

ಪಿನ್ ಕಣಿವೆಯ ಉತ್ಸವಕ್ಕೆ ಹೋದದ್ದರಿಂದ ಹೆಚ್ಚು ಫಾಯಿದೆ ಆದದ್ದು ರಾಧಿಕಾ ಮತ್ತು ಪ್ರಿಯಾಗೆ. ನಿಜಕ್ಕಾದರೂ, ಅದು ಫೋಟೋಗ್ರಾಫರ್ಗಳ ಸ್ವರ್ಗದಂತೆ, ಹಿಮಾಲಯ ಸಂಸ್ಕೃತಿಯ ಅಧ್ಯಯನ ಕೋಠಿಯಂತೆಯೇ ಇತ್ತು. ಪುಣ್ಯ, ಇಬ್ಬರ ಕೈಗಳಲ್ಲೂ ಇದ್ದದ್ದು ಡಿಜಿಟಲ್ ಕ್ಯಾಮೆರಾಗಳಾದುದರಿಂದ ಬಚಾವು. ಹಳೆಯ ರೋಲ್ ಕ್ಯಾಮೆರಾಗಳಾಗಿದ್ದಿದ್ದರೆ, ಇಬ್ಬರಿಗೂ ತಲಾ ಐನೂರು ರೋಲ್ಗಳಾದರೂ ಬೇಕಿತ್ತೇನೋ. ಯಾರಾದರೂ ಕ್ಲಿಕ್ಕಿಸುತ್ತ ಒಂದು ಮೂಲೆಗೆ ಹೋದರೆ ಇನ್ನೊಬ್ಬರಿಗೆ ಗುಮಾನಿ ಶುರುವಾಗುತ್ತಿತ್ತು- ನನಗೆ ಸಿಗದ ಯಾವುದಾದರೂ ಒಳ್ಳೇ ಸ್ನಾಪ್ ಆಕೆಗೆ ಸಿಕ್ಕಿರಬಹುದಾ ಎಂಬ ಹುಳ. ಹೀಗಾಗಿ ಇಬ್ಬರೂ ಒಬ್ಬರ ಬೆಂಬತ್ತಿ ಒಬ್ಬರು ಹೋಗುತ್ತಿದ್ದುದು ತಮಾಷೆಯಾಗಿತ್ತು.
ಸಂಜೆ ನಾಲ್ಕು ಗಂಟೆಯಾಗಿತ್ತು. ತಶಿ ನಮ್ಮನ್ನು ಹೊರಡಿಸಿದ. ಮನಸ್ಸಿಲ್ಲದ ಮನಸ್ಸಿನಿಂದ ಅಲ್ಲಿಂದ ಹೊರಟೆವು. ಈ ಬಾರಿ ಬಂದ ದಾರಿಯಲ್ಲೇ ಮರಳಿ. ಮತ್ತದೇ, ದಾರಿಯನ್ನು ಸರಿ ಮಾಡುತ್ತಿರುವ ಜೆಸಿಬಿ ಯಂತ್ರಗಳು. ಕಾಯಬೇಕಾಗಿ ಬರಲಿಲ್ಲ. ಪಿನ್ ಕಣಿವೆಯ ಮಹಾದ್ವಾರ ದಾಟಿ ಹೊರಳಿ ನೋಡಿದಾಗ ಕಂಡ ಫಲಕ: 'ಪಿನ್ ವ್ಯಾಲಿ ನ್ಯಾಷನಲ್ ಪಾರ್ಕ್- ಐಬೆಕ್ಸ್ ಮತ್ತು ಹಿಮಚಿರತೆಗಳ ನೆಲಕ್ಕೆ ಸ್ವಾಗತ'. ಬೀಳ್ಕೊಡುವಾಗ ಮನಸ್ಸಿನಲ್ಲಿ ಏನೋ ಹಳಹಳಿ... ಏನನ್ನೋ ನೋಡಲಾಗಿಲ್ಲ ಅನ್ನುವ ಹಪಹಪಿ.
