ಸಾಪ್ತಾಹಿಕಪ್ರಭ

ಪ್ರೀತಿಯ ಹೂ ಮಗ್ಗುಲಲ್ಲೇ ದ್ವೇಷದ ಮುಳ್ಳು!

Published On :

'ಏಕ್ ಅಚ್ಛೇ ಕಲಾಕಾರ್ ಏಕ್ ಪ್ರಕಾರ್ ಕಿ ಚೋರ್ ಹೋನಾ ಚಾಹಿಯೆ' - ಒಬ್ಬ ಉತ್ತಮ ಕಲಾವಿದ ಒಂದು ವಿಧದ ಕಳ್ಳನಾಗಿರಬೇಕಂತೆ  - ಭಾರತರತ್ನ ಪಂ. ಭೀಮಸೇನ್ ಜೋಶಿಯವರ ಮಾತುಗಳಿವು. ಅಂದರೆ, ಇತರ ಕಲಾವಿದರ ಸಂಪರ್ಕಕ್ಕೆ ಬಂದಾಗ, ಎಲ್ಲೆಲ್ಲಿ ಯಾರಲ್ಲಿ ಯಾವ ವಿಧದಲ್ಲಿ ಯಾವ ಕ್ಷಣದಲ್ಲಿ ತನ್ನ ಕಲೆಗೆ ಪೂರಕವಾಗುವ ಅಂಶಗಳು ಕಂಡುಬರುತ್ತವೆಯೋ ಅವನ್ನೆಲ್ಲ ತಕ್ಷಣ ಕದ್ದು ತನ್ನದಾಗಿಸಿಕೊಳ್ಳುವ ಅಪೂರ್ವ ಕಳ್ಳನಾಗಿರಬೇಕು. ಆಗಲೇ ಆ ಕಲೆಗೆ ಒಂದು ಪೂರ್ಣತೆ ಬರಲು ಸಾಧ್ಯ.
ಇಲ್ಲೂ ಹಾಗೇ ಆಯಿತು...ಗ್ವಾಲಿಯರ್ ದರ್ಬಾರದ ಪ್ರಸಿದ್ಧ ಗಾಯಕ ಬಡೇ ಮಹಮ್ಮದ್ ಖಾನರಿಗೂ ಹಾಗೂ ಹಸ್ಸೂ ಖಾನರ ಪೂರ್ವಜರಿಗೂ ಯಾವುದೋ ಹಳೆಯ ಕೌಟುಂಬಿಕ ವೈಷಮ್ಯ. ಎಷ್ಟೇ ಪ್ರಯತ್ನಿಸಿದರೂ ಬಡೇ ಮಹಮ್ಮದ್ ಖಾನ್ ತಮ್ಮ ಬಿಗುಮಾನ ಸಡಲಿಸಲೇ ಇಲ್ಲ. ಇತ್ತ ಗ್ವಾಲಿಯರ್ ರಾಜನಿಗಾದರೋ ಅಪರಿಮಿತ ಪ್ರತಿಭಾವಂತರಾದ ಹಸ್ಸು - ಹದ್ದೂ ಖಾನರ ಮೇಲೆ ಅಪಾರ ಪ್ರೀತಿ. ಅಷ್ಟೇ ಅಲ್ಲ, ಬಡೇ ಮಹಮ್ಮದ್ ಖಾನರ ಆ ಗಾಯನವನ್ನು ಹಾಡಬಲ್ಲವರೆಂದರೆ ಇವರಿಬ್ಬರೇ ಎಂಬ ವಿಶ್ವಾಸ . ಹೀಗಾಗಿ ಕೊನೆಗೆ ಮಹಾರಾಜನೇ ತನ್ನ ದರ್ಬಾರದಲ್ಲಿ ಯಾವಾಗ ಬಡೇ ಮಹಮ್ಮದ್ ಖಾನರ ಗಾಯನ ಹಾಗೂ ರಿಯಾಝ್ ನಡೆಯುವುದೋ ಅವಾಗ ಯಾರಿಗೂ ತಿಳಿಯದಂತೆ ಹಸ್ಸು - ಹದ್ದೂ ಖಾನರಿಬ್ಬರೂ ಅಲ್ಲಿಗೆ ಬಂದು ಕದ್ದು ಆ ಗಾಯನವನ್ನು ಕೇಳುವಂತೆ ಅನುಕೂಲ ಮಾಡಿದ.
ಹೀಗೆ ಸುಮಾರು ಆರು ತಿಂಗಳು ನಡೆಯಿತು ಈ ಕದ್ದು - ಕಲಿಯುವ ಶಿಕ್ಷಣ. ಹಸ್ಸು - ಹದ್ದೂ ಖಾನರಿಬ್ಬರದೂ ಕೇವಲ ಪ್ರತಿಭೆ - ಕಂಠಗಳ ಶ್ರೀಮಂತಿಕೆಯಷ್ಟೇ ಆಗಿರದೇ ಅದರ ಜತೆ ಅವರಾಗಲೇ ತಮ್ಮ ಅಜ್ಜ ನತ್ತನ್ ಪೀರ್ ಭಕ್ಷರ ಬಳಿ ಸಂಗೀತ ಜ್ಞಾನ ಪಡೆದು, ಚೆನ್ನಾಗಿ ಅಭ್ಯಾಸ ಮಾಡಿ ತಯಾರಿಗೊಂಡಿದ್ದ ಗಾಯಕರಾಗಿದ್ದರವರು. ಹೀಗಾಗಿ, ಹಸಿಯಾದ ಮಣ್ಣಿನ ಗೋಡೆಯ ಮೇಲೆ ಬಿದ್ದ ಹರಳುಗಳೆಲ್ಲ ತತ್‌ಕ್ಷಣ ಅಲ್ಲೇ ಬಿಗಿಯಾಗಿ ಅಂಟಿಕೊಳ್ಳುವಂತೆ ಆರು ತಿಂಗಳಲ್ಲಿ ಬಡೇ ಮಹಮ್ಮದ್ ಖಾನರ ಗಾಯನದ ಒಂದೊಂದು ವಿಶೇಷ ಅಂಶಗಳೂ, ಅವರ ತಯ್ಯಾರಿ, ಶೈಲಿಯ ಅಂದ ಹಸ್ಸು - ಹದ್ದೂ ಖಾನರ ಪಳಗಿದ ಕಂಠ  ಹಾಗೂ ಬುದ್ಧಿಯೊಡನೆ ಮೇಳೈಸಿ ಹೊಳೆವ ಚಿನ್ನಕ್ಕೆ ಪುಟವಿಟ್ಟಂತಾಯಿತು. ಆ ಘರಾನೆಯ ಗಾಯಕಿ, ಚಮತ್ಕಾರಿಕ ತಾನುಗಳು ಎಲ್ಲವೂ ಇವರ ಕಂಠಸ್ಥವಾದವು.

