ಹೆಸರಿಲ್ಲದಾತ
'ಬೆಳಗ್ಗಿನ ನಾಲ್ಕು ಮೂವತ್ತರ ಸುಮಾರಿಗೆ ಉಜಿರೆಯಲ್ಲಿ ಲೈಟ್ ಭಟ್ರ ಅಂಗಡಿ ಬಿಟ್ರೆ ಬೇರೆ ಯಾವ ಅಂಗಡಿಯೂ ತೆರೆದಿರುವುದಿಲ್ಲ. ಹಾಗೇ ಬಸ್ ಇಳಿದವ ಒಂದು ಬನ್ ಮತ್ತು ಚಹಾ ಕುಡಿದು ಸುಧಾರಿಸಿಕೊಳ್ಳುತ್ತಿರು. ಅಷ್ಟರಲ್ಲೇ ನಾನಲ್ಲಿರುತ್ತೇನೆ' ಪತ್ರದ ಒಕ್ಕಣೆಯಿನ್ನೂ ಸ್ಮೃತಿಪಟಲದಿಂದ ಮಾಸಿರಲಿಲ್ಲ.
ಕಲ್ಪಿಸಿದ್ದಕ್ಕಿಂತಲೂ ಘೋರವಾಗಿಯೇ ಇದೆ ಈ ಊರು ಅಂದುಕೊಂಡೆ. ಕೈ ಗಡಿಯಾರ ನಾಲ್ಕು ಕಾಲರಲ್ಲಿ ನೆಟಿಕೆ ಮುರಿಯುತ್ತಿತ್ತು. ಪೇಟೆಯೆನ್ನಲು ಒಂದು ಆಟೋ ಕೂಡ ನಿಂತಿರಲಿಲ್ಲ. ಭಟ್ರಂಗಡಿಯ ಗ್ಯಾಸ್ಲೈಟ್ ಗಾಳಿಗೆ ಓಲಾಡುತ್ತ 'ಬುಸ್' ಎಂದುರಿಯುತ್ತಿತ್ತು. ಮುಸುಕಾಗಿದ್ದ ದಿಗಂತದಲ್ಲಿ ಬಿದಿರ ಮೆಳೆಗಳು ಕಲಶದಂತೆ ಮೈ ನಿಮಿರಿಸಿ ನಿಂತಿತ್ತು. ಬಾವಲಿಗಳು ಗೇರು ಹಣ್ಣುಗಳನ್ನು ಹಿಡಿದು ಬಿದಿರ ಮೆಳೆಯೆಡೆಗೆ ನಿದ್ರೆಯನ್ನರಸಿ ಜೀಕುತ್ತಿದ್ದವು. ಅಷ್ಟರಲ್ಲೇ 'ಟಾಕ್, ಟೀಕ್' ಎನ್ನುವ ಕಲ್ಲಿಗೆ ಬಡಿಯುವ ಉಳಿಯೇಟು ಮುಂಜಾವಿನ ಏಕತಾನತೆಯನ್ನು ಮುರಿಯುವ ತೆರದಂತಿತ್ತು. 'ಇದ್ಯಾಕೆ ಇಷ್ಟು ಬೇಗ ವಿಗ್ರಹದ ಕೆಲಸ ಶುರುವಾಗಿದೆ'. ಭಟ್ರು ಕೊನೆಗೂ ಮೌನ ಮುರಿದು ಹೆಂಡತಿಗೆ ಕೇಳಿದರು, 'ಧನುರ್ಮಾಸಕ್ಕೆ ಬೇರೆ ಊರಿಗೆ ವಿಗ್ರಹ ತಕೋಹೋಯ್ತಾರಂತಲ್ಲ' ಚಹಾಪುಡಿಯನ್ನು ಬಟ್ಟೆಯಲ್ಲಿ ಹಿಂಡುತ್ತಾ ಹೇಳಿದ ಹೆಂಡತಿಯ ಮಾತಿಗೆ ಭಟ್ರು ಓಗೊಟ್ಟಂತೆ ತೋರಲಿಲ್ಲ.
