ಅನನ್ಯ ಕಲಾಸಾರಥಿಯ ಅಕ್ಷರಚಿತ್ರ
ಕರ್ನಾಟಕದಲ್ಲಿ ಚಿತ್ರಕಲಾ ಸಂಸ್ಕೃತಿಯ ಬಗ್ಗೆ ಚರ್ಚೆಯಾದಾಗಲೆಲ್ಲ ಬೆಂಗಳೂರಿನ ಚಿತ್ರಕಲಾ ಪರಿಷತ್ತಿನ ಹೆಸರು ಉಲ್ಲೇಖವಾಗಿಯೇ ಆಗುತ್ತದೆ. ಪ್ರತಿವರ್ಷ ನಡೆಯುವ 'ಚಿತ್ರಸಂತೆ'ಯೂ ಇಲ್ಲೇ ನಡೆಯುತ್ತದೆ. ಶಿವಾನಂದ ವೃತ್ತಕ್ಕೆ ಮಾರು ದೂರದಲ್ಲಿರುವ ಚಿತ್ರಕಲಾ ಪರಿಷತ್ತನ್ನು ಶಾರ್ಟ್ ಆ್ಯಂಡ್ ಸ್ವೀಟಾಗಿ 'ಸಿಕೆಪಿ' ಎನ್ನುವರು. ಸಿಕೆಪಿ ಎಂದರೆ ನಂಜುಂಡರಾವ್, ನಂಜುಂಡರಾವ್ ಎಂದರೆ ಸಿಕೆಪಿ ಎಂಬ ನಂಟು ಬಿಡದ ಜೋಡಿ ಪದವಷ್ಟೇ ಅಲ್ಲ, ಅವಿಭಾಜ್ಯ ಅಂಗವೂ ಹೌದು. 'ಕಿಂಗ್ ಆಗಲು ಬಯಸದ ಕಿಂಗ್ಮೇಕರ್' ಈ ಪ್ರೊ. ಎಂ.ಎಸ್. ನಂಜುಂಡರಾವ್ ಎಂಬುದು ಇವರ ಪರಿಚಿತರ, ಅಭಿಮಾನಿಗಳ ಮೆಚ್ಚುಗೆಯ ನುಡಿ. ಒಂದು ಸಣ್ಣ ಕೋಣೆಯಲ್ಲಿ ಪ್ರಾರಂಭವಾದ ಈ ಕಲಾಶಾಲೆಯು ಹೀಗೆ ತ್ರಿವಿಕ್ರಮನಂತೆ ಬೆಳೆದು ಅಂತಾರಾಷ್ಟೀಯ ಮಟ್ಟದಲ್ಲಿ ಹೆಸರುಮಾಡಿದ ಸವಿವರಗಳನ್ನು, ಎಂಎಸ್ಎನ್ರ ಪರಿಶ್ರಮದ ಪ್ರತಿ ಹೆಜ್ಜೆಗಳನ್ನು ಈ 'ಅನನ್ಯ ಕಲಾಸಾರಥಿ ನಂಜುಂಡರಾವ್' ಪುಸ್ತಕದಲ್ಲಿ ಮನೋಜ್ಞವಾಗಿ ಕಾಣಬಹುದು.
ತಂದೆಯ ಜೀವನ ಚರಿತ್ರೆಯನ್ನು ಪುಸ್ತಕ ರೂಪದಲ್ಲಿ ಹೊರತರಬೇಕೆಂದು ಸಂಕಲ್ಪಿಸಿ ಎಂಎಸ್ಎನ್ರ ಕಿರಿಯ ಪುತ್ರ ರವಿಶಂಕರ್, ಹಿರಿಯ ಪತ್ರಕರ್ತ ವಿ.ಎನ್. ಸುಬ್ಬರಾವ್ ಅವರಲ್ಲಿ ಅರಿಕೆ ಮಾಡಿಕೊಂಡು ಸಾಕಾರಗೊಳಿಸಿದ್ದಾರೆ. ಈ ಪುಸ್ತಕವು ಎಂಎಸ್ಎನ್ರ ಜೀವನ, ಕಲೆ, ಕಲಾಶಿಕ್ಷಣ, ಗ್ರಾಮೀಣಾಭಿವೃದ್ಧಿ ಮತ್ತು ಸಂಸ್ಕೃತಿಯ ಬಗೆಗಿನ ಅಭಿರುಚಿಗೆ ಸಲ್ಲಿಸುವ ಶಾಶ್ವತ ಕಾಣಿಕೆಯಾಗಿದೆ ಎಂಬುದು ಓದಿದ ಕಲಾಸಕ್ತನಿಗೆ ಗೋಚರವಾಗುತ್ತದೆ. ವಿ.ಎನ್. ಸುಬ್ಬರಾವ್ ಅಲ್ಲದೇ ಮತ್ತೊಬ್ಬ ಹಿರಿಯ ಪತ್ರಕರ್ತ ಗರುಡನಗಿರಿ ನಾಗರಾಜ್ರ ಮಾರ್ಗದರ್ಶನದಲ್ಲಿ ನಂ. ನಾಗಲಕ್ಷ್ಮಿ 60ಕ್ಕೂ ಹೆಚ್ಚು ವ್ಯಕ್ತಿಗಳನ್ನು ಸಂದರ್ಶಿಸಿದ್ದಾರೆ. ಅವುಗಳನ್ನೆಲ್ಲ ಒಟ್ಟುಗೂಡಿಸಿ, ಉತ್ತಮ ರೂಪ ಕೊಟ್ಟು ಸಂಗ್ರಹ ಯೋಗ್ಯವಾದ ಗ್ರಂಥವಾಗಿಸಿದ್ದಾರೆ.
