

ನಾಡಿನ ಹಿರಿಯ ಕವಿ, ಚನ್ನವೀರ ಕಣವಿ ಅವರಿಗೆ 85 ಸಂವತ್ಸರಗಳು ತುಂಬಿದವು. ಈ ಸಂಬಂಧ ಬೆಂಗಳೂರಿನ ಗುರು ರಾಘವೇಂದ್ರ ಸಂಗೀತ ಅಕಾಡೆಮಿ 'ಭಾವಾಮೃತ' ಕಾರ್ಯಕ್ರಮ ಏರ್ಪಡಿಸಿ, ಅವರನ್ನು ಸನ್ಮಾನಿಸುತ್ತಿದೆ. ಜು.28ರಂದು ಸಂಜೆ 6ಕ್ಕೆ, ಕೆ.ಆರ್. ರಸ್ತೆಯ ಗಾಯನ ಸಮಾಜದಲ್ಲಿ ಕಾರ್ಯಕ್ರಮವಿದೆ. ಈ ಹಿನ್ನೆಲೆಯಲ್ಲಿ 'ಭಾವಜೀವಿ'ಯ ನುಡಿಮುತ್ತುಗಳನ್ನು ಇಲ್ಲಿ ಪೋಣಿಸಲಾಗಿದೆ...
ವಿಮರ್ಶೆಯನ್ನು ಪ್ರಯೋಗಿಸುತ್ತಲೇ ತಮ್ಮೊಳಗೆ ಕಾವ್ಯ ಪ್ರಕಾರವನ್ನು ಪೋಷಿಸಿದವರು ಚನ್ನವೀರ ಕಣವಿಯವರು. ಅನುಭವವನ್ನು ನಿಷ್ಠುರವಾಗಿ ಶೋಧಿಸುತ್ತಾ, ಮಾನವಧರ್ಮ- ವ್ಯಕ್ತಿತ್ವ ನಿರ್ಮಾಣದ ಹಂಬಲಗಳನ್ನು ಕಾವ್ಯದೊಡಲಿಗೆ ತುಂಬುತ್ತಾ ಕನ್ನಡದ ಕನ್ನಡಿಯೊಳಗೆ ತಮ್ಮದೇ ವಿಶಿಷ್ಟ ಪ್ರತಿಫಲನ ಸೃಷ್ಟಿಸಿದವರು.
ನನಗೆ ಮೊಟ್ಟ ಮೊದಲ ಬಾರಿಗೆ ಕಣವಿಯವರ ಪರಿಚಯವಾಗಿದ್ದು 'ವಿಶ್ವವಿನೂತನ ವಿದ್ಯಾಚೇತನ ಸರ್ವ ಹೃದಯ ಸಂಸ್ಕಾರಿ' ಗೀತೆಯನ್ನು ಸಮೂಹಗಾನವಾಗಿ ಹತ್ತನೇ ತರಗತಿಯಲ್ಲಿ ಎದೆಯುಬ್ಬಿಸಿ ಹಾಡುವಾಗ. ಅದೇ ಚೇತೋಹಾರಿ ಆವೇಶದೊಂದಿಗೆ ಅವರು ಮೊನ್ನೆ ಸಿಕ್ಕಾಗ ಮಾತನಾಡಿಸಿದೆ. ಹಿರಿತನದ ಹಿರಿಮೆಯನ್ನು ಲವಲೇಶವೂ ತೋರ್ಪಡಿಸದೆ, ಕನ್ನಡನಾಡು ನುಡಿ, ಸಾಹಿತ್ಯ- ಸಂಸ್ಕೃತಿಯ ಬಗ್ಗೆ ತುಂಬು ಮನಸ್ಸಿನಿಂದ ಹರಟಿದರು.
--
'ವಿಶ್ವವಿನೂತನ...'ವೆಂಬ ಕನ್ನಡ ದೇವಿಯ ಗೀತೆ ರಚಿಸಿದ ಸಂದರ್ಭ, ಅದಕ್ಕೆ ಬಂದ ಪ್ರತಿಕ್ರಿಯೆಯ ಪ್ರವಾಹ ಹೇಗಿತ್ತು?