ಇಬ್ಬರೂ ನವ ಯುವಕರು. ಈಶ್ವರ ಪ್ರದತ್ತ ಅದ್ಭುತ ಕಂಠಸಿರಿ. ಅದಕ್ಕೂ ಮೀರಿದ ಸಂಗೀತದಲ್ಲಿನ ಅವರ ಅಪಾರ ಪರಿಶ್ರಮ, ಸಾಧನೆ, ತಯಾರಿ, ಈಗ ಜತೆಗೆ ಈ ಚಮತ್ಕಾರಿಕ ವಿಶಿಷ್ಟತೆಗಳು... ಕೇಳಬೇಕೆ? ಇವರನ್ನು ತಡೆಯುವವರೇ ಇಲ್ಲದಂತಾಯಿತು. ಉತ್ತರ ಹಿಂದುಸ್ತಾನದ ತುಂಬ ಇವರ ಕೀರ್ತಿ ಬೆಳಗತೊಡಗಿತು. ಸಂಗೀತ ಲೋಕದಲ್ಲಿ ಯಾವಾಗಲೋ ಒಮ್ಮೆ ಅರಳುವ ದೈವೀ ಪುಷ್ಪಗಳಂತೆ ಇವರ ಶ್ರೇಷ್ಠವಾದ ಕಲೆಯ ಸೊಗಡು ದಿಕ್ಕು ದಿಕ್ಕಿಗೆ ಹರಡತೊಡಗಿತು.

ಇತ್ತ, ಅದರ ಜತೆಜತೆಗೇ, ಇವರನ್ನಾಗಲೇ ಶತ್ರುಗಳಂತೆ ಭಾವಿಸುತ್ತಿದ್ದ ಬಡೇ ಮಹಮ್ಮದ್ ಖಾನರಲ್ಲಿ ದ್ವೇಷದ ದಳ್ಳುರಿಯೂ ಹೊತ್ತಿ ಉರಿಯತೊಡಗಿತು. ಇದೇ ಬದುಕಿನ ದ್ವಂದ್ವ...ಆ ವಿಧಿಯ ಆಟ...ಒಂದೆಡೆ ಪ್ರೀತಿಯ ಹೂ ಅರಳುವಾಗಲೇ ಅದರ ಜತೆಜತೆಗೇ ದ್ವೇಷದ ಮುಳ್ಳೂ ಬೆಳೆಯುತ್ತದೆ. ಆದರೆ ಈ ದ್ವೇಷ ಸಾಮಾನ್ಯದ್ದಗಿರಲಿಲ್ಲ, ಬಡೇ ಮಹಮ್ಮದ್ ಖಾನ್ ಒಳ್ಳೇ ಅವಕಾಶಕ್ಕಗಿ ಕಾದು ಮನದಲ್ಲೇ ಷಡ್ಯಂತ್ರ ರಚಿಸುತ್ತಿದ್ದರು. ಅಂದು ಗ್ವಾಲಿಯರ್ ದರ್ಬಾರಿನಲ್ಲಿ ಸಂಗೀತದ ಮೆಹಫಿಲ್. ಹಸ್ಸೂ ಖಾನರ ಗಾಯನ. ಬಡೇ ಮಹಮ್ಮದ್ ಖಾನ್ ಒಳ್ಳೇ ಉತ್ಸಾಹದಲ್ಲಿದ್ದಂತೆ ತೋರುತ್ತಿದ್ದರು. ವಿಶೇಷವಾಗಿ ಮಾಂತ್ರಿಕ ಕಂಠದ ಹಸ್ಸೂ ಖಾನರನ್ನು ಬಹಳ ಪ್ರಶಂಸೆ ಮಾಡಿದರು. ಹಾಗೆ ಮಾಡುತ್ತ 'ನಿಮ್ಮ ಬಾಯಲ್ಲಿ ರಾಗ್ ಮಿಯಾ ಮಲ್ಹಾರ್ ಕೇಳಬೇಕು' ಎಂದು ತಮ್ಮ ಇಚ್ಛೆಯನ್ನು ವ್ಯಕ್ತಪಡಿಸಿದರು. ಹಸ್ಸೂ ಖಾನರ ಆನಂದಕ್ಕೆ ಪಾರವೇ ಇರಲಿಲ್ಲ. ಬಡೇ ಮಹಮ್ಮದ್ ಖಾನರೇ ಕೇಳುವುದೆಂದರೇನು ಸಾಮಾನ್ಯವೆ?

ತಮ್ಮ ಸಂಗೀತ ಸಾಧನೆಯ ಅಪೂರ್ವ ಕ್ಷಣ ಇದು ಎಂದುಕೊಂಡ ಹಸ್ಸೂ ಖಾನ್ ತುಂಬ ಆನಂದದಿಂದ ರಾಗ ಮಿಯಾ ಮಲ್ಹಾರವನ್ನು ಹಾಡಲು ಪ್ರಾರಂಭಿಸಿದರು. ಆ ಸ್ವರ ವಿಸ್ತಾರ, ಆ ಆಲಾಪನೆ, ಆ ಗಾಂಭೀರ್ಯ, ಆ ಕಂಠ - ಮಲ್ಹಾರದ ಆನಂದದಲ್ಲಿ ಇಡೀ ದರ್ಬಾರು ಮೈಮರೆತು ಮೀಯುತ್ತಿತ್ತು.

