ಒಬ್ಬ ಅರಸನಿದ್ದನು. ಅವನಿಗೆ ಬೆಳಗಾದರೆ ಹಸುವಿನ ಹಾಲು ಕುಡಿಯುವ ಪದ್ಧತಿ. ಆದರೆ ಇದರಲ್ಲೂ ಅವನೊಂದು ನಿಯಮವನ್ನು ಪಾಲಿಸುತ್ತಿದ್ದ. ಅದೇನೆಂದರೆ ಕಪಿಲ ಎಂಬ ಹಸುವಿನ ಹಾಲನ್ನು ಮಾತ್ರ ಸೇವಿಸುತ್ತಿದ್ದ. ಒಂದು ದಿನ ಅರಸನು ಎದ್ದು ಎಷ್ಟು ಹೊತ್ತಾದರೂ ಕುಡಿಯಲು ಹಾಲು ಬರಲಿಲ್ಲ. ಕೂಡಲೇ ಹಾಲನ್ನು ತರಲು ಸೇವಕರನ್ನು ಕಳಿಸಿದ. ಸೇವಕರು ಕಾವಲಿನವನಿಗೆ, ಕಾವಲುಗಾರರು ಆಳಿಗೆ, ಆಳು ಅಡುಗೆಯವನಿಗೆ, ಅಡುಗೆಯವನು ಹಾಲು ಹಿಂಡುವ ಗೌಳಗಿತ್ತಿಗೆ ಹೇಳಿದ. ಅಂತೂ ಬಹುಹೊತ್ತಿನ ಮೇಲೆ ಗೌಳಗಿತ್ತಿ ಹಾಲು ತಂದು ಕೊಟ್ಟಳು. ಅರಸನು ಹಾಲು ತರಲು ಇಷ್ಟು ಹೊತ್ತು ಏಕಾಯಿತೆಂದು ಕೇಳಿದನು. ಅದಕ್ಕೆ ಗೌಳಗಿತ್ತಿ 'ಕಪಿಲೆ ಹಸು ತಪ್ಪಿಸಿಕೊಂಡಿದೆ' ಎಂದು ಭಯದಿಂದ ಹೇಳಿದಳು. 'ಹಾಗಾದರೆ ಈ ಹಾಲು ಕಪಿಲೆಯದಲ್ಲವೇನು?' ಎನ್ನುತ್ತಾ ತಕ್ಷಣ ಸೇವಕರನ್ನು ಕೂಗಿ ಕಪಿಲೆಯನ್ನು ಇನ್ನೊಂದು ಗಂಟೆ ಒಳಗಾಗಿ ಹುಡುಕಿ ತರಲು ಆಜ್ಞಾಪಿಸಿದ.
ಸರಿ ಕೇಳಬೇಕೆ? ಸೇವಕರು ಹಸುಗಳ ಹಟ್ಟಿ ಆಳುಗಳಿಗೆ ಹೇಳಿ ಸುಮ್ಮನಾದರು. ಎಷ್ಟು ಹೊತ್ತಾದರೂ ಹಸು ಬಾರದಿದ್ದರಿಂದ ಪುನಃ ಅರಸನು ಸೇವಕರನ್ನು ಕರೆದು ವಿಚಾರಿಸಿದ. ಅದಕ್ಕೆ ಸೇವಕರು ನಾವು ಹಸುಗಳ ಹಟ್ಟಿ ಆಳುಗಳಿಗೆ ಹೇಳಿದ್ದೇವೆಂದು ಉತ್ತರಿಸಿದರು.
ಅರಸನು 'ಏಕೆ? ನಿಮ್ಮಿಂದಲೇ ಈ ಕೆಲಸ ಮಾಡಲು ಆಗುವುದಿಲ್ಲವೇ?' ಎಂದನು.
ಸ್ವಾಮೀ, ನಾವು ಅರಮನೆಯ ಸೇವಕರು ಎಂದರು.
