ಸಿ.ಕೆ. ಜಾಫರ್ ಷರೀಫ್ ವಿಶ್ರಾಂತಿ ಬೇಡ್ವಂತೆ!
ಐವತ್ತು ವರ್ಷಗಳಿಗೂ ಹಿಂದಿನ ಮಾತು. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯ ಕರೀಮ್ ಸಾಬ್ ಮಗ, 'ಎಳೆಯ ಯುವಕ', ಜಾಫರ್ ಷರೀಫ್, ಪತ್ನಿಯ ಜತೆ ದುರ್ಗದಲ್ಲಿ ರೈಲೇರಿ ಬೆಂಗಳೂರಿನ ಸ್ಟೇಷನ್ ಬಳಿಯ ಒಂದು ಛತ್ರದಲ್ಲಿ ಪ್ರತಿಷ್ಠಾಪನೆಯಾದಾಗ ಅವರು ಭವಿಷ್ಯದ ವಿಚಾರದಲ್ಲಿ ಏನು ಕನಸು ಕಂಡಿದ್ದರೋ ಗೊತ್ತಿಲ್ಲ.
ಆದರೆ ಅವರನ್ನು ಈಗ ರೇಸ್ಕೋರ್ಸ್ ರಸ್ತೆಯಲ್ಲಿ ಜಾತ್ಯತೀತ ಜನತಾ ದಳದ ಕಚೇರಿಯಾಗಿರುವ, ಆಗಿನ ಕಾಂಗ್ರೆಸ್ ಭವನದಲ್ಲಿ ಕಂಡವರು, 'ಈ ವ್ಯಕ್ತಿ ಬೆಳೆಯುತ್ತಾನೆ' ಎಂದಿದ್ದರು. ಅದಕ್ಕೆ ಕಾರಣ ಒಂದು ಕಡೆ ಜಾಫರ್ ಷರೀಪ್ ವಿಚಾರದಲ್ಲಿ ನಿಜಲಿಂಗಪ್ಪ ಅವರು ಪ್ರದರ್ಶಿಸಿದ ಮಮತೆ, ಇನ್ನೊಂದು ಕಡೆ, ದಿನದ 24 ಗಂಟೆಗಳನ್ನೂ ಕಚೇರಿಯಲ್ಲೇ ಕಳೆದು, ಯಾರೇನು ಕೆಲಸ ಹೇಳಿದರೂ ಬೇಸರವಿಲ್ಲದೇ ವ್ಯವಸ್ಥೆ ಮಾಡುವ ಅವರ ಮನೋಧರ್ಮ.
ಆ ದಿನಗಳಲ್ಲಿ ಅವರ ಜೀವನದ ವಿವರಗಳು ಈಗಲೂ ರಹಸ್ಯವೇ. ಶ್ರೀರಾಮಪುರದ ಒಂದು ಸಣ್ಣ ಮನೆಯಲ್ಲಿ ಬಿಡಾರ. ಗೆಳೆಯರಿಗಂತೂ ಬಡತನವಿರಲಿಲ್ಲ. ಈಗಾಗಲೇ ಹಲವು ಬಾರಿ ಷರೀಫ್ ಈ ಅಂಕಣದಲ್ಲಿ ಕಾಣಿಸಿಕೊಂಡಿದ್ದಾರೆ. ಅದರ ಹಿನ್ನೆಲೆಯಲ್ಲಿರುವುದು, ರಾಜಕೀಯವಾಗಿ ಸೂಕ್ತ ಸಮಯದಲ್ಲಿ ಸರಿಯಾದ ಜಾಗದಲ್ಲಿ ಅವರು ಹಾಜರಿರುವುದು.
2009ರ ಲೋಕಸಭೆ ಚುನಾವಣೆಯಲ್ಲಿ ತಮ್ಮ ಆತ್ಮೀಯ ಸಂಗಾತಿ ಡಿ.ಬಿ. ಚಂದ್ರೇಗೌಡರ ವಿರುದ್ಧ ಸೋತ ಅನಂತರ ಜಾಫರ್ ಷರೀಫ್ ಅವರ ರಾಜಕೀಯ ಚಟುವಟಿಕೆ ಕಾಂಗ್ರೆಸ್ ಕಚೇರಿಯ ಸಭೆಗಳಿಗೇ ಸೀಮಿತವಾಗಿತ್ತು. ಆದರೆ ಇದ್ದಕ್ಕಿದ್ದಂತೆ ಈ ವರ್ಷದ ಮಾರ್ಚ್ನಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಇಂಗಿತವನ್ನು ಪ್ರಕಟಿಸಿದ್ದರು. ಹಿಂದೆ ಏಳು ಬಾರಿ ಲೋಕಸಭೆಯ ಸದಸ್ಯರಾಗಿ, ಅದರಲ್ಲಿ ಐದಾರು ವರ್ಷಗಳ ಕಾಲ ಸಚಿವರಾಗಿದ್ದವರು ವಿಧಾನಸಭೆಗೆ ಸ್ಪರ್ಧಿಸುವುದಕ್ಕೆ ಸಿದ್ಧವಾಗಿದ್ದೇಕೆ?