ಗ್ವಾಲಿಯರ್ ಘರಾಣೆಯ ವಿಶಿಷ್ಟತೆಗಳಲ್ಲಿ 'ತಾನು'ಗಳೂ ಮಹತ್ವದ ಅಂಶ. ಕೂಟ ತಾನು, ಮಿಶ್ರ ತಾನು, ಖಟಕೇ ತಾನು, ಝಟಕೇ ತಾನು, ವಕ್ರ ತಾನು, ಅಚರಕ ತಾನು, ಸರೋಫ್, ಸಪಾಟ್, ಗಿಟಕರಿ, ಜಬಡೇ, ಹಲಕ್, ಪಲಟ್ - ಒಂದೇ ಎರಡೇ! ತಾನುಗಳ ಭೋರ್ಗರೆತ ಅದರಲ್ಲೂ ಮಿಯಾ ಮಲ್ಹಾರ್ ರಾಗದಲ್ಲಿ ಒಂದು ಅತ್ಯಂತ ವಿಶೇಷ ಪ್ರಕಾರದ 'ಖಡಕ್ ಬಿಜಲೀ ತಾನ್‌' ಎಂಬ ತಾನನ್ನು ಹಾಡಲಾಗುತ್ತದೆ. ಇದು ಎಂಥ ಅಸಾಧ್ಯವಾದ ತಾನೆಂದರೆ - ಸುದೀರ್ಘವಾದ ಶ್ವಾಸ - ಬಲವಾದ ಕಂಠ ತ್ರಾಣ - ಒಂದಿನಿತೂ ಕದಲದ ಏಕಾಗ್ರತೆ - ವಿಶೇಷ ಅಭ್ಯಾಸ - ಮನೋಬಲ ಎಲ್ಲವೂ ಸೇರಿದರೇ ಸಾಧ್ಯವಾಗುವ ಅಸಾಮಾನ್ಯ ತಾನ್ ಅದು.  ಅಂಥ 'ದಮ್‌ದಾರ' ಗಾಯಕನೇ ಇದನ್ನು ಹಾಡಲು ಸಾಧ್ಯವೇ ಹೊರತು ಸಾಮಾನ್ಯರಿಗೆ ಇದು ಅಸಾಧ್ಯದ ಮಾತು. ಅಷ್ಟೇ ಅಲ್ಲ, ಅಂಥ ಅಸಾಮಾನ್ಯ ಗಾಯಕನಾದರೂ ಕೂಡ ಇದನ್ನು ಒಂದು ಮೆಹಫಿಲ್‌ನಲ್ಲಿ ಒಂದು ಸಲ ಮಾತ್ರ ಹಾಡಲು ಸಾಧ್ಯ. ಎರಡನೇ ಬಾರಿ ಹಾಡಲು ಸಾಧ್ಯವೇ ಇರದಂತಹ ತಾನ್ ಅದು. ಒಂದು ಸಲಕ್ಕೂ ಕೂಡ ಅಂತಹ ಪರಿಶ್ರಮ, ಬಲವಾದ ಎದೆಗಾರಿಕೆಯೇ ಬೇಕು.

ಹಸ್ಸೂ ಖಾನ್ ಯೌವನದ ಉತ್ಸಾಹ, ತಮ್ಮ ಪರಿಶ್ರಮ ಹಾಗೂ ದರ್ಬಾರದ ಆ ವಿಶೇಷವಾದ ಮೆಹಫಿಲ್‌ನಲ್ಲಿ ಅಂದು ಆ 'ಖಡಕ್ ಬಿಜಲೀ ತಾನ'ನ್ನು ಅದ್ಭುತವಾಗಿ ಹಾಡಿದರು. ಮೂಲೆಮೂಲೆಯಿಂದ 'ವಾಹ್...ವಾಹ್...'ಗಳ ಸುರಿಮಳೆ. (ಮುಂದುವರಿಯುವುದು)

-ಶೃತಿ ಭಟ್
shrutikbhat@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.