ಡಿ.ಸಿ. ಪಾವಟೆಯವರು ವೈಸ್ ಚಾನ್ಸೆಲರ್ ಆಗಿದ್ದಾಗ (1952), ಘಟಿಕೋತ್ಸವದ ಸಂದರ್ಭದಲ್ಲಿ ನಮ್ಮ ನಾಡಿನ ಕಲೆ ಸಂಸ್ಕೃತಿ ಸಾಹಿತ್ಯ, ಸೃಷ್ಟಿ ಎಲ್ಲದರ ಸಾರ ಬರುವಂಥ ಒಂದು ಹಾಡು ಬೇಕೆಂದು ಕೇಳಿದ್ದರು. ನಾನು ಆ ಹಾಡನ್ನು ರಚಿಸಿ ನಾಲ್ಕೈದು ದಿನಗಳ ನಂತರ ಅವರಿಗೆ ತೋರಿಸಿದೆ. ಅವರು ಬಹಳ ಮೆಚ್ಚಿದ್ದರು. ಅದೇ ವರ್ಷ ಧಾರವಾಡದಲ್ಲಿ ಆಕಾಶವಾಣಿಯೂ ಆರಂಭವಾಗಿತ್ತು. ಶಾರದಾ ಹಾನಗಲ್ ಎಂಬವರು ಗಂಗೂಬಾಯಿ ಹಾನಗಲ್ ಅವರ ಸಂಬಂಧಿಕರು, ಕರ್ನಾಟಕ ವಿವಿಯ ಮ್ಯೂಸಿಕ್ ವಿಭಾಗದ ಮುಖ್ಯಸ್ಥರಾಗಿದ್ದರು. ಅವರೇ ಅದಕ್ಕೆ ಹಿಂದೂಸ್ತಾನಿ ಸಂಗೀತ ರಾಗ ಸಂಯೋಜಿಸಿದರು. ಎಸ್.ಕೆ. ನಾರಾಯಣ್ ಅವರು ಇದನ್ನು ರೇಡಿಯೋಗಾಗಿಯೇ ಹಾಡಿದರು. ಅಲ್ಲಿ ಸಮಯದ ಕಟ್ಟಳೆ ಇರುವುದರಿಂದ ಅವರು ನಾಲ್ಕು ಸಾಲುಗಳನ್ನು ಕೈಬಿಟ್ಟಿದ್ದರು. ಇದು ಹೆಚ್ಚಿನ ಜನರಿಗೆ ಗೊತ್ತೇ ಇಲ್ಲ.
'ಪಂಪ ರನ್ನ ನೃಪತುಂಗ ಹರಿಶ್ವರ ರಾಘವಾಂಕ ಸರ್ವಜ್ಞ ಪುರಂದರ ಕುವರವ್ಯಾಸ ರತ್ನಾಕರ ಜನಪದ ಕಾವ್ಯ ಸಮುದ್ರ ವಿಹಾರಿ.
