

ಬಸ್ಸ್ಟ್ಯಾಂಡಿನ ಮುಂದಿನ ಬರಿದಾದ ಜಾಗದಲ್ಲಿ ನಾಲ್ಕು ಆಟೋಗಳು ನಿಂತಿದ್ದರೆ ಅಷ್ಟು ದೂರದಲ್ಲಿ ನಾಲ್ವರು ಆಟೋ ಚಾಲಕರು ಛಳಿಗೆ ಬೆಂಕಿ ಕಾಯಿಸಿಕೊಳ್ಳುತ್ತ ಕುಳಿತಿದ್ದರು.
ಬೆಂಗಳೂರಿನ ಬಸ್ಸುಗಳು ಬರಲು ಇನ್ನೂ ತಡವಿತ್ತು. ಮತ್ತೂ ಒಂದು ಗಂಟೆ ಕಾಯಬೇಕಾಗಿ ಬರಬಹುದು.
ಈ ಬಸ್ಸುಗಳು ಬರಲಾರಂಭಿಸಿದರೆ ಒಂದರ ಹಿಂದೆ ಒಂದು ಬರುತ್ತವೆ. ಹಾಗೆಂದು ಒಂದು ನಿದ್ದೆ ಮಾಡಿ ಬರೋಣ ಎಂದು ಮನೆಗೆ ಹೋಗಿ ಹಾಸಿಗೆಗೆ ತಲೆ ಕೊಟ್ಟರೆ, ಬಿಸಿ ಹೊದಿಕೆಯನ್ನು ತಲೆಯ ಮೇಲೆ ಎಳೆದು ಕೊಂಡರೆ ಮತ್ತೆ ಇಲ್ಲಿಗೆ ಬರಲು ಮನಸ್ಸಾಗುವುದಿಲ್ಲ ಎಂದೇ ಇವರು ಬೆಂಕಿಯ ಸುತ್ತ ಮೈ ಕಾಯಿಸಿಕೊಳ್ಳುತ್ತ ಕುಳಿತಿದ್ದರು. ಒಂದು ಕಡೆ ಛಳಿ, ಮತ್ತೊಂದು ಕಡೆ ದಟ್ಟವಾಗಿ ಸುರಿಯುತ್ತಿದ್ದ ಮಂಜು. ಜತೆಗೆ ರಾತ್ರಿಯ ಒಂದು ಒಂದೂವರೆ ಕಳೆದುಹೋಗಿತ್ತು. ಬಸ್ಸ್ಟ್ಯಾಂಡ್ ಪಕ್ಕದ ಅಂಗಡಿಗಳೆಲ್ಲ ಬಾಗಿಲು ಹಾಕಿಕೊಂಡಿದ್ದು ರಸ್ತೆ ಪಕ್ಕದ ಹಣ್ಣಿನ ಅಂಗಡಿಗಳು ಮುಸುಕು ಧರಿಸಿ ನಿಂತಿದ್ದವು. ರಸ್ತೆಯ ಮೇಲೆ ಬೀಡಾಡಿ ನಾಯಿಗಳೂ ಕೂಡ ಇಲ್ಲದೆ ಇಡೀ ಆವರಣವನ್ನ ಮಂಜು ಕವಿದುಕೊಂಡಿತ್ತು. ಈ ಮಂಜು, ಕತ್ತಲು, ಸುಳಿಗಾಳಿ ಅಸ್ಪಷ್ಟವಾದ ಒಂದು ಭೀತಿಯನ್ನ ಉಂಟುಮಾಡಿತ್ತು. ಬೀಳುವ ಮಂಜಿಗೆ ಲೈಟು ಕಂಬಗಳು ಕೂಡ ಬೆದರಿದಂತೆ ಮಂಜಿಗೆ ತಲೆಯೊಡ್ಡಿ ನಿಂತಿದ್ದವು. ದೀರ್ಘವಾದ ಒಂದು ಮೌನ ಅಲ್ಲೆಲ್ಲ ವ್ಯಾಪಿಸಿಕೊಂಡು ಭೀತಿಗೆ ಕಚಗುಳಿ ಇಡುತ್ತಲಿತ್ತು.
ಈ ನಾಲ್ವರು ಆಟೋ ಚಾಲಕರು ತಮ್ಮ ಆಟೋಗಳನ್ನ ಒಂದೆಡೆ ನಿಲ್ಲಿಸಿ ಅಲ್ಲಿ ಇಲ್ಲಿ ಬಿದ್ದ ಕಸ ತಂದು ತಾವೇ ಹಾಕಿಕೊಂಡ ಬೆಂಕಿಯ ಸುತ್ತ ಕುಳಿತಿದ್ದರು. ತಮ್ಮ ತಮ್ಮ ಕೈಗಳನ್ನು ಬೆಂಕಿಯತ್ತ ಚಾಚಿಕೊಂಡು ಆ ಬೆಂಕಿಯ
ಝಳವನ್ನ ಅನುಭವಿಸುತ್ತಲಿದ್ದರು. ನಡುವೆ ಇದ್ದ ಈ ಬೆಂಕಿ ಕೈಕಾಲುಗಳನ್ನ ಬಿಸಿ ಏರಿಸಿದರೆ ಗಾಳಿ ಬೆನ್ನಿಗೆ ಬಂದು ಅಪ್ಪಳಿಸಿ ದೇಹದ ಒಂದು ಭಾಗ ಛಳಿಗೆ ಮುರುಟಿ ಹೋಗುವಂತಹಾ ಅನುಭವ ನೀಡುತ್ತಲಿತ್ತು.
