

ಕರ್ಪಲ್ ವಿದ್ಯೆ ಒಂದು ಜನಪದ ಕಲೆ. 'ಹೆಸರೇಳುವ ವಿದ್ಯೆ' ಅಂತಲೇ ಗುರುತಿಸಿಕೊಂಡಿದೆ. ರಾಜ್ಯದ ಬಹುತೇಕ ಕಡೆ ಈ ವಿದ್ಯೆಯ ಉಸಿರು ನಿಂತಿದೆ. ಸೂಕ್ಷ್ಮದರ್ಶಕ ಹಿಡಿದು ಹುಡುಕಿದರೆ ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ಕೊಪ್ಪ ಗ್ರಾಮದಲ್ಲಿ ಮಾತ್ರ ಇದನ್ನು ಕಾಣಬಹುದು. ಅಲ್ಲಿನ ಅಡಿವೆಪ್ಪಯ್ಯ ಬಸಯ್ಯ ಜಕ್ಕಲಿಮಠ, ಪುತ್ರ ಎ. ಪ್ರಭಯ್ಯ ಜಕ್ಕಲಿಮಠ ಇದನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ ಎನ್ನುವುದಕ್ಕಿಂತ, ಈ ಕಲೆಯ ಉಳಿವಿಗಾಗಿ ಹೋರಾಡುತ್ತಿದ್ದಾರೆ ಎನ್ನಬಹುದೇನೋ?
ಕರ್ಪಲ್ ವಿದ್ಯೆಯನ್ನು ಜಗದ್ಗುರು ಬಸವಣ್ಣನ ಪತ್ನಿ ನೀಲಾಂಬಿಕೆ ಆರಂಭಿಸಿದಳೆಂಬ ಪ್ರತೀತಿ. ಅದೊಂದು ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಬಸವಣ್ಣ ಎಲ್ಲರೊಂದಿಗೆ ಕುಳಿತಿದ್ದಾಗ ಬಸವಣ್ಣನನ್ನು ತನ್ನಲ್ಲಿಗೆ ಕರೆದು, ತನ್ನ ಅನಿಸಿಕೆ ತಿಳಿಸಲು ನೀಲಾಂಬಿಕೆಯು 'ಸುವ್ವಿ ಬಾ ಸಂಗಯ್ಯ... ಸುವ್ವಿ ಬಾ ಲಿಂಗಯ್ಯ... ಸುವ್ವಿ ಬಾ ಚನ್ನಬಸವಯ್ಯ...' ಎಂದು ಹಾಡಿನ ರೂಪದಲ್ಲಿ ಆರಂಭಿಸಿದ್ದನ್ನೇ 'ಕರ್ಪಲ್ ವಿದ್ಯೆ' ಎನ್ನಲಾಗುತ್ತದೆ. ಬಸವಾದಿ ಶರಣರ ಕಾಲದಲ್ಲಿ ಜನಪ್ರಿಯವಾಗಿದ್ದ ಈ ಕಲೆ 80- 90ರ ದಶಕದಲ್ಲಿ ಕ್ಷೀಣಿಸುತ್ತಾ ಸಾಗಿತು. ಈಗಂತೂ ಇದರ ಸ್ಥಿತಿ ಗಂಭೀರ.
ಕರ್ಪಲ್ ವಿದ್ಯೆ ಸಂಪೂರ್ಣ ಭಿಕ್ಷೆಗೆ ಸಂಬಂಧಿಸಿದ್ದು. 76 ವರ್ಷದ ಅಡಿವೆಪ್ಪಯ್ಯ ಆರು ದಶಕದ ಹಿಂದೆ ಸೊರಬ ತಾಲೂಕಿನ ಉಪ್ಪುಗಡ್ಡೆಯಲ್ಲಿ ಜಂಗಮರಿಂದ ಈ ಕಲೆಯನ್ನು ಒಂದೇ ರಾತ್ರಿಯಲ್ಲಿ ಕರಗತ ಮಾಡಿಕೊಂಡರಂತೆ. ಅಂದು ಕಲಿತ ವಿದ್ಯೆ ಈಗವರಿಗೆ ಅನ್ನ ಹಾಕುತ್ತಿದೆ. ಮೂವರು ಪುತ್ರರು, ಮೂವರು ಪುತ್ರಿಯರ ಕುಟುಂಬ ಅಡಿವೆಪ್ಪಯ್ಯನವರ ಈ ಕಲೆಯನ್ನೇ ನಂಬಿ ಬದುಕಿದೆ.
ಹೇಗೆ ನಡೆಯುತ್ತೆ ಕರ್ಪಲ್?