'ರತೋತಲಿ' ಎನ್ನುವ ಗಡಸು ಧ್ವನಿಗೆ ಬೆಚ್ಚಿ ಹಿಂದಕ್ಕೆ ತಿರುಗಿದೆ. ಅದೇ ಬಿಳಿ ಪೈಜಾಮದೊಂದಿಗೆ ಆತ ನಿಂತಿದ್ದ. ದಾಡಿ ಮಾಡಿಸಿಕೊಂಡು ಬಹಳ ದಿನಗಳಾದವೇನೋ. ಆದರೂ ಕುರುಚಲು ಗಡ್ಡದಲ್ಲಿ, ಗ್ಯಾಸ್ಲೈಟಿನ ಬೆಳಕಿನಲ್ಲಿ ಆತ ಸ್ಫುರದ್ರೂಪಿಯಂತೆ ತೋರಿದ. ಮುಖದಲ್ಲಿ ಮಂದಹಾಸ, ಕಾಂತಿ ಎರಡೂ ಇದ್ದವು. ಕಣ್ಣುಗಳಲ್ಲಿ ಹಲ್ಚಲ್ ಇರಲಿಲ್ಲ. ಬಲಗಡೆ ಭುಜಕ್ಕೆ ಜೋತುಹಾಕಿದ್ದ ಬಟ್ಟೆಯ ಚೀಲ, ಪ್ರಶ್ನೆಯಾಗೇ ಉಳಿದು ಬಾಗಿನ ಬಲಭಾಗದಲ್ಲಿ ಕೊನರಿಕೊಂಡು ಇಳಿಬಿಟ್ಟಿದ್ದ ಗೀಜಗನ ಗೂಡು, ಆತನನ್ನು ವಿಭಿನ್ನ ವ್ಯಕ್ತಿತ್ವದವ ಎಂಬಂತೆ ಪ್ರತಿಧ್ವನಿಸುತ್ತಿತ್ತು. 'ನಮಸ್ತೆ' ಎನ್ನಲು ಕೈ ಮುಗಿದೆನಷ್ಟೆ ಮಾತುಗಳು ಹೊರಡಲಿಲ್ಲ.
'ಫಾರ್ಮಾಲಿಟಿಗಳೆಲ್ಲ ಯಾಕೆ' ಆತ ಹುಸಿಕೋಪದಿಂದ ಸಿಡುಕಿ ಹೆಗಲ ಮೇಲೆ ಕೈಯಿಟ್ಟ. ಅದಾಗಲೇ ಕಾಗೆಗಳು ಕ್ರಾ ಎಂದು ಬೆಳಗ್ಗಿನ ಹಾಜರಿ ಹಾಕಲಾರಂಭಿಸಿದ್ದವು. ಪೇಪರ್ ಹಾಕುವ ಹುಡುಗರು ಡಿಸೆಂಬರ್ನ ಚಳಿ ಲೆಕ್ಕಿಸದೆ ಮುಂಡಾಸು ಕಟ್ಟಿ ಸೈಕಲ್ ತುಳಿಯುತ್ತಿದ್ದರು. ಜನಾರ್ದನಸ್ವಾಮಿ ದೇವಸ್ಥಾನಕ್ಕೆ ಧನುರ್ಪೂಜೆಗೆಂದು ಸುತ್ತಲಿನ ಊರಿಂದ ಜನ ಧಾವಿಸಿ ಬರುತ್ತಿದ್ದರು. 'ಧಾವಂತದ ಬದುಕು ಹೊತ್ತೇರುವುದಕ್ಕೆ ಮುಂಚೆಯೇ ಶುರುವಿಟ್ಟುಕೊಳ್ಳುತ್ತದೆ.' ಗಡ್ಡ ತರಚಿಕೊಂಡು ಆತ ನಿಡುಸುಯ್ದ.