ನಾಲ್ವರು ಆಟೋ ಚಾಲಕರಲ್ಲಿ ಓರ್ವನಾದ ಶೇಖರ ಉರಿಯುತ್ತಿದ್ದ ಬೆಂಕಿಯನ್ನ ಕೆದಕಿ ಅದು ಮತ್ತೂ ಉರಿಯುವಂತೆ ಮಾಡಲು ಉದ್ಯುಕ್ತನಾದ.
ಉಳಿದವರಲ್ಲೊಬ್ಬ 'ಏನು ಛಳಿ ಮಾರಾಯ? ಉಸಿರಾಡೋದಲ್ಲ, ಮಾತನಾಡಲಿಕ್ಕೂ ಆಗುತ್ತಿಲ್ಲ ನೋಡು' ಎಂದ. ಅವರಲ್ಲಿ ಮತ್ತೂ ಓರ್ವರಾದ ಗಣೇಶ ರಾಯರು 'ಮಾತಾಡೋದಾದರೆ ಸಾಮಾನ್ಯ ವಿಷಯವನ್ನ ಆಡಬಾರದು' ಎಂದರು. 'ಅಲ್ಲ ಇಂತಹಾ ಕತ್ತಲೇಲಿ ಛಳೀಲಿ ಆಡಲಿಕ್ಕೂ ಒಂದು ಮಾತು ಅಂತ ಇದೆಯೇನು' ಎಂದು ಕೇಳಿದ ನಾಲ್ಕನೆಯವ. 'ಇದೆಯಪ್ಪ ಇದೆ...ಮೈಯೆಲ್ಲ ಬೆಚ್ಚಗಾಗಬೇಕು ಅಂತಹಾ ಕತೆ ಇದೆ....'
ಗಣೇಶ ರಾಯರು ಅಹಹಹಾ ಎಂದು ಕೈಗಳನ್ನ ಉಜ್ಜಿಕೊಂಡು ಹೇಳಲಾರಂಭಿಸಿದರು. ಗಣೇಶರಾಯರು ಊರಿನ ಆಟೋ ಚಾಲಕರಲ್ಲಿ ಹಿರಿಯರು. ಊರಿಗೆ ಆಟೋ ತಂದವರಲ್ಲಿ ಮೊದಲಿಗರು. ಅವರು ತಮ್ಮ
ಅನುಭವದ ಮೂಟೆ ಬಿಚ್ಚಿ ಹಲವು ವಿಷಯಗಳನ್ನ ಹೇಳುವುದಿತ್ತು ಎಂದೇ ಅವರ ಮಾತೆಂದರೆ ಎಲ್ಲರಿಗೂ ಅಚ್ಚುಮೆಚ್ಚು. ಬೆಂಕಿಗೆ ಮೈಯ್ಯೊಡ್ಡಿ ಅವರ ಮಾತಿಗೆ ಎಲ್ಲ ಕಿವಿ ಕೊಟ್ಟರು.
'ಇಂತಹದ್ದೇ ಒಂದು ಛಳಿಯ ರಾತ್ರಿ....ಆಗಿನ್ನೂ ಸಾಗರಕ್ಕೆ ಆಟೋ ಬಂದಿರಲಿಲ್ಲ...ಊರಿನಲ್ಲಿ ಇದ್ದುದು ಅಂದರೆ ನನ್ನದೊಂದೇ ಆಟೋ. ಜನರಿಗೆ ಆಟೋದಲ್ಲಿ ತಿರುಗಾಡುವ ಅಭ್ಯಾಸ ಇರಲಿಲ್ಲ....ಊರೂ ಸಣ್ಣದೆ.
ಅಕ್ಕಪಕ್ಕದ ಹಳ್ಳಿ ಜನ ಅಪರೂಪಕ್ಕೆ ಆಟೋ ಬಳಸುತ್ತಿದ್ದರು. ಜನರಿಗೆ ನಡೆದುಕೊಂಡು ಹೋಗುವುದರಲ್ಲಿ ಇದ್ದ ಆಸಕ್ತಿ ಆಟೋ, ಕಾರಿನಲ್ಲಿ ಹೋಗುವುದರಲ್ಲಿ ಇರಲಿಲ್ಲ'.
