ಡ್ರೋಂಗೋ ಸಮೀರಾ

ಪಕ್ಷಿಗಳಿಗೆ ರಾಜ್ಯ, ದೇಶಗಳ ಸೀಮೆಯಿಲ್ಲ. ಪಕ್ಷಿವೀಕ್ಷಣೆಯ ಹುಚ್ಚಿದ್ದವರಿಗೂ ಆ ಮೇರೆಗಳಿಲ್ಲ. ಹೀಗೆ ಮೇರೆ ದಾಟಿ ಬಂದವಳ ಹೆಸರು ಸಮೀರಾ. ಬಿಳಿಗಿರಿರಂಗನಬೆಟ್ಟದಲ್ಲಿ ಕಿವಿ ಹರಡಿಕೊಂಡು ಹಕ್ಕಿಯ ಕುಹೂವಿಗೆ ಕಾತರಿಸುತ್ತಾಳೆ. ಕೈಯಲ್ಲೊಂದು ಉದ್ದದ ಮೈಕು. ಜತೆಗೊಂದು ದೂರದರ್ಶಕ. ಸೊಂಟಕ್ಕೆ ಕಟ್ಟಿಕೊಂಡ ರೆಕಾರ್ಡರ್. ನೆಕ್ಕಿಗೆ ನೇತು ಬಿದ್ದ ಕ್ಯಾಮೆರಾ... ಇಷ್ಟೆಲ್ಲ ಇಟ್ಟುಕೊಂಡು ಇಲ್ಲಿ ಯಾರಾದರೂ ಓಡಾಡುತ್ತಿದ್ದಾರಾ ಅಂತ ಸೋಲಿಗರನ್ನು ಕೇಳಿಬಿಟ್ಟರೆ ಅವರು ಹೇಳುವ ಹೆಸರೂ, 'ಸಮೀರಾ'.
ಈಕೆ ಜಾಡು ಹಿಡಿದು ಕಾಡು ಮೇಡು ಅಲೆಯುತ್ತಾ ಹುಡುಕುತ್ತಿರುವುದು ಮಿಮಿಕ್ರಿ ಮಾಡುವ ಪಕ್ಷಿಗಳನ್ನ. ಹುಟ್ಟಿದ ಸೂರ್ಯ ಸುಸ್ತಾಯಿತೆಂದು ಸಾಯಂಕಾಲ ಮರೆಯಾದರೂ, ಸಮೀರಾಗೆ ಅಲೆದು ಅಲೆದು ಸುಸ್ತಾಗದು. ಹಕ್ಕಿಗಳ ಚಲನವಲನಗಳನ್ನು ಬೆನ್ನಟ್ಟಿ ಅಭ್ಯಸಿಸುವ ಈಕೆ ಕನ್ನಡತಿಯೂ ಅಲ್ಲ. ಕನ್ನಡವನ್ನು ಕನ್ನಡಿಗರೂ ನಾಚುವಂತೆ ನಿರರ್ಗಳವಾಗಿ ಮಾತನಾಡಬಲ್ಲ ಗುಜರಾತು ಮೂಲದ ಹುಡುಗಿ. ಹಕ್ಕಿಗಳಿಗಾಗಿ ಐದು ವರ್ಷದ ಹಿಂದೆ ವಡೋದರದಿಂದ ಓಡೋಡಿ ಬಂದವಳು. ಬಿಳಿಗಿರಿರಂಗನಬೆಟ್ಟದ ಸೋಲಿಗರಲ್ಲಿ ತಾನೂ ಒಬ್ಬಳಾದವಳು.
ಪಕ್ಷಿಗಳ ಅಧ್ಯಯನವೇ ಸಂಯಮ ಪರೀಕ್ಷೆ. ಸಮೀರಾಳ ಸಮಾಧಾನ ಸಾಧುಗಳನ್ನೂ ಮೀರಿಸುವಂಥದ್ದು. ಅಧ್ಯಯನಕ್ಕೆ ಹೊರಟರೆ ಬೆಳಗ್ಗೆ, ಮಧ್ಯಾಹ್ನ, ಸಂಜೆ, ದಣಿವು, ಹಸಿವು ಎಂಬುದಿಲ್ಲ. ನಿರಂತರ ತಿರುಗಾಟ. ಪಕ್ಷಿಗಳನ್ನು ಕಾಣುವುದು ಆಕೆಗೆ ಖುಷಿ. ಕರ್ನಾಟಕದ ಪಶ್ಚಿಮಘಟ್ಟಗಳಲ್ಲಿ ಕಾಣಸಿಗುವ ಹಾಗೂ ಮಳೆಕಾಡು ಅಂತ ಕರೆಯುವ ದಟ್ಟ ಕಾಡಿನಲ್ಲಿ ವಿಹರಿಸುವ ಉದ್ದ ಬಾಲದ ಕಪ್ಪು ಹಕ್ಕಿಯ ಹಿಂದೆ ಸದ್ಯ ಬಿದ್ದಿದ್ದಾಳೆ.