ಕರ್ಪಲ್ ಮೂಲಕ ಭಿಕ್ಷೆ ನೀಡುವವರು ಯಾವುದೇ ಹೆಸರು, ವಸ್ತು, ಊರು, ಸ್ಥಳ, ದೇವರು ಹೀಗೆ ಎಂಥ ಜಟಿಲವಾದ ಸಂಗತಿಗಳನ್ನೂ ಈ ಕಲಾವಿದರ ಮುಂದಿಡಬಹುದು. ಯಾವುದೇ ಭಾಷೆಯ ಪದಗಳು, ಹೆಸರನ್ನು ಹೇಳಿದರೂ ಸಹಿತ ಈ ವಿದ್ಯೆ ಬಲ್ಲ ಅಡಿವೆಪ್ಪಯ್ಯ, ಪ್ರಭಯ್ಯ ಇಬ್ಬರೂ ನೀರು ಕುಡಿದಷ್ಟೇ ಸಲೀಸಾಗಿ ಅದನ್ನು ಬಿಡಿಸಿ ಹೇಳುತ್ತಾರೆ. 'ನೀವು ಹೇಳಿದ್ದು ಇದನ್ನೇ ಅಲ್ಲವೇ?' ಎಂದು ಸಾಬೀತು ಮಾಡುತ್ತಾರೆ.
ಭಿಕ್ಷೆ ಕೇಳುವ ಮನೆ, ಅಂಗಡಿ, ಕಚೇರಿ ಬಳಿ ಅಡಿವೆಪ್ಪಯ್ಯ ನಿಂತರೆ, ಆ ಸ್ಥಳದಿಂದ ಸುಮಾರು 20- 25 ಅಡಿ ದೂರ ನಿಲ್ಲುವ ಪ್ರಭಯ್ಯ ತಾಳ ಹಾಕುತ್ತಿರುತ್ತಾನೆ. ಭಿಕ್ಷೆ ನೀಡುವವರು ಹೇಳುವ ಹೆಸರು, ದೇವರ ನಾಮ, ಊರಿನ ಹೆಸರು, ವಸ್ತು ಹೀಗೆ ಯಾವುದೇ ವಿಚಾರ ಅಂಕಿ ಸಂಖ್ಯೆ, ಹೋಳಿ ಇತರೆ ಆಹಾರ, ದಂಬಡಿ, ಆಣೆ, ಇಡ್ಲಿ, ಚಟ್ನಿ, ಅಣಿ ಹೀಗೆ ವಿವಿಧ ವಸ್ತುಗಳ ಮೇಲೆ ಹೇಳಲಾಗುತ್ತದೆ. ಮುಂಚೆ ಇದನ್ನು ಸಂಜ್ಞೆ ಮೂಲಕ ಹೇಳಲಾಗುತ್ತಿತ್ತು.
ಕನ್ನಡದ ಅಕ್ಷರ ಮಾಲೆಯ 52 ಅಕ್ಷರಗಳ ಪೈಕಿ 26 ಅಕ್ಷರಗಳು, 9 ಒತ್ತಕ್ಷರಗಳನ್ನು ಕರ್ಪಲ್ ವಿದ್ಯೆಗೆ ಬಳಸುತ್ತಾರೆ. ಉದಾ: ಕಮಲಮ್ಮ ಹೆಸರು ಹೇಳಿದರೆ, 12 ದೋಸೆ, 20 ಮಿರ್ಚಿ, 1 ಕಾಫಿ ಕುಡಿದಿದ್ದಾರೆಂದರೆ, ತಾಳ ಹಾಕುವ ಪ್ರಭಯ್ಯ ಅದನ್ನು ಗ್ರಹಿಸಿ, 'ಕಮಲಮ್ಮ ಹೌದೇನ್ರಿ...' ಎನ್ನುತ್ತಾರೆ. ಇಲ್ಲಿ ಕಾಫಿಯೆಂದರೆ ಹೆಂಗಸು, ಚಹಾ ಎಂದರೆ ಪುರುಷ ಎಂಬ ಸಂಜ್ಞೆ.
ಕಾಲೆಳೆದವರೇ ಸುಸ್ತು!