ಅದು ಅತಿ ಆಸೆ ಅಲ್ಲ. ರಾಜ್ಯದಲ್ಲಿ ಅದರಲ್ಲೂ ಕಾಂಗ್ರೆಸ್ಸಿನಲ್ಲಿ ಈಗ ಮುಸ್ಲಿಮ್ ಪ್ರಾತಿನಿಧ್ಯ ಕಡಿಮೆಯಾಗಿರುವಾಗ ಅದು ಕುಗ್ಗಬಾರದು ಎನ್ನುವ ಬಯಕೆಯಿಂದೇನೂ ಅಲ್ಲ, ರಾಜ್ಯದಲ್ಲಿ ಈಗ ಮುಸ್ಲಿಮರಿಗೆ ಬೇಕಾದ್ದು ಕೇವಲ ಸಂಖ್ಯಾ ಪ್ರಾತಿನಿಧ್ಯವಷ್ಟೇ ಅಲ್ಲ. ಪರಿಣಾಮಕಾರಿ, ಪ್ರಭಾವಶಾಲಿ ಪ್ರಾತಿನಿಧ್ಯ ಎನ್ನುವ ಕಾರಣದಿಂದಲೇ ಅವರು ಶಾಸಕರಾಗಲು ಬಯಸಿದ್ದು. ವರಿಷ್ಠರು ಒಪ್ಪಲಿಲ್ಲ. ಸುಮ್ಮನಾದರು. ಈಗ ಮತ್ತೆ ಲೋಕಸಭೆಯ ಚುನಾವಣೆಯತ್ತ ಅವರ ದೃಷ್ಟಿ ಬಿದ್ದಿದೆ. ಹಿಂದಿನ ಉತ್ತರ ಬೆಂಗಳೂರು ಕ್ಷೇತ್ರ ಬೇಡ, ಸೆಂಟ್ರಲ್ ಬೆಂಗಳೂರಲ್ಲಿ ಸ್ಪರ್ಧಿಸುವ ಬಯಕೆ ಇದೆ.
ಜಾಫರ್ ಷರೀಫ್, ಯಾವ ದೃಷ್ಟಿಯಿಂದ ನೋಡಿದರೂ ರಾಜ್ಯದಲ್ಲಿ ಅತ್ಯಂತ ಹಿರಿಯ ಕಾಂಗ್ರೆಸ್ಸಿಗರ ಸಾಲಿನಲ್ಲಿ ನಿಲ್ಲಬಲ್ಲ ವ್ಯಕ್ತಿ. ಈಚೆಗೆ ಕಾಂಗ್ರೆಸ್ಸಿನಲ್ಲಿ 'ಪಕ್ಷನಿಷ್ಠೆ' ಎನ್ನುವ ಪದದ ಬಳಕೆ ಕಡಿಮೆಯಾಗುತ್ತ ಬಂದಿದೆ. ಆದರೆ ಸುಮಾರು ಅರ್ಧಶತಮಾನದ ಕಾಲ, ಕಾಂಗ್ರೆಸ್ ಅಧಿಕಾರದಲ್ಲಿರಲಿ, ಇಲ್ಲದೇ ಇರಲಿ, ಅವರಿಗೆ ಪಕ್ಷದಲ್ಲಿ ಯಾವುದಾದರೂ ಸ್ಥಾನಮಾನ ಇರಲಿ ಇಲ್ಲದೇ ಇರಲಿ, ಜಾಫರ್ ಷರೀಫ್ ಅತಿ ನಿಷ್ಠಾವಂತ ಕಾಂಗ್ರೆಸ್ಸಿಗರಾಗಿಯೇ ಉಳಿದಿದ್ದಾರೆ. ಈಗಲೂ ಅವರ ಒಲವು ಮತ-ಜಾತಿ ಭೇದವಿಲ್ಲದೆ ಪಕ್ಷದ ನಿಷ್ಠಾವಂತಕಾರ್ಯಕರ್ತರ ಕಡೆಗೇ. ಜಾಫರ್ ಷರೀಫರ ಸಂಸದೀಯ ರಾಜಕೀಯ ಜೀವನ ಆರಂಭವಾಗಿದ್ದು 1971ರಲ್ಲಿ. ಕಾಂಗ್ರೆಸ್ಸಿನ ವಿಭಜನೆಯ ಅನಂತರ ನಡೆದ ಮೊದಲ ಲೋಕಸಭೆ ಚುನಾವಣೆಯಿಂದ. ಆಗ ಅವರು ಟಿಕೆಟ್ ಪಡೆದಿದ್ದು ಕನಕಪುರ ಕ್ಷೇತ್ರದಿಂದ. ಅವರ ಎದುರಾಳಿ ಎಂ.ವಿ. ರಾಜಶೇಖರನ್. ನಿಜಲಿಂಗಪ್ಪ ಅವರ ಅಳಿಯ.