ಯಾವುದು ಆ ಹಕ್ಕಿ?
ಸಮೀರಾ ಬೆನ್ನು ಹತ್ತಿರುವ ಹಕ್ಕಿಯ ಹೆಸರು ಗ್ರೇಟರ್ ರಾಕೇಟ್ ಟೇಲ್ಡ್ ಡ್ರೋಂಗೋ. ಇದು ಥೇಟ್ ನಮ್ಮ ಅರುಣ್ ಸಾಗರ್ ರೀತಿ. ವಿವಿಧ ದನಿಯನ್ನು ಅನುಕರಿಸುವ ಜಾಣಪಕ್ಷಿ. ಸಮೀರಾಳ ತಂದೆ ಅರುಣ್ ಅಗ್ನಿಹೋತ್ರಿ ಹೆಸರಾಂತ ಕಲಾವಿದ. ಐನೂರು ನಾಟಕಗಳ ನಿರ್ದೇಶಕರು. ಚಿಕ್ಕಂದಿನಿಂದಲೇ ಪಕ್ಷಿಗಳನ್ನು ಪ್ರೀತಿಸುತ್ತಿದ್ದ ಸಮೀರಾ ಕೂಡ ಸೊಗಸಾಗಿ ಮಿಮಿಕ್ರಿ ಮಾಡಬಲ್ಲಳು.
ಬೆಂಗಳೂರಿಗೆ ಬಂದಳು...
ಸಮೀರಾ 2004ರಲ್ಲಿ ಬೆಂಗಳೂರಿನ ನ್ಯಾಶನಲ್ ಸೆಂಟರ್ ಫಾರ್ ಬಯೋಲಜಿಕಲ್ ಸೆಂಟರಿನಲ್ಲಿ ಎಂಎಸ್ಸಿಗೆ ಸೇರಿಕೊಂಡಳು. ಬಿಳಿಗಿರಿರಂಗನ ಬೆಟ್ಟದಲ್ಲಿ ಏಟ್ರಿ ಸಂಸ್ಥೆ ಆಯೋಜಿಸಿದ್ದ ಎರಡು ವಾರದ ಜೀವವೈವಿಧ್ಯ ಸಂರಕ್ಷಣಾ ಕಾರ್ಯಗಾರ ಇವಳ ಆಸಕ್ತಿಗೆ ಟ್ವಿಸ್ಟ್ ನೀಡಿತು. ಕಾರ್ಯಗಾರಕ್ಕೆ ಬಂದಾಗಲೇ ಗ್ರೇಟರ್ ರಾಕೇಟ್ ಟೇಲ್ಡ್ ಡ್ರೋಂಗೋ ಹಕ್ಕಿ ಮಿಂಚಿ ಮರೆಯಾಗಿತ್ತು. ಈ ಹಕ್ಕಿಗೆ ಸೋಲಿಗರು 'ಕರಳಿ ಹಕ್ಕಿ' ಎನ್ನುತ್ತಾರೆ. ಗಿರಿಜನರು 'ದೊಡ್ಡಕರಳಿ' ಎಂದು ಹೆಸರಿಟ್ಟಿದ್ದಾರೆ. ಮಲೆನಾಡಿನಲ್ಲಿ 'ಬಾಲದ ಹಕ್ಕಿ' ಎಂದು ನಾಮಕರಿಸಿದ್ದಾರೆ.
ಹಕ್ಕಿಯ ಹಿಂಬಾಲಿಸಿ...
ಈ ಮಿಮಿಕ್ರಿ ಹಕ್ಕಿಯ ದನಿಗೆ ಮನಸೋತ ಸಮೀರಾ ಕಾರ್ಯಾಗಾರದ ಬಿಡುವಿನ ವೇಳೆಯಲ್ಲಿ, ಡ್ರೋಂಗೊಗಾಗಿ ಸತತವಾಗಿ ಹಿಂಬಾಲಿಸಿದಳು. ಈ ಹಕ್ಕಿಯ ಬಗ್ಗೆ ಅಧ್ಯಯನ ಮಾಡುವ ಕನಸುಕಟ್ಟಿಕೊಂಡು ವಾಪಸಾದವಳು, 2007ರಲ್ಲಿ ಮತ್ತೆ ಬಿಳಿಗಿರಿರಂಗನಬೆಟ್ಟಕ್ಕೆ ಓಡಿಬಂದಳು.