ಭಿಕ್ಷೆ ರೂಪದಲ್ಲಿ ಆಹಾರ ಧಾನ್ಯ, ಹಣ ಸ್ವೀಕರಿಸುವ ಕರ್ಪಲ್ ವಿದ್ಯೆ ಕರಗತ ಮಾಡಿಕೊಂಡವರ ಕಾಲೆಳೆಯಲು, ಪರೀಕ್ಷಿಸಲು ಜಟಿಲ ಪದ, ಹೆಸರು ಹೇಳಿದವರುಂಟು. ಕನ್ನಡ, ಹಿಂದಿ, ಮರಾಠಿ ಹೀಗೆ ಯಾವುದೇ ಭಾಷೆಯಲ್ಲಿ ಹೆಸರು ಕೇಳಿದರೂ, ಚಕಚಕನೆ ಅಡಿವೆಪ್ಪಯ್ಯ ಅದನ್ನು ವಸ್ತು, ಸಂಖ್ಯೆ, ಆಹಾರದ ಮೂಲಕ ಹೇಳಿದಾಗ, ದೂರದಲ್ಲಿ ತಾಳ ಹಾಕುತ್ತಾ ನಿಲ್ಲುವ ಪ್ರಭಯ್ಯ ಅದನ್ನು ಹೇಳುವ ಮೂಲಕ ಕಾಲೆಳೆಯಲು ಮುಂದಾದವರೇ ಬೇಸ್ತು ಬೀಳುವಂತೆ ಮಾಡುತ್ತಾರೆ. ಪ್ರತಿ ಶ್ರಾವಣದಲ್ಲಿ ದಾವಣಗೆರೆ, ಶಿವಮೊಗ್ಗ, ಹುಬ್ಬಳ್ಳಿ- ಧಾರವಾಡ, ಉತ್ತರ ಕನ್ನಡ, ತುಮಕೂರು ಸೇರಿದಂತೆ ಅನೇಕ ಕಡೆ ಈ ಕಲೆ ಮೂಲಕ ಭಿಕ್ಷೆ ಬೇಡುತ್ತಾರೆ ಅಡಿವೆಪ್ಪಯ್ಯ ಜೋಡಿ.
ಅಡಿವೆಪ್ಪಯ್ಯ ಕಾಳಜಿ
'ನನ್ನೊಂದಿಗೆ ಈ ಕಲೆ ನಶಿಸಬಾರದು. ಆಸಕ್ತಿ ತೋರಿದವರಿಗೆ ಇದನ್ನು ಕಲಿಸಲು ಸಿದ್ಧ. ಆದರೆ, ಕರ್ಪಲ್ ವಿದ್ಯೆ ಮೂಲಕ ಭಿಕ್ಷೆ ಬೇಡೋಕೆ ಇಂದು ನಾಚುತ್ತಾರೆ. ಸರ್ಕಾರ, ಸಂಘ- ಸಂಸ್ಥೆಗಳು ಈ ಕಲೆ ಉಳಿಸಲು ಮುಂದೆ ಬಂದರೆ ಖಂಡಿತಾ ನಾನು ಸಹಕರಿಸುತ್ತೇನೆ' ಎನ್ನುತ್ತಾರೆ ಅಡಿವೆಪ್ಪಯ್ಯ. ಹುಬ್ಬಳ್ಳಿಗೆ ಹೋಗಿದ್ದಾಗ ಅಲ್ಲಿನ ಅಕ್ಕಿ ಹೊಂಡದಲ್ಲಿ ಮಹಾರಾಷ್ಟ್ರದ ಮಠಾಧೀಶರೊಬ್ಬರು ಇದನ್ನು ಗಮನಿಸಿದರು. ಈ ಕಲೆಯ ಬಗ್ಗೆ ಆಲಿಸಿದ ಸ್ವಾಮೀಜಿ, 'ನೀವು ಇಲ್ಲಿ 50 ಪೈಸೆ, 1 ರುಪಾಯಿಗೆ ಯಾಕೆ ಕೈಯ್ಯೊಡ್ಡುತ್ತೀರಿ? ಮುಂಬೈ, ಪುಣೆಯಲ್ಲಿ ಈ ಅಪರೂಪದ ಕಲೆಯಿಂದ ಹಣ ಮಾಡಬಹುದು' ಎಂದಿದ್ದರು. ಕನ್ನಡ ಹೊರತುಪಡಿಸಿದರೆ, ಅಡಿವೆಪ್ಪಯ್ಯನಿಗೆ ಅನ್ಯ ಭಾಷೆ ಬಾರದು.
ನೀಲಾಂಬಿಕೆಯಿಂದ 800 ವರ್ಷಗಳ ಹಿಂದೆ ಬಳುವಳಿಯಾಗಿ ಬಂದ ಕನ್ನಡದ ಈ ಕಲೆಯನ್ನು ಇಲ್ಲಿಯೇ ಉಳಿಸುವ ಸಂಕಲ್ಪವನ್ನೂ ಅಡಿವೆಪ್ಪಯ್ಯ ಮಾಡಿದ್ದಾರೆ. ಸರ್ಕಾರ, ಸಂಘ-ಸಂಸ್ಥೆಗಳು ಈ ಅಪರೂಪದ ಕಲೆಯನ್ನು ಉಳಿಸಲು ಮನಸ್ಸು ಮಾಡುತ್ತವಾ ಎಂಬುದು ಸದ್ಯದ ಪ್ರಶ್ನೆ. ಅಡಿವೆಪ್ಪಯ್ಯ ಜಕ್ಕಲಿಮಠ ಅವರ ಸಂಪರ್ಕ ಸಂಖ್ಯೆ, 99022- 72785, 90086- 59573).
= -ನಾಗರಾಜ ಎಸ್. ಬಡದಾಳ್