ಅನಂತರ ಷರೀಫ್ ಕ್ಷೇತ್ರ ಬದಲಾಯಿಸಿ ಉತ್ತರ ಬೆಂಗಳೂರಿಗೆ ಬಂದಾಗ, ಅವರ ಪ್ರತಿಸ್ಪರ್ಧಿ ದೇವರಾಜ ಅರಸರ ಅಳಿಯ ಡಾ. ಎಂ.ಡಿ. ನಟರಾಜ್. ಎರಡು ಚುನಾವಣೆಗಳೂ ಅವರ ಪಾಲಿಗೆ ಅಗ್ನಿಪರೀಕ್ಷೆಯೇ ಆಗಿತ್ತು. ದೀರ್ಘಕಾಲದ ರಾಜಕೀಯದಲ್ಲಿ, ಜಾಫರ್ ಷರೀಫರ ವಿರುದ್ಧ ಭ್ರಷ್ಟಾಚಾರದ ಆರೋಪಗಳಿಗೇನೂ ಕಡಿಮೆ ಇರಲಿಲ್ಲ. ಬೇಕಾದಷ್ಟು ಆರೋಪಗಳಿದ್ದವು. ಒಮ್ಮೆ ಅವರು ಆರೋಪಗಳ ಕಾರಣಕ್ಕೇ ರೇಲ್ವೆ ಮಂತ್ರಾಲಯದ ಅಧಿಪತ್ಯವನ್ನು ಕಳೆದುಕೊಂಡು ಕಲ್ಲಿದ್ದಲು ಮಂತ್ರಾಲಯಕ್ಕೆ ಬಂದಿದ್ದರು. ಇಡೀ ದೇಶವನ್ನೇ ಅಲ್ಲಾಡಿಸಿದ್ದ ಜೈನ್ ಹವಾಲಾ ಪ್ರಕರಣದಲ್ಲಿ ಜಾಫರ್ ಷರೀಫರ ಹೆಸರೂ ಇತ್ತು. (ಅದರಲ್ಲಿ ಆಡ್ವಾಣಿ ಅವರ ಹೆಸರೂ ಇತ್ತು). ಆ ಎಲ್ಲ ಆರೋಪಗಳನ್ನು ಜೀರ್ಣಿಸಿಕೊಂಡವರು ಜಾಫರ್ ಷರೀಫ್. ಆದರೆ ಯಾವ ಪ್ರಕರಣದಲ್ಲೂ ತನಿಖೆ ನಡೆದು ಷರೀಫ್ ನಿರ್ದೋಷಿ ಎನ್ನುವ ತೀರ್ಪು ಪ್ರಕಟವಾಗಲಿಲ್ಲ. ಆರೋಪಗಳ ತನಿಖೆ ಆರಂಭವಾದರೂ ಅವೆಲ್ಲ ಕಾರಣಾಂತರಗಳಿಂದ ಮಧ್ಯದಲ್ಲೇ ನಿಂತು ಹೋದವು.
ಕರ್ನಾಟಕದಲ್ಲಿ, ಬೆಂಗಳೂರು ಸಮೀಪದ ಪ್ರದೇಶದಲ್ಲಿ, ಭೂ ಸುಧಾರಣೆ ಕಾಯಿದೆಯ ವಿಧಿ- ನಿಯಮಗಳನ್ನು ಉಲ್ಲಂಘಿಸಿ, ಜಾಫರ್ ಷರೀಫರ ಹೆಂಡತಿ, ಮಕ್ಕಳ ಹೆಸರಿನಲ್ಲಿ ಭೂಮಿಯನ್ನು ಕೊಂಡಿರುವ ಪ್ರಕರಣಗಳನ್ನು ಕುರಿತಂತೆ, ವಿಭಾಗಾಧಿಕಾರಿಗಳಿಂದ ತನಿಖೆಯೂ ನಡೆದಿತ್ತು. ಆಗಿನ ಕಂದಾಯ ಮಂತ್ರಿ ಎಂ. ರಾಜಶೇಖರಮೂರ್ತಿ ಅವರು ಆ ಎಲ್ಲ ಪ್ರಕರಣಗಳ ಫೈಲುಗಳನ್ನು ಅನೇಕರಿಗೆ ಧಾರಾಳವಾಗಿ ಹಂಚಿದ್ದರು. ಆದರೆ ಆಗ ಮುಖ್ಯಮಂತ್ರಿಯಾಗಿದ್ದ ವೀರಪ್ಪಮೊಯಿಲಿ ಅವರು ತಮ್ಮ ಚಾಣಾಕ್ಷತೆಯನ್ನು ಬಳಸಿ ಸಮಯ ನೋಡಿ, ರಾಜಶೇಖರಮೂರ್ತಿ ಅವರಿಂದ ಕಂದಾಯ ಇಲಾಖೆಯನ್ನೇ ಕಸಿದುಕೊಂಡರು. ಅಲ್ಲಿಗೆ ಎಲ್ಲ ಕೇಸುಗಳೂ ಮುಗಿದಂತೆಯೇ.