ಸಾಯಣ ವಿದ್ಯಾರಣ್ಯ ಭಾಸ್ಕರ ಮಹಾದೇವಿ ಮುಕ್ತಾಯಿ ಮಹಂತರ
ಕಂತಿ ಹಂಪ ಸುಮನೋರಮೆ ಮುದ್ದಣ ಸರಸ ಹೃದಯ ಸಂಚಾರಿ'
ಧಾರವಾಡದ ಸುತ್ತಮುತ್ತಲೆಲ್ಲಾ ಈ ನಾಲ್ಕೂ ಸಾಲುಗಳನ್ನೂ ಈಗಲೂ ಸೇರಿಸಿಯೇ ಹಿಂದೂಸ್ತಾನಿ ಓಘದಲ್ಲಿ ಹಾಡುತ್ತಾರೆ. ಆದರೆ ಇತ್ತ ಕಡೆಯೆಲ್ಲಾ ಸುಗಮ ಸಂಗೀತದ ರಾಗದಲ್ಲಿ ಬಿಡಿಬಿಡಿಯಾಗಿ ಹಾಡುವುದೇ ಹೆಚ್ಚು. ಎರಡು ರೀತಿಗಳೂ ನನಗೆ ಪ್ರಿಯವೇ ಆದರೂ, ಹಿಂದೂಸ್ತಾನಿ ಓಘದಲ್ಲಿ ಪೂರ್ಣವಾದ ಅರ್ಥ ಕೊಡುವಲ್ಲಿ ಯಶಸ್ವಿಯಾಗಿದೆ. ಯಾವುದೇ ಹಾಡನ್ನು ಎರಡು ಸಾಲು ಬಿಟ್ಟರೂ, ಅದರ ಪೂರ್ಣತೆ ಅಥವಾ ಕವಿಯ ಭಾವ ವ್ಯಕ್ತವಾಗುವಲ್ಲಿ ಹಿನ್ನಡೆಯಾಗಬಹುದೆಂಬ ಕಾರಣಕ್ಕೆ ಇದನ್ನು ಸರಿಪಡಿಸುವುದು ಉತ್ತಮ ಎನ್ನುವುದು ನನ್ನ ಭಾವನೆ. 1966ರಲ್ಲಿ ಧಾರವಾಡ ವಿವಿ, ಕುವೆಂಪು ಅವರಿಗೆ ಗೌರವ ಡಾಕ್ಟರೇಟ್ ನೀಡಿದ ಸಂದರ್ಭದಲ್ಲಿ ಅವರಿಗಾಗಿಯೇ ವಿಶೇಷ ಘಟಿಕೋತ್ಸವ ಏರ್ಪಡಿಸಲಾಗಿತ್ತು. ಈ ಹಾಡನ್ನು ಸಾಮೂಹಿಕ ಗೀತೆಯಾಗಿ ಸಭೆಯಲ್ಲಿ ಹಾಡಲಾಗಿತ್ತು. ಕುವೆಂಪುಅವರನ್ನು ನೋಡಲು ನಾನು ನನ್ನ ಗುರುಗಳಾದ ಪ್ರೊ. ಮಾವಾಡರೊಂದಿಗೆ ಅತಿಥಿ ಗೃಹಕ್ಕೆ ಹೋಗಿದ್ದೆ. ಕುವೆಂಪು ನನ್ನನ್ನು ಬಳಿಗೆ ಕರೆದು, 'ಈ ಹಾಡು ಕೇಳಿ ರೋಮಾಂಚನವಾಯಿತು' ಎಂದರು.
ಇತ್ತೀಚೆಗೆ ಧಾರವಾಡದಲ್ಲಿ ನಡೆದ ಸುಗಮ ಸಂಗೀತೋತ್ಸವದಲ್ಲಿ ಆ ವೇದಿಕೆಗೂ ನನ್ನ ಹೆಸರಿಟ್ಟಿದ್ದರು. ಸುಪ್ರಸಿದ್ಧ ಗಾಯಕರೆಲ್ಲ ನೆರೆದಿದ್ದ ಅಪರೂಪದ ಕಾರ್ಯಕ್ರಮವದು. ಅಂದಿನ ಬೆಳಗಿನ ಕಾರ್ಯಕ್ರಮ ಮುಕ್ತಾಯಗೊಳ್ಳುವಾಗ, ಈ ಗೀತೆಯನ್ನು ಸಾಮೂಹಿಕವಾಗಿ ಎದ್ದು ನಿಂತು ಹಾಡಿದ್ದನ್ನು ನಾನು ಮರೆಯಲು ಸಾಧ್ಯವೇ ಇಲ್ಲ. ದೆಹಲಿ ಆಕಾಶವಾಣಿಯಲ್ಲೂ ಈ ಹಾಡು ಲೆಕ್ಕವಿಲ್ಲದಷ್ಟು ಸಲ ಪ್ರಸಾರವಾಗಿದೆ. 'ಡಿಡಿ-9' ಇದೇ ಹಾಡಿನೊಂದಿಗೇ ಆರಂಭವಾಯಿತು.
ವಿದ್ಯಾರ್ಥಿ ದಿಸೆಯಲ್ಲಿಯೇ ಬರೆಯಲು ಶುರುವಿಟ್ಟಿರಿ. ಅಂದು ಸಿಕ್ಕ ಪ್ರೋತ್ಸಾಹ ನಿಮ್ಮನ್ನು ಬೆಳೆಸಿತೇ?
