ಶಿಷ್ಯರನ್ನೂ ಬೆಳಗಿಸಿದ ಸಂಗೀತ ಸೂರ್ಯ

ಆರು ಅಡಿ ಎತ್ತರ. ಒಳ್ಳೇ ಕಟ್ಟು ಮಸ್ತಾದ ಮೈಕಟ್ಟು. ತಲೆಯ ಮೇಲೆ ಸ್ವಲ್ಪ ವಾಲಿದ ಉದ್ದನೆಯ ಕಪ್ಪು ಟೋಪಿ. ತೀಕ್ಷ್ಣವಾದ ಕಣ್ಣುಗಳು. ಹೊಳೆಯುವ ಮುಖದಲ್ಲಿ ಪೊದೆ ಮೀಸೆ. ಕಪ್ಪನೆಯ ಮೊಣಕಾಲಿನವರೆಗಿನ ನಿಲುವಂಗಿಯ (ಶೇರವಾನಿ) ಮೇಲೆ ಎದೆಯ ತುಂಬಾ ಹತ್ತಾರು ಪದಕಗಳು - ರಾಜ ಠೀವಿಯ ಈ ವ್ಯಕ್ತಿ, ಓರ್ವ ಸುಗಂಧ ದ್ರವ್ಯ ಮಾರುವವನ ಬಳಿ ನಿಂತು ಅದನ್ನು ಪರೀಕ್ಷಿಸುತ್ತಿದ್ದರು. ಅವ ನಿಗೋ ಅದನ್ನು ರಾಜ ಸಭೆಗೆ ಒಯ್ದು ಮಾರಿ ಹಣ ಮಾಡುವ ತರಾತುರಿ. ಅದೇ ಭಾವನೆಯಲ್ಲಿ - 'ಅಯ್ಯೋ, ನೀವು ಸಂಗೀತಗಾರರೆಲ್ಲ ಇದನ್ನೇನು ಕೊಳ್ಳಬಲ್ಲಿರಿ? ಇವೆಲ್ಲ ರಾಜರು ಕೊಳ್ಳುವಂಥವಷ್ಟೇ...' ಎಂದುಬಿಟ್ಟ. ಆ ವ್ಯಕ್ತಿ ಒಮ್ಮೆ ಅವನನ್ನು ದಿಟ್ಟಿಸಿ ಕೇಳಿದರು- 'ನಿನ್ನ ಬಳಿ ಎಷ್ಟು ರುಪಾಯಿಯ ಸುಗಂಧ ದ್ರವ್ಯವಿದೆ?' ಅವನು ವ್ಯಂಗ್ಯವಾಗಿ ನಗುತ್ತ ಹೇಳಿದ- 'ಐದು ಸಾವಿರ ರುಪಾಯಿಗೆ ಕಡಿಮೆ ಇಲ್ಲ' ಆ ವ್ಯಕ್ತಿಯೂ ತಮ್ಮ ಪೊದೆ ಮೀಸೆಯಡಿ ವ್ಯಂಗ್ಯವಾಗಿ ನಕ್ಕು ತಮ್ಮ ನಿಲುವಂಗಿಯ ಕಿಸೆಯಿಂದ ನೋಟುಗಳನ್ನು ತೆಗೆದುಕೊಟ್ಟರು, ಐದು ಸಾವಿರ ರುಪಾಯಿಯ ಮೇಲೆ ಹತ್ತು ರುಪಾಯಿ ಹೆಚ್ಚೇ ಇತ್ತ! ಅವಾಕ್ಕಾಗಿ ಅವರನ್ನೇ ನೋಡುತ್ತ ನಿಂತಿದ್ದ ಅವನ ಬಳಿ ಇರುವ ಎಲ್ಲ ಬಾಟಲಿಗಳನ್ನೂ ತೆಗೆದುಕೊಂಡರು. ಅಷ್ಟೇ ಅಲ್ಲ, ಅವನೆದುರೇ ಆ ಎಲ್ಲ ಸುಗಂಧ ದ್ರವ್ಯ ಬಾಟಲಿಗಳ ಮುಚ್ಚಳ ತೆಗೆದು ಅವನ್ನೆಲ್ಲ ತಾವು ಕಾಲಿಗೆ ಹಾಕಿಕೊಂಡಿದ್ದ ಚಪ್ಪಲಿಗೆ ಅಭಿಷೇಕ ಮಾಡಿಬಿಟ್ಟರು.