ಇನ್ನೇನು ಜಾಫರ್ ಷರೀಫ್ ಅವರಿಗೆ ಕೆಲವೇ ತಿಂಗಳಲ್ಲಿ 80 ವಯಸ್ಸು. ಈ ಬಾರಿ ಜಾಫರ್ ಷರೀಫ್ರಿಗೆ ಸೆಂಟ್ರಲ್ ಬೆಂಗಳೂರು ಕ್ಷೇತ್ರದಿಂದ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಕಾಂಗ್ರೆಸ್ ಟಿಕೆಟ್ ಸಿಗಬಹುದಾ? ಈಗಲೇ ಹೇಳುವುದು ಕಷ್ಟ. ಸದ್ಯದಲ್ಲಿ ಜಾಫರ್ ಷರೀಫ್ ಪ್ರದೇಶ ಕಾಂಗ್ರೆಸ್ಸಿನಲ್ಲಿ ಯಾವ ಗುಂಪಿನ ಜತೆಯಲ್ಲೂ ಗುರುತಿಸಿಕೊಂಡಿಲ್ಲ. ಆದ್ದರಿಂದ ಅವರ ಉಮೇದುವಾರಿಕೆಯನ್ನು ಯಾರೂ ಬೆಂಬಲಿಸದೇ ಹೋಗಬಹುದು ಅಥವಾ ಯಾರೂ ವಿರೋಧಿಸದೇ ಇರಲೂಬಹುದು.
ಸದ್ಯಕ್ಕೆ ಅವರ ಗಮನ ಇದ್ದಕ್ಕಿದ್ದಂತೆ, ಮುಸ್ಲಿಂ ಸಮಾಜದ ಒಂದು ದೊಡ್ಡ, ಪ್ರಭಾವಿ ಸಹಕಾರಿ ಬ್ಯಾಂಕ್ ಎನಿಸಿರುವ ಅಮಾನತ್ ಸಹಕಾರ ಬ್ಯಾಂಕಿನ ಮೇಲಿರುವ ಅವ್ಯವಹಾರಗಳ ಕಡೆಗೆ ಹರಿದಿರುವಂತಿದೆ. ಈಗ ಕೇಂದ್ರ ಸಚಿವರಾಗಿರುವ ರಹಮಾನ್ ಖಾನ್ ಅವರು ಒಂದು ಕಾಲದಲ್ಲಿ ಆ ಬ್ಯಾಂಕಿನ ವ್ಯವಹಾರಗಳಲ್ಲಿ ಸಕ್ರಿಯವಾಗಿ ಆಸಕ್ತರಾಗಿದ್ದರು. ಈಚೆಗೆ ಜಾಫರ್ ಷರೀಫ್, ತಮ್ಮ ಪರಿಚಿತ ಮುಸ್ಲಿಂ ಮುಖಂಡರ ಜತೆ ಒಂದು ನಿಯೋಗದಲ್ಲಿ ಹೋಗಿ ಅಮಾನತ್ ಸಹಕಾರ ಬ್ಯಾಂಕಿನ ವ್ಯವಹಾರಗಳ ತನಿಖೆಗೆ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಅದಕ್ಕೆ ವ್ಯಾಪಕವಾದ ಪ್ರಚಾರ ಸಿಕ್ಕಿದೆ.
ಲೋಕಸಭೆ ಚುನಾವಣೆಯಲ್ಲಿ ಟಿಕೆಟ್ ಪಡೆಯುವ ರಾಜಕೀಯವನ್ನು ಜಾಫರ್ ಷರೀಫ್ ಆರಂಭಿಸಿದ್ದಾರಾ? ಇರಬಹುದು. ಅವರು ತಮ್ಮ ಬಯಕೆಯನ್ನೇನೂ ರಹಸ್ಯವಾಗಿಟ್ಟಿಲ್ಲ. ಆದರೆ ಅದರ ಈಡೇರಿಕೆಗೆ ಅನುಸರಿಸಬಹುದಾದ ತಂತ್ರಗಳನ್ನು ಪ್ರಕಟಿಸುವಷ್ಟು ತಿಳಿಗೇಡಿ ಅಲ್ಲ.
= ಸತ್ಯ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