'ಅದೊಂದು ರಾತ್ರಿ ನಾನು ವರದಾಮೂಲಕ್ಕೆ ಹೋಗಿ ದೇವಸ್ಥಾನದ ಭಟ್ಟರನ್ನ ಬಿಟ್ಟು ಬರತಿದ್ದೆ. ಶಿವಮೊಗ್ಗಕ್ಕೆ ಹೋದ ಭಟ್ಟರು ಸಾಗರಕ್ಕೆ ತಿರುಗಿ ಬಂದಾಗ ರಾತ್ರಿಯಾಗಿತ್ತು. ರಾತ್ರಿ ಇಲ್ಲಿ ಉಳೀಲಿಕ್ಕೆ ಅವರಿಗೆ ಯಾವುದೇ
ಅನುಕೂಲತೆ ಇಲ್ಲದ್ದರಿಂದ ಅವರು 'ಬಾರಯ್ಯ, ನನ್ನನ್ನ ವರದಾಮೂಲಕ್ಕೆ ಬಿಟ್ಟು ಬಾ' ಎಂದು ನನ್ನ ಆಟೋ ಏರಿದ್ದರು. ಸಾಗರದಿಂದ ಆರು ಏಳು ಮೈಲಿ, ಮಣ್ಣಿನ ರಸ್ತೆ ಬೇರೆ. ಸುತ್ತ ಗವ್ ಅನ್ನುವ ಕಾಡು, ಕತ್ತಲು.
ನಾನು ಆಟೋ ನಡೆಸಿಕೊಂಡು ಹೋದೆ. ದೇವಸ್ಥಾನದ ಹತ್ತಿರವೇ ಮನೆ. ಅಲ್ಲಿ ಅವರನ್ನ ಇಳಿಸಿ 'ಬೆಳಗ್ಗೆ ಹೋಗಯ್ಯ, ಉಳಿದುಕೊಂಡು' ಎಂದು ಅವರು ಹೇಳಿದರೂ ಕೇಳದೆ ಆಟೋವನ್ನ ತಿರುಗಿಸಿಕೊಂಡು ಹೊರಟೆ.
ಮತ್ತೆ ಅದೇ ಕಾಡು, ಅದೇ ಕತ್ತಲು. ಕಾಡಿನ ಬೆನ್ನನ್ನ ಪರಚುವ ಹಾಗೆ ಕೂಗೋ ಜೀರುಂಡೆಗಳು. ನರಿಗಳ ಕೂಗು. ಕಗ್ಗತ್ತಲಲ್ಲಿ ರೆಕ್ಕೆ ಬಡಿದು ಓಡುವ ಯಾವುದೋ ಹಕ್ಕಿ. ರಾಕ್ಷಸಾಕಾರದಲ್ಲಿ ನಿಂತಂತಹಾ ಮರಗಳು.
ಆಟೋ ಮುಂದಿನ ಸಣ್ಣ ದೀಪ ಮಂಕಾಗಿ ಬೆಳಕನ್ನ ಬೀರ್ತಾ ಮರಗಳ ಆಚೆಗೆ ಅದೇನೋ ಸರಿದು ಹೋದಹಾಗೆ, ಯಾರೋ ನಿಂತುಕೊಂಡ ಹಾಗೆ ಭ್ರಮೆ ಹುಟ್ಟಿಸುತ್ತಿತ್ತು. ಆದರೂ ನಾನು ಇದೆಲ್ಲ ಭ್ರಮೆ ಅಂದು ಕೊಂಡು ಆಟೋ ಓಡಿಸಿಕೊಂಡು ಹೊರಟೆ.
ಚಿಪ್ಲಿ ದಾಟಿ ಇಕ್ಕೇರಿ ಸರ್ಕಲ್ಗೆ ಬಂದು ಸಾಗರದತ್ತ ತಿರುಗಿದೆ. ಯಾವುದೋ ಒಂದೆರಡು ಗಾಡಿಗಳು ಲಾಟೀನು ತೂಗಿಸಿಕೊಂಡು ತಿರುಗಿ ಹೊರಟಿದ್ದವು. ಅವುಗಳ ಗಾಲಿಗಳ ಉರುಳುವಿಕೆಯ ಸದ್ದು. ಎತ್ತಿನ ಕೊರಳಲ್ಲಿಯ ಗೆಜ್ಜೆ ಗಂಟೆಗಳ ನಾದ ಕ್ರಮೇಣ ದೂರವಾಯಿತು. ತಿಮ್ಮಣ್ಣ ನಾಯಕನ ಕೆರೆಯ ಹತ್ತಿರ ನಾನು ಬಂದಿದ್ದೆ. ಕೆರೆ ಆಗ ತುಂಬಿಕೊಂಡಿರುತ್ತಿತ್ತು. ತುಂಬಿದ ಕೆರೆಯ ಮೇಲಿನಿಂದ ಗಾಳಿ ಬೀಸತೊಡಗಿತು.