20- 4- 1989ರಲ್ಲಿ ನಾನು ಜೂನಿಯರ್ ಬಿಎ ಓದುತ್ತಿದ್ದೆ. ಆಗ ನನ್ನ ಮೊದಲ ಕವನ ಸಂಕಲನ 'ಕಾವ್ಯಾಕ್ಷಿ'ಗೆ ಬೇಂದ್ರೆಯವರು ಮುನ್ನುಡಿ ಬರೆದಾಗ ನಾನು ಅವರಿಗೆ ಅಪರಿಚಿತನಾಗಿದ್ದೆ.
ಬೇಂದ್ರೆಯ ಮಾತಿನಲ್ಲಿ 'ಅವರ ಒಳ್ಗುರಿಗೆ ಕಾವ್ಯಾಕ್ಷಿ ಒಳದನಿಗಳು. ಒಳಿತಿನ ಶಕ್ತಿಯನ್ನು ರೂಪಿಸುವಲ್ಲಿ ಸಾರ್ಥಕತೆಯನ್ನು ಕಾಣಲು ತವಕಿಸುತ್ತವೆ. ಚೆನ್ ಬೆಳಕಿನಲ್ಲಿ ಅವರ ನಿರ್ಮಲ ಹೃದಯಾಕೃತಿಯು ಮೂಡಿದೆ. ಅವರ ಸ್ಫೂರ್ತಿ ಗೀತವು ಸಾಕಾರವಾಗಿ ನೆಲಕ್ಕಿಳಿದಾಗ, ನಾಡಿನ ಜನರೂ ಎತ್ತರಕ್ಕೇರುವುದರಲ್ಲಿ ಸಂಶಯವಿಲ್ಲ' ಎಂದು ಬರೆದಿದ್ದಾರೆ. ಆಗ ಮುಖ ನೋಡದೆ ಇದ್ದರೂ ಸಾಹಿತ್ಯಾಸಕ್ತರನ್ನು ಮನೆಯವರಂತೆ ಪ್ರೀತಿಯಿಂದ ಎಲ್ಲರೂ ಬೆಳೆಸುತ್ತಿದ್ದರು.
ಇದಾದ ಕೆಲವು ತಿಂಗಳ ನಂತರ ಬೇಂದ್ರೆ, ಎನ್.ಕೆ. ದೀಕ್ಷಿತರ ಮನೆಯಲ್ಲಿ ತಂಗಿದ್ದರು. ಆಗ ಪ್ರತ್ಯೇಕವಾಗಿ ಅವರ ಭೇಟಿಯಾಯಿತು. ಎರಡನೇ ಕವನಸಂಕಲನ 'ಭಾವಜೀವಿ'ಗೆ ಗೋಕಾಕರು ಮುನ್ನುಡಿ ಬರೆದುಕೊಟ್ಟರು. ಮುಂದೊಮ್ಮೆ ಸು.ರಂ. ಎಕ್ಕುಂಡಿ, ನರಸಿಂಹಸ್ವಾಮಿ ಮುಂತಾದ ಹಿರಿಯ ಸಾಹಿತಿಗಳೆಲ್ಲಾ ನೆರೆದಿದ್ದಂಥ ಸಂದರ್ಭದಲ್ಲಿ ನಾನೂ ಕವಿಗೋಷ್ಠಿಯಲ್ಲಿ ಪಾಲ್ಗೊಂಡಿದ್ದೆ. ಆಗ ಮಾಸ್ತಿಯವರು ಎಲ್ಲಾ ಕವಿಗಳನ್ನು ವೈಯಕ್ತಿಕವಾಗಿ ಆಯಾ ಯುವಕವಿಯ ಪರಿಚಯ ಹೇಳಿಕೊಂಡೇ ವೇದಿಕೆಗೆ ಬರಮಾಡಿಸುತ್ತಿದ್ದರು. ಹಾಗೆಯೇ ನನ್ನನ್ನು ಕರೆಯುವಾಗ, ವೃತ್ತಪತ್ರಿಕೆಯಲ್ಲಿ ಪ್ರಕಟವಾದ ನನ್ನದೊಂದು ಮಗುವನ್ನು ಕುರಿತ ಕವನವನ್ನು ನೆನಪಿಸಿಕೊಂಡು ಹೇಳಿ ಕರೆದರು. ಆಗ ನನಗೆ ನಿಜವಾಗಿಯೂ ವಿಸ್ಮಯವಾಯಿತು. ಎಂದೋ ಪ್ರಕಟವಾಗಿದ್ದ ಕವಿತೆಯನ್ನು ನೋಡಿ ಅವರು ನೆನಪಿಟ್ಟುಕೊಂಡಿದ್ದರು. ನಮ್ಮಲ್ಲಿನ ಕಾವ್ಯದ ಹೊಳಹನ್ನು ದೊಡ್ಡ ದೊಡ್ಡ ಘಟಾನುಘಟಿಗಳಾದ ಹಿರಿಯ ಕವಿಗಳು ಗುರುತಿಸಿ ಪೋಷಿಸಿದರು. ಅದು ನನ್ನ ಸೌಭಾಗ್ಯವೇ ಸರಿ. 'ಆನಂದಕಂದ' (ಬೆಟಗೆರೆ ಕೃಷ್ಣಶರ್ಮ) ಅವರ 'ಜಯಂತಿ ಪತ್ರಿಕೆ', 'ಜಯಕರ್ನಾಟಕ', 'ಜೀವನ' ಮುಂತಾದ ಪತ್ರಿಕೆಗಳೆಲ್ಲವೂ ಹಿರಿಯ ಸಾಹಿತಿಗಳ ಸಾರಥ್ಯ ಹೊಂದಿದ್ದು, ಸಾಹಿತ್ಯಾಸಕ್ತರಿಗೆ, ಬರೆಯುವ ಯುವಮನಸ್ಸುಗಳಿಗೆ ವೇದಿಕೆಗಳಾಗಿದ್ದವು.
ನೀವು ರೇಡಿಯೋಪ್ರಿಯರು. ನಿಮ್ಮ ಮರೆಯಲಾರದ ರೇಡಿಯೋ ಕಾರ್ಯಕ್ರಮ?
'ನೆನಪಿನಂಗಳ' ಕಾರ್ಯಕ್ರಮ. 50 ವರ್ಷಗಳ ಹಿಂದೆ ಪ್ರಸಿದ್ಧವಾಗಿದ್ದ ಭಾವಗೀತೆಗಳನ್ನು ಮರಳಿ ಆ ಗೀತೆ ಹುಟ್ಟಿದ ಸಂದರ್ಭ, ಹಾಡಿಸಿದ ಸಂದರ್ಭ, ಕೇಳಿದ ಮೊದಲಿಗರ ಪ್ರತಿಕ್ರಿಯೆ ಮುಂತಾದವುಗಳನ್ನು ನೆನಪಿಗೆ ತರಿಸುವ ವಿಶೇಷ ಕಾರ್ಯಕ್ರಮವನ್ನು ಅನುರಾಧಾ ಧಾರೇಶ್ವರ್ ಆರಂಭಿಸಿದರು. ಇವರು ನನ್ನ ಹೆಚ್ಚಿನ ಹಾಡುಗಳಿಗೆಲ್ಲಾ ರಾಗಸಂಯೋಜಿಸಿ ಹಾಡಿದ್ದಾರೆ. 'ಋತುಗೀತ', 'ತಿಂಗಳ ಹಾಡು' ಕಾರ್ಯಕ್ರಮಗಳಲ್ಲಿ ತಿಂಗಳಿಡೀ ನನ್ನ ಭಾವಗೀತೆಗಳು ಪ್ರಸಾರವಾಗಿದ್ದುಂಟು. ಇಂಥದ್ದೊಂದು ಕಾರ್ಯಕ್ರಮದಲ್ಲಿ ನನ್ನದೊಂದು ಹಾಡು, 'ಬಾ ಮಲ್ಲಿಗೆ, ಬಾ ಮೆಲ್ಲಗೆ'ಯನ್ನು ವಿವರಿಸಿದ್ದು ನನ್ನ ನೆನಪಿನಲ್ಲಿ ಹಸಿರಾಗಿದೆ. ಈ ಕಾರ್ಯಕ್ರಮ ಪ್ರತಿ ಭಾನುವಾರ ಬೆಳಗ್ಗೆ 8.35ಕ್ಕೆ ಪ್ರಸಾರವಾಗುತ್ತದೆ, ಧಾರವಾಡ ಕೇಂದ್ರದಿಂದ ಪ್ರಸಾರವಾದರೂ ಎಲ್ಲಾ ಬಾನುಲಿ ಕೇಂದ್ರಗಳೂ ಮರುಪ್ರಸಾರ ಮಾಡುತ್ತವೆ ಎಂಬುದು ಮತ್ತೊಂದು ವಿಶೇಷ. ರೇಡಿಯೋ ಕೇಂದ್ರದಲ್ಲಿ ಎಚ್.ಕೆ. ರಂಗನಾಥ್, ಯಮುನಾ ಮೂರ್ತಿ, ವಾಮನ, ಎಂ. ಶಂಕರ್, ಮಾಸ್ತಿಯವರ ಮಗಳು ಪಂಕಜಾ, ವನಮಾಲ ಆಚಾರ್ಯ ಮುಂತಾದವರೆಲ್ಲಾ ಇದ್ದರು. ಎಲ್ಲರೂ ಸಾಹಿತ್ಯದ ಬೆಳವಣಿಗೆಗೆ ಸಾಕಷ್ಟು ಒತ್ತುಕೊಟ್ಟು ಕೆಲಸ ಮಾಡಿದರು. ನಂತರದಲ್ಲಿ ಜಿ.ವಿ. ಅತ್ರಿಯವರು 'ಮಲ್ಲಿಗೆ ದಂಡೆ' ಎಂಬ ಕ್ಯಾಸೆಟ್ ಹೊರತಂದರು.
ನಿಮ್ಮ ಮಿತ್ರರ ಟೀಂ ಕಾವ್ಯಾನುಭವ ಮಂಟಪದ ಅನುಭವದ ಫಲಿತಾಂಶ ಹೇಗಿತ್ತು?
ಶಂಕರ ಮೊಕಾಶಿ ಪುಣೇಕರ, ಶಿವೇಶ್ವರ ದೊಡ್ಡಮನಿ (ಜಾನಪದ ಸಂಗ್ರಹದಲ್ಲಿ ತೊಡಗಿದ್ದವರು), ಕೀರ್ತಿನಾಥ ಕುರ್ತಕೋಟಿ, ವಸಂತ ಕವಲಿ ಮುಂತಾದವರೆಲ್ಲಾ ಒಂದೇ ಕೋಣೆಯಲ್ಲಿ ವಾಸವಿದ್ದೆವು. ನಾವು ಬರೆದದ್ದನ್ನು ಪರಸ್ಪರ ಓದಿಕೊಂಡು ಸಂತಸ ಹಂಚಿಕೊಳ್ಳುತ್ತಿದ್ದೆವು. ಯಾವುದೇ ಕವನ ಪತ್ರಿಕೆಯಲ್ಲಿ ಪ್ರಕಟವಾದರೆ ಸಾಕು, 'ನಿನ್ನ ಕವನ ಬಂದೈತಲ್ಲಾ, ಚಹಾ ಕೊಡಿಸು ಬಾ' ಎಂದು ದುಂಬಾಲು ಬೀಳುತ್ತಿದ್ದೆವು. ನಮ್ಮಲ್ಲಿ ಆರೋಗ್ಯಕರ ಚರ್ಚೆಗಳು ಇರುತ್ತಿದ್ದವು. ಒಂದರ್ಥದಲ್ಲಿ ಒಬ್ಬರನ್ನೊಬ್ಬರು ತಿದ್ದಿಕೊಂಡು ಚರ್ಚಿಸುತ್ತಿದ್ದೆವು. ಸ್ನೇಹದೊಂದಿಗೆ ಸಾಹಿತ್ಯ ಬೆಳೆಯುತ್ತಾ ಹೋಯಿತು. ಬಸವಣ್ಣನವರದ್ದು ಅನುಭವ ಮಂಟಪ, ನಮ್ಮದು 'ಕಾವ್ಯಾನುಭವದ ಮಂಟಪ'.