ಕಲ್ಲು ಕುಟಿಗರ ಉಳಿಯ ಪೆಟ್ಟು ಸ್ಪಷ್ಟವಾಗಿ ಒಂದರ ಹಿಂದೊಂದರಂತೆ ಕೇಳಿಸುತ್ತಿತ್ತು. ರಥಬೀದಿಯ ಬದಿಯಲ್ಲಿ ಶಿಲ್ಪಿಗಳು ಉಳಿಯುವ ಜೋಪಡಿಗೆ ಆತುಕೊಂಡಿರುವ ಡೇರೆಗೆ ನನ್ನನ್ನು ಆತ ಕರೆತಂದ. ಅಲ್ಲಿದ್ದ ಶಿಲ್ಪಿಯೊಬ್ಬ ಹಿಂದಿಯಲ್ಲಿ 'ಅರೆ ಕಿಸ್ಕೋ ಲೇ ಆಯಾ ಹೋ, ನಾಷ್ಟಾ ಹುವಾ ಕ್ಯಾ...?' ಎಂದು ಕೇಳಿದ. 'ನಾಷ್ಟಾ ಇನ್ನು ಆಗ್ಬೇಕು, ಅದ್ನ ನಾನ್ನೋಡ್ಕೋತೀನಿ' ಎಂದು ಕನ್ನಡದಲ್ಲೇ ಮಾರುತ್ತರ ನುಡಿದ. ಶಿಲಾಮೂರ್ತಿ ಬುದ್ಧನದೋ, ಮಹಾವೀರನದೋ, ಮಹಾಪುರುಷರದೋ ಸರಿಯಾಗಿ ನೆನಪಿಲ್ಲ. ಮೂರ್ತಿ ಸಿದ್ಧವಾಗಿತ್ತು. ಅಲ್ಲಲ್ಲಿ ಒಪ್ಪದ ಕೆಲಸ ನಡೆಯುತ್ತಿದೆ ಎಂದು ಯಾರಾದರೂ ಊಹಿಸಬಹುದಾಗಿತ್ತು.
ಆತ ಅದೇನನ್ನೋ ತಡಕಾಡುತ್ತಿದ್ದ. ನಾನು ಕಲ್ಲು ಬೆಂಚಿನ ಮೇಲೆ ಕುಳಿತಿದ್ದೆ. ಪಾತ್ರೆಯೊಂದರಲ್ಲಿದ್ದ ಅಪ್ಪೆಹಣ್ಣುಗಳ ಗೊಂಚಲನ್ನು ಆತ ಹೊರತೆಗೆದ. 'ಅರೆ ಇದೇನಿದು ಬೆಳ್ಳಂಬೆಳಗ್ಗೆ ಈ ಹುಳಿ ಹಣ್ಣುಗಳನ್ನು ತಿನ್ನುವವರಾರು ಎಂದು ಮನಸ್ಸು ಲೆಕ್ಕಾಚಾರ ಹಾಕಿ ಅಳೆದು ತೂಗುತ್ತಿರುವಾಗಲೇ ನಾಲಗೆ ಎರಡೆರಡು ಬಾರಿ ಮಿಡುಕಾಡಿ ಚಳ್ಳನೆ ನೀರೂರಿಸಿಕೊಂಡು ನಿಂತಿತ್ತು. ನನ್ನೆಣಿಕೆ ಮೀರಿ ಆತ ವಿಗ್ರಹದ ಮೇಲೆ ಹತ್ತಿ ಶಿಲಾಮೂರ್ತಿಯ ತೋಳ ಸಂದಿಯಲ್ಲಿ ಹಣ್ಣುಗಳನ್ನು ಹಿಡಿದು ನಿಂತಿದ್ದ. ಅರೆ ಏನಾಶ್ಚರ್ಯ ಹಕ್ಕಿಯೊಂದು ಗೂಡುಕಟ್ಟಿತ್ತು. ಮರಿಗಳು ತುತ್ತಿಗಾಗಿ ಕೊಕ್ಕು ಚಾಚಿದ್ದವು. 