ಕಲೆಯ ತವರೂರಾದ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಸುದ್ದೇಕುಂಟೆಯಲ್ಲಿ ಹುಟ್ಟಿದವರು ಎಂಎಸ್ಎನ್. ಇವರ ತಂದೆ ಅದ್ಭುತ ನಾಟಕಕಾರರು, ತೊಗಲು ಬೊಂಬೆ ಆಟದ ನಿರ್ವಾಹಕರು ಮತ್ತು ರಂಗ ಕಲಾಕಾರರು. ತಾಯಿ ಗೌರಮ್ಮ ಕೂಡ ಸಂಸ್ಕೃತಿಯ ರಾಯಭಾರಿಯಂತಿದ್ದವರು. ಮೂರು ಸಲ ಸಾವಿನ ದವಡೆಗೆ ಸಿಲುಕಿ, ಯಮಪುರಿಯ ಬಾಗಿಲು ತಟ್ಟಿ ಚಮತ್ಕಾರ ರೀತಿಯಲ್ಲಿ ಎಂಎಸ್ಎನ್ ಉಳಿದುಕೊಂಡಿದ್ದು ಇಂಥ ಮಹತ್ಸಾಧನೆ ಮಾಡಲೆಂದೇ ಇರಬೇಕು.
ರಾವ್ ಪತ್ನಿಯವರ ಪ್ರಕಾರ, 'ಕೈಯಲ್ಲಿ ಕಾಸಿಲ್ಲದ ಎಂಎಸ್ಎನ್ ಕೇವಲ ಸಮರ್ಪಣಾ ಭಾವವನ್ನೇ ಬಂಡವಾಳವಾಗಿಸಿಕೊಂಡು ಬಂದ ಕಷ್ಟಗಳನ್ನು ಎದುರಿಸಿದರು. ಪರಿಶ್ರಮದ ಹಾದಿಯಲ್ಲಿ ಸಾಗಿ ಕಲಾಶಿಕ್ಷಣವನ್ನು ಹೇಗೆ ಉತ್ತುಂಗಕ್ಕೆ ಕೊಂಡೊಯ್ಯಬಹುದೆಂಬುದನ್ನು ಅವರು ತೋರಿಸಿಕೊಟ್ಟಿದ್ದಾರೆ. ಇಂಥ ಜೀವನಕ್ರಮ ಮುಂದಿನ ಪೀಳಿಗೆಗೆ ಆದರ್ಶವಾಗಲಿ ಎಂಬ ಉದ್ದೇಶದಿಂದ ಈ ಗ್ರಂಥವನ್ನು ಹೊರತರಲಾಗಿದೆ.'
ಚಿತ್ರಕಲಾ ಪರಿಷತ್ನ ಆರಂಭದಲ್ಲಿ ಎಸ್.ಎಸ್. ಕುಕ್ಕೆ, ಎಂ. ಆರ್ಯಮೂರ್ತಿ ಮತ್ತು ಪಿ.ಆರ್. ತಿಪ್ಪೇಸ್ವಾಮಿ ಅವರು ಎಂಎಸ್ಎನ್ಗೆ ಸಹಾಯಹಸ್ತ ನೀಡಿರುವ ಉಲ್ಲೇಖ ಇಲ್ಲಿದೆ. ಕಲಾಮಂದಿರದ ಸ್ಥಾಪಕ ಅ.ನ. ಸುಬ್ಬರಾಯರೂ ಇಲ್ಲಿಗೆ ಬಂದು ಬೋಧಿಸುತ್ತಿದ್ದರು. ಅಲ್ಲದೇ ಎಂಎಸ್ಎನ್ರ ಕಲಾಗುರುಗಳಾದ ಪ್ರೊ. ಸುಬ್ರಹ್ಮಣ್ಯರಾಜು ಅವರು ಶಿಷ್ಯನಿಗಾಗಿ ಸಾಂಪ್ರದಾಯಿಕ ಕಲೆಯನ್ನು ಕಲಿಸುತ್ತಿದ್ದರು ಎಂಬುದನ್ನು ಕೂಡ ದಾಖಲಿಸಲಾಗಿದೆ.