ಧಾರವಾಡ ನಿಮ್ಮ ಬದುಕಿನಲ್ಲಿ ಹಾಸುಹೂಕ್ಕಾದ ಬಗೆ?
ವಿಧ್ಯಾವರ್ಧಕ ಸಂಘ, ಸಾಧನ ಕೇರಿ ಇವೆಲ್ಲಾ ನಮ್ಮ ಬದುಕಿನಲ್ಲಿ ಸದಾ ಹಸಿರು. ನಾನು ಹೈಸ್ಕೂಲಿನಲ್ಲಿದ್ದಾಗ ಧಾರವಾಡಕ್ಕೆ ಬಂದೆ. ಮತ್ತೆ ಬಿಎ, ಎಂಎ, ನಂತರ ವೃತ್ತಿ ಕೂಡ ಧಾರವಾಡದಲ್ಲೇ. ಇಲ್ಲಿನ ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಪರಿಸರದಲ್ಲಿ ನನ್ನ ಸೇವೆ ಪೂರಕವಾಗಿ ನಡೆದುಬಂದಿದೆ. ಸಾಮಾನ್ಯವಾಗಿ ಇವತ್ತಿಗೂ ಎಲ್ಲರಿಗೂ ಧಾರವಾಡ ಪ್ರಿಯ. ಗೋವಿಂದಪೈ, ಅನಕೃ, ನಾರಾಯಣ ರಾಯರು, ಮಲ್ಲಿಕಾರ್ಜುನ ಮನ್ಸೂರ್, ಗಂಗೂಬಾಯಿ ಹಾನಗಲ್, ರಾಜಗುರು, ಗಂಗೂಬಾಯಿಯವರ ಮಗಳು ಕೃಷ್ಣಾ ಹಾನಗಲ್, ಭೀಮಸೇನ ಜೋಷಿ- ಹೀಗೆ ಸಾಧಕರ ದಂಡೆ ಧಾರವಾಡದಲ್ಲಿ ನೆಲೆಸಿದೆ. ಮಲ್ಲಿಕಾರ್ಜುನ ಮನ್ಸೂರರಿಗೆ ವಚನಗಳನ್ನು ಹಾಡಲು ಪ್ರೇರಕರಾದವರು ರಾಜಗುರು. ಧಾರವಾಡ ಸಾಂಸ್ಕೃತಿಕ ಮತ್ತು ಸಂಗೀತದ ನೆಲ.
ಧರ್ಮಪತ್ನಿ ಶಾಂತಾದೇವಿ ಕಣವಿ ನಿಮಗೆ ಒಲಿದಿದ್ದು ಹೇಗೆ?
1983ರಲ್ಲಿ ನಾನು ವಿವಾಹವಾದೆ. ಉತ್ತಮ ಲೈಬ್ರರಿ ಹೊಂದಿದ್ದ ಮನೆ ಎಂದು ನನಗೆ ಅವರ ವಿಳಾಸವನ್ನು ಹಿರಿಯ ಕವಿಗಳೊಬ್ಬರು ನೀಡಿ, ಭೇಟಿಮಾಡಲು ತಿಳಿಸಿದ್ದರು. ಪರಿಚಯವಾಯಿತು, ಶಾಂತಾದೇವಿ ಮಾಳವಾಡ ಇವರ ದೊಡ್ಡಮ್ಮನ ಮಗಳಾಗಬೇಕು. ಸಾಹಿತಿಗಳ ದೊಡ್ಡ ದಂಡೇ ಇವರ ಮನೆಗೆ ಬಂದು ಹೋಗುತ್ತಿದ್ದುದು ನನಗೆ ಗೊತ್ತಿತ್ತು. ಇಬ್ಬರಿಗೂ ಹಿರಿಯರು ಒಪ್ಪಿ ನಿಶ್ಚಯ ಮಾಡಿದರು. ಎಂಎ ನಂತರ ವಿವಾಹವಾಯಿತು. ಅದೇ ವರ್ಷವೇ ಧಾರವಾಡ ವಿವಿಯಲ್ಲಿ ಉದ್ಯೋಗ ಲಭಿಸಿತು. 1983ರಲ್ಲಿ ಪ್ರಸಾರಾಂಗದ ನಿರ್ದೇಶಕನಾಗಿ ನಿವೃತ್ತನಾದೆ.