'ನಾನು ಸ್ವಲ್ಪ ತಿನ್ನಿಸಲೇ? ತುಂಬಾ ಮಜವಾಗಿದೆ' ಎಂದು ಉತ್ಸುಕನಾಗಿ ಕೇಳಿದೆ. 'ಎಲ್ಲರಂತೆ ತೀರದ ಹಸಿವು ನಿನಗೇಕೆ' ಆತ ಮುಖಕ್ಕೆ ಹೊಡೆದಂತೆ ಹೇಳಿದ್ದ. ವಿಗ್ರಹದ ಮಂದಸ್ಮಿತ ನಗೆ ನನ್ನಲ್ಲಿ ಮುಜುಗರ ಸೃಷ್ಟಿಸಿತು. ಪರಿಸರದ ತುಂಬೆಲ್ಲ ಕಾಣುವ ವಸ್ತುಗಳು ತನ್ನದಾಗಬೇಕೆಂದು ತೋರುವ ಲೋಲುಪತನಕ್ಕೆ ವಿಗ್ರಹ ನಕ್ಕಿರಬಹುದು ಎಂದು ಆತ್ಮವಿಮರ್ಶೆ ಮಾಡಿಕೊಂಡೆ.
ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾನಿಲಯಕ್ಕೆ ಅರ್ಜಿ ಗುಜರಾಯಿಸಲು ಹೋಗಿ ಯಕ್ಷಗಾನ ಬಯಲಾಟಕ್ಕೆ ಕುತೂಹಲಕ್ಕೆಂದು ತೆರಳಿದ್ದೆ. ನನ್ನ ಪಕ್ಕದ ಆಸನದಲ್ಲೇ ಕುಳಿತು ಭಾಗವತರ ಆಲಾಪನೆಗೆ ತಲೆದೂಗುತ್ತ, ಅರ್ಥ ವಿವರಣೆಗೆ ಕಿವಿ ನಿಮಿರಿಸಿ ಪುಟಿಯುತ್ತಿದ್ದ ಈತ 'ಇದ್ಯಾವ ಸೀಮೆ ಬಡ್ಡೆತವಾ' ಎಂದೆನಿಸಿದ್ದು ಸುಳ್ಳಲ್ಲ. ಆದರೆ ಯಕ್ಷಗಾನ ಮುಗಿಸಿ ಮಂಡಕ್ಕಿ ಮೆಲ್ಲುವಾಗ ಹೆಸರು ಕೇಳಿದೆನಲ್ಲ 'ಗೀಜಗನ ಗೂಡು' ಎಂದು ತಲೆಗೆ ಹುಳ ಬಿಟ್ಟಿದ್ದ. ಅವತ್ತಿನಿಂದ ಇವತ್ತಿನವರೆಗೂ ಆತ ಕುತೂಹಲದ ವಸ್ತುವಾಗೇ ಉಳಿದಿದ್ದಾನೆ. ಮಾತನಾಡುವಾಗಲೆಲ್ಲ ಅನುಭವಿಯೆತೆ ಮಾತನಾಡುವ ಈತನ ಬಗೆಗೆ ದಿನದಿಂದ ದಿನಕ್ಕೆ ಗೌರವ ಹೆಚ್ಚುತ್ತಿದೆ. ಮಜಾ ಎಂದರೆ ನನ್ನನ್ನು ಪರಿಚಯಿಸಲು ಹೋದಾಗ ನಿನ್ನ ಹೆಸರು 'ತೋತಲಿ' ಎಂದುಬಿಟ್ಟಿದ್ದ. 