ಸಂಸನೂ ರಾಕ್ಷಸ!

ಕನ್ನಡ ರಂಗಭೂಮಿಗೆ ತನ್ನದೇ ಹೊಳಪಿದೆ. ಪ್ರಯೋಗಗಳಲ್ಲಿ ತನ್ನದೇ ರಂಗಿದೆ. ಅದರ ಗರ್ಭದಲ್ಲಿ ರತ್ನಭಂಡಾರವೇ ಇದೆ. ಮೈಸೂರು ಮಹಾರಾಜರ ಕಾಲದಲ್ಲಿ ನಾಟಕಕ್ಕೆ ಅದರದ್ದೇ ಸ್ಥಾನಮಾನಗಳಿದ್ದವು. ಆ ಕಾಲದಲ್ಲಿನ ಪ್ರಮುಖ ನಾಟಕಕಾರರಲ್ಲಿ ಸಾಮಿ ವೆಂಕಟಾದ್ರಿ ಅಯ್ಯರ್ ಕೂಡ ಒಬ್ಬರು. ಇವರು ಮತ್ತಾರೂ ಅಲ್ಲ... ಪ್ರಸಿದ್ಧ ನಾಟಕಕಾರ ನಿರ್ದೇಶಕ 'ಸಂಸ'. ಇದೇ ನಾಟಕದಲ್ಲಿ ತಿಳಿಸುವಂತೆ 'ಕಂಸ' ಎಂಬ ನಾಮಧೇಯ ಮುದ್ರಣ ದೋಷದಿಂದ 'ಸಂಸ' ಆಗಿ ಅದೇ ಚಿರವಾಗಿ ಉಳಿದದ್ದು ಇಲ್ಲಿ ಪ್ರಸ್ತಾಪವಾಗಿದೆ. 'ಕಂಸ'ನು ರಾಕ್ಷಸ 'ಸಂಸ'ನೂ ರಾಕ್ಷಸ. ಆದರೆ 'ಸಂಸ' ಮುದ್ರಾರಾಕ್ಷಸ!
ಈ ಸಂಸ ಅವರ ಜೀವನ ಶೈಲಿ, ನಾಟಕ ರಚನೆ, ನಿರ್ದೇಶನ ಅವರೊಳಗೆ ಅಡಗಿದ್ದ ಪೊಲೀಸ್ ಭೀತಿ, ಒಂಟಿತನ, ಬಡತನದ ಬೇಗೆ ಎಲ್ಲವನ್ನೂ ಪರಿಚಯಿಸುತ್ತ ಸೂಕ್ಷ್ಮ ವಿಷಯವನ್ನೂ ವಿಸ್ತರಿಸಿ ತಿಳಿಸುವ ನಾಟಕವಿದು. ರಂಗಭೂಮಿಯ, ಹಿರಿ- ಕಿರುತೆರೆಯ ಅದ್ಭುತ ನಟ ಶ್ರೀನಿವಾಸ ಪ್ರಭು ಸ್ವತಃ ರಚಿಸಿ, ನಿರ್ದೇಶಿಸಿ ಮತ್ತೆ ಏಕವ್ಯಕ್ತಿಯಾಗಿ ಪ್ರದರ್ಶನ ನೀಡಿದ್ದಾರೆ. ಇಲ್ಲಿ 'ಸಂಸ' ಪಾತ್ರವೇ ಸ್ವಯಂ ಪ್ರೇಕ್ಷಕರ ಮುಂದೆ ಬಂದು ಪರಿಚಯ ಮಾಡಿಕೊಂಡು, ಮುಂದೆ ಹೋಗುತ್ತದೆ. ಮನಸೆಂಬ ಕನ್ನಡಿಯ ಮೂಲಕ ನೋಡುತ್ತಾ ಅದರೊಂದಿಗೆ ಸಂಭಾಷಿಸುವ ಪರಿಕಲ್ಪನೆ ಈ ಏಕಪಾತ್ರಾಭಿನಯಕ್ಕೆ ಪೂರಕವಾಗಿ ನಿಂತಿದೆ. 