---
ನಮ್ಮ ಮುಂದಿನ ಗುರಿ ಧಂಕರ್. ಅದರ ಪ್ರತಿಷ್ಠೆಯೇನು ಎಂಬುದನ್ನು ಈಗಲೇ ಹೇಳಿಬಿಡುತ್ತೇನೆ- ಒಂದು ಕಾಲದಲ್ಲಿ ಅದು ಸ್ಪಿಟಿ ಕಣಿವೆಯ ರಾಜಧಾನಿಯಾಗಿತ್ತು. ಸ್ಪಿಟಿಯಲ್ಲೇ ಅತಿ ಹೆಚ್ಚು ಗ್ರಾಮವಾಸಿಗಳಿರುವ, ಒಂದು ಪುರಾತನ ಬೌದ್ಧವಿಹಾರವನ್ನು ಹೊಂದಿರುವ ಹಳೆಯ ನೆಲ. 13,500 ಅಡಿ ಎತ್ತರದಲ್ಲಿರುವ ಹಳ್ಳಿ. ಇಲ್ಲಿರುವ ಮೊನಾಸ್ಟ್ರಿ ಮೊದಲು ಕೋಟೆಯಾಗಿ, ಅರಮನೆಯಾಗಿ, ಬಂದೀಖಾನೆಯಾಗಿ, ದೇವಾಲಯವಾಗಿ... ಧರ್ಮ ಹಾಗೂ ಅಧಿಕಾರದ ಕೇಂದ್ರವಾಗಿತ್ತು. ಸ್ಪಿಟಿಯನ್ನು ಆಳಿದ ನೋನೋ ಪಾಳೆಯಗಾರರ ನೆಲೆಯಾಗಿತ್ತು. ಅದು 12ನೇ ಶತಮಾನದ ಕಥನ.
ಅಲ್ಲಿಗೆ ಹೋಗುವ ದಾರಿ ಮಾತ್ರ ಬೆಟ್ಟಗಳ ಅಂಚು ಸೆರಗು ಸಂದಿಗೊಂದಿಗಳಲ್ಲಿ ತಿರುಗುತ್ತಾ ತಿರುಗುತ್ತಾ ಹೊಗುತ್ತಿತ್ತು. ಸೂಫಿಗಳು ತಿರುತಿರುಗಿ ಬೀಳುತ್ತಾರಲ್ಲ- ಅಂಥ ತಿರುಗಣಿ ನೃತ್ಯದಂತೆ ಭಾಸವಾಗುತ್ತಿತ್ತು. ಧಂಕರ್ಗೆ ಇನ್ನೇನು ಹತ್ತು ಕಿಲೋಮೀಟರ್ ದೂರವಿದೆ ಅನ್ನುವಷ್ಟರಲ್ಲಿ ಅದ್ಭುತ ದೃಶ್ಯವೊಂದು ಗೋಚರಿಸಿತು.
ನಮ್ಮ ಮುಂದೆ ನೂರಾರು ಪರ್ವತಗಳಿದ್ದವು. ಅವುಗಳಲ್ಲೊಂದರ ಆಚೆ ಈಚೆಯಿಂದ ಎರಡು ನದಿಗಳು ಬಂದು ನಮ್ಮ ಮುಂದೆ ಸಂಗಮಿಸುತ್ತಿದ್ದವು. ನದಿಗಳು ಪಾತಾಳದಲ್ಲಿದ್ದುದರಿಂದ ಅವುಗಳ ವಿಹಂಗಮ ದೃಶ್ಯ ನಮಗೆ ಕಾಣುತ್ತಿತ್ತು. ಅದರಲ್ಲೊಂದು ಸ್ಪಿಟಿ ನದಿ, ಇನ್ನೊಂದು ಪಿನ್. ಪಿನ್, ತನ್ನ ಅಸ್ತಿತ್ವವನ್ನು ಕಳೆದುಕೊಂಡು ಸ್ಪಿಟಿ ಕಣಿವೆಯ ಜೀವನದಿಗೆ ಉಬ್ಬರ ತುಂಬಿತ್ತು. ಬೆಟ್ಟದ ಹಿಂದಿನಿಂದ ಸೂರ್ಯ ತನ್ನ ಕಿರಣಗಳನ್ನು ಚೆಲ್ಲುತ್ತಿದ್ದ. ಬೆಟ್ಟದ ನೆರಳೂ, ಅದನ್ನು ದಾಟಿ ಬಂದ ಬೆಳಕೂ ನದಿನೀರಿನ ಮೇಲೆ ಬಿದ್ದು ಬ್ಲಾಕ್ ಆಂಡ್ ವೈಟ್ ಮಾಯಾಜಾಲವೊಂದನ್ನು ಸೃಷ್ಟಿಸಿತ್ತು. ಅದರಲ್ಲಿ ತಪ್ಪಲಿನ ಹಸಿರೂ, ಹಿಮದ ಧವಳಚ್ಛಾಯೆಯೂ, ಕಿರಣಗಳ ಕೆಂಪೂ, ಬೆಟ್ಟದ ಕಂದುವರ್ಣವೂ ಕರಗಿದಂತಿದ್ದವು. ಕಣ್ಣು ಕುರುಡಾಗುವಂತೆ ಕೋರೈಸಿತು. ಎದುರುಭಾಗದಿಂದ ಸೂರ್ಯ ಝಗಮಗಿಸುತ್ತಿದ್ದ. ಕ್ಯಾಮೆರಾ ಲೆನ್ಸ್ಗಳು ಮಂಕಾಗಿ ಹೋದವೇ ಹೊರತು ಒಂದೇ ಒಂದು ಫೋಟೋ ಕೂಡ ಸರಿಯಾಗಿ ಮೂಡಲಿಲ್ಲ.
