ಹಂಗಿಲ್ಲದ ಕಾವ್ಯ
ಹೆಣ್ಣಿನ ಅಂತರಂಗದ ಜಗತ್ತನ್ನು ಅತ್ಯಂತ ನವಿರಾಗಿ, ಅಷ್ಟೇ ತುಂಟತನದಿಂದ ಬಹಿರಂಗಕ್ಕಿಡುವ ಕೆಲವು ಕವಿತೆಗಳು ಕಾವ್ಯಾ ಕಡಮೆ ಅವರ 'ಧ್ಯಾನಕೆ ತಾರೀಖಿನ ಹಂಗಿಲ್ಲ' ಕವನ ಸಂಕಲನದಲ್ಲಿವೆ. ಇದು ಅವರ ಪ್ರಥಮ ಕವನ ಸಂಕಲನ. ಹಾಗೆಂದು ಅವರಿಗೆ ರಿಯಾಯಿತಿ ಕೊಡಬೇಕಾಗಿಲ್ಲ. ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣನ್ನು ನೋಡುತ್ತಿರುವ ರೀತಿಗೆ ತೀವ್ರ ಆಕ್ಷೇಪದ ಜೊತೆಗೆ ಹೀಗೇ ನೋಡಬೇಕೆನ್ನುವ ಒತ್ತಾಯ ಅವರ ಕವಿತೆಗಳ ಸಾಲುಗಳಲ್ಲಿವೆ. 'ಇಲ್ಲಿ ಈ ಲೋಕದಲಿ ನನಗೆ ನಾಲಗೆಯಿಲ್ಲ/ ನಿನಗೆ ಹೃದಯವೂ/ ನಡೆಯಬೇಕು ನಾವೀಗ ಸುಮ್ಮನೇ' ಎಂಬಲ್ಲಿ ಇದನ್ನು ನಾವು ಗ್ರಹಿಸಬಹುದು. ಅವರ ಇನ್ನೊಂದು ಕವಿತೆ 'ಬರುತ್ತೇನೆ'- ಇದರಲ್ಲಿ ಯಾವುದೇ ಮೇಕಪ್ ಇಲ್ಲದೆ 'ಒಮ್ಮೆ ನಿನ್ನ ಮುಂದೆ ಬರುತ್ತೇನೆ ಎಂದರೆ ನೀನೇಕೆ ಹೀಗೆ ಬೆವರಬೇಕು?' ಎಂದು ಕಿಚಾಯಿಸುವರು. ಮುಖವಾಡಕ್ಕೇ ಮಾನ್ಯತೆಯೆಂಬ ಸಮಾಜದ ನೀತಿಯನ್ನು ಲೇವಡಿ ಮಾಡುವರು. ಕಾವ್ಯಾ ಅವರ ಕಾವ್ಯದಲ್ಲಿ ಸಾಮಾಜಿಕ ಕಳಕಳಿಯೇನೂ ಕಡಮೆ ಇಲ್ಲ. ಸಮಕಾಲೀನ ಕವಯತ್ರಿಯರಲ್ಲಿ ಅವರು ಸುಲಭವಾಗಿಯೇ ತಮಗೊಂದು ಸ್ಥಾನಗಳಿಸಿಕೊಳ್ಳಬಲ್ಲರು ಎಂಬುದಕ್ಕೆ ಇದರಲ್ಲಿ ಸಾಕಷ್ಟು ಭರವಸೆಯ ಬೀಜಗಳಿವೆ.