ಪುಣ್ಯಕ್ಕೆ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ ಈ ಹಕ್ಕಿಯ ಬಗ್ಗೆ ಅಧ್ಯಯನ ಮಾಡಲು ಅನುಮತಿ ನೀಡಿತು. ಅರಣ್ಯ ಇಲಾಖೆಯ ಗ್ರೀನ್ಸಿಗ್ನಲ್ ಸಹ ಸಿಕ್ಕಿತು.
ಆರು ತಿಂಗಳ ಮಟ್ಟಿಗೆ ಇಬ್ಬರು ಸಹಾಯಕರನ್ನು ನೇಮಿಸಿಕೊಂಡಳು. ಅವರಿಬ್ಬರೂ ಸೋಲಿಗರು. ಆರಂಭದಲ್ಲಿ ಈಕೆಗೆ ಕನ್ನಡ ತಿಳಿಯದು. ಅವರಿಗೆ ಇಂಗ್ಲಿಷ್ ಮತ್ತು ಹಿಂದಿ ತಿಳಿಯದು. ಕೈಸನ್ನೆ, ಬಾಯ್ಸನ್ನೆ ಮೂಲಕವೇ ಅಧ್ಯಯನ ಸಾಗಿತು. ಜೀಪಿನಲ್ಲಿ ಮುಂಜಾನೆ 6ಕ್ಕೆ ಮುಖ್ಯರಸ್ತೆಯಲ್ಲಿ ಸಾಗಿದರೆ ಅಲ್ಲಿಂದ ಇಳಿದು ಪೋಡಿನ ಕಾಲುದಾರಿಯಲ್ಲೇ ಸಾಗಬೇಕು. ದಟ್ಟ ಮಳೆಕಾಡು. ಈ ಹಕ್ಕಿ ಮರದ ಕೊಂಬೆಯಲ್ಲಿ ಅಡಗಿ ಕುಳಿತಿರುತ್ತದೆ. ಅದರ ಕೆಳಗೆ ಸಮೀರಾಳ ಕಾಯುವಿಕೆ ಆರಂಭವಾಗುತ್ತದೆ. ಆ ದನಿ, ಚಲನವಲನ, ಬಾಲ, ಬಣ್ಣ, ಇತರೆ ಹಕ್ಕಿಗಳನ್ನು ಕರೆಯುವ ಪರಿ ಎಲ್ಲವೂ ಈಕೆಯ ಲ್ಯಾಪ್ಟಾಪ್ನಲ್ಲಿ ದಾಖಲು. ಕೆಲವೊಮ್ಮೆ ಹಕ್ಕಿ ಸಣ್ಣ ಮರದಲ್ಲಿ ಕುಳಿತು ಕೂಗುತ್ತಿದ್ದರೆ ಎರಡರಿಂದ ಮೂರು ನಿಮಿಷ ರೆಕಾರ್ಡ್ ಮಾಡಿಕೊಳ್ಳುತ್ತಾಳೆ. ನಂತರ ಕಟ್ಟಿಕೊಂಡು ಬಂದಿದ್ದ ಬುತ್ತಿಯನ್ನು ಸೋಲಿಗರಾದ ಸಹಾಯಕ ನಂಜೇಗೌಡ ಹಾಗೂ ಡ್ರೈವರ್ ಜಡೇಸ್ವಾಮಿಯೊಂದಿಗೆ ಹಂಚಿಕೊಂಡು ಕಾಡಿನಲ್ಲಿ ಸಿಗುವ ಎಲೆಯನ್ನೇ ತಟ್ಟೆಮಾಡಿಕೊಂಡು ತಿನ್ನುತ್ತಾಳೆ. ನಂತರ ಇನ್ನೊಂದು ಜಾಗದಲ್ಲಿ ಶೋಧ.
ಇಲ್ಲೇ ಸ್ಟಡಿ ಯಾಕೆ?