ಇನ್ನೇನು ಊರು ಬಂತು ಅನ್ನುವಾಗ ಟೋಲ್ಗೇಟಿನ ಹೊರಗಿನ ಕಂಬದ ಮೇಲೆ ಉರಿಯುತ್ತಿದ್ದ ಕೆಂಪು ದೀಪ ಕಂಡಿತು. ಊರು ಬಂತು ಅನ್ನುವುದು ಖಚಿತವಾಗಿ ನಾನು ವೇಗವಾಗಿ ಆಟೋ ನಡೆಸಿದೆ.
ಅದೇ ಮನೆಗಳ ಸಾಲು ಪ್ರಾರಂಭವಾದ ಹಾಗೆ ಒಂದು ಮನೆಯ ಮುಂದಿನ ತೋಟದಿಂದ ಹೊರಬಿದ್ದ ಅದಾರೋ ಹೆಂಗಸು ರಸ್ತೆಯ ಬದಿಗೆ ಬಂದು ನಿಂತು, 'ನಿಲ್ಲಿ ನಿಲ್ಲಿ' ಎಂದಳು.
ಸಾಕಷ್ಟು ವಯಸ್ಸಾದ ಹೆಂಗಸು. ತಲೆಗೂದಲು ನೆರೆತಿದೆ. ದೇಹ ಕುಗ್ಗಿಲ್ಲ. ಕಣ್ಣುಗಳಲ್ಲಿ ಹೊಳಪಿದೆ. ಹಳೆಯ ಕಾಲದ ಹೆಂಗಸಿನ ಹಾಗೆ ಮೈ ತುಂಬ ಆಭರಣ ತೊಟ್ಟಿದ್ದಾಳೆ. ಅದೇ ಕಾಲದ ಹಮ್ಮುಬಿಮ್ಮು ಇರಿಸಿಕೊಂಡಿದ್ದಾಳೆ.
ಆಟೋ ವೇಗವನ್ನ ಕಡಿಮೆ ಮಾಡಿ ನಾನು ಕೇಳಿದೆ, 'ಅಜ್ಜಿ ಎಲ್ಲಿಗೆ'. 'ಹೇಳತೀನಿ. ಮೊದಲು ನಿಲ್ಸು ನಿನ್ ಗಾಡೀನ' ಗಡಸುಗಡಸಾಗಿತ್ತು ಅವಳ ದನಿ.
ನಾನು ಆಟೋ ನಿಲ್ಲಿಸಿದೆ. ಆಕೆ ಗಂಭೀರವಾಗಿ ಆಟೋ ಏರಿ ಕುಳಿತು, 'ನಡಿ' ಎಂದಳು.
ನಾನು ಹೊರಟೆ. ಇಷ್ಟು ಹೊತ್ತಿನಲ್ಲಿ ಈಕೆ ಎಲ್ಲಿಗೆ ಬಂದಿದ್ದಳು, ಈಗ ಎಲ್ಲಿಗೆ ಹೋಗುತ್ತಿದ್ದಾಳೆ ಅನ್ನುವುದು ತಿಳಿಯದೆ ನಾನು ಗೊಂದಲದಲ್ಲಿ ಬಿದ್ದೆ. ನನ್ನ ಆಟೋ ಮಾರ್ಕೆಟ್ ವೃತ್ತಕ್ಕೆ ಬಂದಾಗ ಆಕೆ, 'ಕೆರೆ' ಎಂದಳು. ಆಟೋ ಕೆರೆಯತ್ತ ತಿರುಗಿತು. ಇನ್ನೇನು ಕೆರೆ ಬಂತು ಅನ್ನುವಾಗ ಒಳಗಿನಿಂದ, 'ನಿನ್ನ ಗಾಡೀನ ಚಿಲುಮೆ ಹತ್ತಿರ ನಿಲ್ಲಿಸು' ಎಂದಳು.
ಚಿಲುಮೆಯ ಮುಂದೆ ನಾನು ಗಾಡಿ ನಿಲ್ಲಿಸಿದೆ. ಅವಳು ಇಳಿದಳು. 'ಇಕಾ' ಎಂದು ಕೈಚಾಚಿದಳು. ಅವಳು ಕೊಟ್ಟದ್ದನ್ನ ಜೇಬಿಗೆ ಇಳಿ ಬಿಟ್ಟುಕೊಂಡು ನಾನು ಆಟೋ ತಿರುಗಿಸಿದೆ. ಮನೆಗೆ ಬಂದವನೇ ಊಟ ಮುಗಿಸಿ ಆಯಾಸವಾಗಿದ್ದರಿಂದ ನಾನು ಮಲಗಿಕೊಂಡೆ.