ಕೃತಿ: ಧ್ಯಾನಕೆ ತಾರೀಖಿನ ಹಂಗಿಲ್ಲ
ಪ್ರಕಾರ: ಕಾವ್ಯ, ಏಕೆ ಓದಬೇಕು?: ಕಾವ್ಯದ ನವಿರುತನ ಅನುಭವಿಸಲು
ಪ್ರ: ಅಹರ್ನಿಶಿ ಪ್ರಕಾಶನ, ಶಿವಮೊಗ್ಗ, ಪುಟಗಳು 72, ಬೆಲೆ ರು. 70
---------------
75ರ ರಾಭೂ ವೈಭವ
ಕನ್ನಡದಲ್ಲಿ ವಿಜ್ಞಾನ ಸಾಹಿತ್ಯವನ್ನು ಜನಪ್ರಿಯಗೊಳಿಸಿದವರಲ್ಲಿ ರಾಜಶೇಖರ ಭೂಸನೂರಮಠ ಅವರ ಹೆಸರು ಅಗ್ರಸ್ಥಾನದಲ್ಲಿ ನಿಲ್ಲುವುದು. ಅವರು ಇತ್ತೀಚೆಗೆ ತಮ್ಮ 75ನೇ ವರ್ಷವನ್ನು ಪೂರೈಸಿದರು. ಈ ಸಂದರ್ಭದಲ್ಲಿ ಅವರು ಮಿತ್ರರು, ಅಭಿಮಾನಿಗಳು, ಶಿಷ್ಯರು ಎಲ್ಲ ಸೇರಿ 'ವೈಭವಿ' ಎಂಬ ಅಭಿನಂದನ ಗ್ರಂಥವನ್ನು ಡಾ. ಸಂಗಮೇಶ ಸವದತ್ತಿಮಠ ಅವರ ಪ್ರಧಾನ ಸಂಪಾದಕತ್ವದಲ್ಲಿ ಹೊರತಂದಿದ್ದಾರೆ. ರಾಭೂ ಅವರು ಕನ್ನಡದಲ್ಲಿ ಜನಪ್ರಿಯ ವಿಜ್ಞಾನ, ಅತೀಂದ್ರಿಯ ವಿಜ್ಞಾನ, ಭವಿಷ್ಯತ್ ಕಾಲದ ವಿಜ್ಞಾನ, ವೈಜ್ಞಾನಿಕ ಸಾಹಸ ಸಾಹಿತ್ಯ, ವೈಜ್ಞಾನಿಕ ಹಾಸ್ಯ ಸಾಹಿತ್ಯ, ಶೂನ್ಯ ಧ್ಯಾನ, ಕಲ್ಪಧ್ಯಾನ, ಭವಿಷ್ಯಾವಧಾನ, ಪರ್ಯಾಯ ಚಿಕಿತ್ಸೆ ಹೀಗೆ ಇಂಥ ಹಲವು ವಿಷಯಗಳಲ್ಲಿ ಕೃತಿ ರಚಿಸಿದ್ದಾರೆ. ಅವರೊಬ್ಬ ಆದರ್ಶ ಶಿಕ್ಷಕರು. ಅವರಲ್ಲಿ ಒಬ್ಬ ಸಹಜ ವಿಜ್ಞಾನಿ ಇದ್ದಾನೆ. ವೈಜ್ಞಾನಿಕ ನೆಲೆಯಲ್ಲಿಯೇ ಅವರ ಮನಸ್ಸು ಯೋಚಿಸುವುದರಿಂದ ಇಂಥ ಸಾಹಿತ್ಯ ರಚನೆ ಅವರಿಂದ ಸಾಧ್ಯವಾಗಿದೆ. ಅವರ ಬಗ್ಗೆ, ಅವರ ಕೃತಿಗಳ ಬಗ್ಗೆ ಅವರ ಆಪ್ತರು ಇಲ್ಲಿ ಲೇಖನಗಳನ್ನು ಬರೆದಿದ್ದಾರೆ. ಅವರ ಕುಟುಂಬದವರು ಬರೆದ ಲೇಖನಗಳೂ ಇಲ್ಲಿವೆ. ಈ ಕೃತಿಯ ಮಹತ್ವದ ಭಾಗವೆಂದರೆ ಸುಮಾರು ನೂರು ಪುಟಗಳಲ್ಲಿ ಇರುವ ಅವರ ಆತ್ಮಕಥನ. ತಮ್ಮನ್ನು ತಾವೇ ಕಂಡುಕೊಂಡ ಬಗೆ ವಿಶಿಷ್ಟವಾದದ್ದು. ಕೃತಿಯಲ್ಲಿ ಅಪರೂಪದ ಛಾಯಾಚಿತ್ರಗಳ ಬಣ್ಣದ ಪುಟಗಳೂ ಇವೆ. ಇವೆಲ್ಲವುಗಳಿಂದ ರಾಭೂ ಅವರ ಒಂದು ಸಮಗ್ರ ಪರಿಚಯ ಓದುಗರಿಗೆ ದೊರೆಯುತ್ತದೆ.