ಈಗಿನ ಯುವ ಕವಿಗಳ ಬಗ್ಗೆ ನಿಮ್ಮ ಅನಿಸಿಕೆ?
ಕವಯತ್ರಿಯರು ಹೆಚ್ಚಾಗಿ ಬರೆಯುತ್ತಿದ್ದಾರೆ. ಎಲ್ಲರೂ ಚೆನ್ನಾಗಿ ಬರೆಯುತ್ತಾರೆ. ಬಹಳ ಭರವಸೆಯ ಸಾಹಿತ್ಯವಿದೆ. ವೈವಿಧ್ಯತೆ ಇದೆ. ಸ್ತ್ರೀವಾದದ ಆಚೆಗೆ ನಿಂತು ಬರೆಯುತ್ತಾರೆ. ತಮ್ಮ ಅನುಭವದೊಂದಿಗೆ ಉಳಿದ ಅನುಭವವನ್ನು ಬೆರೆಸಿ ಬರೆಯುತ್ತಾರೆ. ತಮಗೆ ಮೀರಿದ ಅನುಭವವನ್ನೂ ಬರೆಯುತ್ತಿದ್ದಾರೆ.
ಇಂದಿನ ಕನ್ನಡದ ಸ್ಥಿತಿ-ಗತಿ ಬಗ್ಗೆ ನಿಮಗೇನನ್ನಿಸುತ್ತದೆ?
ಕನ್ನಡ ಓದುವವರೇ ಸಿಗೋದಿಲ್ಲ. ಅನಿವಾರ್ಯವಾಗಿ ಪ್ರಾಥಮಿಕ ಹಂತದಲ್ಲಿ ಕನ್ನಡ ಮಾಧ್ಯಮವಾಗಿ ಸಾಹಿತ್ಯ-ಸಂಸ್ಕೃತಿಯನ್ನು ಕಲಿಸಬೇಕಾಗಿದೆ. ಬಾಲ್ಯದಲ್ಲಿ ಕಲಿತದ್ದೇ ಬದುಕಿನಲ್ಲಿ ಉಳಿದುಬರುವುದರಿಂದ, ಮಕ್ಕಳಿಗೆ ಕನ್ನಡ ಸಂಸ್ಕಾರ ಕಲಿಸಬೇಕು. ಇಂದು ಇಕ್ಕಟ್ಟಿನ ಪರಿಸ್ಥಿತಿ ನಿರ್ಮಾಣವಾಗಿದೆ ಎಂಬುದು ನಿಜ. ಆದರೂ ಕನ್ನಡ ಸಂಪೂರ್ಣವಾಗಿ ಆಡಳಿತದಲ್ಲಿ ಬರಬೇಕು, ಕನ್ನಡ ಮಾಧ್ಯಮಕ್ಕೆ ಪ್ರಾಧಾನ್ಯತೆ ನೀಡಬೇಕು. ತಾಂತ್ರಿಕವಾಗಿ ಕನ್ನಡ ಬೆಳೆಯಬೇಕು. ಪುಸ್ತಕಗಳು ಹೆಚ್ಚು ಹೆಚ್ಚು ಹೊರಬರಬೇಕು. ಈ ನಿಟ್ಟಿನಲ್ಲಿ ಪ್ರಯತ್ನಗಳು ನಡೆದಿವೆ. ಆದರೆ ನಿರಂತರ ಪ್ರಯತ್ನಗಳ ಜರೂರು ಇಂದು ಎಂದಿಗಿಂತ ಹೆಚ್ಚಿದೆ.
-ಸಂದರ್ಶನ: ನಳಿನ ಡಿ.