'ಪ್ರಭು' ಅದರಲ್ಲಿನ ಪ್ರತಿಭೆಗೆ ಈ ನಾಟಕದ ದೃಶ್ಯಗಳು ಅಷ್ಟೇನೂ ಸ್ಪರ್ಧಾತ್ಮಕವಾದದ್ದೇನೂ ಅಲ್ಲ. ಹಾಗೆ ನೋಡಿದರೆ ತಮ್ಮೊಳಗಿನ 'ನಟ'ನಿಗಾಗೇ ಮತ್ತಷ್ಟು ಕ್ಲಿಷ್ಟಕರವಾದ ದೃಶ್ಯಗಳನ್ನು ರಚಿಸಿಕೊಳ್ಳಬಹುದಿತ್ತೇನೋ? ಅವರೇ ರಚನಾಕಾರರಾದ್ದರಿಂದ ಆ ಅವಕಾಶವೂ ಇಲ್ಲಿತ್ತು. ಇದು ಪೂರ್ಣ ಪ್ರಮಾಣದ ಪ್ರಥಮ ಪ್ರಯೋಗವಾದ್ದರಿಂದ ಸೈ ಎನ್ನಲು ಅಡ್ಡಿ ಇಲ್ಲ. ಸಿ.ಆರ್. ಸಿಂಹ, ಲಕ್ಷ್ಮೀಚಂದ್ರಶೇಖರ್ ಅವರ ಸಾಲಿನಲ್ಲಿ ಪ್ರಭು ಕೂಡ ನಿಲ್ಲುತ್ತಾರೆ. ಈ ನಾಟಕದಲ್ಲಿನ 'ಸಂಸ'ರ ಒಳತೋಟಿಯನ್ನು ತಮ್ಮ ಸಹಜ ಅಭಿನಯದಿಂದ ವ್ಯಕ್ತಪಡಿಸುವ ಪರಿ, ಸೂಕ್ಷ್ಮವೂ, ಸೂಕ್ತವೂ ಆಗಿದೆ. ಇಲ್ಲಿ ಕನ್ನಡಿಯೂ ಒಂದು ಪ್ರಮುಖ ಪಾತ್ರವಾಗಿ ಬಿಂಬಿತವಾಗಿದೆ. 'ಸಾಮೀ, ನೀನು ಮಾಡ್ತಿರೋದು ಸರಿಯಲ್ಲ ಕಣೋ' ಎಂಬ ಸಂಭಾಷಣೆ ಕನ್ನಡಿಯೇ ಹೇಳಿದಂತಿರುತ್ತದೆ. ಅತಿ ಕಡಿಮೆ ರಂಗ ಪರಿಕರಗಳನ್ನು ಬಳಸಿಕೊಂಡು ಸರಳ ವೇಷಭೂಷಣಗಳಲ್ಲೇ 'ಸಂಸ'ರಂಥ ಹಿರಿಯ ನಾಟಕಕಾರರ ಜೀವನದ ಘಟ್ಟಗಳನ್ನು ಪ್ರೇಕ್ಷಕರ ಮುಂದೆ ತೆರೆದಿಟ್ಟಿದ್ದಾರೆ.
ಕೈಲಾಸಂ, ಸಂಸ ಅವರಿಗೆ ಬರೆದಿದ್ದ ಪತ್ರದ ವಿಚಾರ 'ನೀವು ತಿಳಿಸಿದಂತೆ ಇಲ್ಲಿನ ಪದ್ಯವನ್ನು ಯಥಾವತ್ತಾಗಿ ಬಳಸಿಕೊಳ್ಳತಕ್ಕದ್ದು. ಒಂದು ಬಿಂದುವನ್ನೂ ಬಿಡದಂತೆ, ಆದರೆ ನಾವು ಇಲ್ಲಿನ ಒಂದು ಬಿಂದುವನ್ನೂ ಬಳಸಿಕೊಳ್ಳಲು ತಯಾರಿಲ್ಲ....' ಎಂಬೆಲ್ಲಾ ವಿಷಯಗಳು ನಾಟಕದಲ್ಲಿನ ಲವಲವಿಕೆಯನ್ನು ಹೆಚ್ಚಿಸುತ್ತವೆ. ಜೋತಿಷಿಯಾಗಿದ್ದ 'ಸಂಸ'ರೂ ನಮಗೆ ಇಲ್ಲಿ ಗೋಚರಿಸುತ್ತಾರೆ. ತಮ್ಮ ಮದುವೆಯ ಬಗ್ಗೆ, ಮದುವೆ ನಿಲ್ಲಿಸಿ ನಿರಾಳವಾದ ಬಗ್ಗೆ ರಸವತ್ತಾಗಿ ವಿವರಿಸುವ ಹಾಸ್ಯಮಿಶ್ರಿತ ಸಂಭಾಷಣೆಯಷ್ಟೇ ಅಲ್ಲದೆ ಅವರ ಜೀವನದ ಒಳ- ಹೊರಗನ್ನು ಆವರಿಸಿಕೊಂಡಿದ್ದ ಪೊಲೀಸ್ ಭಯ ದಿನದಿಂದ ದಿನಕ್ಕೆ ಹೆಚ್ಚಾಗಿ ಮಾನಸಿಕ ಒತ್ತಡಕ್ಕೆ ಸಿಲುಕಿ ಆತ್ಮಹತ್ಯೆ ಮಾಡಿಕೊಳ್ಳುವ ಹೃದಯ ವಿದ್ರಾವಕ ದೃಶ್ಯ ಕೂಡ ಅಷ್ಟೇ ಪರಿಣಾಮಕಾರಿಯಾಗಿ ಮೂಡಿಬಂದಿದೆ. 'ಮನುಷ್ಯ ಬದುಕಿದ್ದಾಗ ಕೊಳೆಯಬಾರದು. ಸತ್ತ ಮೇಲೆ ಕೊಳೆಯಬಹುದು' ಎಂಬ ಸಂಭಾಷಣೆಗಳು ನೋಡುಗನ ಅನುಭವಗಳ ಕದ ತಟ್ಟುತ್ತದೆ.
ಯಾರನ್ನೂ ನಂಬದ, ಒಬ್ಬಂಟಿಗನಾಗೇ ಬದುಕುತ್ತಿದ್ದ, ಯಾರಿಗೂ ತನ್ನ ನಾಟಕದ ಹಸ್ತಪ್ರತಿಗಳನ್ನು ಕೊಡದೇ, ಯಾರನ್ನೂ ಸಂಪರ್ಕಿಸದೇ ಭಯದ ಮಡುವಿನಲ್ಲೇ ಏಕಾಂಗಿಯಾಗಿದ್ದ 'ಸಂಸ'ರ ಜೀವವನ್ನೇ ಏಕವ್ಯಕ್ತಿ ಪ್ರದರ್ಶನಕ್ಕೆ ಆಯ್ಕೆ ಮಾಡಿಕೊಂಡಿರುವುದು ಕೂಡ 'ಶ್ರೀನಿವಾಸ ಪ್ರಭು' ಅವರ ಜಾಣ್ಮೆಯಾಗಿದೆ. ಅಲ್ಲಲ್ಲಿ ಷೇಕ್ಸ್ಪಿಯರ್ನ ಒಕ್ಕಣೆಗಳನ್ನು ತಂದು ನಾಟಕದ ಮೆರುಗನ್ನು ಹೆಚ್ಚಿಸಿದ್ದಾರೆ. 'ಸಂಸ'ರ ವಿಕ್ಷಿಪ್ತ ವ್ಯಕ್ತಿತ್ವದ ಒಳ ಸುಳಿಗಳನ್ನು ಆಂತರಿಕ ಸೂಕ್ಷ್ಮಗಳನ್ನು ತುಮುಲ, ಗೊಂದಲ, ತಲ್ಲಣಗಳನ್ನು ಅನಾವರಣಗೊಳಿಸುವಲ್ಲಿ ಈ ಪ್ರಯೋಗ ಯಶಸ್ವಿಯಾಗಿದೆ.
= ಸಂಕೇತ್ ಗುರುದತ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