ಮಾರನೇ ದಿನ ಎದ್ದು ಕೆಲಸಕ್ಕೆಂದು ಹೊರಟಾಗ ಕಿಸೆಯಲ್ಲಿಯ ಹಣವನ್ನ ಎಣಿಸಿ ಹೆಂಡತಿಯ ಕೈಗೆ ಕೊಡುವುದು ನನ್ನ ಎಂದಿನ ಅಭ್ಯಾಸ. ಅಂದು ಕೂಡ ಕಿಸೆಯಲ್ಲಿಯ ಹಣವನ್ನ ನನ್ನ ಹೆಂಡತಿಯ ಕೈಗೆ ಕೊಡುವಾಗ ಅಲ್ಲಿ ಒಂದು ಇಕ್ಕೇರಿ ವರಹವನ್ನ ನಾನು ನೋಡಿದೆ. ಚಿನ್ನದ ನಾಣ್ಯ. ನಿನ್ನೆ ರಾತ್ರಿ ಇಕ್ಕೇರಿ ರಸ್ತೆಯಲ್ಲಿ ಆ ಅಜ್ಜಿ ಆಟೋ ಹತ್ತಿದ್ದು, ಅವಳು ಚಿಲುಮೆಯ ಬಳಿ ಇಳಿದದ್ದು ನೆನಪಾಯಿತು. ರಾತ್ರಿ ಅವಳು ಇಕಾ ಎಂದು ಕೈಚಾಚಿದಾಗ ನಾನು ಆಕೆ ಕೊಟ್ಟಿದ್ದನ್ನ ತೆಗೆದುಕೊಂಡಿದ್ದು ನಿಜ. ಅದು ಒಂದು ರುಪಾಯಿಯ ನಾಣ್ಯ ಇದ್ದಿರಬಹುದು ಅಂದುಕೊಂಡಿದ್ದೆ. ಆದರೆ ಅದು ಚಿನ್ನದ ನಾಣ್ಯ. ಇಕ್ಕೇರಿ ರಾಜರ ಕಾಲದ ನಾಣ್ಯ.
ಆ ಅಜ್ಜಿ ಮರೆತು ಈ ನಾಣ್ಯ ಕೊಟ್ಟಿರಬಹುದು ಎಂದು ನನಗೆ ದಿಗಿಲಾಯಿತು. ಅಜ್ಜಿ ಕೊಟ್ಟ ಚಿನ್ನದ ನಾಣ್ಯವನ್ನ ನಾನೇ ಏಕೆ ಇರಿಸಿಕೊಳ್ಳಬಾರದು ಅನಿಸಿತು. ಚಿನ್ನದ ನಾಣ್ಯ ಅಂದ ಮೇಲೆ ಅದರ ಬೆಲೆ ಕಡಿಮೆ ಏನಲ್ಲ. ಆದರೂ ಇದು ಸರಿ ಅಲ್ಲ. ಹೀಗೆಲ್ಲ ಯಾರೋ ಅರಿಯದೇ ನೀಡದ್ದನ್ನು ಇರಿಸಿಕೊಳ್ಳಲಿಕ್ಕೆ ನನಗೆ ಮನಸ್ಸಾಗಲಿಲ್ಲ. ನನ್ನ ಮನೆಯಾಕೆಗೆ ಈ ವಿಷಯ ತಿಳಿಸಿ ನಾನು ಆ ಚಿನ್ನದ ನಾಣ್ಯವನ್ನ ನನ್ನ ಕಿಸೆಗೆ ಹಾಕಿ
ಕೊಂಡೆ. ಈ ನಾಣ್ಯವನ್ನ ಆ ಅಜ್ಜಿಗೆ ಹಿಂತಿರುಗಿಸಬೇಕು ಅನ್ನುವುದು ನನ್ನ ಇರಾದೆ ಆಯಿತು.
ಅದೇ ದಿನ ಬೇರೊಬ್ಬರನ್ನ ಕರೆದುಕೊಂಡು ಇಕ್ಕೇರಿಯತ್ತ ಹೋದಾಗ ನಿನ್ನೆ ರಾತ್ರಿ ನಾನು ಆಟೋ ನಿಲ್ಲಿಸಿದ ಕಡೆ ಆ ಮನೆಗಾಗಿ ಹುಡುಕಾಡಿದೆ. ಅಲ್ಲಿ ಯಾವುದೇ ಮನೆ ಇರಲಿಲ್ಲ. ಆದರೆ ಬಹಳ ಹಳೆಯ ಮನೆಯೊಂದರ ಪಾಳು ಗೋಡೆ, ಹಾಳು ಬಾವಿ ಅಲ್ಲಿತ್ತು. ಈ ಅವಶೇಷಗಳನ್ನ ಆಕ್ರಮಿಸಿಕೊಂಡು ಭಾರೀ ಮರಗಳು ಬೆಳೆದಿದ್ದವು. ಮರಗಳನ್ನು ಒಂದೊಂದನ್ನ ಹೆಣೆದ ಹಾಗೆ ಬಳ್ಳಿಗಳು ತೂಗು ಬಿದ್ದಿದ್ದವು. ಹಗಲು ಹೊತ್ತಿನಲ್ಲಿ ಅಲ್ಲಿ ನಿಲ್ಲುವುದು ಅಪಾಯಕರ ಅನಿಸಿ ನಾನು ಅಲ್ಲಿಂದ ಹೊರಟೆ. ಹೊರಟವ ದೂರದಲ್ಲಿಯ ಒಂದು ಅಂಗಡಿಯ ಮುಂದೆ ನಿಂತು 'ಈ ಮನೆ ಯಾರದ್ದು' ಎಂದು ಅಲ್ಲಿಯ ಒಂದು ಸಣ್ಣ ಅಂಗಡಿಯವರನ್ನ ಕೇಳಿದೆ. ಆತ, 'ಬೊಕ್ಕಸದ ಮನೆತನದೋರ್ದು. ಇಕ್ಕೇರಿ ಅರಸರ ಕಾಲದಲ್ಲಿ ಈ ಮನೆತನದೋರು ಇಕ್ಕೇರಿ ಬೊಕ್ಕಸವನ್ನ ನೋಡಿಕೊಂಡಿದ್ದರಂತೆ. ಈಗ ಆ ಮನೆತನದವರಲ್ಲಿ ಕೆಲವರು ಬೆಂಗಳೂರಿನಲ್ಲಿ ಇದಾರೆ'ಎಂದ.