ಸಿಕೆಪಿಯಲ್ಲಿ ಡಾ. ರೋರಿಕ್ ಮತ್ತು ಕೇಜರಿವಾಲ್ ಅವರ ಹೆಸರಿನ ಗ್ಯಾಲರಿಗಳು ಇರುವುದಲ್ಲದೆ ನಿಕೊಲಸ್ ರೋರಿಕ್ ಮತ್ತು ಸ್ವೇತೋಸ್ಲಾವ್ ರೋರಿಕ್ರ 117 ಕೃತಿಗಳಿವೆ. ಇವುಗಳಲ್ಲಿ ರೋರಿಕ್ ಅವರ ಮಾಸ್ಟರ್ ಪೀಸ್ ಕೂಡ ಇದೆ. ಇಲ್ಲಿನ ಗ್ಯಾಲರಿಗಳು ಕಲಾಕೃತಿಗಳು ಪ್ರದರ್ಶನಕ್ಕೆ ಯೋಗ್ಯವಾಗಿದೆ. ಅಲ್ಲದೆ ಇಲ್ಲಿ 13 ಗ್ಯಾಲರಿಗಳಿದ್ದು ಅಪರೂಪದ ಕಲಾವಿದರಾದ ರೋರಿಕ್ದ್ವಯರಲ್ಲದೆ, ಗಜೇಂದ್ರನಾಥ್, ರವೀಂದ್ರನಾಥ್, ನಂದಲಾಲ್ ಬಸು, ಹುಸೇನ್ ಮತ್ತು ಪದಮ್ ಜೀ ಮತ್ತಿತರರ 300ಕ್ಕೂ ಅಧಿಕ ಕಲಾಕೃತಿಗಳ ಸಂಗ್ರಹವಿದೆ. ಮೈಸೂರಿನ ಸಾಂಪ್ರದಾಯಿಕ ಕಲಾಕೃತಿಗಳು, ಜಾನಪದ ಕಲೆಗೆ ಸಂಬಂಧಿಸಿದ ವಸ್ತುಗಳು, ಹಳ್ಳಿ ಹಳ್ಳಿಗಳಿಗೆ ಹೋಗಿ ಸಂಗ್ರಹಿಸಿದ ತೊಗಲುಬೊಂಬೆಗಳನ್ನು ಇಲ್ಲಿ ಸಂರಕ್ಷಿಸುತ್ತಾ ಜಾನಪದ ಕಲೆಯ ಉಳಿವಿಗೆ ಈ ಸಂಸ್ಥೆಯ ಕೊಡುಗೆಯನ್ನೂ ತಿಳಿಸಲಾಗಿದೆ. ರೋರಿಕ್ ಅಷ್ಟೇ ಅಲ್ಲದೆ, ಅವರ ಪತ್ನಿ ದೇವಿಕಾರಾಣಿಯ ಆತ್ಮೀಯ ಸಂಪರ್ಕವೂ ಸಿಕೆಪಿಯ ಮೇಲೆ ಇದ್ದಿದ್ದನ್ನು ಈ ಪುಸ್ತಕ ತಿಳಿಸುತ್ತದೆ.
