ್ರಿಪಾಠಿ ಇಲ್ಲ. ಕುವೆಂಪು ಇಲ್ಲದೇ ಕನ್ನಡ ಸಾಹಿತ್ಯ ಇಲ್ಲ. ಅವರಿಗೆ ಪ್ರಮುಖ ಪ್ರಭಾವ ವಿವೇಕಾನಂದ. ಅವರ ಬಗ್ಗೆ ಮತ್ತೊಮ್ಮೆ ಪರಿಶೀಲನೆ ಮಾಡುವಾಗ ಕುವೆಂಪು ಒಂದು ಸಹಾಯವಾಗಿ ಒದಗಬಹುದು. 'ನಾಕುತಂತಿ'ಯಲ್ಲಿ 'ವಿವೇಕಾನಂದ ನಿಖರ ಪ್ರಭಾತ' ಎಂಬ ಕವಿತೆಯೂ ಇದೆ. ಪಾಶ್ಚಾತ್ಯ ಲೇಖಕರನ್ನೇ ಚರ್ಚೆ ಮಾಡುವ ಬದಲು ಭಾರತೀಯ ಸಂಸ್ಕೃತಿಯ ಬಗ್ಗೆ ಏಕಾಗಬಾರದು?

ಶಂಕರ ಮೊಕಾಶಿ ಪುಣೇಕರರಂಥ ಈಗಿನ ತಲೆಮಾರಿನವರು ಕೇಳದ ಲೇಖಕರನ್ನು ಮತ್ತೆ ಸಮಗ್ರವಾಗಿ ಸಂಪಾದಿಸಿ ಕೊಟ್ಟಿದ್ದೀರಿ? ಅವರು ಯಾಕೆ ಮುಖ್ಯ ಅನ್ನಿಸಿದರು ನಿಮಗೆ?
ಶಂಕರ ಮೊಕಾಶಿ ಪುಣೇಕರ ಪ್ರತಿಭೆಯ ಪ್ರವಾಹ. ಸಣ್ಣ ನದಿ ಅಲ್ಲ. ಅವಧೂತರ ಥರ ಇದ್ದವರು. ತಮ್ಮ ಬರವಣಿಗೆಯ ಕುರಿತು ಮೋಹ ಇರಲಿಲ್ಲ. ನಿರ್ಮೋಹಿ. ಚಪಲ ಇರಲಿಲ್ಲ. ಬೇಂದ್ರೆಗೂ ತಮ್ಮ ಬರವಣಿಗೆ ಬಗ್ಗೆ ಮೋಹ ಇರಲಿಲ್ಲ. ಮೊಕಾಶಿಯವರ ಒಟ್ಟು ಚಟುವಟಿಕೆಗಳಲ್ಲಿ ಸಾಹಿತ್ಯ ಒಂದು ಭಾಗ ಆಗಿತ್ತು. ಸಾಹಿತ್ಯ 24 ಗಂಟೆ ಕೆಲಸ ಅಲ್ಲ. the king is naked ಅಂತ ಹೇಳುವ ಪ್ರಾಮಾಣಿಕತೆ ಮತ್ತು ಧೈರ್ಯ ಅವರಿಗೆ ಇತ್ತು. ದೇಸಿವಾದದ ಮೂಲ ಜನಕ. ಶುರು ಮಾಡಿದವರು ಪ್ರವಾಹದ ವಿರುದ್ಧ ಈಜಿದರು. ಅಡಿಗರನ್ನು ಎದುರು ಹಾಕಿಕೊಂಡರು. ಅವರಿಗೆ ಸಂಸ್ಕೃತಿಗೆ ಸಂಬಂಧಪಟ್ಟ ಒಳನೋಟಗಳು ತುಂಬಾ ಇದ್ದವು. ನವ್ಯರಲ್ಲಿ ಹೆಚ್ಚಿನವರು ಲೋಹಿಯಾ ಅವರಿಂದ ಪ್ರಭಾವಿತರಾಗಿದ್ದರು. ಆದರೆ, ಲೋಹಿಯಾರನ್ನು ಇವರು ಇಷ್ಟಪಡಲಿಲ್ಲ. ಆತ್ಮಸಾಕ್ಷಿಗೆ ತಕ್ಕಂತೆ ನಡೆದುಕೊಳ್ಳಬೇಕು. ಈ ಪ್ರಾಮಾಣಿಕತೆ ನಮ್ಮ ಕನ್ನಡದ ಲೇಖಕರಲ್ಲಿ ಕಂಡುಬರುತ್ತಿಲ್ಲ. ನಾಗರಾಜಪ್ಪ ಹೇಳಿದ್ದಾರೆ, 'ಕನಡ ಸಾಹಿತ್ಯ ಅಂದರೆ ಆತ್ಮವಂಚನೆ ಮತ್ತು ಬಲವಂಚನೆ' ಅಂತ. ಎಲ್ಲಾ ಲೇಖಕರಿಗೂ ಒಂದು ವ್ಯಕ್ತಿತ್ವ ಇಲ್ಲ. ಆತ್ಮವಂಚನೆ ಸಲ್ಲ.