ಮೊದಲೇ ಪೆಚ್ಚಾಗಿದ್ದವ ಇದನ್ನು ನೋಡಿ ಇಂಗು ತಿಂದ ಮಂಗನಂತೆ ನಿಂತಿದ್ದಾಗ ಅವನ ಬಳಿ ಸಾರಿ ಹೇಳಿದರು- 'ಇನ್ನೊಮ್ಮೆ ಸಂಗೀತಗಾರರೆಂದರೆ ಯಾರು ಎಂಬುದನ್ನು ತಿಳಿದು ಮಾತನಾಡು. ಅಷ್ಟಕ್ಕೂ ಸ್ವರಗಳ ಸುಗಂಧವನ್ನು ಅನುಭವಿಸುವ ನಮ್ಮ ಯೋಗ್ಯತೆ ನಿನಗೆಲ್ಲಿ ತಿಳಿಯಬೇಕು?'
ಇವರೇ ಉಸ್ತಾದ್ ಫಯಾಜ್ ಖಾನ್. ಸಂಗೀತ - ಸಂಗೀತಗಾರ ಎಂಬ ವಿಷಯ ಬಂದಾಗ ಅಂಥ ಆತ್ಮ ಸಮ್ಮಾನ - ಅಭಿಮಾನ - ಸಂಗೀತದ ಬಗೆಗಿನ ಹೆಮ್ಮೆಗೆ ಹೆಸರಾದ ಈ ಮಹಾನ್ ಗಾಯಕ ಹೃದಯ ವೈಶಾಲ್ಯತೆಯ ವಿಷಯ ಬಂದಾಗ ಅಷ್ಟೇ ಮೃದು. ಇಡೀ ಜೀವಮಾನದಲ್ಲಿ ತಮಗೆ ಎಷ್ಟು ಬಿದಾಗಿ ಕೊಡುತ್ತಿದ್ದರೆಂದು ಒಮ್ಮೆಯೂ ನೋಡದ ವ್ಯಕ್ತಿ. ತಮ್ಮ ಸಂಗೀತದಿಂದ ಭರತ ಖಂಡವನ್ನೇ ಆಳಿದರೂ ಸದಾ ಸಂಗೀತದ ಸೇವಕನಂತೆ ಬದುಕಿದ ಮಹಾನ್ ಕಲಾವಿದ. ಎಷ್ಟೋ ಸಲ ಅವರ ಶೇರವಾನಿಯನ್ನು ಒಗೆಯುವ ಧೋಬಿಗೆ ಸಾವಿರ ಸಾವಿರ ರೂಪಾಯಿಗಳು ಅವರ ಕಾರ್ಯಕ್ರಮದ ಶೇರವಾನಿಯ ಕಿಸೆಯಲ್ಲಿ ಸಿಕ್ಕುತ್ತಿತ್ತಂತೆ!
1886ರಲ್ಲಿ ಅಗ್ರಾದ ಬಳಿಯ ಸಿಕಂದರಾಬಾದ್ನಲ್ಲಿ ಜನಿಸಿ ತಮ್ಮ ಅಜ್ಜ ಉಸ್ತಾದ್ ಗುಲಾಮ್ ಅಬ್ಬಾಸ್ ಖಾನರ ಬಳಿ 25 ವರ್ಷ ಸಂಗೀತದ ಅಪಾರ ಸಾಧನೆ ಮಾಡಿ ಇಡೀ ಭಾರತವನ್ನು ತಮ್ಮ ಸಂಗೀತದಿಂದ ಸೂರೆಗೊಂಡವರು ಉಸ್ತಾದ್ ಫಯಾಜ್ ಖಾನ್. ಆಗ್ರಾ ಘರಾಣೆ ಎಂದರೆ ಉಸ್ತಾದ್ ಫಯಾಜ್ ಖಾನ್ ಎಂಬಷ್ಟು ಇವರು ಆ ಘರಾಣೆಗೆ, ತನ್ಮೂಲಕ ಶಾಸ್ತ್ರೀಯ ಸಂಗೀತ ಕ್ಷೇತ್ರಕ್ಕೆ ಅಮೂಲ್ಯ ಕೊಡುಗೆ ನೀಡಿದ್ದಾರೆ.