ಕೃತಿ: ವೈಭವಿ
ಪ್ರಕಾರ: ಅಭಿನಂದನ ಗ್ರಂಥ
ಏಕೆ ಓದಬೇಕು?: ರಾಭೂ ಅವರನ್ನು ಅರಿಯಲು
ಪ್ರ: ವೈಭವಿ ಜ್ಞಾನಮಂದಿರ, ಧಾರವಾಡ. ಪುಟಗಳು 406, ಬೆಲೆ ರು. 300
--------
ಮನೋರೋಗ ನಿದಾನ
ಸೃಜನಶೀಲ ಸಾಹಿತಿಯಾಗಿ ಹೆಸರು ಮಾಡಿರುವ ಕೆ.ವಿ. ತಿರುಮಲೇಶ ಅವರು ಕನ್ನಡಕ್ಕೆ ಹಲವು ಉತ್ತಮ ಅನುವಾದ ಕೃತಿಗಳನ್ನು ನೀಡಿದ್ದಾರೆ. ಇದೀಗ ಅವರ ಬರ್ನಾಡ್ ಹಾರ್ಟ್ ಅವರ 'ದಿ ಸೈಕಾಲಜಿ ಆಫ್ ಇನ್ಸಾನಿಟಿ' ಎಂಬ ಇಂಗ್ಲಿಷ್ ಕೃತಿಯನ್ನು 'ಬುದ್ಧಿಭ್ರಮಣೆ ಮನೋವೈಜ್ಞಾನಿಕ ನೆಲೆಯಲ್ಲಿ' ಎಂದು ಅನುವಾದಿಸಿದ್ದಾರೆ. ವೈಜ್ಞಾನಿಕ ವಿಷಯವನ್ನು ಕನ್ನಡದಲ್ಲಿ ಯಶಸ್ವಿಯಾಗಿ ತರುವುದು ಒಂದು ಸವಾಲಿನ ಕೆಲಸವೇ. ಮನೋರೋಗ ನಿದಾನ ಶಾಸ್ತ್ರವು ಶತಮಾನಕ್ಕೂ ಹಿಂದಿನ ಇತಿಹಾಸವನ್ನು ಹೊಂದಿದೆ. ಜೇನೆಟ್, ಫ್ರಾಯ್ಡ್ ಮೊದಲಾದವರು ಇದರಲ್ಲಿ ಗಣನೀಯ ಸಾಧನೆ ಮಾಡಿದ್ದಾರೆ. ಆ ಸಾಲಿನಲ್ಲಿ ನಿಲ್ಲಬಲ್ಲ ಇನ್ನೊಂದು ಹೆಸರು ಬರ್ನಾರ್ಡ್ ಹಾರ್ಟ್. ತಮ್ಮ ಈ ಕೃತಿಯಲ್ಲಿ ಅವರು ಬುದ್ಧಿಭ್ರಮಣೆ ಅಥವಾ ಹುಚ್ಚು ಎಂದರೇನು ಎಂಬುದನ್ನು ವೈಜ್ಞಾನಿಕವಾಗಿ ವಿವರಿಸಿದ್ದಾರೆ. ಹುಚ್ಚಿನ ಕುರಿತು ಜನರಲ್ಲಿ ಇರುವ ತಪ್ಪು ಗ್ರಹಿಕೆಗಳನ್ನು ಅವರು ಈ ಮೂಲಕ ನಿವಾರಿಸಿದ್ದಾರೆ. ಮನಸ್ಸಿನ ವರ್ತನೆಗೆ ಏನೇನು ಪ್ರಚೋದನೆಗಳು ಎಂಬುದನ್ನು ಅವರು ಇದರಲ್ಲಿ ವಿವರಿಸಿದ್ದಾರೆ. ಮನೋವಿಜ್ಞಾನ ಇಂದು ಹೆಮ್ಮರವಾಗಿ ಬೆಳೆದಿದೆ. ಅದಕ್ಕೆ ಹಾರ್ಟ್ ಅಂಥವರು ಹಾಕಿದ ಗೊಬ್ಬರವೂ ಕಾರಣ ಎಂಬುದಕ್ಕೆ ಈ ಕೃತಿ ಒಂದು ಪುರಾವೆಯಾಗಿದೆ.