'ತೋತಲಿ ಎಂದರೆ ಪಕ್ಷಿಯೆಂದೂ, ನನ್ನ ದೃಷ್ಟಿಯಲ್ಲಿ ನಿನಗೆ ಅದೇ ಹೆಸರು ಎಂದೂ ತಲೆ ತಿಂದುಬಿಟ್ಟಿದ್ದ. ಹೀಗಿದ್ದರೂ ಆತನ ಬಗೆಗೆ ನನಗೊಂದು ಆಕರ್ಷಣೆ ಇದ್ದೇ ಇತ್ತು. ಹೇಗಿದ್ದರೂ ನನ್ನ ತಂದೆ ನಾನು ಕವಿಯಾಗಬೇಕೆಂಬ ಕನಸು ಕಂಡವರು; ಈತನೇ ನನ್ನ ಗುರು ಎಂದು ತೀರ್ಮಾನಿಸಿಬಿಟ್ಟಿದ್ದೆ. ಫೇಸ್ಬುಕ್, ಟ್ವೀಟರ್ನಂತಹ ಕಾಲದಲ್ಲೂ ಈತ ಮೊಬೈಲ್ ಇಟ್ಟುಕೊಂಡಿಲ್ಲವಲ್ಲ, ಮಾತುಕತೆಗೆ ಏನಿದ್ದರೂ ಉಜಿರೆಯ ರಾಮರಾಯರಿಗೆ ಪತ್ರ ಬರೆಯಬೇಕು ಎಂಬ ಹಿಂಸೆ ಬಿಟ್ಟರೆ ಪತ್ರಕ್ಕೆ ಸಕಾಲದಲ್ಲಿ ಉತ್ತರ ಈತನಿಂದ ಲಭ್ಯವೂ ಆಗುತ್ತಿತ್ತು.
'ಕಲ್ಲು ಬೆಂಚಿನ ಮೇಲೆ ಶಿಲೆಯಾಗಿ ಬಿಟ್ಟರೆ ಹೀಗೆ ಬಂದ ವಿಷಯವೇನು, ಯಕ್ಷಗಾನ ನೋಡಲಿಕ್ಕೋ'. ಆತನ ಮಾತುಗಳು ನನ್ನನ್ನು ಉಜಿರೆಗೆ ಮತ್ತೆ ಮರಳುವಂತೆ ಮಾಡಿತ್ತು. ಆತನಿಗೆ ಯಾವ ವಿಷಯವನ್ನೂ ತಿಳಿಸಿರಲಿಲ್ಲ. ಸುಮಾರು ಮೂರುನೂರು ಕಿ.ಮೀ.ಗಳಷ್ಟು ದೂರದಿಂದ ಬಂದು ನೀಡಿದ, ಅದರಲ್ಲೂ ಅತಿಥಿಯಾಗಿ ಬಾಗವರಿಸುವ ಅವಕಾಶವನ್ನು ಈತ ಕೈಚೆಲ್ಲಲಾರೆ, ನಾವೇ ಆಯೋಜಿಸುವ ಸಾಹಿತ್ಯ ಸಂಜೆಗೆ ಈತನನ್ನು 'ಚಿಂತಕ' ಎಂದು ನಾನೇ ಪರಿಚಯಿಸುತ್ತೇನೆ. ಕಾರ್ಯಕ್ರಮದ ತುಂಬಾ ಈತನೊಂದಿಗೆ ಓಡಾಡಬೇಕು. ಕೈಸನ್ನೆ, ಗಂಭೀರವದನನಾಗಿ ಸಾಹಿತ್ಯಿಕ ಚರ್ಚೆಗಳಲ್ಲಿ ತೊಡಗಬೇಕು ಎಂದೆಲ್ಲ ಯೋಚನಾಲಹರಿಯಲ್ಲಿ ಮುಳುಗಿದ್ದ ನಾನು 'ನಮ್ಮ ಮಂಡ್ಯಾದಲ್ಲಿ ಆಯೋಜಿಸುವ ಕಾರ್ಯಕ್ರಮಕ್ಕೆ ನೀವು ಅತಿಥಿಯಾಗಿ ಬರಬೇಕಪ್ಪ, ಆಮಂತ್ರಿಸೋಣ ಎಂದು ಬಂದೆ' ಎಂದು ನಿವೇದಿಸಿಕೊಂಡೆ.