ಹಾಗೇ ಆಟೋ ತಿರುಗಿಸಿಕೊಂಡು ನಾನು ಗಣಪತಿ ಕೆರೆ ಪಕ್ಕದ ಚಿಲುಮೆಯ ಬಳಿ ಬಂದೆ. ಚಿಲುಮೆ ಪಕ್ಕದ ಸ್ಮಶಾನದಲ್ಲಿ ಯಾವುದೋ ಶವದ ಸಂಸ್ಕಾರದಲ್ಲಿ ಜನ ತೊಡಗಿದ್ದರು.
ಗಣೇಶರಾಯರ ಕತೆ ಮುಗಿದಿರಲಿಲ್ಲ. ಶಿವಮೊಗ್ಗದ ಕಡೆಯಿಂದ ಇಡೀ ಆಕಾಶವನ್ನ ಪ್ರಖರ ಬೆಳಕಿನಿಂದ ತುಂಬಿದ ಹಾಗೆ ಬೆಂಗಳೂರು ಬಸ್ಸೊಂದು ಬರಲು ಆಟೋದವರೆಲ್ಲ ಎದ್ದರು. ಅವರಿಗೇನೂ ನಿರಾಶೆ ಆಗಲಿಲ್ಲ.
ಸೊರಬ ರಸ್ತೆ, ಕೊಂಕಣಗಿರಿ ಬ್ಯಾಣ, ನೆಹರು ನಗರ, ಎಂದೆಲ್ಲ ಬಸ್ಸಿನಿಂದ ಇಳಿದವರು ಆಟೋ ಹತ್ತಿದರು. ಆ ವರೆಗೆ ಮುಖ ಬಿಗಿದುಕೊಂಡು ನಿಂತ ಆಟೋಗಳು ಗುರುಗುಡುತ್ತ ಓಡಿದವು. ಹೀಗೆ ಹೋದವು ಕೆಲ ನಿಮಿಷಗಳಲ್ಲಿ ತಿರುಗಿ ಬಂದು ತಮ್ಮತಮ್ಮ ಸ್ಥಳದಲ್ಲಿ ನಿಂತವು. ಆಟೋದವರು ಕೂಡ ಹಿಂದಿನ ಜಾಗಕ್ಕೆ ಬಂದು ಕುಳಿತರು. ಆರಿಹೋದ ಬೆಂಕಿಯನ್ನ ಮತ್ತೆ ಸರಿಪಡಿಸಿ ಶೇಖರ ಗಣೇಶ ರಾಯರತ್ತ ತಿರುಗಿದ.
'ಅಲ್ಲ ನಿಮ್ಮ ಕತೆ ಏನು ಭೂತದ ಕತೆಯೋ ಹೇಗೆ' ಎಂದು ಕೇಳಿದ.
'ಅದು ಒಂಥರಾ ಭೂತದ ಕತೆಯೇ....' ಗಣೇಶ ರಾಯರು ತುಸು ತಡೆದು ನುಡಿದರು.
'ಅವತ್ತು ಜೋಬಿಗೆ ಹಾಕಿಕೊಂಡ ಆ ಚಿನ್ನದ ನಾಣ್ಯ ನನ್ನಲ್ಲಿಯೇ ಉಳೀತು. ಅದರ ತೂಕದಿಂದ ಜೇಬು ಭಾರವಾಗಿದ್ದೂ ಹೌದು. ಆ ಅಜ್ಜಿ ಸಿಗಲಿಲ್ಲವಲ್ಲ ಅಂತ ಆತಂಕ ಕೂಡ ಉಂಟಾಯಿತು... ಇದರ ಜೊತೇಲಿ ಜೇಬಿನಲ್ಲಿ ಇದ್ದ ಚಿನ್ನದ ನಾಣ್ಯ ಏನೇನೋ ಆಸೆಗಳನ್ನ ಮನಸ್ಸಿನಲ್ಲಿ ಕೆರಳಿಸುತ್ತಲಿತ್ತು. ಚಿನ್ನದ ನಾಣ್ಯವನ್ನ ಯಾರಾದರೂ ಸೊನಗಾರರಿಗೆ ಮಾರಿದರೆ ಕಡಿಮೆ ಅಂದರೆ ಎರಡು ಮೂರು ಸಾವಿರ ಹಣ ದೊರೆಯುತ್ತದೆ.