-------
'ಅದೋ, ಅಲ್ಲಿದೆ ನೋಡಿ ಧಂಕರ್ ಮೊನಾಸ್ಟ್ರಿ...' ತಶಿ ತೋರಿಸಿದ. ನೋಡಿದೆವು... ಎದೆಬಡಿತದ ವೇಗ ಇದ್ದಕ್ಕಿದ್ದಂತೆ ಜಾಸ್ತಿಯಾಯ್ತು. ತಶಿ ತಮಾಷೆ ಮಾಡಿರಲಿಲ್ಲ, ಅದು ಅಲ್ಲಿ ನಿಜವಾಗಿಯೂ ಇತ್ತು. ಕೀಲಿಸಿದ ಕಣ್ಣುಗಳನ್ನು ಅದರಿಂದ ಕೀಳಲಾಗಲಿಲ್ಲ. ಅದಕ್ಕೆ ಕಾರಣ, ನಾವು ದೃಷ್ಟಿ ಹೊರಳಿಸಿದ ಮರುಕ್ಷಣವೇ ಅದು ಧಸಾಲನೆ ಕುಸಿದು ಪ್ರಪಾತದಲ್ಲಿ ಲೀನವಾದರೆ ಎಂಬ ತಲ್ಲಣ! ಹಾಗಿತ್ತು ಅದು.
ಅಂದ ಹಾಗೆ, ಧಂಗ್ ಅಂದರೆ ಬೆಟ್ಟದಂಚು. ಕರ್ ಅಂದರೆ ಕೋಟೆ. ಬೆಟ್ಟದ ಅಂಚಿನಲ್ಲಿದೆ ಆ ವಿಹಾರ. ನಿಮಗೊಂದು ಉದಾಹರಣೆ ಕೊಡುವೆ. ವರ್ಷದ ಮೊದಲ ಮಳೆ ಬಂದ ಮರುದಿನ ಅಂಗಳಕ್ಕೆ ಬಂದು ನೋಡಿದರೆ, ಸಪೂರ ಮರಳ ಸ್ತಂಭಗಳ ಮೇಲೆ ಪುಟ್ಟ ಕಲ್ಲುಗಳು ನಿಂತಿರುವುದನ್ನು ನೀವು ನೋಡಿರಬಹುದು. ಯಾವ ಕ್ಷಣದಲ್ಲಿ ಬೇಕಾದರೂ ಕುಸಿಯುವಂತಿರುತ್ತದೆ ಅವು. ಥೇಟ್, ಹಾಗೆಯೇ ಇತ್ತು ಆ ಮೊನಾಸ್ಟ್ರಿ. ಅದರ ಬಳಿಗೆ ಹೋಗುವ ದಾರಿ ಕೂಡ ಅತ್ಯಂತ ಸಪೂರ. ಒಂದು ಸುಮೋ ಅಲ್ಲಿಗೆ ಹೋದರೆ ಇನ್ನೊಂದನ್ನು ಹತ್ತಿರ ಕೂಡ ಬಿಡುವುದಿಲ್ಲ. ಪ್ರತಿ ಮಳೆಗೂ ಬೆಟ್ಟ ಸ್ವಲ್ಪಸ್ವಲ್ಪವೇ ಕುಸಿಯುತ್ತಿದೆ.
'ಜಗತ್ತೇ ನಶ್ವರ' ನಾವು ಗಾಡಿ ಇಳಿದು ಗೊಂಪಾದತ್ತ ಹೆಜ್ಜೆಯಿಟ್ಟೆವು. 'ಮುಂದಡಿಯಿಡೆ ವೀರಸ್ವರ್ಗ' ಎಂದು ತಶಿ ಹುರಿದುಂಬಿಸುತ್ತಿದ್ದ. ಆತ ಬಿಟ್ಟಿದ್ದರೆ ನಾವೆಲ್ಲ ಉತ್ತರಕುಮಾರರಂತೆ ಬಂದ ದಾರಿಯಲ್ಲೇ ಪೇರಿ ಕೀಳುತ್ತಿದ್ದುದರಲ್ಲಿ ಸಂಶಯವಿರಲಿಲ್ಲ.
(ಮುಂದಿನ ವಾರ- ರವಿಯ ಕೊನೆಯ ಕಿರಣ)
- ಹರೀಶ್ ಕೇರ
harishkhera@gmail.com