ಅರಸನು, 'ನೀವು ಮಾಡಿದರೆ ತಪ್ಪೇನು?' ಎಂದನು. 'ಸ್ವಾಮೀ, ಇಲ್ಲಿಯ ಕೆಲಸ?' ಎಂದು ಗೊಣಗಿದರು ಸೇವಕರು. ಅರಸ ಕೋಪದಿಂದ ದಾಸಿಯರನ್ನು ಕರೆಸಿದ. ಇತರರನ್ನೂ ಕರೆಸಿದ. ಎಲ್ಲರೂ ಅದು ತಮ್ಮ ಕೆಲಸವಲ್ಲವೆಂದು ಗೊಣಗಿದರು. ಮಂತ್ರಿಯನ್ನು ಕರೆಸಿ ಹೇಳಿದ. ಅವನು ತನ್ನ ಕೈಕೆಳಗಿನವನಿಗೆ ತಿಳಿಸಿದ. ಹೀಗೆ ಪುನಃ ಅದು ಹಸುಗಳ ಹಟ್ಟಿ ಆಳುಗಳಿಗೆ ಬಂತು. ಎಷ್ಟು ಹೊತ್ತಾದರೂ ಹಸುವಿನ ಪತ್ತೆ ಆಗದಿದ್ದುದರಿಂದ ಕೊನೆಗೆ ಪಲ್ಲಕ್ಕಿ ಹೊರುವವರೂ ಏನೂ ಕೆಲಸವಿಲ್ಲವೆಂದು ಯೋಚಿಸಿ, ಹರಟುತ್ತಾ ಕುಳಿತರು. ಅರಸನಿಗೆ ತುಂಬಾ ಕೋಪ ಬಂತು. ತಕ್ಷಣ ಪಲ್ಲಕ್ಕಿ ಹೊರುವವರನ್ನು ಕರೆಸಿ, ಪಲ್ಲಕ್ಕಿ ತರಿಸಿ ತಾನೇ ಹೊರಟ. ಇವರೆಲ್ಲರಿಗೂ ಬುದ್ಧಿ ಕಲಿಸಲು ಇದೊಂದು ತಂತ್ರವನ್ನೇ ರಾಜ ಮಾಡಬೇಕಾಯಿತು. ಸರಿ ಪಲ್ಲಕ್ಕಿ ತರಿಸಿ ತಾನೇ ಹೊರಟ. ಸರಿ ಪಲ್ಲಕ್ಕಿ ಹಿಂದೆ ಅಂಗರಕ್ಷಕರು, ಆಳುಗಳು, ಅಡುಗೆಯವರು, ಸೈನಿಕರು, ಮಂತ್ರಿಯಾದಿಯಾಗಿ ಎಲ್ಲರೂ ಹೊರಟರು. ಆ ಗುಡ್ಡವನ್ನೇರಿ, ಈ ಬಯಲಿಗೆ ಇಳಿಯಿರಿ. ಈ ಹಳ್ಳ ದಾಟಿ, ಈ ಕಾಡಿನಲ್ಲಿ ಹೋಗೋಣ. ಹೀಗೆ ಆಜ್ಞೆ ಮಾಡುತ್ತಾ ಹೋದ.
ಪಲ್ಲಕ್ಕಿ ಹೊರುವವರು ಕಲ್ಲು, ಮುಳ್ಳು, ಪೊದೆ ದಾಟಿ ಕಾಲುಗಳು ಗೀಚಿ ರಕ್ತ ಸೋರತೊಡಗಿತು. ಹತ್ತಾರು ಮೈಲಿ ಎಲ್ಲರೂ ನಡೆದು ಬಳಲಿದರು. ಕಪಿಲೆ ಪತ್ತೆಯಾಗಲಿಲ್ಲ. ಆಗ ಎಲ್ಲರೂ ಸೇರಿ ಸ್ವಲ್ಪ ವಿಶ್ರಾಂತಿ ಪಡೆಯೋಣ ಎಂದು ಬೇಡಿದರು. ಅರಸನು 'ಹಸು ಸಿಕ್ಕುವವರೆಗೂ ಸಾಧ್ಯವಿಲ್ಲ. ನೀವು ಅರಮನೆಯಲ್ಲಿರುವ ಬೇರೆ ಬೇರೆ ಉದ್ಯೋಗದವರು. ನಾನೇ ಹಸುವನ್ನು ಹುಡುಕುತ್ತೇನೆ' ಎಂದನು.
ಆಗ ಎಲ್ಲರೂ ಒಟ್ಟಿಗೇ, ತಮ್ಮದು ಮಹಾಪರಾಧವಾಯಿತೆಂದು ಕಾಲಿಗೆ ಬಿದ್ದು ಬೇಡಿಕೊಂಡರು. ಕೊನೆಗೆ ಅರಸನು ಸಮಾಧಾನದಿಂದ ಅರಮನೆಗೆ ಹಿಂದಿರುಗಿದನು. ಒಂದು ಗಂಟೆಯೊಳಗಾಗಿ ಹಸು ಪತ್ತೆಯಾಯಿತು. ಅಂದಿನಿಂದ ರಾಜ್ಯದ ಆಡಳಿತ ಕೂಡ ಸರಿಹೋಯಿತು.
= ಶಿವರಾಮ ಭಟ್ ಹತ್ತೊಕ್ಕಲು