ಆಟೋ ಓಡಿಸಿ ದಿನ ನಿತ್ಯ ನಾನು ಪಡೀತಿದ್ದ ಬಾಡಿಗೆ ಐವತ್ತರ ಒಳಗೆ. ಇದರಲ್ಲಿ ಪೋಲೀಸರ ಮಾಮೂಲು.
ಆರ್ಟಿವೋ ಮಾಮೂಲು, ಮುನಸಿಪಾಲಿಟಿ ಗೇಟ್ ಮಾಮೂಲು ಅಂತ ಕೈಯಲ್ಲಿ ಉಳಿಯೋದು ಸ್ವಲ್ಪ.
ಇಂಥದ್ದರಲ್ಲಿ ಒಂದೇ ಸಾರಿ ಎರಡು ಸಾವಿರ ಕೈಗೆ ಬರುತ್ತೆ ಅಂದರೆ ಅದು ಯಾವುದಕ್ಕೂ ಆಗಬಹುದಲ್ಲ. ಮನೆ ಹಳೆಯದಾಗಿದೆ. ಮನೆಗೆ ಹೊಸ ಪಕಾಸಿ ಹೊಸ ಹಂಚು ಹಾಕಬಹುದಲ್ಲ ಅನ್ನುವ ದೂರದ ಆಸೆ ನಿಧಾನ ಚಿಗುರಿಕೊಂಡಿತು. ಆದರೂ ಆಕೆ ಸಿಗಲಿ ಈ ನಾಣ್ಯವನ್ನ ಅವಳಿಗೆ ಹಿಂತಿರುಗಿಸಿ ಬಿಡುತ್ತೇನೆ ಅನ್ನುವ ಧೃಡ ನಿರ್ಧಾರ ಮನಸ್ಸಿನಲ್ಲಿ ಇತ್ತು...
ಹೀಗೆ ಯೋಚನೆ ಮಾಡುವಾಗಲೇ ಒಂದು ದಿನ ಎರಡು ದಿನ ಎಂದು ದಿನಗಳು ಉರುಳಿದವು. ಇನ್ನು ಆಕೆ ಸಿಗಲಿಕ್ಕಿಲ್ಲ ಅನ್ನವುದು ಖಚಿತವಾಗಿ ಮನೆಯಾಕೆಯೊಡನೆ ನನ್ನ ವಿಚಾರ ಹಂಚಿಕೊಂಡೆ. ಆಕೆ, 'ಹಾಗೇ ಮಾಡಿ, ಇನ್ನು ಆಕೆ ನಿಮಗೆ ಸಿಗಲಿಕ್ಕಿಲ್ಲ...ಅಲ್ಲದೆ ತಾನು ಹೀಗೊಂದು ಚಿನ್ನದ ನಾಣ್ಯ ಕೊಟ್ಟಿರುವ ವಿಷಯ ಕೂಡ ಅವಳ ನೆನಪಿನಲ್ಲಿ ಇರಲಿಕ್ಕಿಲ್ಲ' ಎಂದಳು. ತುಸು ತಡೆದು ಅವಳು ಹೇಳಿದಳು, 'ಅದನ್ನ ಸುಮ್ಮನೆ ಜೋಬಿನಲ್ಲಿ ಇರಿಸಿ ಕೊಂಡು ತಿರುಗಾಡಬೇಡಿ....ಇಲ್ಲಿ ಕೊಡಿ ದೇವರ ಗೂಡಿನಲ್ಲಿ ಇಡತೇನೇ...' ಅದೇ ಸರಿ ಎಂದು ಪ್ಯಾಂಟಿನ ಜೇಬಿಗೆ ಕೈ ಹಾಕಿ ಅಲ್ಲಿ ಅಡಗಿ ಕುಳಿತ ನಾಣ್ಯವನ್ನ ಅವಳ ಕೈಗಿತ್ತೆ. ಅವಳು ಅದನ್ನ ದೇವರ ಕೋಣೆಯಲ್ಲಿ ಇರಿಸಿದಳು. ಅದರೆ ಬಹಳ ದಿನ ಅದು ಅಲ್ಲಿ ಇರಲಿಲ್ಲ. ಅದನ್ನ ಅಲ್ಲಿಯೇ ಇರಿಸಲು ಮನಸ್ಸು ಬಿಡಲಿಲ್ಲ. ಅರ್ಧ ಆಗಿದ್ದ ಮನೆಗೆಲಸವನ್ನ ಮುಗಿಸುವುದೆಂದು ನಿರ್ಧರಿಸಿದೆವು. ಅಂತೆಯೇ ಮನೆ ಗೋಡೆ ಮೇಲೇರಿಸಿ ಹೊಸ ಹಂಚು ಹೊದಿಸಿ ಮನೆಗೆಲಸ ಮುಗಿಸಿದೆ. ಅಂತೂ ಬಹಳ ದಿನಗಳಿಂದ ಆಗದೇ ಉಳಿದ ಒಂದು ಕೆಲಸ ಆಯಿತಲ್ಲ ಎಂಬ ತೃಪ್ತಿ ಮನಸ್ಸಿಗೆ ಬಂದಿತು. ಸ್ನೇಹಿತರನ್ನ ಕರೆದು ಒಂದು ಊಟ ಹಾಕಬೇಕು ಅಂದುಕೊಂಡೆ...