'ಕಾರ್ಯಕ್ರಮಕ್ಕೆ ಶುಭವಾಗಲಿ, ಈತ ನಡೆಸಿದಂತೆ, ಅವುಗಳು ತೋರಿದಂತೆ ಬಂದೆನೆಂದರೆ ಬಂದೆ, ಇಲ್ಲವಾದರೆ ಇಲ್ಲ' ಎಂದು ವಿಗ್ರಹದೆಡೆಗೆ ಮತ್ತು ಹಕ್ಕಿಗೂಡಿನೆಡೆಗೆ ಕೈತೋರಿಸಿ ಆತ ಹೇಳಿದ, ಆತ ದೃಢನಾಗಿದ್ದ.
'ಛೆ, ನನಗೆ ಇದೆಂತಹ ವ್ಯಾಧಿ, ಹೋಗಿ ಹೋಗಿ ಇಲ್ಲಿಗೆ ಬಂದೆನಲ್ಲ. ಸೊಕ್ಕೆಷ್ಟು ಇವನಿಗೆ' ಎಂದೆನಿನುತ್ತಲೇ ಮಧ್ಯಾಹ್ನದ ಎರಡೂವರೆಯ ರಾಜಹಂಸಕ್ಕೆ ಒರಗಿಬಿಟ್ಟಿದ್ದೆ.
=
ಸರಿಯಾಗಿ ಒಂದು ತಿಂಗಳು ಕಳೆದ ಮೇಲೆ ಕಾರ್ಯಕ್ರಮ ಶುರುವಾಗಿತ್ತು. 'ಬಂದೆನೆಂದರೆ ಬಂದೆ' ಎನ್ನುವ ಆತನ ಮಾತಿನ ಮೇಲೆ ಸಣ್ಣದೊಂದು ಆಶಾವಾದವಿತ್ತು. ಅಷ್ಟರ ಮಟ್ಟಿಗೆ ಆತನ ವಿಚಾರದೆಡೆಗೆ ಸೆಳೆತವಿತ್ತು. ಆತನೇನೂ ಕಾಣಿಸಲಿಲ್ಲ. ಉದ್ಘಾಟನೆಯಾಯಿತು, ಕವಿಗೋಷ್ಠಿಗಳೂ ಮುಗಿದವು, ಸಮಾರೋಪವೂ ಮುಗಿಯಿತು. ಕಾರ್ಯಕ್ರಮದ ಅವಲೋಕನಕ್ಕೆ ಸೇರಿದ್ದೆವು. ಸಭಾಂಗಣ ಸ್ವಚ್ಛಗೊಳಿಸುವವರು ಬಿಟ್ಟರೆ ಅಲ್ಯಾರೂ ಇರಲಿಲ್ಲ. ಅವರೂ ಧಾವಂತದಲ್ಲೇ ಕೆಲಸ ಮುಗಿಸುವುದರಲ್ಲಿದ್ದರು. ಅಷ್ಟರಲ್ಲೇ ಆಸನಗಳ ಸಾಲಿನಲ್ಲಿ ಗೀಜಗನ ಗೂಡೊಂದು ಗೋಚರಿಸಿತು. ತೋರಿದ ಏಟಿಗೇ ವೇದಿಕೆಯಿಂದ ಕೆಳಕ್ಕೆ ನೆಗೆದಿದ್ದೆ. ಅದೇ ಬಟ್ಟೆಯ ಚೀಲ, ಕೊನರಿಕೊಂಡು ಇಳಿಯಬಿಟ್ಟಿದ್ದ ಗೀಜಗನಗೂಡು, ಮೈಯೆಲ್ಲ ಕಣ್ಣಾಗಿ ಸಭಾಂಗಣದ ಸುತ್ತ ಹುಡುಕಿದೆ. ಏನೋ ನೆನಪಾದಂತಾಗಿ ರಿಜಿಸ್ಟ್ರೇಶನ್ ಪುಸ್ತಕದಲ್ಲಿ ನೋಡಿದೆ. ಗೀಜಗನ ಗೂಡು ಒಂಬತ್ತು ನಲವತ್ತೈದು ಎಂದು ಬೆಳಗ್ಗಿನ ಸಮಯ ನಮೂದಿಸಿಲಾಗಿತ್ತು. ಚೀಲದ ತುಂಬ ತಡಕಾಡಿದೆ. ಹಿಂದಿಯಲ್ಲಿ ತೋರಣ ಬೆಸೆದಂತೆ ಹೊಸೆದ ಅಕ್ಷರಗಳುಳ್ಳ ಪತ್ರ ತೇಜಸ್ವಿಯವರ ಹಕ್ಕಿಗಳ 'ಹೆಜ್ಜೆ ಮೂಡದ ಹಾದಿ ಲೇಖನದೊಂದಿಗೆ ಸಿಕ್ಕಿತ್ತು.'