ಅಂದಿನ ಮುಖ್ಯಮಂತ್ರಿಯಾಗಿದ್ದ ಕೆಂಗಲ್ ಹನುಮಂತಯ್ಯನವರ ಕರೆಗೆ ಓಗೊಟ್ಟು, ಕೇಂದ್ರ ಸರ್ಕಾರದ ಹುದ್ದೆಯನ್ನು ತ್ಯಜಿಸಿ ಈ ಕಲಾಕೇಂದ್ರ ಕಟ್ಟಲು ನಿರ್ಧರಿಸಿದರು. ರಾವ್ ಅವರ ಆತ್ಮಸ್ಥೈರ್ಯ ಮತ್ತು ಕಲ್ಪನೆಯನ್ನು ಸಾಕಾರಗೊಳಿಸುತ್ತೇನೆಂಬ ಅಚಲವಿಸ್ವಾಸವೇ ಇಂದಿನ ಚಿತ್ರಕಲಾ ಪರಿಷತ್ತಿನ ಅಸ್ತಿತ್ವಕ್ಕೆ ಕಾರಣವಾಗಿದೆ. ಈ ಕಾರ್ಯದಕ್ಷತೆಗೆ ಕಾರಣ ಅವರಿಗಿದ್ದ ಕಲಾಪ್ರೇಮ, ಶ್ರದ್ಧೆ ಹಾಗೂ ಏಕಾಗ್ರತೆಯೇ ಆಗಿದೆ. 'ಪ್ರತಿ ಕೆಲಸದಲ್ಲೂ ಪರ್ಫೆಕ್ಷನ್ ಇರಬೇಕು' ಎಂದು ಹೇಳುತ್ತಾ ಪರ್ಫೆಕ್ಷನ್ ಎಂದರೆ ಏನೆಂದು ತೋರಿಸಿಕೊಟ್ಟದ್ದನ್ನೂ ಈ ಕೃತಿ ವಿವರಿಸುತ್ತದೆ.
ಈ ಕಲಾಕಾರನ ಪುಸ್ತಕಕ್ಕೆ ಅವರದೇ ರೇಖಾಚಿತ್ರಗಳನ್ನು ಬಳಸಿಕೊಂಡು ಕಲಾಕ್ಮತೆಯ ಛಾಪು ಕೊಟ್ಟು ಮುಖಪುಟ ಹಾಗೂ ಪುಟವಿಟ್ಟ ಪುಟವಿನ್ಯಾಸವನ್ನು ಖ್ಯಾತ ಕಲಾವಿದರಾದ ಚಂದ್ರನಾಥ್ ಆಚಾರ್ಯ ಮತ್ತು ಶ್ರೀಪಾದ ಆಚಾರ್ಯರು ಮಾಡಿದ್ದಾರೆ. ಕಲಾವಿದರ ಪರಿಚಯವಷ್ಟೇ ಅಲ್ಲದೆ ಅವರು 35 ವರ್ಷಗಳ ಸತತ ಪರಿಶ್ರಮದ ಫಲವಾಗಿ 'ತೊಗಲುಬೊಂಬೆ' ಎಂಬ ರಾಷ್ಟ್ರಪ್ರಶಸ್ತಿಯನ್ನು ಪಡೆದ ಪುಸ್ತಕದ ಆಯ್ದ ಭಾಗವನ್ನು ಈ ಹೊತ್ತಗೆಯಲ್ಲಿ ಸೇರಿಸಿದ್ದಾರೆ. ಇದರ ಜತೆಗೆ ಸಾಂಪ್ರದಾಯಿಕ ಕಲೆ ಮತ್ತು ಮೈಸೂರು ಚಿತ್ರಕಲೆಯ ವೈಶಿಷ್ಟ್ಯದ ಬಗ್ಗೆಯೂ ಸವಿಸ್ತಾರವಾಗಿ ತಿಳಿಸಿದ್ದಾರೆ. ರಾವ್ ಅವರ ವೈಯಕ್ತಿಕ ಜೀವನದ ಘಟನೆಗಳು, ಅವರನ್ನು ಸಂಪರ್ಕಿಸಿದ ದಿಗ್ಗಜರುಗಳೊಂದಿಗೆ ಫೋಟೋಗಳು, ಹಲವು ಕಾರ್ಯಕ್ರಮಗಳ ಛಾಯಾಚಿತ್ರಗಳನ್ನು ಸೇರಿಸಿ ಸಂಗ್ರಹ ಯೋಗ್ಯ ಗ್ಯಾಲರಿಯ ಪುಟಗಳಿದ್ದು, ಆಕರ್ಷಕವಾಗಿದೆ. ಉತ್ತಮ ವಿನ್ಯಾಸದ ಜತೆಗೆ ಒಳ್ಳೆಯ ಪೇಪರ್ ಹೊಂದಿದ್ದು ಬಹುಕಾಲ ಉಳಿಯುವಂಥ ಬೈಂಡಿಂಗನ್ನು ಹಾಕಿಸಿ, ಹೊರ ಮತ್ತು ಒಳಮೈ ಎರಡನ್ನೂ ಸುಂದರಗೊಳಿಸಿ ಕಲಾಪುಸ್ತಕಕ್ಕೆ ಸಲ್ಲಬೇಕಾದ ನ್ಯಾಯವನ್ನು ಸಲ್ಲಿಸಿದ್ದಾರೆ.
- ಮೀನಾದತ್ತ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