ಹೀಗೆ ಅಂದುಕೊಂಡು ಸ್ನೇಹಿತರಿಗೆ ಹೇಳಬೇಕು ಅಂದಿರುವಾಗ ಒಂದು ರಾತ್ರಿ ನಾನು ಮತ್ತೆ ವರದಾಮೂಲಕ್ಕೆ ಓರ್ವ ಗಿರಾಕಿಯನ್ನ ಕರೆದುಕೊಂಡು ಹೋದೆ. ತಿರುಗಿ ಬರುವಾಗ ಮತ್ತೆ ಎಂದಿನ ರಾತ್ರಿ, ಕತ್ತಲು, ವಿಚಿತ್ರ ಸದ್ದುಗಳು, ಆ ಮನೆಯ ಬಳಿ ಬಂದಾಗ ರಸ್ತೆಯಲ್ಲಿ ಅದೇ ಹೆಂಗಸು.
'ನಿಲ್ಲಿಸಿ ನಿಲ್ಲಿಸಿ' ಅನ್ನುವ ದನಿ. ನನ್ನ ಮೈ ಬೆವೆತು ಹೋಯಿತು. ಆಟೋ ನಿಲ್ಲಿಸಿದೆ. ಆ ಹೆಂಗಸು ಆಟೋದತ ್ತಬಂದು ಕೈ ಚಾಚಿದಳು. 'ನಾನು ಕೊಟ್ಟ ಚಿನ್ನದ ನಾಣ್ಯ....' ಎಂದಳು.
ನಾನು ಧೈರ್ಯ ತಂದುಕೊಂಡೆ. ನಿಲ್ಲಿಸಿದ ಆಟೋವನ್ನ ಸ್ಟಾರ್ಟ್ ಮಾಡಿಕೊಂಡು ಅದಾರೋ ಅಟ್ಟಿಸಿಕೊಂಡು ಬರುತ್ತಿದ್ದಾರೆ ಅನ್ನುವ ಹಾಗೆ ಅಲ್ಲಿಂದ ಹೊರಟವನು ಮತ್ತೆ ಊರು ಬಂದಾಗ ನಿಂತೆ.
ಅಂದಿನಿಂದ ನಾನು ರಾತ್ರಿಯ ಹೊತ್ತು ಅತ್ತ ಹೋಗುವುದನ್ನ ಬಿಟ್ಟಿದ್ದೇನೆ. ಆದರೂ ಒಂದು ಹೆಂಗಸು
ರಾತ್ರಿಯ ಹೊತ್ತು ಈ ರಸ್ತೆಯಲ್ಲಿ ಓಡಾಡುವುದನ್ನ ಬಹಳ ಜನ ನೋಡಿದ್ದಾರಂತೆ...ಆಕೆ ನನ್ನನ್ನ, ಆ ಚಿನ್ನದ ನಾಣ್ಯವನ್ನ ಹುಡುಕಿಕೊಂಡು ಓಡಾಡುತ್ತಿರಬಹುದು'
ಎಂದು ರಾಯರು ಕತೆಯನ್ನು ಮುಗಿಸಿ ಮೌನ ಧರಿಸಿದರು. ಅಷ್ಟರಲ್ಲಿ ಮತ್ತೊಂದು ಬಸ್ಸು ಅಲ್ಲಿ ಮೂತಿ ಚಾಚಿದ ಹಾಗೆ ಬೆಳಕು ಚೆಲ್ಲಾಡಿತು. ಚಾಲಕರೆಲ್ಲ ಎದ್ದರು. ಶೇಖರ ರಾಯರತ್ತ ತಿರುಗಿ,
'ರಾಯರೇ ಇಂತಹಾ ರಾತ್ರಿಯಲ್ಲಿ ನೀವು ಈ ಕತೆ ಹೇಳಿ ನಾವು ಆಟೋ ತೆಕ್ಕೊಂಡು ಧೈರ್ಯವಾಗಿ
ಹೋಗದೇ ಇರೋ ಹಾಗೆ ಮಾಡಿದ್ರಿ' ಎಂದ. ಈ ಮಾತಿಗೆ ಯಾರೂ ನಗಲಿಲ್ಲ. ಏಕೆಂದರೆ ನಗುವ ಸ್ಥಿತಿಯಲ್ಲಿ ಅವರು ಯಾರೂ ಇರಲಿಲ್ಲ.
- ಡಾ. ನಾ. ಡಿಸೋಜ
nadsouza.sagar@gmail.com