ಕೃತಿ: ಬುದ್ಧಿಭ್ರಮಣೆ- ಮನೋವೈಜ್ಞಾನಿಕ ನೆಲೆಯಲ್ಲಿ
ಪ್ರಕಾರ: ಕೆ.ವಿ. ತಿರುಮಲೇಶ
ಏಕೆ ಓದಬೇಕು?: ಹುಚ್ಚಿನ ಬಗ್ಗೆ ತಿಳಿಯಲು...
ಪ್ರ: ಅಭಿನವ, ಪುಟಗಳು: 152 ಬೆಲೆ ರು. 100.
-----------
ಕೃಷ್ಣಶಾಸ್ತ್ರಿಗಳ ಆಲೋಚನೆಗಳು
ಕನ್ನಡದ ಹಿರಿಯ ಸಾಹಿತಿಗಳಲ್ಲಿ ಒಬ್ಬರಾದ ದಿವಂಗತ ಎ.ಆರ್. ಕೃಷ್ಣಶಾಸ್ತ್ರಿಗಳ ಎರಡು ಕೃತಿಗಳು ಪುನರ್ಮುದ್ರಣಗೊಂಡಿವೆ. ಮೊದಲಿನದು 'ಭಾಷಣಗಳು ಮತ್ತು ಲೇಖನಗಳು'. ಇದು 1949ರಲ್ಲಿ ಮೊದಲ ಮುದ್ರಣವನ್ನು ಕಂಡಿತ್ತು. ನಂತರ 1960ರಲ್ಲಿ ಎರಡನೇ ಮುದ್ರಣ ಕಂಡು ಈಗ ಮೂರನೇ ಮುದ್ರಣವಾಗಿದೆ. ಪ್ರಬುದ್ಧ ಕರ್ನಾಟಕದ ಮೂಲಕ ಆ ಕಾಲದ ಕನ್ನಡದ ಅನೇಕ ಸಾಹಿತಿಗಳನ್ನು ತಿದ್ದಿ ತೀಡಿ ಬೆಳೆಸಿದ್ದ ಶಾಸ್ತ್ರಿಗಳು ಉದ್ಧಾಮ ಪಂಡಿತರು. ಕನ್ನಡದ ಬಗ್ಗೆ ಪ್ರೇಮ ಮತ್ತು ಅಪಾರ ಕಾಳಜಿ ಹೊಂದಿರುವ ಹಾಗೂ ಕನ್ನಡ ಕಟ್ಟುವುದು ಹೇಗೆನ್ನುವುದನ್ನು ವಿವರಿಸುವ ಹಲವು ಆಲೋಚನೆಗಳು ಇಲ್ಲಿಯ ಲೇಖನಗಳಲ್ಲಿವೆ. ಕಾರಣ ಇವು ಇಂದಿಗೂ ಉಪಯುಕ್ತವಾಗಿವೆ. ಶಾಸ್ತ್ರಿಗಳು ಗುರುತಿಸಿದ ಕನ್ನಡದ ಹಲವು ಸಮಸ್ಯೆಗಳು ಇಂದಿಗೂ ಹಾಗೆಯೇ ಉಳಿದಿರುವುದನ್ನು ನಾವು ಗುರುತಿಸಬಹುದು.
ಇನ್ನೊಂದು ಕೃತಿ 'ಸಂಸ್ಕೃತ ನಾಟಕ'. ಇದು ಮೊದಲ ಆವೃತ್ತಿಯಾಗಿ 1937ರಲ್ಲಿ ಪ್ರಕಟವಾಯಿತು. ನಂತರ 1955, 1970ರಲ್ಲಿ ಮರುಮುದ್ರಣ ಕಂಡು ಈಗ ನಾಲ್ಕನೇ ಮುದ್ರಣವಾಗುತ್ತಿದೆ. ಈ ಕೃತಿ ಸಂಸ್ಕೃತ ನಾಟಕದ ಚರಿತ್ರೆಯನ್ನು ಹೇಳುತ್ತದೆ. ಸಾಹಿತ್ಯದ ವಿದ್ಯಾರ್ಥಿಗಳಿಗೆ, ಭಾಷೆಯನ್ನು ಪ್ರೀತಿಸುವವರಿಗೆ ಇವೆರಡೂ ಉಪಯುಕ್ತ ಕೃತಿಗಳು.