ಕರ್ನಾಟಕದ ಪಶ್ಚಿಮಘಟ್ಟದ ಬಹುತೇಕ ಕಡೆಗಳಲ್ಲಿ ಡ್ರೋಂಗೋ ಕಾಣಸಿಗುತ್ತದೆ. ಬಿಳಿಗಿರಿರಂಗನಬೆಟ್ಟದಲ್ಲಿ ಕಡಿಮೆಯೆಂದರೂ 250 ಜಾತಿಯ ಹಕ್ಕಿಗಳಿವೆ. ಬಿಆರ್ ಹಿಲ್ಸ್, ಹೊನ್ನಾವರ, ಬಂಡೀಪುರ, ದಾಂಡೇಲಿ, ಶಿರಸಿ ಕಾಡುಗಳಲ್ಲಿ ಮಾತ್ರವಲ್ಲದೆ ಸಕಲೇಶಪುರ, ಮಂಗಳೂರು ಮಾರ್ಗದಲ್ಲಿನ ನಿತ್ಯಹರಿದ್ವರ್ಣ ಕಾಡುಗಳಲ್ಲೂ ಈ ಬಾಲದ ಹಕ್ಕಿಯನ್ನು ಕಾಣಬಹುದು. ಇಂಡೋನೇಷ್ಯಾ ಹಾಗೂ ಮಲೇಷ್ಯಾ ಕಾಡಿನಲ್ಲೂ ಡ್ರೋಂಗೋದ ವಿವಿಧ ಪ್ರಭೇದಗಳುಂಟು. ಒಂದಕ್ಕೆ ಉದ್ದ ಬಾಲವಿದ್ದರೆ, ಮತ್ತೊಂದಕ್ಕೆ ಗಿಡ್ಡ ಬಾಲ. ಒಂದು ಪ್ರದೇಶದಲ್ಲಿ ಬಣ್ಣ ಒಂದು ಥರ. ಮತ್ತೊಂದರಲ್ಲಿ ಇದು ಡ್ರೋಂಗೋನ ಎಂಬ ಅನುಮಾನ!
ಡ್ರೋಂಗೋದ ಮಿಮಿಕ್ರಿಯೇ ಈಕೆಯ ಸಂಶೋಧನೆಗೆ ಪ್ರೇರಣೆ. ಈ ಹಕ್ಕಿ 38 ಬಗೆಯ ದನಿಯನ್ನು ಮಿಮಿಕ್ರಿ ಮಾಡಬಲ್ಲದು. ಒಮ್ಮೆ ಮರಕುಟುಕದ ಥರ, ಮತ್ತೊಮ್ಮೆ ಗೂಬೆ, ಹದ್ದು, ಕಾಗೆ, ದೊಡ್ಡ ಅಳಿಲು... ಡ್ರೋಂಗೋ ತನ್ನ ರಕ್ಷಣೆಗೆ ಹೆಚ್ಚಾಗಿ ಗಡಸು ಪಕ್ಷಿಗಳ ಕೂಗನ್ನು ಅನುಕರಿಸುತ್ತದೆ. ಕೇವಲ ಇದು ರಕ್ಷಣೆಗೆ ಮಾತ್ರವಲ್ಲದೆ ಆಹಾರ ಅರಸಲೂ ಅನುಕರಣೆಯನ್ನು ಬಳಸಿಕೊಳ್ಳುತ್ತದೆ. ಹದ್ದಿನ ದನಿ ಹೊರಡಿಸಿದರೆ ಬೇರೆ ಪಕ್ಷಿಗಳು ತಮ್ಮ ಆಹಾರವನ್ನು ಬಿಟ್ಟು ಹಾರಿ ಹೋಗುತ್ತವೆ ಎಂಬುದು ಇದಕ್ಕೆ ಗೊತ್ತು. ಮರಕುಟುಕದ ಮಿಮಿಕ್ರಿ ಮಾಡಿ, ಅದರೊಂದಿಗೆ ಸೇರಿಕೊಳ್ಳಬಲ್ಲದು. ಡ್ರೋಂಗೋ ಹೆಚ್ಚೆಂದರೆ 70-80 ಗ್ರಾಂ ತೂಗಬಲ್ಲದು. ಇದನ್ನು ವೀಕ್ಷಿಸಲು ದಟ್ಟ ಕಾಡಿಗೇ ಹೋಗಬೇಕು. ಇದು ಹುಲಿಗಳನ್ನು ಹೊಂದಿರುವ ಕಾಡಾಗಿರುವುದರಿಂದ ಆ ಹಕ್ಕಿಯ ಅಧ್ಯಯನವೂ ಜಟಿಲವೇ.
ಈಗ ಸಮೀರಾಗೆ ಸೋಲಿಗರ ಮನೆಯ ಊಟ ಒಗ್ಗಿಹೋಗಿದೆ. ಸುಲಲಿತ ಕನ್ನಡ, ಸುಂದರ ಪರಿಸರ ಖುಷಿಯಿಂದ ಬದುಕಲು ಇನ್ನೇನು ಬೇಕು ಎಂದು ಪ್ರಶ್ನಿಸುತ್ತಾಳೆ? ಕಾಡಿನಲ್ಲಿ ಸದ್ದಿಲ್ಲದೆ ನಡೆಯುವ ಕಲಿಕೆಗೆ ಸಂಪೂರ್ಣವಾಗಿ ಅರ್ಪಿಸಿಕೊಂಡಿದ್ದಾಳೆ. ಈಕೆಗೊಂದು ಹಲೋ ಹೇಳುವುದಾದರೆ, 9880052844 ನಂಬರುಗಳನ್ನು ಒತ್ತಿ.
- ದೇವರಾಜು ಕಪ್ಪಸೋಗೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