ವಿಮರ್ಶಕರು- ಅಕಾಡೆಮಿಕ್- ಯೂನಿವರ್ಸಿಟಿ- ವಿಷವರ್ತುಲದಿಂದ ಕನ್ನಡ ಸಾಹಿತ್ಯ ಪಾರಾಗುವುದು ಹೇಗೆ?

ಯೂನಿವರ್ಸಿಟಿಗಳಿಂದ ಬಹಳಷ್ಟು ಒಳ್ಳೆ ಕೆಲ್ಸಗಳು ಅಗಿವೆ. ಪರಮೇಶ್ವರ ಭಟ್ಟ, ತೀನಂಶ್ರೀ, ಕುವೆಂಪು ಇವರೆಲ್ಲಾ ಯೂನಿವರ್ಸಿಟಿಗಳಲ್ಲಿರುವವರೆಗೂ ಎಲ್ಲವೂ ಸರಿಯಾಗಿತ್ತು. ಎಲ್ಲಾ ವಿದ್ಯೆಗಳಿಗೂ ತೆರೆದುಕೊಳ್ಳುವುದು ಅಷ್ಟು ಸಮಯ ಕೆಲಸ ಮಾಡಿದೆ. ಸಂವಾದ, ವಾಗ್ವಾದಗಳನ್ನು ಸೃಷ್ಟಿ ಮಾಡಲು ಯೋಗ್ಯ ಜಾಗ ಅದು  schooling ಅಂದರೆ ಅದೇನೇ. ಯೂನಿವರ್ಸಿಟಿ ಯಿಂದ ಹೊರಗೆ ಬರುವವರು intellectual property ಆಗಿರುವಂತಿರಬೇಕು. ಇಂದು ವಿವಿ ಗಳು ಅರ್ಧಂಬರ್ಧ ಓದಿದವರಿಗೆ ಗಂಜಿ ಕೇಂದ್ರಗಳಾಗಿವೆ ಏಕೆ? ಹಳೇ ಶಾಸ್ತ್ರ, ಪಾಂಡಿತ್ಯಗ ಳಿಲ್ಲ (ಸಂಸ್ಕೃತ, ಪ್ರಾಕೃತ, ಪಾಳಿ). ಭಾಷಾಕೌಶಲಗಳಿಲ್ಲ (ಇಂಗ್ಲಿಷ್ ಹೊಂದಾಣಿಕೆ ಅಸಾಧ್ಯ. ನೀವು ಹೇಳಿದ ವಿಷವರ್ತುಲ ಇದೆ. ನಿಜವಾದ ಬ್ರೈನ್ ಇರುವವರು ಯೂನಿವರ್ಸಿಟಿ ಹೊರಗೆ ಉಳಿಯುತ್ತಿದ್ದಾರೆ.. globalisation isa a fact, face it. .  ಇನ್ನೂರು ವರ್ಷಗಳ ಬ್ರಿಟಿಷರ ಆಳ್ವಿಕೆಯ ವಿರುದ್ಧ ನಾವು ಯಾವುದೇ ಶಸ್ತ್ರಾಸ್ತ್ರಗಳು, ಏನೂ ಇಲ್ಲದೇ ಹೋರಾಡಿ ಆಗಿದೆ. ಆಗಿನ ಕಾಲಕ್ಕೇ ಸಿ.ವಿ. ರಾಮನ್, ಬೋಸ್‌ರಂಥವರು ಇದ್ದರು. ಸ್ವಾತಂತ್ರ್ಯಾಪೂರ್ವ ನಮಗೆ ನೋಬೆಲ್ ಬಂದಿತ್ತು. ನಂತರ ಯಾರಿಗೆ ಬಂದಿದೆ? ಮದರ್ ತೆರೆಸಾ ಹುಟ್ಟಿನಿಂದ ಭಾರತೀಯರಲ್ಲ. ಅಮರ್ತ್ಯಸೇನ್ ಬಹುಪಾಲು ಕಳೆದಿರೋದು ಭಾರತದ ಹೊರಗೆ. ವಿವಿಗಳನ್ನು better close them and give it the farmers. univrsity