ಉಜಿರೆಯ ರಾಮರಾಯರಿಗೆ ಗುಜರಾತಿನಿಂದ ಬರೆದ ಪತ್ರದಲ್ಲಿ ಬಾಲ್ಯದಲ್ಲಿ ಉಜಿರೆಯಿಂದ ವಲಸೆ ಹೋಗಬೇಕಾದ ಸಂದರ್ಭದಲ್ಲಿ ಗೀಜಗನ ಗೂಡಿನ ವಿಷಯದಲ್ಲಿ ತನ್ನ ಮಗನಿಗಾದ ಮನೋವೈಕಲ್ಯವನ್ನು ಉಜಿರೆಯನ್ನು ಬಿಡಲೊಲ್ಲದೆ, ಬೆಂಗಳೂರಿನಲ್ಲಿ ಮಗ ತಮ್ಮ ಜತೆಯಿರಲಾರದೆ ಪರಾರಿಯಾದ ಘಟನೆಯನ್ನು. ಆ ಪತ್ರ ಸೂಚ್ಯವಾಗಿ ಹೊಂದಿತ್ತು. ಪತ್ರ ತಲುಪಿ ವರ್ಷಗಳೇ ಕಳೆದವು ಎಂಬುದಕ್ಕೆ ಪುರಾವೆ ಪತ್ರವೇ ಆಗಿತ್ತು. ನನಗೆ ತಿಳಿದ ಮಟ್ಟಿಗೆ 'ಗೀಜಗನ ಗೂಡಿನವನಿಗೆ' ಹಿಂದಿ ತಿಳಿದಿರಲಿಲ್ಲ. ರಾಮರಾಯರ ಬಗೆಗೆ ನನಗೆ ಗೊತ್ತೂ ಇರಲಿಲ್ಲ. 'ಮನೋವೈಕಲ್ಯ, ಮಾನಸಿಕ ಅಸ್ವಸ್ಥ' ಎನ್ನುವ ಪದಗಳಿಗೆ ನನ್ನ ಸಹಮತಿಯಿರಲಿಲ್ಲ. ಖಾಲಿಯಾದ ಆಸನಗಳ ಮಧ್ಯೆ ಹೆಸರಿಲ್ಲದವ, ಬುದ್ಧ, ಮಹಾವೀರರ ಮುಗುಳ್ನಗೆಯ ವಿಗ್ರಹ, ಹಕ್ಕಿಯ ಗುಟುಕುಗಳು ಹಾದುಹೋದವು. ಅಂತ್ಯ ಆರಂಭವನ್ನು ಗ್ರಹಿಸಲಾಗದ ಗೀಜಗನ ಗೂಡನ್ನು ಸವರುತ್ತಾ ನಾನು ನಿಂತಿದ್ದೆ, ಅಸ್ಥಿರನಾಗಿ!
- ಶಿವಪ್ರಸಾದ್ ಸುರ್ಯ
8722693931
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