ಉಸ್ತಾದರಿಗೂ ಕರ್ನಾಟಕಕ್ಕೂ ಮಹತ್ವದ ನಂಟು. ಮೈಸೂರಿನ ಮಹಾರಾಜರ ಅತ್ಯಂತ ಇಷ್ಟದ ಗಾಯಕರಾಗಿದ್ದ ಇವರು ಬರದೇ ಮೈಸೂರಿನ ಸಂಗೀತದ ದರಬಾರು ನಡೆಯುತ್ತಲೇ ಇರಲಿಲ್ಲ ಎನ್ನಬಹುದು. ಮೈಸೂರಿನ ಮಹಾರಾಜರೇ ಇವರಿಗೆ 'ಅಫ್ತಾಬ್-ಏ-ಮೌಸಿಕೀ' ಎಂದರೆ 'ಸಂಗೀತದ ಸೂರ್ಯ' ಎಂಬ ಬಿರುದನ್ನು ನೀಡಿ ಸನ್ಮಾನಿಸಿದ್ದರು.
ಕೇವಲ ತಾವು ಸೂರ್ಯನಂತೆ ಬೆಳಗಿದ್ದಲ್ಲದೆ ಹಲವಾರು ಶಿಷ್ಯರನ್ನೂ ಶ್ರದ್ಧೆಯಿಂದ ತಯಾರು ಮಾಡಿದ ಉಸ್ತಾದರು ಮಹಾನ್ ಸಂಗೀತ ಗುರುಗಳೂ ಹೌದು. ನಮ್ಮ ಹತ್ತಿರದ ಶಿರಸಿಯಲ್ಲಿ ಸಂಗೀತದ ಋಷಿಯಂತೆ ಬದುಕಿ ಇತ್ತೀಚೆಗೆ ಕಾಲವಾದ ಪಂಡಿತ್ ಜಿ.ಎಸ್.ಹೆಗಡೆ ಬೆಳ್ಳೇಕೇರಿ, ಬೆಂಗಳೂರಿನಲ್ಲಿದ್ದು ದೇಶಾದ್ಯಂತ ಪ್ರಸಿದ್ಧಿ ಪಡೆದಿದ್ದ ಪಂಡಿತ್ ರಾಮ್ ರಾವ್ ನಾಯಕ್ ಮೊದಲಾದವರೆಲ್ಲ ಇವರ ಶಿಷ್ಯರೇ. ಅವರ ಶಿಷ್ಯರಾದ ಪಂಡಿತ್ ರತಲ್ ಜನಕರ್ ಅವರ ಶಿಷ್ಯ ಪರಂಪರೆಯಲ್ಲಿ ಪಂ.ಎಸ್.ಸಿ.ಆರ್ ಭಟ್, ಪಂ.ಕೆ.ಜಿ.ಗಿಂಡೆ, ಪಂ. ದಿನಕರ್ ಕಾಯ್ಕಿಣಿ ಇನ್ನೂ ಅನೇಕ ಸಂಗೀತ ದಿಗ್ಗಜರು ಆಗಿ ಹೋಗಿದ್ದಾರೆ. ಪಂ. ಇಂದುಧರ್ ನಿರೋಡಿ ಅವರು ನಮ್ಮ ನಡುವೆ ಇದ್ದು ಈ ಘರಾಣೆಯನ್ನು ಬೆಳೆಸುತ್ತಿದ್ದಾರೆ. ಉಸ್ತಾದ್ ಫಯಾಜ್ ಖಾನರ ಶಿಷ್ಯ ಉಸ್ತಾದ್ ಖಾದಿಂ ಉಸ್ಸೇನ್ ಖಾನ್ ಅವರ ಶಿಷ್ಯ ಪರಂಪರೆ ಪಂಡಿತಾ ಲಲಿತ್ ಜಿ.ರಾವ್ ಅವರವರೆಗೂ ಬಂದು ಮುಂದುವರಿಯುತ್ತಿದೆ.
ಇಂಥ ಮಹತ್ವದ ಆಗ್ರಾ ಘರಾಣೆಯ ಗಾಯಕರ ವಿದ್ವತ್ತು - ಸಾಧನೆಯ ಕುರಿತು ಪಂ.ಭೀಮಸೇನ್ ಜೋಶಿಯವರು ಹೀಗೆ ಉದ್ಗರಿಸಿದ್ದರಂತೆ - 'ಆಗ್ರಾ ಘರಾಣೆಯ ಗಾಯಕರೆಂದರೆ ಅವರು ಹಾಡುವವರ ಗುರುಗಳು'.
-ಶ್ರುತಿ ಭಟ್
shrutikbhat@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