modeling is not right. ವ್ಯಾಪ್ತಿಯನ್ನ ನಾವು ಪ್ರಶಸ್ತಿಗಳಿಂದ ಅಳೆಯುತ್ತಿದ್ದೇವೆ. ಅಕಾಡೆಮಿಕ್ ಅನ್ನು ಸಂಪೂರ್ಣವಾಗಿ ವಿರೋಧಿಸಿ ನೀವು ಜನರ ಬಳಿಗೆ ಹೋಗಿ, ಆಗ ಜನರು ನಿಮ್ಮನ್ನ ನುಸರಿಸುತ್ತಾರೆ. ಅಕಾಡೆಮಿಕ್ ವಾತಾವರಣ ಏನನ್ನೂ ಕೊಡದೆ ಇರುವ ಸ್ಥಿತಿ ತಾನೇ ಬಂದಿದೆ. ನೀವು ಕಾರಂತರ ಥರ, ಕುವೆಂಪು ಥರ ಬರೆಯಲಿಕ್ಕೆ ಆಗತ್ತಾ ಬರೀರಿ. ಈ ಕಾಲಕ್ಕೆ ತಕ್ಕಂತೆ people should get models.. ಫೇಸ್‌ಬುಕ್ ಯಾರೋ ಮಾಡಿದರು, ಅದು ಅಕಾಡೆಮಿಕ್‌ನಿಂದ ಬಂದದ್ದಲ್ಲ. ಹಾಗೇನೇ ಅಕಾಡೆಮಿಕ್‌ನಿಂದ ಇದನ್ನು ನಿರೀಕ್ಷೆ ಮಾಡಬಹುದಾಗಿತ್ತಲ್ಲ. ಯಾವುದೇ ಫೀಲ್ಡ್ ಇರಲಿ, ಹೊಸ ಚಿಂತನೆಗಳನ್ನು ಹುಟ್ಟುಹಾಕಬೇಕು.  ನಮ್ಮ ದೇಶದಲ್ಲಿ ಸಂಶೋಧನಾ ಸಂಸ್ಕೃತಿ ಇಲ್ಲ. ಒಬ್ಬ ಮನುಷ್ಯನಿಗೆ ತನ್ನ ಜೀವನ ನಿರ್ವಹಿಸುವ ಅವಕಾಶ ಇರಬೇಕು. ಈಗ ಅದಕ್ಕೆ ಬೇಕಾದ ವಾತಾವರಣ ಇಲ್ಲ. ವ್ಯಕ್ತಿ ಕೇಂದ್ರಿತ ಚರ್ಚೆ ಆಗ್ತಾ ಇದೆ, ಅದು ವಿಷಯ ಕೇಂದ್ರಿತ ಆಗಬೇಕು. ಒಬ್ಬ ತನ್ನ ವಿಷಯದೊಳಗೆ ಕೆಲಸ ಮಾಡಬೇಕು. ಭೈರಪ್ಪ ಕಾದಂಬರಿ, ನರಸಿಂಹಮೂರ್ತಿ ಕವಿತೆ ಹೀಗೆ. ಇದಕ್ಕೆಲ್ಲಾ ಕಾರಣ ಇಷ್ಟೇ, ಅಕಾಡೆಮಿಕ್ ಕಲ್ಚರ್ ಇಲ್ಲ. ಚರ್ಚೆಯ ರೀತಿಯ ಪಾಠ ಇಲ್ಲ. ಏಕಮುಖ ಬೋಧನೆ. ಮೊದಲು ಹತ್ತು ಗಂಟೆಯಿಂದ ಆರಂಭವಾಗುವ ವಿದೇಶಿ ಚಳಿಗಾಲದ ದೇಶಗಳ ಸಮಯ ಬದಲಾಗಬೇಕು. ನಮ್ಮ ರೈತರ ನಾಡಿನಂತೆ ಯೂನಿವರ್ಸಿಟಿಗಳೂ ಬೇಗನೆ ಆರಂಭವಾಗಬೇಕು. <



= -ನಳಿನಾ ಡಿ.
nalina200082@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com