ಕೃತಿ: ಎ.ಆರ್.ಕೃ. ಭಾಷಣಗಳು ಮತ್ತು ಲೇಖನಗಳು/ ಸಂಸ್ಕೃತ ನಾಟಕ
ಪ್ರಕಾರ: ಸಾಹಿತ್ಯ ಚಿಂತನೆ ಮತ್ತು ವಿಮರ್ಶೆ, ಏಕೆ ಓದಬೇಕು?: ಎ.ಆರ್.ಕೃ. ಬರೆಹ ಆಸ್ವಾದಿಸಲು
ಪ್ರ: ಹೇಮಂತ ಸಾಹಿತ್ಯ, ಬೆಂಗಳೂರು
---------
ವಿಜ್ಞಾನ ನಾಟಕಗಳು
ಮಹಿಳೆಗಾಗಿ ವಿಜ್ಞಾನ ಮತ್ತು ತಂತ್ರಜ್ಞಾನದ ಕೊಡುಗೆ ಹಾಗೂ ಮಹಿಳೆಯಿಂದ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಕ್ಕೆ ದೊರೆತಿರುವ ಕೊಡುಗೆ ಎಂಬ ಪರಿಕಲ್ಪನೆಯೊಂದಿಗೆ ಆಕಾಶವಾಣಿಯು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ನ ಆಶ್ರಯದಲ್ಲಿ ನಾಟಕಗಳನ್ನು ಪ್ರಸಾರ ಮಾಡುವ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಹದಿಮೂರು ಸರಣಿಯಲ್ಲಿ ಪ್ರಸಾರವಾದ ನಾಟಕಗಳು ಈಗ ಪುಸ್ತಕ ರೂಪದಲ್ಲಿ ಬಂದಿವೆ. ಸಾಹಿತ್ಯ ಪ್ರಕಾರಗಳಲ್ಲಿ ನಾಟಕಕ್ಕೆ ವಿಶಿಷ್ಟವಾದ ಸ್ಥಾನವಿದೆ. ಅದರಲ್ಲೂ ರೇಡಿಯೋ ನಾಟಕಗಳು ಇನ್ನೂ ವಿಶಿಷ್ಟ. ತಮ್ಮ ಎದುರಿಗಿಲ್ಲದ ಒಂದು ಶ್ರೋತೃವರ್ಗವನ್ನು ಖುಷಿಪಡಿಸುವ, ಅವರಿಗೆ ಒಂದು ಸಂದೇಶವನ್ನು ವರ್ಗಾಯಿಸುವ, ಕೇಳುತ್ತಿದ್ದ ಸ್ಟೇಶನ್ ಬದಲಾಯಿಸದಂತೆ ಅವರನ್ನು ಹಿಡಿದಿಟ್ಟುಕೊಳ್ಳುವ ಸವಾಲು ಇಂಥ ರೂಪಕಗಳನ್ನು ರಚಿಸುವವರ ಮೇಲೆ ಇರುತ್ತದೆ. ಕೃತಿಗೆ 'ವಿಜ್ಞಾನಮಯಿ' ಎಂದು ಹೆಸರಿಟ್ಟು ಎಲ್ಲ 13 ನಾಟಕಗಳನ್ನೂ ವಿಜ್ಞಾನದ ವಿಷಯ ಆಧರಿಸಿಯೇ ಹಾಗೂ ಮಹಿಳೆಯನ್ನು ಕೇಂದ್ರವಾಗಿಟ್ಟುಕೊಂಡು ರಚಿಸಿರುವುದು ಮಹತ್ವದ್ದು. ಡಾ. ವಸುಂಧರಾ ಭೂಪತಿ ಮತ್ತು ಸುಮಂಗಲಾ ಎಸ್. ಮಮ್ಮಿಗಟ್ಟಿ ಇದನ್ನು ಸಂಪಾದಿಸಿದ್ದಾರೆ.
ಕೃತಿ: ವಿಜ್ಞಾನಮಯಿ , ಪ್ರಕಾರ: ವಿಜ್ಞಾನ ನಾಟಕಗಳು, ಏಕೆ ಓದಬೇಕು?: ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಲು
ಪ್ರ: ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ಬೆಂಗಳೂರು. ಪುಟಗಳು 280, ಬೆಲೆ ರು. 150
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

